ಯಾರು ಬಂದರೇನಂತೆ – ನಮ್ಮ ಬೇಡಿಕೆ ಕೇಳುತ್ತಾರೆಯೇ ?
Team Udayavani, May 7, 2018, 3:58 PM IST
ಪುತ್ತೂರು: ರಾಷ್ಟ್ರೀಯ ಮಟ್ಟದ ಘಟಾನುಘಟಿ ನಾಯಕರು ಚುನಾವಣೆಗೆ ರಂಗು ತುಂಬಿದರೇನು? ನಮ್ಮ ಹೊಟ್ಟೆಗೆ ತೆಳಿ- ಗಂಜಿಯೇ ಗತಿ…
ಒಂದೊಮ್ಮೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪ್ರತ್ಯೇಕಗೊಂಡು ಈಗ ಮತ್ತೆ ಪುತ್ತೂರಿನೊಂದಿಗೆ ಬೆರೆತು ಹೋಗಿರುವ ಪ್ರದೇಶ ವಿಟ್ಲ. ಇದು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿಯೂ ಗುರುತಿಸಿಕೊಂಡಿತ್ತು. ಬಳಿಕ ಪುತ್ತೂರು, ಬಂಟ್ವಾಳ, ಮಂಗಳೂರಿಗೆ ಹರಿದು ಹಂಚಿ ಹೋಯಿತು. ವಿಟ್ಲ, ಇಡ್ಕಿದು, ವಿಟ್ಲ- ಮುಟ್ನೂರು, ಕುಳ, ಪುಣಚ, ಮಾಣಿಲ, ಪೆರುವಾಯಿ, ಅಳಿಕೆ ಇವಿಷ್ಟು ಪುತ್ತೂರು ