ಎಲ್ಲ ಜಿಲ್ಲೆಗಳಿಗೂ “ಲೀಗಲ್ ಏಯ್ಡ ಡಿಫೆನ್ಸ್ ಕೌನ್ಸಿಲ್’
ಕ್ರಿಮಿನಲ್ ಪ್ರಕರಣದಲ್ಲಿ ಸಿಗಲಿದೆ ಉಚಿತ ಕಾನೂನು ನೆರವು
Team Udayavani, Jul 24, 2023, 6:50 AM IST
ಮಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ತಮ್ಮ ಪರ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಅಶಕ್ತರಾಗಿರುವವರು ಇನ್ನು ಕಂಗಾಲಾಗುವ ಅಗತ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ಒದಗಿಸಲು ದೇಶಾದ್ಯಂತ “ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್’ ಆರಂಭಿಸಲಾಗಿದ್ದು ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿಯೂ ಇದು ಅಸ್ತಿತ್ವಕ್ಕೆ ಬಂದಿದೆ.
ಇದು ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನು ಸೇವೆಗಳ ಪ್ರಾಧಿಕಾರದ ಅಂಗವಾಗಿದ್ದು ದೂರು ದಾರರು (ಸಂತ್ರಸ್ತರು) ಮತ್ತು ಆರೋಪಿ ಎರಡು ಕಡೆಯವರು ಕೂಡ ನೆರವು ಪಡೆದು ಕೊಳ್ಳಬಹುದಾಗಿದೆ. ಬಂಧನ ಪೂರ್ವ ಪ್ರಕ್ರಿಯೆ ಗಳಿಂದ ಅಪೀಲು ಹಂತದವರೆಗೂ ಉಚಿತ ನೆರವು ಲಭ್ಯವಿದ್ದು ಈ ವ್ಯವಸ್ಥೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಚೀಫ್ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್, ಡೆಪ್ಯುಟಿ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ಮತ್ತು ಅಸಿಸ್ಟೆಂಟ್ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್‌ಗಳಿರುತ್ತಾರೆ. ಇದರ ಕಚೇರಿಗಳು ಜಿಲ್ಲಾ ನ್ಯಾಯಾಲಯ ಕಟ್ಟಡದಲ್ಲಿರುತ್ತವೆ. ಇದುವರೆಗೆ ಕಾನೂನು ಸೇವಾ ಪ್ರಾಧಿಕಾರ ದಿಂದ ಕ್ರಿಮಿನಲ್ ಪ್ರಕರಣಗಳಲ್ಲಿ ಅಶಕ್ತರಿಗೆ ನೆರವು ಒದಗಿಸಲು ನ್ಯಾಯವಾದಿ ಗಳನ್ನು ನಿಯೋಜಿಸಲಾಗುತ್ತಿತ್ತು. ಆದರೆ ಇದನ್ನು ಹೆಚ್ಚು ಪರಿಣಾಮಕಾರಿಯಾಗಿಸಬೇಕೆಂಬ ಉದ್ದೇಶದಿಂದ ಪ್ರತ್ಯೇಕವಾಗಿ ಡಿಫೆನ್ಸ್ ಕೌನ್ಸಿಲ್ ಆರಂಭಿಸಲಾಗಿದೆ. ಪ್ರಾಧಿಕಾರದ ಅಡಿಯಲ್ಲಿ ಇದು ಸೇವೆ ಒದಗಿಸುತ್ತದೆ.
