‘ನಮ್ಮನ್ನು ನಾವು ಮೊದಲು ಗೌರವಿಸಿಕೊಳ್ಳೋಣ’
Team Udayavani, Apr 8, 2018, 11:59 AM IST
ಮೂಡಬಿದಿರೆ: ನಾವು ಹೊರನೋಟಕ್ಕೆ ಹೇಗೆಯೇ ಇರಲಿ; ನಮ್ಮನ್ನು ನಾವು ಮೊದಲು ಗೌರವಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ. ಇಲ್ಲದೇ ಇದ್ದರೆ ನಾವು ಎಲ್ಲೋ ಕಳೆದುಹೋಗಿಬಿಡುತ್ತೇವೆ’ ಎಂದು ‘ಒಂದು ಮೊಟ್ಟೆಯ ಕಥೆ’ ಚಲನಚಿತ್ರ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಎಚ್ಚರಿಸಿದರು.
ಆಳ್ವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನ ಆವರಣದಲ್ಲಿ ಶನಿವಾರ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಪ್ರವರ್ತಿತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ‘ಆಳ್ವಾಸ್ ಟ್ರೆಡಿಶನಲ್ ಡೇ-2018’ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅವರು ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್‌ನಲ್ಲಿ ಶಿಕ್ಷಣದೊಂದಿಗೆ ಸಂಸ್ಕೃತಿಯ ಒಳನೋಟವನ್ನು ಹೊಂದುವ, ಅರಿಯುವ ಹಾಗೂ ಅದನ್ನು ಪ್ರೀತಿಸುವ, ಗೌರವಿಸುವಂಥ ವಾತಾವರಣವನ್ನು ಕಲ್ಪಿಸಲಾಗುತ್ತಿದೆ. ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆಯೇ ಇತರರ ಸಂಸ್ಕೃತಿಯನ್ನು ಗೌರವಿಸುವ, ವ್ಯತ್ಯಾಸವನ್ನು ತಿಳಿದು ಗೌರವಿಸುವಂಥ ಗುಣ ನಮ್ಮದಾಗಬೇಕು. ನೀವೆಲ್ಲ ವಿಶಿಷ್ಟವಾಗಿ ಬೆಳೆಯಬೇಕಾಗಿದೆ. ಈ ಉದ್ದೇಶಕ್ಕಾಗಿ ಆಳ್ವಾಸ್‌ನಲ್ಲಿ ಎಲ್ಲ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿರುವುದು ಈ ಸಂಸ್ಥೆಯ ಅವಿಭಾಜ್ಯ ಅಂಗವೇ ಆಗಿದೆ’ ಎಂದು ಅವರು ಹೇಳಿದರು.
ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ| ಪೀಟರ್ ಫೆರ್ನಾಂಡಿಸ್, ಡಾ| ವಿನಯಚಂದ್ರ ಶೆಟ್ಟಿ, ಡಾ| ಕುರಿಯನ್, ಡಾ. ಓಲಿವರ್ ಜೋಸೆಫ್, ಡಾ| ವನಿತಾ ಶೆಟ್ಟಿ, ಆದರ್ಶ್ ಹೆಗ್ಡೆ, ಡಾ| ವರ್ಣನ್ ಡಿ’ಸಿಲ್ವ, ಶೈಲಾ ಉಪಸ್ಥಿತರಿದ್ದರು.
ದ. ಭಾರತ, ಕೇಂದ್ರೀಯ ಮತ್ತು ಉತ್ತರ ಭಾರತ, ಈಶಾನ್ಯ ಭಾರತ, ಕರಾವಳಿ ಕರ್ನಾಟಕ, ಕರಾವಳಿ ಹೊರತಾದ ಕರ್ನಾಟಕ, ಕೇರಳ, ಅಂತಾರಾಷ್ಟ್ರೀಯ (ಭೂತಾನ್, ಶ್ರೀಲಂಕಾ, ನೇಪಾಲ) ಎಂಬ ವಿಭಾಗಗಳಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು, ಆಹಾರ ವೈವಿಧ್ಯಸಹಿತ ವಿವಿಧ ಪ್ರದರ್ಶನಾಂಗಣಗಳನ್ನು ರೂಪಿಸಲಾಗಿತ್ತು. ಪಿಯುಸಿ, ಪ್ರೌಢಶಾಲೆ ಹೊರತು ಪಡಿಸಿ ಇತರೆಲ್ಲ ಕಾಲೇಜುಗಳ ಸುಮಾರು 10,000 ವಿದ್ಯಾರ್ಥಿಗಳು ಸ್ಪರ್ಧಾಕಣದಲ್ಲಿದ್ದರು. ಆರಂಭದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಡಾ| ಬಿ.ಎ. ಯತಿಕುಮಾರ ಸ್ವಾಮಿ ಗೌಡ ವಂದಿಸಿದರು. ಅಶ್ವಿನಿ ಶೆಟ್ಟಿ ನಿರೂಪಿಸಿದರು.
ಸ್ವಂತಿಕೆಯನ್ನು ಅರಿತುಕೊಳ್ಳಿರಿ
ನಿಮ್ಮ ಥರಾ ಇರೋರು ಈ ಜಗತ್ತಿನಲ್ಲಿ ನೀವೊಬ್ಬರೇ ಆಗಿರಲು ಸಾಧ್ಯ. ನಿಮ್ಮ ಜೀವನದಲ್ಲಿ ಎಲ್ಲವೂ ಇವೆ. ಎಲ್ಲವನ್ನೂ ನೋಡಿ ಆನಂದಿಸಿ, ಆಸ್ವಾದಿಸಿರಿ. ನೀವಿರುವ ಪರಿಸರದೊಂದಿಗೆಬೆರೆತು ಬದುಕಲು ಕಲಿಯಿರಿ’. ‘ಸೆಲ್ಫೀ ತೆಗೆದುಕೊಳ್ಳಿರಿ, ಆದರೆ ಫಿಲ್ಟರ್ ಇಲ್ಲದೇ ಸೆಲ್ಫೀ ತೆಗೆದುಕೊಳ್ಳಿ. ಆಗ ಮಾತ್ರ ನಿಮ್ಮ ಸ್ವಂತಿಕೆ ಏನೆಂದು ನಿಮಗೇ ಅರಿವಾಗುತ್ತದೆ.
-ರಾಜ್ ಬಿ. ಶೆಟ್ಟಿ,
ಚಲನಚಿತ್ರ ನಿರ್ದೇಶಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.