ಕಾಣಿಯೂರು ಶಾಲಾ ಮಕ್ಕಳಿಗೆ ಭತ್ತದ ಗದ್ದೆಯಲ್ಲಿ ಪಾಠ
Team Udayavani, Jul 1, 2018, 12:13 PM IST
ಕಾಣಿಯೂರು : ಶಾಲೆಯ ಮಕ್ಕಳಿಗೆ ಭತ್ತ ಬೇಸಾಯದ ಸಂಸ್ಕೃತಿಯ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ ಅವರನ್ನು ಗದ್ದೆಗೆ ಕರೆದೊಯ್ದು ನೇಜಿ ನೆಡುವ ಸಂಭ್ರಮ ಹಾಗೂ ಕೆಸರಿನ ಮಹತ್ವ ಪರಿಚಯಿಸುವ ಕಾರ್ಯಕ್ರಮ ಬೈತಡ್ಕದಲ್ಲಿ ವಿಶ್ವಜ್ಞ ಯುವಕ ಮಂಡಲದ ಆಶ್ರಯದಲ್ಲಿ ನಡೆಯಿತು. ವಿಶ್ವಜ್ಞ ಯುವಕ ಮಂಡಲದ ಸದಸ್ಯ ಪುರುಷೋತ್ತಮ ಗೌಡ ಬೈತಡ್ಕ ಅವರ ಗದ್ದೆಯಲ್ಲಿ ಕಾರ್ಯಕ್ರಮ ನಡೆಯಿತು. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿದರೆ ಇಳುವರಿ ಸ್ವಲ್ಪ ಕಡಿಮೆಯಾದರೂ ಆರೋಗ್ಯದ ದೃಷ್ಟಿಯಿಂದ ಉತ್ತಮ. ವರ್ಷಕ್ಕೆ ಎರಡು ಸಲ ಭತ್ತದ ಬೇಸಾಯವನ್ನು ಮಾಡುತ್ತಾರೆ. ಭತ್ತವನ್ನು ಬಿತ್ತುವ ಮೊದಲು ಗೋಣಿಯೊಳಗೆ ತುಂಬಿಸಿ 16 ಗಂಟೆಗಳ ಕಾಲ ನೆನೆಸಿಡಬೇಕಾಗುತ್ತದೆ. ಬೀಜ ಹಾಕಿದ 25 ದಿವಸಗಳ ಬಳಿಕ ನಾಟಿ ಮಾಡಬೇಕಾಗುತ್ತದೆ. ಭತ್ತವನ್ನು ಬೀಜ ಹಾಕಿದ ದಿನದಿಂದ ಕೊಯ್ಲಿಗೆ ಬರಬೇಕಾದರೆ 100 ದಿನಗಳ ಅವಧಿ ಬೇಕಾಗುತ್ತದೆ ಎಂದು ವಿವರಿಸಿದರು.
ನೇಜಿ ತಯಾರಿ, ಗದ್ದೆ ಉಳುವುದು, ಗದ್ದೆ ಹದ ಮಾಡುವುದು ಇವುಗಳನ್ನು ಪರಿಚಯಿಸಿದರು. ಮಕ್ಕಳು ಸ್ವತಃ ನೇಜಿಯ ಸೂಡಿಯನ್ನು ಹಿಡಿದು ಸಂಭ್ರಮಿಸಿದರು. ಗದ್ದೆಯಲ್ಲಿ ನೇಜಿ ನೆಡುತ್ತಿದ್ದವರ ಜತೆಗೆ ಮಕ್ಕಳೂ ನೇಜಿಯನ್ನು ನಾಟಿ ಮಾಡಿದರು. ‘ಓ ಬೇಲೆ ನಾಟಿ ಬೇಲೆ’ ಹಾಡಿಗೆ ಮಕ್ಕಳೂ ಧ್ವನಿಗೂಡಿಸಿದರು. ಗದ್ದೆಯಲ್ಲಿ ಅತ್ತಿಂದಿತ್ತ ಓಡಾಡುತ್ತ ಮೈಮರೆತರು. ಸುಮಾರು 75ಕ್ಕೂ ಹೆಚ್ಚು ಮಕ್ಕಳಿಗೆ ಎರಡು ಅವಧಿಗಳ ಪ್ರಾಯೋಗಿಕ ಪಾಠ ಆಯಿತು.
ಗದ್ದೆ ಬೇಸಾಯದ ಜಾನಪದ ಶೈಲಿಯ ‘ಓ ಬೇಲೆ’ ಪದವನ್ನು ಮಾತೆಯರ ಮೂಲಕ ಹಾಡಿಸಲಾಯಿತು. ಬೇಸಾಯಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಸದಸ್ಯರ ಸಾಥ್
ಕಾಣಿಯೂರಿನ ಶಾಲಾ ಮಕ್ಕಳ ಜೊತೆಗೆ ಯುವಕ ಮಂಡಲದ ಸದಸ್ಯರೂ ಭತ್ತ ನಾಟಿ ಮಾಡುವ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು. ಕಾಣಿಯೂರು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಶಾಲಾ ಶಿಕ್ಷಕಿಯರಾದ ಮೋಹಿನಿ, ಮಾಲತಿ, ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ, ಅಧ್ಯಕ್ಷ ರಂಜಿತ್ ಹೊಸೊಕ್ಲು, ಕಾರ್ಯದರ್ಶಿ ರಾಕೇಶ್ ಬನಾರಿ, ಚಂದ್ರಶೇಖರ್ ಬನಾರಿ, ಸುಧಾಕರ್ ಕಾಣಿಯೂರು, ಬಾಲಚಂದ್ರ ಬರೆಪ್ಪಾಡಿ, ಲಕ್ಷ್ಮೀಶ್ ಬೆಳಂದೂರು, ಸಚಿನ್ ಅಬೀರ, ಪ್ರಜ್ವಲ್ ಅಬೀರ ಉಪಸ್ಥಿತರಿದ್ದರು.
ಮಕ್ಕಳಿಗೆ ಮಾಹಿತಿ
ಗದ್ದೆ ಬೇಸಾಯ ಅಳಿವಿನಂಚಿನಲ್ಲಿದೆ. ಅಲ್ಲೊಂದು ಇಲ್ಲೊಂದು ಗದ್ದೆಗಳನ್ನು ಕೆಲವೇ ಕೆಲವು ಮಂದಿ ಕೃಷಿಯ ಪ್ರೀತಿಗಾಗಿ ಭತ್ತ ಬೇಸಾಯವನ್ನು ಮುಂದುವರಿಸಿದ್ದಾರೆ. ನಾವು ತಿನ್ನುವ ಆಹಾರವಾದ ಅಕ್ಕಿಯ ಬಗ್ಗೆ ನಮ್ಮ ಮಕ್ಕಳಿಗೆ ಕಲಿಕೆಯ ಸಮಯದಲ್ಲಿ ತಿಳಿ ಹೇಳುವ ಕೆಲಸವನ್ನು ಹಿರಿಯರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕ ಮಂಡಲದ ಕೆಲಸ ಶ್ಲಾಘನೀಯ.
– ಧಮೇಂದ್ರ ಗೌಡ ಕಟ್ಟತ್ತಾರು,
ಕಾಣಿಯೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.