ಕುವೈಟ್ – ಮಂಗಳೂರು ಏರಿಂಡಿಯಾ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲು
Team Udayavani, Mar 5, 2018, 3:25 PM IST
ಮಂಗಳೂರು: ವಾರಕ್ಕೆ ಮೂರು ಬಾರಿ ಕುವೈಟ್- ಮಂಗಳೂರು ನಡುವೆ ಹಾರಾಟ ನಡೆಸುತ್ತಿರುವ ಏರ್ ಇಂಡಿಯಾ
ಎಕ್ಸ್‌ಪ್ರೆಸ್ ವಿಮಾನದ ವೇಳಾಪಟ್ಟಿ ಬದಲಾವಣೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸದ್ಯದ ವೇಳಾಪಟ್ಟಿಯನ್ನು ತತ್‌ಕ್ಷಣವೇ ಮಾರ್ಪಾಟುಗೊಳಿಸುವಂತೆ ಕೋರಿ ಪ್ರಯಾಣಿಕರು ಸ್ಥಳೀಯ ಸಂಸದರಿಗೆ ಮನವಿ ಮಾಡಿದ್ದಾರೆ.
ಈ ಮಾರ್ಗದಲ್ಲಿ ವಿಮಾನ ಸೇವೆ ಪ್ರಾರಂಭಿಸಿದ್ದ ದಿನಗಳಲ್ಲಿ ಪ್ರತಿದಿನ ಮಂಗಳೂರಿನಿಂದ ರಾತ್ರಿ 8.45ಕ್ಕೆ ಹೊರಟು ರಾತ್ರಿ 11.15ಕ್ಕೆ ಕುವೈಟ್‌ಗೆ ಹಾಗೂ ಅದೇ ದಿನ ತಡರಾತ್ರಿ 12.30ಕ್ಕೆ ಕುವೈಟ್‌ನಿಂದ ವಾಪಸ್ ಹೊರಟು ಬೆಳಗ್ಗೆ 7.30ಕ್ಕೆ ಮಂಗಳೂರಿಗೆ ತಲುಪುತ್ತಿತ್ತು. ಈ ವೇಳಾಪಟ್ಟಿ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿತ್ತು. ಆದರೆ ನಾಲ್ಕು ತಿಂಗಳ ಹಿಂದೆಯಷ್ಟೇ ಏರ್ ಇಂಡಿಯಾ ಸಂಸ್ಥೆಯು ಏಕಾಏಕಿ ಈ ವಿಮಾನದ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದ್ದು, ಬೆಳಗ್ಗೆ 7ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 11.15ಕ್ಕೆ ಕುವೈಟ್‌ಗೆ ಹಾಗೂ ಮಧ್ಯಾಹ್ನ 12.15ಕ್ಕೆ ಕುವೈಟ್‌ನಿಂದ ಹೊರಟು ರಾತ್ರಿ 7.15ಕ್ಕೆ ಮಂಗಳೂರಿಗೆ ತಲುಪುವಂತೆ ಮಾಡಲಾಗಿದೆ.
ಈ ಪರಿವರ್ತಿತ ವೇಳಾಪಟ್ಟಿಯಿಂದಾಗಿ ಮುಂಜಾನೆ ಬೇಗನೆ ವಿಮಾನವು ಮಂಗಳೂರಿನಿಂದ ಕುವೈಟ್‌ಗೆ ನಿರ್ಗಮಿಸುವ ಕಾರಣ ಕಾಸರಗೋಡು, ಕಣ್ಣೂರು, ಕುಂದಾಪುರ, ಭಟ್ಕಳ ಮುಂತಾದ ದೂರದ ಊರುಗಳಿಂದ ಬರುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮಧ್ಯರಾತ್ರಿಯೇ ಹೊರಟು ಬಂದು ವಿಮಾನ ನಿಲ್ದಾಣದಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕೇವಲ ನಾಲ್ಕು ತಾಸುಗಳ ಪ್ರಯಾಣಕ್ಕೆ ರಾತ್ರಿಯೆಲ್ಲ ಪರದಾಡುವ ಸ್ಥಿತಿ ಇದೆ. ಈ ಕಾರಣಕ್ಕೆ ವೇಳಾಪಟ್ಟಿಯನ್ನು ಬದಲಿಸುವಂತೆ ಕೋರಿ ಕುವೈಟ್‌ನ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ನೀಡಲಾಗಿದೆ. ಸಂಸದರ ಭರವಸೆಯಂತೆ ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಯಾಣಿಕರಿಗೆ ಅನುಕೂಲಕರವಾಗಿ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರಯಾಣಿಕರು ಇದ್ದರು.
