ಲಿಫ್ಟ್: ಮಕ್ಕಳ ಬಗ್ಗೆ ಇರಲಿ ಎಚ್ಚರ
Team Udayavani, Aug 25, 2018, 10:00 AM IST
ಮಹಾನಗರ: ಫಳ್ನೀರ್ ಸಮೀಪದ ವಾಸ್‌ಲೇನ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಲಿಫ್ಟ್‌ನೊಳಗೆ ಸಿಲುಕಿದ ಏಳು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ. ಗಂಭೀರ ವಿಚಾರ ಅಂದರೆ, ನಗರದಲ್ಲಿ ಈ ಹಿಂದೆ ಲಿಫ್ಟ್‌ನೊಳಗಡೆ ಸಿಲುಕಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ರೀತಿಯ ದುರ್ಘಟನೆಗಳು ಪುನರಾವರ್ತಿಸುತ್ತಿರುವುದಕ್ಕೆ ಲಿಫ್ಟ್ ಸುರಕ್ಷತೆ ನಿರ್ವಹಣೆ ಹೊಣೆ ವಹಿಸಿಕೊಂಡಿರುವ ಏಜೆನ್ಸಿ ಅಥವಾ ಅಪಾರ್ಟ್‌ಮೆಂಟ್‌ಗಳ ಅಸೋಸಿಯೇಶನ್‌ಗಳು ಅಥವಾ ಖುದ್ದು ಪೋಷಕರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರೂ ತಪ್ಪಾಗಲಾರದು.
ಇತ್ತೀಚೆಗೆ ನಗರದೆಲ್ಲೆಡೆ ನಿರ್ಮಾಣಗೊಳ್ಳುತ್ತಿರುವ ಪ್ರತಿಯೊಂದು ಅಪಾರ್ಟ್‌ಮೆಂಟ್‌ಗಳು ಕೂಡ ಲಿಫ್ಟ್‌ಗಳನ್ನೇ ಅವಲಂಬಿಸಿರುತ್ತಾರೆ. ಆದರೆ ಲಿಫ್ಟ್‌ಗಳ ಸುರಕ್ಷೆ ಅಥವಾ ಅವುಗಳ ಸುಸ್ಥಿತಿ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ಗುರುವಾರ ರಾತ್ರಿ ವಾಸ್‌ಲೇನ್ ರಸ್ತೆಯಲ್ಲಿ ಮಗು ಸಿಲುಕಿ ಪ್ರಾಣ ಕಳೆದುಕೊಳ್ಳುವುದಕ್ಕೆ ಕೂಡ ಅಲ್ಲಿ ಅಳವಡಿಸಲಾಗಿರುವ ಹಳೇ ಮಾದರಿ ಲಿಫ್ಟ್ ವ್ಯವಸ್ಥೆ ಮುಖ್ಯ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇನ್ನು ಪೋಷಕರು ಮಕ್ಕಳ ಬಗ್ಗೆ ಎಷ್ಟೇ ಜಾಗ್ರತೆ ವಹಿಸಿದ್ದರು ಕೂಡ ಅಪಾರ್ಟ್ ಮೆಂಟ್‌ಗಳಲ್ಲಿ ಮಕ್ಕಳು ಕಣ್ಣು ತಪ್ಪಿಸಿಕೊಂಡು ಒಳಗೆ ಸಿಲುಕಿಕೊಂಡು ಈ ರೀತಿಯ ಅವಘಡಗಳಿಗೆ ಕಾರಣವಾಗುವ ಅಪಾಯವಿದೆ. ಹೀಗಿರುವಾಗ, ಕಾಲ ಕಾಲಕ್ಕೆ ಆಯಾ ಲಿಫ್ಟ್‌ಗಳ ಗುಣಮಟ್ಟ, ಕಾರ್ಯದಕ್ಷತೆ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕಾಗಿರುವುದು ಜವಾಬ್ದಾರಿಯಾಗಿದೆ. ವಾಸ್‌ಲೇನ್‌ನಲ್ಲಿ ನಡೆದಿರುವ ದುರಂತ ಮತ್ತೆ ಪುನರಾವರ್ತಿಸಬಾರದು; ಲಿಫ್ಟ್ ಸುರಕ್ಷೆ ಬಗ್ಗೆ ಪೋಷಕರಿಂದ ಹಿಡಿದು ಪ್ರತಿಯೊಬ್ಬರು ಕೂಡ ಎಚ್ಚರ ವಹಿಸ ಬೇಕು ಎನ್ನುವ ಕಳಕಳಿಯೊಂದಿಗೆ ‘ಸುದಿನ’ ಈ ರೀತಿಯ ಒಂದು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ.
