4 ನೇ ಕೇಸ್: ಸಯನೈಡ್ ಮೋಹನ್ ಗೆ ಜೀವಾವಧಿ ಶಿಕ್ಷೆ
Team Udayavani, Sep 15, 2017, 4:34 PM IST
ಮಂಗಳೂರು : ಪುತ್ತೂರಿನ ಪಟ್ಟೆಮಜಲಿನ ಯುವತಿಯೋರ್ವಳ ಕೊಲೆ ಪ್ರಕರಣ ಕ್ಕೆ ಸಂಬಂಧಿಸಿ ಸಯನೈಡ್ ಕಿಲ್ಲರ್ ಖ್ಯಾತಿಯ ಮೋಹನ್ ಕುಮಾರ್ (54) ಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
19 ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯಾಗಿರುವ ಮೋಹನ್‌ಗೆ ಈಗಾಗಲೇ ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಮೋಹನ್ 2009ರ ಅಕ್ಟೋಬರ್ 19ರಂದು ಬಂಧನಕ್ಕೊಳಗಾಗಿದ್ದ.
ಯುವತಿಯನ್ನು ಕರೆದೊಯ್ದು ಕೊಲೆ (ಐಪಿಸಿ ಸೆ. 302), ಅತ್ಯಾಚಾರ (ಐಪಿಸಿ ಸೆ. 376), ಆಕೆಯ ಚಿನ್ನಾಭರಣ ಕಳವು (ಐಪಿಸಿ ಸೆ. 392), ಆಕೆಯನ್ನು ವಿಷ ಪದಾರ್ಥ ಸಯನೈಡ್ ನೀಡಿ ಸಾಯಿಸಿದ್ದು (ಐಪಿಸಿ ಸೆ. 328), ಆಕೆಯ ಬ್ಯಾಗ್ ಮತ್ತು ಬಟ್ಟೆಗಳನ್ನು ಎಸೆದು ಸಾಕ್ಷ್ಯ ನಾಶ ಮಾಡಿದ (ಐಪಿಸಿ ಸೆ. 301) ಆರೋಪ ಸಾಬೀತಾಗಿದ್ದು, ಆರೋಪಿ ಮೋಹನ್ ಕುಮಾರ್ ಅಪರಾಧಿ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿತ್ತು.
ಪ್ರಕರಣದ ಹಿನ್ನೆಲೆ: ಅದು 2009ರ ವರ್ಷ. ಮೋಹನ್‌ಗೆ ಪುತ್ತೂರು ತಾಲೂಕು ಪಟ್ಟೆಮಜಲಿನ 25 ವರ್ಷದ ಯುವತಿಯ ಪರಿಚಯವಾಗಿದ್ದು, ಆತ ತನ್ನನ್ನು ಆನಂದ್ ಎಂಬುದಾಗಿ ಪರಿಚಯಿ ಸಿದ್ದನು. ಆಕೆಯ ಮೊಬೈಲ್ ಫೋನ್ ನಂಬ್ರ ಪಡೆದುಕೊಂಡ ಆತ ಆಕೆಯ ಜತೆ ಫೋನ್‌ನಲ್ಲಿ ಮಾತನಾಡುತ್ತಾ ತಾನು ಆಕೆಯ ಜಾತಿಗೆ ಸೇರಿದವನು ಎಂದು ನಂಬಿಸಿ ಮದುವೆ ಯಾಗುವ ಭರವಸೆ ನೀಡಿದ್ದನು.
