ಖಾಯಂ ಉಪನ್ಯಾಸಕರ ಹುದ್ದೆ 17 ಇರುವವರು ಐವರು
Team Udayavani, Aug 19, 2017, 6:30 AM IST
ಹಿಂದಿನ ಕಾಲೇಜ್‌ಗಳ ಸಮಸ್ಯೆಯೇ ಇಲ್ಲೂ ಮುಂದುವರಿದಿದೆ. ಹಾಗಾಗಿ ಸುಳ್ಯ ಕಾಲೇಜಿನಲ್ಲಿ ಇದನ್ನು ಹೊಸ ಸಮಸ್ಯೆ ಎನ್ನುವಂತಿಲ್ಲ. ಒಂದೆಡೆ ಉಪನ್ಯಾಸಕರ ಕೊರತೆ. ಉಳಿದಂತೆ ಎಲ್ಲವೂ ಪರವಾಗಿಲ್ಲ.
ಸುಳ್ಯ: ನಗರದಿಂದ ಎರಡೂವರೆ ಕಿ.ಮೀ. ದೂರದ ಕೋಡಿಬೈಲಿನಲ್ಲಿ ಇರುವ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 710 ವಿದ್ಯಾರ್ಥಿಗಳಿಗೆ ಪಾಠ ಮಾಡಲು ಇರುವ ಖಾಯಂ ಉಪನ್ಯಾಸಕರ ಸಂಖ್ಯೆ ಕೇವಲ ಐದು. ಕಾಲೇಜಿನಲ್ಲಿ ಒಟ್ಟು 17 ಮಂಜೂರಾತಿ ಹುದ್ದೆಗಳಿವೆ. ಅದರಲ್ಲಿ ಭರ್ತಿ ಆಗಿರುವುದು ಐದು ಮಾತ್ರ. ವಾಣಿಜ್ಯ ಶಾಸ್ತ್ರದ ಉಪನ್ಯಾಸಕರು ಸೇವಾ ಹಿರಿತನದ ಹಿನ್ನೆಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯದಲ್ಲಿದ್ದಾರೆ. ಇಲ್ಲಿ ಪ್ರಾಂಶುಪಾಲರು ಸೇರಿದಂತೆ, ವಾಣಿಜ್ಯಶಾಸ್ತ್ರಕ್ಕೆ ಇಬ್ಬರು, ದೈಹಿಕ ಶಿಕ್ಷಣ ನಿರ್ದೇಶಕರು, ರಾಜ್ಯಶಾಸ್ತ್ರ ಹಾಗೂ ಗಣಿತಶಾಸ್ತ್ರ ಪಠ್ಯಕ್ಕೆ ತಲಾ ಓರ್ವ ಉಪನ್ಯಾಸಕರಿದ್ದಾರೆ.
ಹದಿನೆಂಟು ಮಂದಿ ಅತಂತ್ರ
ಜು. 30ರೊಳಗೆ ಕರ್ತವ್ಯ ನಿರ್ವಹಿಸುತ್ತಿದ್ದ 53 ಉಪನ್ಯಾಸಕರ ಸ್ಥಾನಕ್ಕೆ 35 ಮಂದಿ ಆಯ್ಕೆಯಾಗಿದ್ದು, 18 ಮಂದಿ ಉದ್ಯೋಗ ಕಳೆದುಕೊಳ್ಳುವರು. ಜಿಲ್ಲೆಯಲ್ಲಿ 641 ಉಪನ್ಯಾಸಕರ ಪೈಕಿ 300 ಮಂದಿ ನೇಮಕಗೊಳ್ಳಲಿದ್ದು, ಉಳಿದವರು ಅವಕಾಶ ವಂಚಿತರಾಗಲಿದ್ದಾರೆ. ಆ ಪಟ್ಟಿಯಲ್ಲಿ ಇವರೂ ಸೇರಿದ್ದಾರೆ.
12 ಮಂದಿಗೆ ಕಾಯಬೇಕು..!
