ಪಾಠ ಕಲಿತಿದ್ದೇವೆ, ಇನ್ನು ಅರ್ಹರಿಗಷ್ಟೇ ಟಿಕೆಟ್: ಡಾ| ಜಿ. ಪರಮೇಶ್ವರ
Team Udayavani, Jan 22, 2023, 6:25 AM IST
ಮಂಗಳೂರು: ಬಿಜೆಪಿಯವರು ಕೀಳುಮಟ್ಟಕ್ಕೆ ಇಳಿದು ಕಾಂಗ್ರೆಸ್‌ನ ಶಾಸಕರನ್ನು ಹೈಜಾಕ್ ಮಾಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆ ನಮಗೆ ಕಳೆದ ಬಾರಿ ಇರಲಿಲ್ಲ. ಈಗ ಪಾಠ ಕಲಿತಿದ್ದೇವೆ. ಪ್ರತೀ ಅಭ್ಯರ್ಥಿಯನ್ನೂ ಅಳೆದೂ ತೂಗಿ ವಿಶ್ಲೇಷಿಸಿ ಅರ್ಹರಿಗಷ್ಟೇ ಟಿಕೆಟ್ ನೀಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ| ಜಿ. ಪರಮೇಶ್ವರ ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಮೈತ್ರಿ ಸರಕಾರವೂ ಇರುವುದಿಲ್ಲ, ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯುವುದು ಶತಸ್ಸಿದ್ಧ ಎಂದರು.
ಅರ್ಜಿ ಹಾಕದಿದ್ದರೂ ಸಮರ್ಥರಿಗೆ ಟಿಕೆಟ್
ಅರ್ಜಿ ಹಾಕಿದವರಿಗೆ ಮಾತ್ರವೇ ಟಿಕೆಟ್ ಎಂಬಂತಹ ಯಾವುದೇ ನಿಯಮ ಇಲ್ಲ, ಯಾರು ಸಮರ್ಥರಿದ್ದಾರೆಯೋ ಅವರು ಅರ್ಜಿ ಹಾಕಿಲ್ಲದಿದ್ದರೂ ಅವರಿಗೆ ಟಿಕೆಟ್ ಕೊಡ ಲಾಗುವುದು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಕೂಡಲೇ ಅವರಿಗೆ ಟಿಕೆಟ್ ಸಿಗಲಾರದು. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದರು.
113ಕ್ಕೂ ಅಧಿಕ ಸ್ಥಾನ ಖಚಿತ: ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಇದು ಜನರಲ್ಲಿ ಹತಾಷೆಗೆ ಕಾರಣವಾಗಿದ್ದು, ರಾಜ್ಯದಲ್ಲಿ ಆಡಳಿತಕ್ಕೆ ಕಾಂಗ್ರೆಸ್ ಮಾತ್ರವೇ ಸಮರ್ಥವಾಗಿದೆ. ಈ ಬಾರಿ 113ಕ್ಕೂ ಅಧಿಕ ಸ್ಥಾನಗಳು ಸಿಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದರು.
ವಿಧಾನಸೌಧದ ಮೆಟ್ಟಿಲುಗಳು, ಕಂಬಗಳಲ್ಲೂ ಈಗಿನ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರದ ಸದ್ದು ಕೇಳಿಬರುತ್ತಿದೆ. ರಾಜ್ಯದ ಇತಿಹಾಸದಲ್ಲೇ ಇಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆದಿಲ್ಲ,
ನೋಂದಾಯಿತ ಗುತ್ತಿಗೆದಾರರ ಸಂಘದವರು ಬಹಿರಂಗವಾಗಿ ಲಂಚದ ಆರೋಪ ಮಾಡಿದ್ದಾರೆ. ಅವರಿಗೆ ಬರಬೇಕಾದ ಆರೂವರೆ ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಪರಿಶಿಷ್ಟರಿಗಾಗಿ ಇರುವ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ 42 ಸಾವಿರ ಕೋಟಿ ರೂ. ಮೊತ್ತದ ಬದಲು ಕೇವಲ 28 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲೂ 8 ಸಾವಿರ ಕೋಟಿ ರೂ. ಮೊತ್ತವನ್ನು ಬೇರೆ ಕೆಲಸಕ್ಕೆ ಖರ್ಚು ಮಾಡಿದ್ದಾರೆ ಈ ಮೂಲಕ ಬಜೆಟ್‌ಗೆ ಅರ್ಥವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಪ್ರಣಾಳಿಕೆಯೇ ನಮ್ಮ ಆಡಳಿತದ ಮೂಲಮಂತ್ರ
ಕಳೆದ ಸರಕಾರದ ಪ್ರಣಾಳಿಕೆಯಲ್ಲಿ 160ರಷ್ಟು ಭರವಸೆಗಳಿದ್ದು, ಅದರಲ್ಲಿ ಬಹುತೇಕ ಈಡೇರಿಸಿದ್ದೇವೆ. ನಮ್ಮ ಸರಕಾರ ಹಿಂದೆ ಪ್ರಣಾಳಿಕೆಯನ್ನು ಇರಿಸಿಕೊಂಡೇ ಬಜೆಟ್ ರೂಪಿಸಿತ್ತು ಎಂದ ಅವರು, ಈ ಬಾರಿಯೂ ಎಲ್ಲ ಜಿಲ್ಲೆಗಳಿಂದಲೂ ಸಲಹೆ ಪಡೆದುಕೊಂಡು ಎಲ್ಲ ಕ್ಷೇತ್ರಗಳನ್ನೂ ಒಳಗೊಂಡಂತೆ ಸಮಗ್ರ ಭರವಸೆಗಳುಳ್ಳ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಇಂದು ಮೀನುಗಾರರು, ಅಡಿಕೆ ಬೆಳೆಗಾರರು, ವಿದ್ಯಾರ್ಥಿಗಳು, ಉದ್ಯಮಿಗಳು, ಬಸ್ ಮಾಲಕ, ನೌಕರರು, ಆಟೊರಿಕ್ಷಾ ಚಾಲಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಸಾಮರಸ್ಯ ಹದಗೆಟ್ಟಿರುವುದರಿಂದ ಬಂಡವಾಳ ಹೂಡಿಕೆಗೆ ಹಿನ್ನಡೆಯಾಗುತ್ತಿರುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ನಾಯಕರಾದ ಪ್ರೊ| ಕೆ.ಇ. ರಾಧಾಕೃಷ್ಣ, ಜಿ.ಎ. ಬಾವಾ, ಮಧು ಬಂಗಾರಪ್ಪ, ಜೆ.ಆರ್. ಲೋಬೊ, ಐವನ್ ಡಿ’ಸೋಜಾ, ಶಕುಂತಳಾ ಶೆಟ್ಟಿ, ಕವಿತಾ ಸನಿಲ್, ನವೀನ್ ಡಿ’ಸೋಜಾ, ಇಬ್ರಾಹಿಂ ಕೋಡಿಜಾಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.