2009 ಸೆ. 17ರಂದು ಪುತ್ತೂರು ಮಾರ್ಕೆಟ್‌ನಲ್ಲಿ ಭೇಟಿಯಾಗುವಂತೆ ಆತ ಕೇಳಿಕೊಂಡಿದ್ದು, ಅದರಂತೆ ಸೆ. 17ರಂದು ಬೆಳಗ್ಗೆ ಆಕೆ ಚಿನ್ನಾಭರಣಗಳನ್ನು ಧರಿಸಿ ಪುತ್ತೂರು ಮಾರ್ಕೆಟ್‌ಗೆ ಹೋಗಿದ್ದಳು. ಆತ ಆಕೆಯನ್ನು ಬಸ್ಸಿನಲ್ಲಿ ಮಡಿಕೇರಿಗೆ ಕರೆದುಕೊಂಡು ಹೋಗಿದ್ದು, ಲಾಡ್ಜ್ನಲ್ಲಿ ತನ್ನ ಹೆಸರು ಆನಂದ್ ಎಂದು ತಿಳಿಸಿ ರೂಮ್ ಮಾಡಿದ್ದನು. ಅಂದು ರಾತ್ರಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು.
ಮರು ದಿನ (ಸೆ. 18) ಬೆಳಗ್ಗೆ “ಇವತ್ತು ನಮಗೊಂದು ಸಂದರ್ಶನಕ್ಕೆ ಹೋಗಲಿಕ್ಕಿದೆ. ನಾವು ಬಡವರ ಹಾಗೆ ಕಾಣಬೇಕು. ಹಾಗಾಗಿ ಚಿನ್ನಾಭರಣಗಳನ್ನು ಧರಿಸುವುದು ಬೇಡ. ಚಿನ್ನಾಭರಣಗಳನ್ನು ಇಲ್ಲಿಯೇ ರೂಂನಲ್ಲಿ ಇರಿಸಿ ಹೋಗೋಣ’ ಎಂದು ಮೋಹನ್ ತಿಳಿಸಿದ ಮೇರೆಗೆ ಯುವತಿ ತಾನು ಧರಿಸಿದ್ದ ಚಿನ್ನದ ಸರ ಮತ್ತು ಬೆಂಡೋಲೆಗಳನ್ನು ರೂಮ್‌ನಲ್ಲಿ ಬಿಟ್ಟು ಹೋಗಿದ್ದಳು. ಹಾಗೆ ಆಕೆಯನ್ನು ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು, ಮಾತ್ರೆಯೊಂದನ್ನು ಆಕೆಗೆ ನೀಡಿ “ನಿನ್ನೆ ರಾತ್ರಿ ನಡೆಸಿದ ದೈಹಿಕ ಸಂಪರ್ಕದಿಂದ ಗರ್ಭಧಾರಣೆ ಆಗದಿರಲು ಇದನ್ನು ಸೇವಿಸಬೇಕು’ ಎಂದು ತಿಳಿಸಿದ್ದನು. ಯುವತಿ ಬಸ್ ನಿಲ್ದಾಣದ ಟಾಯ್ಲೆಟ್‌ಗೆ ಹೋಗಿ ಮೋಹನ್ ನೀಡಿದ್ದ ಮಾತ್ರೆಯನ್ನು ಸೇವಿಸಿದ್ದು, ಅದು ಸಯನೈಡ್ ಮಾತ್ರೆ ಆಗಿದ್ದರಿಂದ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಳು.
ಇತರ ಮಹಿಳೆಯರು ಇದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಅಷ್ಟರಲ್ಲಿ ಮೋಹನ್ ಕುಮಾರ್ ಅಲ್ಲಿಂದ ವಾಪಸ್ ಲಾಡ್ಜ್ಗೆ ತೆರಳಿ ಆಕೆಯ ಚಿನ್ನಾಭರಣ ಮತ್ತು ಮೊಬೈಲ್ ಫೋನನ್ನು ಎತ್ತಿಕೊಂಡು ರೂಂ ಖಾಲಿ ಮಾಡಿ ಪರಾರಿಯಾಗಿದ್ದನು. ಹೋಗುವ ದಾರಿ ಮಧ್ಯೆ ಯುವತಿಯ ಬಟ್ಟೆಗಳಿದ್ದ ಬ್ಯಾಗನ್ನು ಎಸೆದು ಸಾಕ್ಷ ನಾಶ ಮಾಡಿದ್ದನು. ಯುವತಿಯ ಶವದ ಗುರುತು ಪತ್ತೆ ಆಗದ ಕಾರಣ ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿದ್ದರು.
