ಶಿಥಿಲಾವಸ್ಥೆಯಲ್ಲಿದೆ ಕುಂಡಡ್ಕ ಸೇತುವೆ
Team Udayavani, Jan 23, 2019, 4:58 AM IST
ಸವಣೂರು: ಪುತ್ತೂರು ತಾಲೂ ಕಿನ ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಜೋಡಿಸುವ ಕುಂಡಡ್ಕದಲ್ಲಿ ಗೌರಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಏಕೈಕ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿಯುವ ಹಂತದಲ್ಲಿದೆ. ಈ ಭಾಗದ ಜನರು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಸೇತುವೆಯ ಪಿಲ್ಲರ್ ಶಿಥಿಲವಾಗಿದ್ದು, ಅಗಲ ಕಿರಿದಾದ ಈ ಸೇತುವೆಯಲ್ಲಿ ಲಘು ವಾಹನಗಳು ಮಾತ್ರ ಚಲಿಸುತ್ತಿವೆ.
ಸೇತುವೆಗೆ ಸೂಕ್ತ ತಡೆಗೋಡೆ ಇಲ್ಲದೆ ಮಳೆಗಾಲದಲ್ಲಿ ವಾಹನ ಸವಾರರಿಗೆ, ಪುಟ್ಟ ಮಕ್ಕಳಿಗೆ ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ತುಂಬಿದ್ದಾಗ ಸ್ವಲ್ಪ ಎಡವಟ್ಟಾದರೂ ಜೀವಕ್ಕೆ ಅಪಾಯ ಇದೆ.
ಈ ಸೇತುವೆಯು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿದೆ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಇದೆ.
ಈ ಸೇತುವೆ ದಾಟಿ ಮಕ್ಕಳು ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ, ಬೆಳಂದೂರು ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಅಪಾಯ ತಂದೊಡ್ಡ ಬಹುದು ಎನ್ನುವುದನ್ನು ಊಹಿಸಲು ಅಸಾಧ್ಯ. ಜತೆಗೆ ಸೇತುವೆಯನ್ನು ಸಂಪರ್ಕಿ ಸುವ ಬೆಳ್ಳಾರೆ ಜಿ.ಪಂ. ವ್ಯಾಪ್ತಿಗೆ ಬರುವ ಚೆನ್ನಾವರ ಮಸೀದಿ ಬಳಿಯಿಂದ ಹಾಗೂ ಕುಂಡಡ್ಕ ಜಂಕ್ಷನ್ ವರೆಗಿನ ರಸ್ತೆಯೂ ಅಭಿವೃದ್ಧಿಯಾಗಬೇಕಿದೆ.
ಶಾಸಕರ ಭರವಸೆ
ಈಗಿರುವ ಸೇತುವೆ ಅಗಲ ಕಿರಿದು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತು ಶಾಸಕ ಎಸ್. ಅಂಗಾರ ಅವರ ಗಮನಕ್ಕೂ ಸಾರ್ವಜನಿಕರು ತಂದಿದ್ದಾರೆ. ಈ ಕುರಿತು ಶಾಸಕರು ಮುಂದಿನ ವರ್ಷದಲ್ಲಿ ಸೇತುವೆ ಹಾಗೂ ಉಳಿದಿರುವ ರಸ್ತೆ ಡಾಮರು ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಇಲ್ಲಿನ ಜನತೆಯ ಬೇಡಿಕೆ ಈಡೇರಿಸುತ್ತೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಭರವಸೆ ನೀಡಿದ್ದರು. ಇದರಿಂದಾಗಿ ಈ ಬಾರಿ ಶಾಸಕರು ತಮ್ಮ ಭರವಸೆ ಈಡೇರಿಸುತ್ತಾರೆ ಎನ್ನುವ ಆಶಾಭಾವನೆ ಈ ಭಾಗದ ಜನರಲ್ಲಿದೆ.
ಒಂದೇ ಪಕ್ಷದ ಜನಪ್ರತಿನಿಧಿಗಳು!
ಈ ಸೇತುವೆಯ ಪ್ರಯೋಜನ ಪಡೆಯುವ ಎರಡು ಗ್ರಾಮಗಳಲ್ಲೂ ಬಿಜೆಪಿ ಜನಪ್ರತಿನಿಧಿಗಳೇ ಇರು ವುದು.ಪೆರುವಾಜೆ ಗ್ರಾ.ಪಂ. ವ್ಯಾಪ್ತಿಯ ಮುಕ್ಕೂರು ವಾರ್ಡ್‌ನಲ್ಲಿ ಮೂವರೂ ಬಿಜೆಪಿ ಬೆಂಬಲಿತರು. ಬೆಳ್ಳಾರೆ ಜಿ.ಪಂ. ಕ್ಷೇತ್ರದಲ್ಲೂ ಬಿಜೆಪಿ ಬೆಂಬಲಿತರೇ ಸದಸ್ಯ. ಸವಣೂರು ಗ್ರಾ.ಪಂ. ವ್ಯಾಪ್ತಿಯ ಪಾಲ್ತಾಡಿ 1ನೇ ವಾರ್ಡ್‌ನಲ್ಲಿ 4 ಮಂದಿಯೂ ಬಿಜೆಪಿ ಬೆಂಬಲಿತರು. ತಾ.ಪಂ., ಜಿ.ಪಂ. ಸದಸ್ಯರೂ ಬಿಜೆಪಿ ಬೆಂಬಲಿತರು. ಸಂಸದ, ಶಾಸಕರೂ ಬಿಜೆಪಿಯವರೇ.
ಪ್ರಸ್ತಾವನೆ ಸಲ್ಲಿಸಲಾಗಿದೆ
ಕುಂಡಡ್ಕದಲ್ಲಿನೂತನ ಸೇತುವೆ ರಚನೆ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ವಾರದೊಳಗೆ ಈ ಕುರಿತು ಸ್ಪಷ್ಟ ಮಾಹಿತಿ ದೊರಕಲಿದೆ.
-ಎಸ್. ಅಂಗಾರ, ಶಾಸಕರು, ಸುಳ್ಯ
ಈ ಬಾರಿ ಸೇತುವೆ ನಿರ್ಮಾಣ
ಈ ಬಾರಿ ಖಂಡಿತ ಸೇತುವೆ ನಿರ್ಮಾಣ ಕಾಮಗಾರಿ ನಡೆಯುವ ಆಶಯ ಇದೆ. ಖುದ್ದು ಶಾಸಕ ಎಸ್. ಅಂಗಾರ ಅವರು ಭರವಸೆ ನೀಡಿದ್ದಾರೆ. ಆ ಮೂಲಕ ದಶಕಗಳ ಬೇಡಿಕೆ ಈಡೇರುವ ನಿರೀಕ್ಷೆ ಎಲ್ಲರದ್ದು. ಭರವಸೆ ಈಡೇರದಿದ್ದರೆ ಊರವರೊಂದಿಗೆ ಚರ್ಚಿಸಿ ಮುಂದಿನ ಕಾರ್ಯಯೋಜನೆ ಕುರಿತು ಸಮಾಲೋಚಿಸಲಾಗುವುದು.
-ಧೀರಜ್ ರೈ, ಸ್ಥಳೀಯರು, ಚೆನ್ನಾವರ
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.