ವರ್ಷದ ಹಿಂದೆ..
2010ರ ಆಗಸ್ಟ್ 8ರಂದು ಕಂಕನಾಡಿಯ ಕಟ್ಟಡವೊಂದರಲ್ಲಿ ಸಂಭವಿಸಿದ ಲಿಫ್ಟ್ ಅವಘಡದಲ್ಲಿ 24 ವರ್ಷದ ಯುವಕನೋರ್ವ ಮೃತಪಟ್ಟಿದ್ದ. ಕಳೆದೆರಡು ವರ್ಷದ ಹಿಂದೆ ಕಂಕನಾಡಿಯಲ್ಲಿ ಲಿಫ್ಟ್‌ನೊಳಗೆ ಸಿಲುಕಿದ ವ್ಯಕ್ತಿಯೋರ್ವರು ಅದೃಷ್ಟವಶಾತ್ ಬದುಕುಳಿದಿದ್ದರು. ಈಗ ಗುರುವಾರ ನಗರದ ಯುನಿಟಿ ಆಸ್ಪತ್ರೆ ಪಕ್ಕದ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ಲಿಫ್ಟ್ ಬಾಗಿಲಿನಲ್ಲಿ ಸಿಲುಕಿ ಏಳರ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆಗಳಿಗೆ ಸ್ಪಷ್ಟ ಕಾರಣ ಏನು ಎಂದು ತಿಳಿದು ಬಂದಿಲ್ಲವಾದರೂ, ಹಳೆ ಲಿಫ್ಟ್ ಗಳನ್ನು ಹಲವು ವರ್ಷಗಳಿಂದ ಚಾಲೂ ಮಾಡುತ್ತಿರುವುದು, ಸರಿಯಾಗಿ ತಪಾಸಣೆ ಮಾಡದಿರುವುದು, ಲಿಫ್ಟ್ ಆಪರೇಟರ್‌ಗಳು ಇಲ್ಲದಿರುವುದು ಮತ್ತು ಸ್ವಯಂ ನಿರ್ಲಕ್ಷ್ಯದ ಕಾರಣಗಳಿಂದಾಗಿ ಅವಘಡಗಳು ಸಂಭವಿಸುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ಅಪಾಯ ತಪ್ಪಿಸಿ
ನಗರದ ಮಾಲ್, ಹೊಟೇಲ್ ಗಳ ಬಹು ಮಹಡಿ ಕಟ್ಟಡಗಳಲ್ಲಿ ಲಿಫ್ಟ್ ಆಪರೇಟರ್‌ಗಳು ಕಾಣಸಿಗುವುದಿಲ್ಲ. ಅಪಾಯ ಎದುರಾದರೆ ತುರ್ತು ಸಂಖ್ಯೆಗೆ ಕರೆ ಮಾಡಬೇಕು ಎಂದಿದ್ದರೂ, ಕೆಲವು ಲಿಫ್ಟ್‌ಗಳಲ್ಲಿ ತುರ್ತು ಸಂಖ್ಯೆಯೇ ನಮೂದಾಗಿರುವುದಿಲ್ಲ. ಇವುಗಳನ್ನು ಕಟ್ಟಡ ಮಾಲಕರು ಅಳವಡಿಸಿದರೆ ಮುಂದಾಗುವ ಅಪಾಯಗಳನ್ನು ತಪ್ಪಿಸಬಹುದು ಎನ್ನುವುದು ಸಾರ್ವಜನಿರ ಅಭಿಪ್ರಾಯ. ಕಾನೂನು ಪ್ರಕಾರ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಆಪರೇಟರ್‌ಗಳು ಇರಬೇಕಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅದೆಷ್ಟೋ ಮಂದಿಗೆ ಲಿಫ್ಟ್‌ನಲ್ಲಿ ತೆರಳುವುದು ಹೇಗೆ, ಅಪಾಯ ಎದುರಾದಾಗ ಏನು ಮಾಡಬೇಕೆಂದು ತಿಳಿದಿರುವುದಿಲ್ಲ.
