ಸಿಬಂದಿ ಕೊರತೆಯಿಂದ ಆರೋಗ್ಯ ಇಲಾಖೆ ತತ್ತರ!
Team Udayavani, Apr 1, 2021, 3:50 AM IST
ಮಹಾನಗರ: ಒಂದೆಡೆ ಕೊರೊನಾ, ಮಲೇರಿಯಾ- ಡೆಂಗ್ಯೂವಿ ನಿಂದಾಗಿ ಜಿಲ್ಲೆಯಲ್ಲಿಯೂ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿದ್ದರೆ, ಇನ್ನೊಂದೆಡೆ ಸಿಬಂದಿ ಕೊರತೆಯಿಂದಾಗಿ ಜಿಲ್ಲಾ ಆರೋಗ್ಯ ಇಲಾಖೆಯೇ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ!
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಒಟ್ಟು 1,631 ಹುದ್ದೆಗಳು ಮಂಜೂರಾಗಿದ್ದರೆ, ಈ ಪೈಕಿ 698 ಹುದ್ದೆಗಳು ಖಾಲಿಯಿವೆ. 641 ಖಾಯಂ, 292 ಮಂದಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿದ್ದಾರೆ. ಸದ್ಯ ಆರೋಗ್ಯ ಸಂಬಂಧಿತ ಕಾರ್ಯಗಳೆ ಜಿಲ್ಲೆಯಲ್ಲಿ ಆದ್ಯತೆಯಿಂದ ನಡೆಯುತ್ತಿರುವುದರಿಂದ ಆರೋಗ್ಯ ಇಲಾಖೆಯಲ್ಲಿನ ಸಿಬಂದಿ ಕೊರತೆ ಬಹುದೊಡ್ಡ ಸಮಸ್ಯೆ ಸೃಷ್ಟಿಸಿದೆ. ಇನ್ನೇನು ಮಳೆಗಾಲ ಎದುರಾಗಲಿರುವ ಕಾರಣದಿಂದ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಂದರ್ಭ ಆರೋಗ್ಯ ಇಲಾಖೆಯ ವಿವಿಧ ಸ್ತರದಲ್ಲಿ ಹುದ್ದೆಗಳು ಖಾಲಿ ಇರುವುದು ಹೊಸ ಸಮಸ್ಯೆ ಸೃಷ್ಟಿಸಲಿದೆ.
ನಿರ್ವಹಣೆಯೇ ಸವಾಲು :
ಡೆಂಗ್ಯೂ, ಮಲೇರಿಯಾ ಸಹಿತ ವಿವಿಧ ರೋಗಗಳ ವಿರುದ್ಧ ಹೋರಾಟ ನಡೆಸುವಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕಾದ ಪುರುಷ ಆರೋಗ್ಯ ಸಹಾಯಕರ ಹುದ್ದೆಯು ಬಹುತೇಕ ಖಾಲಿ ಇರುವುದರಿಂದ ಇಲಾಖೆಗೆ ನಿರ್ಹಣೆಯೇ ಸವಾಲಾಗಿ ಪರಿಣಮಿಸಿದೆ. ಹಿರಿಯ ಆರೋಗ್ಯ ಸಹಾಯಕರ (ಪುರುಷರು)ಹುದ್ದೆ 64 ಮಂಜೂರಾಗಿದ್ದರೆ ಇದರಲ್ಲಿ 52 ಹುದ್ದೆ ಖಾಲಿಯಿದೆ. ಕಿರಿಯ ಆರೋಗ್ಯ ಸಹಾಯಕರ (ಪುರುಷರು)ಹುದ್ದೆ ಜಿಲ್ಲೆಯಲ್ಲಿ 228 ಇದೆ. ಇದರಲ್ಲಿ 39 ಹುದ್ದೆ ಮಾತ್ರ ಭರ್ತಿಯಾಗಿದ್ದು, ಬರೋಬ್ಬರಿ 189 ಹುದ್ದೆ ಖಾಲಿಯಿವೆ. ಇನ್ನು ಕಿರಿಯ ಆರೋಗ್ಯ ಸಹಾಯಕರ (ಮಹಿಳೆಯರು) 480 ಹುದ್ದೆ ಮಂಜೂರಾಗಿದ್ದರೆ ಇದರಲ್ಲಿ 139 ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳು ಖಾಲಿ ಇರುವುದೇ ಆರೋಗ್ಯ ಇಲಾಖೆಯನ್ನು ಕಂಗೆಡಿಸಿದೆ.