ಹೊಸ ಸುತ್ತೋಲೆ ಅನ್ವಯ ಅತಿಥಿ ಉಪನ್ಯಾಸಕರ ಸಂಖ್ಯೆ ಇಳಿಮುಖ ಆಗಲಿದ್ದು, 35 ಮಂದಿಗೆ ಮಾತ್ರ ಅವಕಾಶ ಸಿಕ್ಕಿದೆ. ಆದರ 12 ಉಪನ್ಯಾಸಕರು ಬೇಕಾಗಿದ್ದಾರೆ. ಈ ಹುದ್ದೆಗಳಿಗೆ ಖಾಯಂ ಉಪನ್ಯಾಸಕರನ್ನು ಕಳುಹಿಸುವುದಾಗಿ ಸರಕಾರ ಹೇಳಿದೆ. ಹಾಗಾಗಿ ಹನ್ನೆರಡು ಮಂದಿ ಉಪನ್ಯಾಸಕರು ಬಂದ ಅನಂತರವೇ ಪಠ್ಯ ಬೋಧನೆ ಸುಧಾರಣೆ ಕಾಣಲಿದೆ. ಅಲ್ಲಿಯ ತನಕ ವಿದ್ಯಾರ್ಥಿಗಳು ತರಗತಿಯೊಳಗೆ ಕಾಯಬೇಕು..!
ವ್ಯವಸ್ಥೆ – ಸವಾಲು
ಕಾಲೇಜಿನ ಈಗಿನ ವ್ಯವಸ್ಥೆಗೆ ತಕ್ಕಂತೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ತರಗತಿಗಳು ನಡೆಯುತ್ತಿವೆ. ಲ್ಯಾಬ್ ಕಟ್ಟಡಕ್ಕೆಂದೂ ಸರಕಾರ 18 ಲಕ್ಷ ರೂ. ಮಂಜೂರು ಮಾಡಿದೆ. 15 ತರಗತಿ ಕೊಠಡಿ, 2 ಲ್ಯಾಬ್, ದೈಹಿಕ ಶಿಕ್ಷಣ ನಿರ್ದೇಶಕರು, ಪ್ರಿನ್ಸಿಪಾಲ್ ಕಚೇರಿ ಸೇರಿದಂತೆ 25ಕ್ಕೂ ಅಧಿಕ ಕೊಠಡಿಗಳು ಇಲ್ಲಿವೆ. ಜಿಮ್ ಸೌಕರ್ಯವನ್ನು ಕಲ್ಪಿಸಲಾಗಿದೆ. ಆಟಕ್ಕೆ ಕ್ರೀಡಾಂಗಣವೂ ಇದೆ. ಕಾಲೇಜಿನ ಸಂಪರ್ಕ ಕಲ್ಪಿಸುವ 150 ಮೀಟರ್ ರಸ್ತೆ ಡಾಮರು ಕಂಡಿಲ್ಲ. ಕೆಸರು, ಎದ್ದು ಹೋದ ಜಲ್ಲಿ ಪರಿಣಾಮ, ವಾಹನ ಚಲಾವಣೆ ಇಲ್ಲಿಸ ಸವಾಲೆನಿಸಿದೆ.
710 ವಿದ್ಯಾರ್ಥಿಗಳು
ವಿದ್ಯಾರ್ಥಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ. 2007ರಲ್ಲಿ ಸ್ಥಾಪನೆಗೊಂಡ ಕಾಲೇಜಿನಲ್ಲಿ ವರ್ಷಂಪ್ರತಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಉಪನ್ಯಾಸಕರ ಸಂಖ್ಯೆ ಇಳಿಮುಖ ಕಾಣುತ್ತಿದೆ. ಇಲ್ಲಿ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ ವಿಭಾಗಗಳಿವೆ. ಬಿಕಾಂ ವಿಭಾಗದಲ್ಲಿ ಎ/ಬಿ ಸೆಕ್ಷನ್ ಇದೆ. ಕಲಾ ವಿಭಾಗದಲ್ಲಿ 202, ವಾಣಿಜ್ಯ ವಿಭಾಗದಲ್ಲಿ 381, ಬಿಬಿಎ ವಿಭಾಗದಲ್ಲಿ 70, ಬಿಎಸ್ಸಿ ವಿಭಾಗದಲ್ಲಿ 58 ವಿದ್ಯಾರ್ಥಿಗಳು ಸೇರಿ ಒಟ್ಟು 710 ವಿದ್ಯಾರ್ಥಿಗಳು ಇದ್ದಾರೆ.