ಆದರೆ ಆದದ್ದೇ ಬೇರೆ. ಮನವಿ ಕೊಟ್ಟ ಕೆಲವು ದಿನಗಳ ಬಳಿಕ ಮತ್ತೆ ಏರ್ ಇಂಡಿಯಾವು ಮಂಗಳೂರು-ಕುವೈಟ್ ವಿಮಾನದ ವೇಳಾಪಟ್ಟಿಯನ್ನು ಬದಲಾಯಿಸಿದೆ. ಆದರೆ ಈ ಹೊಸ ವೇಳಾಪಟ್ಟಿ ಈ ಹಿಂದಿನ ಅನನುಕೂಲಕಾರಿ ವೇಳಾಪಟ್ಟಿಗಿಂತಲೂ ಬಹಳ ಅಧ್ವಾನದ್ದಾಗಿದ್ದು, ಪ್ರಯಾಣಿಕರನ್ನು ಹೈರಾಣಾಗಿಸಿದೆ. ಮಂಗಳೂರು-ಕುವೈಟ್ ನಡುವೆ ಸಂಚರಿಸುವ ಪ್ರಯಾಣಿಕರ ಪರಿಸ್ಥಿತಿ ಈಗ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಆಗಿದೆ. ನೂತನ ವೇಳಾಪಟ್ಟಿಯಂತೆ ವಿಮಾನವು ಮಾ. 25ರಿಂದ ಬೆಳಗ್ಗೆ 6.30ಕ್ಕೆ ಮಂಗಳೂರಿನಿಂದ ಹೊರಟು 10.45ಕ್ಕೆ ಕುವೈಟ್ ತಲುಪುತ್ತದೆ. ಅಲ್ಲಿಂದ ಬೆಳಗ್ಗೆ 11.45ಕ್ಕೆ ಹೊರಟು ಸಂಜೆ 6.30ಕ್ಕೆ ಮಂಗಳೂರು ತಲುಪುತ್ತದೆ. ಈ ಸಮಯ ಪಟ್ಟಿಯಿಂದ ಪ್ರಯಾಣಿಕರ ಇಡೀ ದಿನ ಪ್ರಯಾಣಕ್ಕೆ ವ್ಯರ್ಥವಾಗಲಿದೆ. ಹೀಗಾಗಿ ವಿಮಾನದ ವೇಳಾಪಟ್ಟಿಯನ್ನು ಆರಂಭದಲ್ಲಿ ಇದ್ದಂತೆಯೇ ಬದಲಾಯಿಸಬೇಕು ಎಂಬುದು ಪ್ರಯಾಣಿಕರ ಮನವಿ.
ಪ್ರಯಾಣಿಕರ ಪರದಾಟ
ವಿಮಾನ ನಿಲ್ದಾಣದ ನಿಯಮದಂತೆ ವಿಮಾನ ಪ್ರಯಾಣಕ್ಕಿಂತ ಮೂರು ತಾಸು ಮೊದಲು ನಿಲ್ದಾಣಕ್ಕೆ ಆಗಮಿಸಬೇಕಾಗಿದ್ದು, ವಿವಿಧ ತಪಾಸಣೆಗೆ ಒಳಪಡಬೇಕಾಗುತ್ತದೆ. ಪ್ರಸ್ತುತ ವಿಮಾನ ಹೊರಡುವ ಸಮಯ ಬೆಳಗ್ಗೆ 6.30ಕ್ಕೆ ಆಗಿರುವ ಕಾರಣ ಕುವೈಟ್‌ಗೆ ಪ್ರಯಾಣಿಸುವ ಪ್ರಯಾಣಿಕರು ಮೂರು ತಾಸು ಮುಂಚಿತವಾಗಿ ಅಂದರೆ ರಾತ್ರಿ 2.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕಾಗುತ್ತದೆ. ಈ ಅನನುಕೂಲಕರ ವೇಳಾಪಟ್ಟಿಯಿಂದಾಗಿ ಹೆಚ್ಚು ತೊಂದರೆ ಅನುಭವಿಸುತ್ತಿರುವವರು ಕಾಸರಗೋಡು, ಕುಂದಾಪುರದಂಥ ದೂರ ಪ್ರದೇಶದಿಂದ ಬರುವ ಪ್ರಯಾಣಿಕರು. ಕುವೈಟ್‌ನಿಂದ ಮಂಗಳೂರಿಗೆ ಬರುವ ವಿಮಾನ ಹಾಲಿ ವೇಳಾಪಟ್ಟಿಯಂತೆ ಸಂಜೆ 6.30ಕ್ಕೆ ಮಂಗಳೂರು ತಲುಪುತ್ತದೆ. ಇದರಿಂದಲೂ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ.
ಏರ್ ಇಂಡಿಯಾ ಮಾತ್ರವಲ್ಲ, ಎಲ್ಲ ವಿಮಾನ ಗಳೂ ಬೇಸಗೆಯಲ್ಲಿ ವೇಳಾಪಟ್ಟಿಯನ್ನು ಬದಲಾಯಿಸುತ್ತವೆ. ಆದರೆ ಏರ್ ಇಂಡಿಯಾವು ಕುವೈಟ್ ಹಾಗೂ ಅಬುಧಾಬಿ ಪ್ರಯಾಣದ ವೇಳಾಪಟ್ಟಿಯನ್ನು ಮಾತ್ರ ಬದಲಾಯಿಸಿದೆ. ನೂತನ ವೇಳಾಪಟ್ಟಿ ಮಾ. 25ರಿಂದ ಜಾರಿಗೆ ಬರಲಿದೆ ಎಂದು ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.
10 ದಿನದೊಳಗೆ ಮನವಿ
ಈ ಸಮಸ್ಯೆಯ ಬಗ್ಗೆ ಮನವರಿಕೆಯಾಗಿದೆ. ಹತ್ತು ದಿನಗಳ ಒಳಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಮನವಿ ನೀಡಲಿದ್ದೇನೆ. ಶೀಘ್ರವೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
– ನಳಿನ್ ಕುಮಾರ್ ಕಟೀಲು, ಸಂಸದ
– ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.