ಎಚ್ಚರಿಕೆ ಅಗತ್ಯ
ಕಳೆದ ಜುಲೈ 6ರಂದು ಉ.ಪ್ರದೇಶದ ನೋಯ್ಡಾದಲ್ಲಿ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ 7ನೇ ಮಹಡಿಗೆ ಏಕಾಏಕಿ ಲಿಫ್ಟ್ ಕುಸಿದು ಮಹಿಳೆಯೋರ್ವರ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿತ್ತು. ಸೆನ್ಸರ್ ಕೈಕೊಟ್ಟ ಪರಿಣಾಮ 2014ರಲ್ಲಿ ಬೆಂಗಳೂರಿನ ವ್ಯಕ್ತಿಯೋರ್ವ ಲಿಫ್ಟ್‌ನಲ್ಲಿಯೇ ಮೃತ ಪಟ್ಟಿದ್ದ. ಈ ಎಲ್ಲ ಘಟನೆಗಳಿಗೆ ಲಿಫ್ಟ್‌ನಲ್ಲಿ ಉಂಟಾದ ತಾಂತ್ರಿಕ ದೋಷಗಳೇ ಕಾರಣವಾಗಿವೆ.
ಮನಸೋ ಇಚ್ಛೆ ಹಣ ವಸೂಲಿ?
ಲಿಫ್ಟ್ ಅಳವಡಿಸಿದ ಕಟ್ಟಡದ ಮಾಲಕರು ಯಾವುದೇ ಲಿಫ್ಟ್ ಕಂಪೆನಿಗೆ ವಾರ್ಷಿಕ ನಿರ್ವಹಣೆ ಗುತ್ತಿಗೆ ನೀಡಬೇಕು. ಸೂಕ್ತ ಸಮಯದಲ್ಲಿ ಅದೇ ಕಂಪೆನಿ ಮುಖಾಂತರ ಲಿಫ್ಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ಮತ್ತು ತಪಾಸಣೆ ಮಾಡಿಸಿಕೊಳ್ಳಬೇಕು. ಮೊದಲ ವರ್ಷ ಇದು ಉಚಿತವಾಗಿದ್ದರೆ, ಮುಂದಿನ ವರ್ಷಗಳಲ್ಲಿ ನಿರ್ವಹಣೆಗಾಗಿಯೇ ದರ ನೀಡಲಾಗುತ್ತದೆ. ಲಿಫ್ಟ್ ನಿರ್ವಹಣೆಗೆ ವಾರ್ಷಿಕ ಇಂತಿಷ್ಟೇ ದರ ಎಂಬುದು ನಿಗದಿಯಾಗದಿದ್ದರೂ, ಕೆಲ ಲಿಫ್ಟ್ ಕಂಪೆನಿಗಳು ತಮ್ಮಿಷ್ಟ ಬಂದಂತೆ ಗರಿಷ್ಠ ಹಣವನ್ನು ನಿರ್ವಹಣೆಗಾಗಿ ವಸೂಲಿ ಮಾಡಿಕೊಳ್ಳುತ್ತಿವೆ ಎಂಬುದಾಗಿ ಹೆಸರು ಹೇಳಲಿಚ್ಚಿಸದ ಸಾರ್ವಜನಿಕರೊಬ್ಬರು ಆರೋಪಿಸಿದ್ದಾರೆ. ಲಿಫ್ಟ್ ತಪಾಸಣೆಗಾಗಿ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ತೆರಳಿದಾಗಿ ಸಾರ್ವಜನಿಕರೂ ಇಂತಹದ್ದೇ ಅಳಲು ತೋಡಿಕೊಂಡಿದ್ದಾರೆ ಎಂಬುದಾಗಿ ಕೆಲವು ಅಧಿಕಾರಿಗಳೂ ತಿಳಿಸಿದ್ದಾರೆ.
ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿ ಹೋಗಬೇಡಿ
12 ವರ್ಷದೊಳಗಿನ ಮಕ್ಕಳನ್ನು ಹೆತ್ತವರು ಅಥವಾ ಸಂಬಂಧಪಟ್ಟವರು ಜತೆಗಿಲ್ಲದೆ ಲಿಫ್ಟ್ ಬಳಿ ಕಳುಹಿಸಬೇಡಿ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುವವರು ಈ ಬಗ್ಗೆ ಗಮನ ಹರಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಲಿಫ್ಟ್‌ನಲ್ಲಿ ಇಷ್ಟೇ ಮಂದಿ ಹೋಗಲು ಸಾಧ್ಯ ಎಂದು ಮಾಹಿತಿ ಅಳವಡಿಸಲಾಗಿರುತ್ತದೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನ ಹೋಗುವುದು ದುರ್ಘಟನೆಗಳಿಗೆ ಕಾರಣವಾಗಬಹುದು.
10 ವರ್ಷಕ್ಕೊಮ್ಮೆ ನವೀಕರಣ
. ಕರ್ನಾಟಕ ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಕಾಯಿದೆ 2012ರ ಪ್ರಕಾರ ಪ್ರತಿ ಹತ್ತು ವರ್ಷ ಗಳಿಗೊಮ್ಮೆ ಲಿಫ್ಟ್‌ಗಳ ಲೈಸನ್ಸ್ ನವೀಕರಣ ಮಾಡಬೇಕು. ಒಂದು ವೇಳೆ ನವೀಕರಣಕ್ಕೆ ಯೋಗ್ಯ ವಾಗಿಲ್ಲದ ಲಿಫ್ಟ್‌ಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಸಂಬಂಧಪಟ್ಟ ಲಿಫ್ಟ್‌ನ ಮಾಲಕರು ಪ್ರತಿ ತಿಂಗಳಿಗೊಮ್ಮೆ ತಪಾಸಣೆ ನಡೆಸಬೇಕು.
. ಯಾವುದೇ ಕಟ್ಟಡದಲ್ಲಿ ಬಳಸಲು ಸಾಧ್ಯವಿಲ್ಲದ ಲಿಫ್ಟ್‌ಗಳಿದ್ದರೆ ಅಂತಹ ಲಿಫ್ಟ್ ಮಾಲಕರು ಪ್ರಾಧೀಕೃತ ಅಧಿಕಾರಿಯಿಂದ ಅನುಮೋದನೆ ಪಡೆದು ಅದನ್ನು ತೆಗೆದು ಹಾಕಬೇಕು. ಅಲ್ಲದೆ ಅಂತಹ ಲಿಫ್ಟ್‌ನ ಎಲ್ಲ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಬೇಕು. ಲಿಫ್ಟ್ ಬಳಿಗೆ ಯಾವುದೇ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಬೇಕು.
.ಈ ಕೆಲಸಗಳೆಲ್ಲ ನಗರದಲ್ಲಿ ಸರಿಯಾಗಿ ನಡೆಸಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ವರ್ಷಕ್ಕೊಂದು ಬಾರಿ ಇಲಾಖೆ ವತಿಯಿಂದ ಲಿಫ್ಟ್‌ಗಳನ್ನು ಪರಿಶೀಲಿಸಲಾಗುತ್ತದೆ. ವಿಶೇಷವಾಗಿ ಡೋರ್ ಸೇಫ್ಟಿ ಬಗ್ಗೆ ಗಮನ ಹರಿಸಲಾಗುತ್ತದೆ. ಆದರೆ ಬಳಸಲು ಯೋಗ್ಯವಲ್ಲದ ಲಿಫ್ಟ್‌ಗಳು ಕಂಡು ಬಂದಿಲ್ಲ ಎನ್ನುತ್ತಾರೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.