ಬಳಿಕ 2009 ಅಕ್ಟೋಬರ್ 21ರಂದು ಮೋಹನ್ ಕುಮಾರ್ ಬಂಟ್ವಾಳದ ಬರಿಮಾರ್‌ನ ಯುವತಿಯ ಕೊಲೆ ಪ್ರಕರಣದಲ್ಲಿ ಎಎಸ್‌ಪಿ ಚಂದ್ರಗುಪ್ತ, ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ನಂಜುಂಡೇ ಗೌಡ ಮತ್ತು ಪಿಎಸ್‌ಐ ಶಿವ ಪ್ರಕಾಶ್ ಅವರ ಬಲೆಗೆ ಬಿದ್ದು, ಬಂಧಿತನಾಗಿ ತನಿಖೆ ನಡೆಸುವ ವೇಳೆ ಪುತ್ತೂರು ಪಟ್ಟೆಮಜಲಿನ ಈ ಯುವತಿ ಮೋಹನ್ ಕುಮಾರ್ ನೀಡಿದ ಸಯನೈಡ್ ಮಾತ್ರೆ ತಿಂದು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿತ್ತು. 2010 ಫೆ. 10ರಂದು ಈ ಪ್ರಕರಣದ ಬಗ್ಗೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ಬುಧವಾರ (ಸೆ. 13) ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗ ಸ್ವಾಮಿ ಅವರು ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಮೋಹನ್ ಕುಮಾರ್ ಅಪರಾಧಿ ಎಂದು ಘೋಷಿಸಿದರು. ಶಿಕ್ಷೆಯ ಪ್ರಮಾಣ ಪ್ರಕಟಿಸುವುದನ್ನು ಸೆ. 15ಕ್ಕೆ ಮುಂದೂಡಿದರು.
ಈ ಪ್ರಕರಣದಲ್ಲಿ ಒಟ್ಟು 44 ಸಾಕ್ಷಿಗಳನ್ನು ವಿಚಾರಣೆಗೆ ಒಳ ಪಡಿಸಲಾ ಗಿತ್ತು. 60 ದಾಖಲಾತಿಗಳನ್ನು (ಸಾಕ್ಷ್ಯ) ಪರಿಶೀಲನೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಎಎಸ್‌ಪಿ ಚಂದ್ರಗುಪ್ತ, ಇನ್ಸ್ ಪೆಕ್ಟರ್ ನಂಜುಂಡೇ ಗೌಡ, ಪಿಎಸ್‌ಐ ಮಂಜಯ್ಯ, ಪುತ್ತೂರಿನ ಸಯನೈಡ್ ವ್ಯಾಪಾರಿಯ ಹೇಳಿಕೆಗಳನ್ನು ದಾಖ ಲಿಸಿದ್ದ ಬಂಟ್ವಾಳದ ನ್ಯಾಯಾಧೀಶರು, ಸಯನೈಡ್ ವ್ಯಾಪಾರಿ, ಮಡಿಕೇರಿಯ ಲಾಡ್ಜ್ ಸಿಬಂದಿ, ಕೈಬರಹ ತಜ್ಞರು, ವಿಧಿ ವಿಜ್ಞಾನ ಪರೀಕ್ಷಕರು, ಯುವತಿಯ ಚಿನ್ನಾಭರಣಗಳ ಬಗ್ಗೆ ಆಕೆಯ ತಂಗಿ ಮುಂತಾದವರು ಸಾಕ್ಷಿ ಹೇಳಿದ್ದರು. ಆರೋಪಿ ಮೋಹನ್ ಬಳಿ ಪತ್ತೆಯಾದ ಯುವತಿಯ ಮೊಬೈಲ್ ಫೋನ್, ಫೈನಾನ್ಸ್‌ನಲ್ಲಿ ಅಡವಿಟ್ಟ ಆಕೆಯ ಚಿನ್ನಾಭರಣ, ಯುವತಿಯ ಮನೆಯಲ್ಲಿ ಪತ್ತೆಯಾದ ಮೋಹನ್‌ನ ಫೋನ್ ನಂಬರ್ ಬರೆದಿಟ್ಟ ಪುಸ್ತಕ ಇತ್ಯಾದಿ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಶೀಲಿಸಿತ್ತು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.
