ರಾಜ್ಯದೆಲ್ಲೆಡೆ ಭಾಷಾ ಪ್ರಾಧ್ಯಾಪಕರು ಕಂಗಾಲು!
Team Udayavani, Aug 25, 2021, 8:20 AM IST
ಮಂಗಳೂರು: ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಯಾಗುತ್ತಿದ್ದಂತೆ ರಾಜ್ಯಾದ್ಯಂತ ತಾತ್ಕಾಲಿಕ ನೆಲೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿಂದಿ, ಸಂಸ್ಕೃತ ಸೇರಿದಂತೆ ಭಾಷಾ ಪ್ರಾಧ್ಯಾಪಕರು ಕಂಗಾಲಾಗಿದ್ದಾರೆ.
ಹೊಸ ಶಿಕ್ಷಣ ನೀತಿ ಮಾರ್ಗಸೂಚಿ ಪ್ರಕಾರ ಪದವಿಯಲ್ಲಿ 2 ಭಾಷೆಗಳ ಪೈಕಿ ಒಂದನ್ನು (ಕನ್ನಡ) ಅನಿವಾರ್ಯಗೊಳಿಸಿ ಮತ್ತೂಂದು ಭಾಷೆಯಾಗಿ ಇತರ ಯಾವುದಾದರೂ ಒಂದನ್ನು ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ. ಮತ್ತೂಂದು ಭಾಷೆಯಾಗಿ ವಿದ್ಯಾರ್ಥಿಗಳು ಬಹುತೇಕ ಇಂಗ್ಲಿಷನ್ನು ಆಯ್ಕೆ ಮಾಡುವುದರಿಂದಾಗಿ ಹಿಂದಿ, ಸಂಸ್ಕೃತ ಸೇರಿದಂತೆ ಇತರ ಭಾಷೆಗಳ ಅಧ್ಯಯನಕ್ಕೆ ಅವಕಾಶ ಇಲ್ಲವಾಗಿದೆ. ರಾಜ್ಯಾದ್ಯಂತ ತಾತ್ಕಾಲಿಕ ನೆಲೆಯಲ್ಲಿ ಇರುವ ಸಾವಿರಾರು ಪ್ರಾಧ್ಯಾಪಕರು ಕೆಲಸ ಕಳಕೊಳ್ಳುವ ಆತಂಕ ಎದುರಾಗಿದೆ.
ವಿದ್ಯಾರ್ಥಿಗಳ ಇಚ್ಛೆಗೆ/ಅಗತ್ಯಕ್ಕೆ ತಕ್ಕಂತೆ ರಾಷ್ಟ್ರೀಯ ಭಾವೈಕ್ಯವನ್ನು ಪ್ರತಿ ಬಿಂಬಿಸುವ ಭಾಷೆಗಳನ್ನು ಓದುವ ನಿಯಮ ಮಾಡುವುದು ವೈಜ್ಞಾನಿಕ ಹಾಗೂ ನ್ಯಾಯೋಚಿತ. ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವಾ ಗಿದ್ದು ಯಾವುದೇ ವಿಷಯವನ್ನು ಹಾಗೂ ಯಾವುದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಆತ ಸ್ವತಂತ್ರನಾಗಿರು ತ್ತಾನೆ ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಆದರೆ ಪ್ರಸ್ತುತ ಹೊಸ ನೀತಿಯಲ್ಲಿ ಇದಕ್ಕೆ ಅವಕಾಶ ಇಲ್ಲದಿರುವುದು ವಿದ್ಯಾರ್ಥಿಗಳಿಗೆ ಸಂಕಟ
ಸೃಷ್ಟಿಸಿದರೆ, ಭಾಷಾ ಪ್ರಾಧ್ಯಾಪಕರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಸರಕಾರ ಮಧ್ಯಪ್ರವೇಶಿಸಿ ಸೂಕ್ತ ಸ್ಪಂದನೆ ನೀಡುವಂತೆ ಆಗ್ರಹಿಸಿ ಸಂಸದ ನಳಿನ್ ಕುಮಾರ್ , ಸಚಿವರಾದ ಅಂಗಾರ, ಸುನಿಲ್ ಕುಮಾರ್ ಸೇರಿದಂತೆ ಹಲವು ಜನನಾಯಕರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ತುಳುವಿಗೂ ಆತಂಕ! :
ಕನ್ನಡದ ಜತೆಗೆ ಒಂದು ಭಾಷೆಯನ್ನು ಮಾತ್ರ ಕಲಿಯಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಿರುವುದರಿಂದ ಹಿಂದಿಯ ಜತೆಗೆ ತುಳು, ಉರ್ದು, ಕೊಂಕಣಿ, ಕೊಡವ ಭಾಷೆಗಳನ್ನು ಕೂಡ ಅಧ್ಯಯನ ಮಾಡಲು ಅವಕಾಶ ಇಲ್ಲ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ತುಳು, ಕೊಂಕಣಿ, ಉರ್ದು ಕಲಿಕೆಗೆ ಇಲ್ಲಿಯವರೆಗೆ ಉತ್ತಮ ಅವಕಾಶ ಲಭಿಸುತ್ತಿತ್ತು. ಆದರೆ ಇನ್ನು ಮುಂದೆ ಇದಕ್ಕೂ ಅವಕಾಶ ಇಲ್ಲವಾದರೆ ಸ್ಥಳೀಯ ಭಾಷಾ ಕಲಿಕೆಗೆ ಬಹುದೊಡ್ಡ ಹೊಡೆತ ಬಿದ್ದಂತಾಗಲಿದೆ.
2 ಭಾಷೆ ಬೋಧನೆಗೆ ಅವಕಾಶ ಸಿಗಲಿ :
ಪ್ರಸ್ತುತ ಇರುವಂತೆ, ಇನ್ನು ಮುಂದೆಯೂ ಯಾವುದಾದರೂ ಎರಡು ಭಾಷೆಗಳ ಬೋಧನೆ ಮತ್ತು ಅಧ್ಯಯನಕ್ಕೆ ಅವಕಾಶ ಕೊಡಬೇಕು. ಒಂದು ಭಾಷೆ ಅನಿವಾರ್ಯವಾದರೆ, ಮತ್ತೂಂದು ಆಯ್ಕೆಯಾಗಿ ಇಂಗ್ಲಿಷ್ ಅನ್ನು ವಿದ್ಯಾರ್ಥಿಗಳು ಪರಿಗಣಿಸುತ್ತಾರೆ. ಇದರಿಂದ ಹಿಂದಿ ಸೇರಿದಂತೆ ಇತರ ಭಾಷೆಯ ಅಧ್ಯಾಪಕರು ಬೀದಿಗೆ ಬೀಳಲಿದ್ದಾರೆ. – ಡಾ| ಎಸ್.ಎ. ಮಂಜುನಾಥ್, ಅಧ್ಯಕ್ಷರು, ಹಿಂದಿ ಪ್ರಾಧ್ಯಾಪಕರ ರಾಜ್ಯ ಸಂಘ
ಕೆಲಸ ಕಳೆದುಕೊಳ್ಳುವ ಆತಂಕ :
ಹೊಸ ಶಿಕ್ಷಣ ನೀತಿಯಿಂದ ಸಂಸ್ಕೃತ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಹೊಡೆತ ಬೀಳಲಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಭಾಷೆಗಳು ಮೌಲ್ಯ ಕಳೆದುಕೊಳ್ಳುವ ಅಪಾಯ ಎದುರಾಗಲಿದೆ. ನೂರಾರು ಪ್ರಾಧ್ಯಾಪಕರು ಮುಂದೆ ಕೆಲಸ ಕಳೆದುಕೊಳ್ಳುವ ಜತೆಗೆ ಸಂಶೋಧನೆ, ಅನುವಾದ ಕ್ಷೇತ್ರಕ್ಕೆ ಸಮಸ್ಯೆಯಾಗಲಿದೆ.– ಡಾ| ಸಿ. ಶಿವಕುಮಾರಸ್ವಾಮಿ, ಅಧ್ಯಕ್ಷರು, ಸಂಸ್ಕೃತ ಪ್ರಾಧ್ಯಾಪಕರ ರಾಜ್ಯ ಸಂಘ
-ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.