ಈ ಮಧ್ಯೆ ಜಿಲ್ಲೆಯಲ್ಲಿ ವಿಶೇಷ ತಜ್ಞರ ಹುದ್ದೆ 15 (ಮಂಜೂರಾತಿ 68), ಲ್ಯಾಬ್ ಟೆಕ್ನೀಶಿಯನ್ 21 (ಮಂಜೂರಾತಿ 80), ಫಾರ್ಮಾಸಿಸ್ಟ್ 53 (ಮಂಜೂರಾತಿ 87), ಪ್ರಥಮ ದರ್ಜೆ ಸಹಾಯಕರು 62 (ಮಂಜೂರಾತಿ 84), ಹಿರಿಯ ದರ್ಜೆ ಸಹಾಯಕರು 25 (ಮಂಜೂರಾತಿ 34), ಗ್ರೂಫ್ ಡಿ 112 (ಮಂಜೂರಾತಿ 373), ಡ್ರೈವರ್ 20 (ಮಂಜೂರಾತಿ 58) ಹುದ್ದೆಗಳು ಖಾಲಿಯಿವೆ.
ವೆನ್ಲಾಕ್‌ನಲ್ಲಿಯೂ ಖಾಲಿ! :
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 613 ಹುದ್ದೆ ಮಂಜೂರಾಗಿದ್ದು, ಇವುಗಳಲ್ಲಿ 184 ಹುದ್ದೆಗಳು ಖಾಲಿಯಿವೆ. 257 ಪೂರ್ಣಕಾಲಿಕ ಹಾಗೂ 172 ಗುತ್ತಿಗೆ ಆಧಾರದಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರೂಫ್ ಸಿ ವಿಭಾಗದಲ್ಲಿ ಇಲ್ಲಿ 286 ಹುದ್ದೆ ಮಂಜೂರಾಗಿದ್ದರೂ 108 ಹುದ್ದೆ ಖಾಲಿ ಇವೆ. ಅದೇ ರೀತಿ ಗ್ರೂಫ್ ಡಿ 280 ಹುದ್ದೆಗಳ ಪೈಕಿ 66 ಹುದ್ದೆ ಖಾಲಿಯಿವೆ. ದ.ಕ. ಜಿಲ್ಲೆಗೆ ಒಟ್ಟು 1,381 ಆಶಾ ಕಾರ್ಯಕರ್ತೆಯರ ಹುದ್ದೆ ಮಂಜೂರಾಗಿದ್ದು, ಇದರಲ್ಲಿ 1,372 ಕಾರ್ಯಕರ್ತೆಯರು ಕರ್ತವ್ಯದಲ್ಲಿದ್ದಾರೆ. 9 ಹುದ್ದೆ ಖಾಲಿ ಇದೆ.
ಎರಡೇ ತಿಂಗಳಲ್ಲಿ 184 ಮಲೇರಿಯಾ ಕೇಸ್! :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಫೆಬ್ರವರಿ ಅಂತ್ಯಕ್ಕೆ ಒಟ್ಟು 184 ಮಲೇರಿಯಾ ಹಾಗೂ 21 ಡೆಂಗ್ಯೂ ಪ್ರಕರಣ ವರದಿಯಾಗಿವೆ. ಈ ಪೈಕಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕ ಮಲೇರಿಯಾ (172) ಹಾಗೂ ಸುಳ್ಯ, ಬಂಟ್ವಾಳದಲ್ಲಿ ಅಧಿಕ ಡೆಂಗ್ಯೂ (ತಲಾ 5) ಪ್ರಕರಣಗಳಿವೆ. ಕಳೆದ ವರ್ಷ ಜಿಲ್ಲೆಯಲ್ಲಿ 1,397 ಮಲೇರಿಯಾ (ಮಂಗಳೂರು ಪಾಲಿಕೆ ವ್ಯಾಪ್ತಿ 1,306), 239 ಡೆಂಗ್ಯೂ (ಬಂಟ್ವಾಳ 68) ಕಾಣಿಸಿಕೊಂಡಿತ್ತು.
ದ.ಕ. ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪೂರ್ಣ ವರದಿಯನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. -ಡಾ| ಕೆ. ಸುಧಾಕರ್, ಆರೋಗ್ಯ ಸಚಿವರು
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.