ಉತ್ತಮ ಸ್ಪಂದನೆ
ದಕ್ಷಿಣ ಕನ್ನಡ ಸಹಿತ 15 ಜಿಲ್ಲೆಗಳಲ್ಲಿ ಜ. 15ರಂದು, ಉಳಿದ 14 ಜಿಲ್ಲೆಗಳಲ್ಲಿ ಜೂ. 1ರಿಂದ ಕೌನ್ಸಿಲ್ ಕಾರ್ಯಾಚರಿಸುತ್ತಿದೆ. ದ.ಕ.ದಲ್ಲಿ ಈವರೆಗೆ 125 ಪ್ರಕರಣಗಳನ್ನು ಕಾನೂನು ಸೇವೆಗಳ ಪ್ರಾಧಿಕಾರವು ಡಿಫೆನ್ಸ್ ಕೌನ್ಸಿಲ್‌ಗೆ ವಹಿಸಿದ್ದು ಇದರಲ್ಲಿ 88 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಉಡುಪಿ ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು 20 ಮಂದಿ ಕೌನ್ಸಿಲನ್ನು ಸಂಪರ್ಕಿಸಿದ್ದಾರೆ.
ಯಾರಿಗೆಲ್ಲ ನೆರವು ಲಭ್ಯ
ಪರಿಶಿಷ್ಟ ಜಾತಿ/ ಪಂಗಡದವರು, ಮಾನವ ಕಳ್ಳಸಾಗಣೆಗೆ ಒಳಗಾದವರು, ಭಿಕ್ಷುಕರು, ಮಹಿಳೆಯರು, ಮಕ್ಕಳು, ಮಾನಸಿಕ ಅಸ್ವಸ್ಥರು, ವಿಪತ್ತುಗಳಿಂದ ತೊಂದರೆಗೊಳಗಾದವರು, ಕೈಗಾರಿಕಾ ದುರಂತದ ಸಂತ್ರಸ್ತರು, ಕಸ್ಟಡಿಯಲ್ಲಿರುವವರು, ವಾರ್ಷಿಕ 2 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವ ಹಿರಿಯ ನಾಗರಿಕರು, ತೃತೀಯ ಲಿಂಗಿಗಳು ಹಾಗೂ ವಾರ್ಷಿಕ 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಇತರ ಸಾರ್ವಜನಿಕರು ಕೌನ್ಸಿಲ್‌ನ ಮೂಲಕ ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದಾಗಿದೆ.
ಕಾನೂನು ಸೇವೆಗಳ ಪ್ರಾಧಿಕಾರವು ಸಿವಿಲ್,ಕ್ರಿಮಿನಲ್, ಮ್ಯಾಟ್ರಿಮೋನಿಯಲ್ ಮೊದಲಾದ ಎಲ್ಲ ಪ್ರಕರಣಗಳಲ್ಲಿ ದುರ್ಬಲರಿಗೆ ಉಚಿತವಾಗಿ ಕಾನೂನಿನ ನೆರವು, ರಕ್ಷಣೆ ಒದಗಿಸುತ್ತದೆ. ಇದೀಗ ಕ್ರಿಮಿನಲ್ ಪ್ರಕರಣಗಳಿಗೆ ಪ್ರತ್ಯೇಕವಾಗಿ ಲೀಗಲ್ ಏಯ್ಡ ಡಿಫೆನ್ಸ್ ಕೌನ್ಸಿಲ್ ಆರಂಭಿಸಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ ನ್ಯಾಯವಾದಿಗಳನ್ನು ನೇಮಕ ಮಾಡಲಾಗಿದ್ದು ಅವರಿಗೆ ಪೂರ್ಣ ಜವಾಬ್ದಾರಿ ನೀಡಲಾಗಿದೆ. ಅವರು ಕೌನ್ಸಿಲ್‌ಗೆ ಬರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಕೆಲಸ ಮಾಡಬೇಕೇ ಹೊರತು ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವಂತಿಲ್ಲ.
– ಶೋಭಾ ಬಿ.ಜಿ. ಹಿರಿಯ ಸಿವಿಲ್ ನ್ಯಾಯಾಧೀಶರು, ಸದಸ್ಯರು, ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಜಿಲ್ಲೆ
– ಸಂತೋಷ್ ಬೊಳ್ಳೆಟ್ಟು