Legislative Council Bye Election: ಕಿಶೋರ್ ಕುಮಾರ್ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್
Team Udayavani, Oct 1, 2024, 4:45 PM IST
ಬೆಂಗಳೂರು/ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ ಒಂದು ಸದಸ್ಯ ಸ್ಥಾನಕ್ಕೆ ಅ. 21ರಂದು ನಡೆಯಲಿರುವ ಉಪಚುನಾವಣೆಗೆ ಪುತ್ತೂರಿನ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರ ಅವಧಿಪೂರ್ವ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ಎರಡು ದಿನ ಇರುವಾಗ ಬಿಜೆಪಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ.
ಅ.3ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ನೇತೃತ್ವದಲ್ಲಿ ಉಡುಪಿ, ದ.ಕ. ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಳಿನ್ ಕುಮಾರ್ ಕಟೀಲು, ಸತೀಶ್ ಕುಂಪಲ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಿದಿಯೂರು ಉದಯ ಕುಮಾರ್ ಶೆಟ್ಟಿ, ವಿಕಾಸ್ ಪುತ್ತೂರು, ಕಿಶೋರ್ ಪುತ್ತೂರು ಸೇರಿ 8 ಜನರ ಹೆಸರನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿ ಕೇಂದ್ರ ಚುನಾವಣ ಸಮಿತಿಗೆ ಸಲ್ಲಿಸಿದ್ದ ಮೂರು ಹೆಸರುಗಳ ಪೈಕಿ ಕಿಶೋರ್ ಕುಮಾರ್ ಪುತ್ತೂರು ಹೆಸರು ಅಂತಿಮಗೊಂಡಿದೆ.
ಕಿಶೋರ್ ಕುಮಾರ್ ಬೊಟ್ಯಾಡಿ
ಪುತ್ತೂರು: ಅವಿಭಜಿತ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸ್ಥಾನದ ಬಿಜೆಪಿ ಅಭ್ಯರ್ಥಿಯಾಗಿ ಪುತ್ತೂರು ತಾಲೂಕಿನ ಸರ್ವೆ ಬೊಟ್ಯಾಡಿ ನಿವಾಸಿ ದ.ಕ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಆಯ್ಕೆಯಾಗಿದ್ದಾರೆ.
ಎಂ.ಎ. ಸ್ನಾತಕೋತ್ತರ ಪದವೀಧರ ಕಿಶೋರ್ ವಿದ್ಯಾರ್ಥಿ ದೆಸೆಯಿಂದ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಭಾರತೀಯ ಜನತಾ ಯುವ ಮೋರ್ಚಾದ ದ.ಕ. ಜಿಲ್ಲಾಧ್ಯಕ್ಷ, ಯುವ ಮೋರ್ಚಾದ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ಮೆಸ್ಕಾಂ ನಾಮನಿರ್ದೇಶಿತ ಸದಸ್ಯರಾಗಿದ್ದ ಅವರು ಬಿಜೆಪಿ ದ.ಕ.ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂಎಲ್‌ಎ ಸ್ಥಾನಕ್ಕೆ ಹೆಸರು !
2013, 2018, 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿತನಕ್ಕೆ ಕಿಶೋರ್ ಅವರ ಹೆಸರು ಕೇಳಿ ಬಂದಿತ್ತು. 2023ರ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಉಂಟಾಗಿದ್ದ ಬಣ ಸಮರದ ಮಧ್ಯೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದರು.
ಜಾತಿ ಸಮರಕ್ಕೆ ಬಿಜೆಪಿ ಅಸ್ತ್ರ
ಬಿಜೆಪಿ ಟಿಕೆಟ್ ಪ್ರಬಲ ಜಾತಿಗಳ ನಡುವಿನ ಪೈಪೋಟಿ ಎಂಬಂತೆ ಬಿಂಬಿತವಾಗುತ್ತಿದ್ದ ಬೆನ್ನಲ್ಲೇ ಬಿಜೆಪಿ ಸವಿತಾ ಸಮುದಾಯದವರಾಗಿರುವ ಕಿಶೋರ್ ಅವರಿಗೆ ದಿಢೀರ್ ಆಗಿ ಟಿಕೇಟ್ ಘೋಷಿಸುವ ಮೂಲಕ ಬಿಜೆಪಿ ಹೈಕಮಾಂಡ್ ತಂತ್ರಗಾರಿಗೆ ಪ್ರದರ್ಶಿಸಿದೆ. ಒಂದೆಡೆ ಜಾತಿ ಸಂಘರ್ಷಕ್ಕೆ ಕಡಿವಾಣ, ಇನ್ನೊಂದೆಡೆ ಸಣ್ಣ ಜಾತಿಗಳಿಗೂ ಪ್ರಾಧಾನ್ಯ ನೀಡಿರುವ ಸಂದೇಶ ರವಾನಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.