ಸೋರುತ್ತಿದೆ ಕೊಠಡಿ..!
ಕಾಲೇಜಿನಲ್ಲಿ ಲಭ್ಯ ಇರುವ ತರಗತಿ ಕೊಠಡಿಗಿಂತ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಹೊಸ ಕಟ್ಟಡಕ್ಕೆ ತಾಗಿಕೊಂಡಂತೆ ನಾಲ್ಕು ತಾತ್ಕಾಲಿಕ ಕೊಠಡಿಯನ್ನು ಶೀಟು ಹಾಸಿ ರಚಿಸಲಾಗಿದೆ. ಅದರಲ್ಲಿ ಮಳೆ ಬಂದಾಗ ಸೋರುತ್ತದೆ. ಇನ್ನು ಮೈದಾನದ ಇನ್ನೊಂದು ಭಾಗದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಳಭಾಗದಲ್ಲಿ ಕಲ್ಲು ಕಟ್ಟಿದ, ಮೇಲ್ಭಾಗದಲ್ಲಿ ಸಿಮೆಂಟ್ ಶೀಟು ಹಾಸಿದ ಕಟ್ಟಡವೊಂದನ್ನು ಕಟ್ಟಲಾಗಿದೆ. ಅಲ್ಲಿ ಎಂಟು ತರಗತಿಗಳು ನಡೆಯುತ್ತಿವೆ. ಹಾಗಾಗಿ ಈಗಿನ ವಿದ್ಯಾರ್ಥಿಗಳಿಗೆ ಇನ್ನು ಹತ್ತು ಕೊಠಡಿಯ ಅಗತ್ಯವಿದೆ ಅನ್ನುತ್ತಿದೆ ಕಾಲೇಜಿನ ಚಿತ್ರಣ.
ಅತಿಥಿ ಉಪನ್ಯಾಸಕರೂ ಕಷ್ಟ
ಮಂಜೂರಾತಿ ಹುದ್ದೆಗಳ ಪೈಕಿ ಪ್ರಾಂಶುಪಾಲ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಭೌತಶಾಸ್ತ್ರ, ಗಣಕ ವಿಜ್ಞಾನ, ಗ್ರಂಥಪಾಲಕ, ಕನ್ನಡ (3 ಹುದ್ದೆ) ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕ 2 ಹುದ್ದೆಗಳಿಗೆ ಪೂರ್ಣಕಾಲಿಕ ಉಪನ್ಯಾಸಕರನ್ನು ನೇಮಿಸಿಲ್ಲ. ಈ ತನಕ ಅತಿಥಿ ಉಪನ್ಯಾಸಕರು ಆ ಸ್ಥಾನ ತುಂಬಿದ್ದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ 53 ಅತಿಥಿ ಉಪನ್ಯಾಸಕರು, 5 ಖಾಯಂ ಉಪನ್ಯಾಸಕರು ಸೇರಿ ಒಟ್ಟು 58 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ.1 ರಿಂದ ಅತಿಥಿ ಉಪನ್ಯಾಸಕರ ಪಟ್ಟಿ ರದ್ದತಿಯಿಂದ 5 ಮಂದಿ ಖಾಯಂ ಉಪನ್ಯಾಸಕರು ಉಳಿದಿದ್ದಾರೆ.
– ಕಿರಣ್ ಪ್ರಸಾದ್ ಕುಂಡಡ್ಕ