ಹೈಕೋರ್ಟಿಗೆ ಅಪೀಲು
ಹಿಂದಿನ ಮೂರು ಪ್ರಕರಣಗಳಲ್ಲಿನ ಮರಣ ದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮೋಹನ್ ಕುಮಾರ್ ಹೈಕೋರ್ಟಿನಲ್ಲಿ ಅಪೀಲು ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವ ಜತೆ ಜತೆಗೇ ಇನ್ನು ಬಾಕಿ ಉಳಿದಿರುವ 16 ಯುವತಿಯರ ಕೊಲೆ ಪ್ರಕರಣದ ವಿಚಾರಣೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ವಕೀಲರಿಲ್ಲದೆ ಸ್ವಯಂ ವಾದ
ಮೋಹನ್ ಕುಮಾರ್ ತನ್ನ ಕೇಸಿನ ಬಗ್ಗೆ ವಾದ ಮಂಡಿಸಲು ವಕೀಲರನ್ನು ನೇಮಿಸಿಕೊಂಡಿಲ್ಲ; ತಾನೇ ಸ್ವತಃ ಲಿಖೀತವಾಗಿ ಮತ್ತು ಮೌಖೀಕವಾಗಿ ವಾದಿಸುತ್ತಿದ್ದಾನೆ. ವಕೀಲರನ್ನು ಒದಗಿಸಲು ಸರಕಾರ ಮುಂದೆ ಬಂದಿದ್ದರೂ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾನೆ.
ಹಿಂಡಲಗಾ ಜೈಲಿನಲ್ಲಿ
ಮಂಗಳೂರು ಜೈಲು ವಿಚಾರಣಾಧೀನ ಕೈದಿಗಳಿಗೆ ಮಾತ್ರ ಮೀಸಲಾಗಿದ್ದು, ಮೋಹನ್ ಶಿಕ್ಷೆಗೊಳಗಾದ ಅಪರಾಧಿ ಆಗಿರುವುದರಿಂದ ಆತನನ್ನು ಶಿಕ್ಷೆ ಪ್ರಕಟವಾದಂದಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲಾಗಿದೆ. ಪ್ರಸ್ತುತ ಆತನನ್ನು ವಿಚಾರಣೆಯ ಸಂದರ್ಭದಲ್ಲಿ ಮಂಗಳೂರಿನ ಪೊಲೀಸರು ಬೆಳಗಾವಿಗೆ ತೆರಳಿ ಇಲ್ಲಿಗೆ ಕರೆದು ಕೊಂಡು ಬರುತ್ತಿದ್ದಾರೆ.
ಒಂದು ಬಾರಿ ಕರೆ ತರುವಾಗ 3 -4 ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ಎರಡು ಅವಧಿಗಳಲ್ಲಿ ಬೆಂಗಾವಲು ಪೊಲೀಸರು ಕೊರತೆಯಿಂದಾಗಿ ಆತನನ್ನು ಬೆಳಗಾವಿಯಿಂದ ಕರೆತರಲು ಸಾಧ್ಯವಾಗದೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಇದೀಗ ಇನ್ನೂ 5 ಪ್ರಕರಣಗಳ ವಿಚಾರಣೆ ಅಂತಿಮ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.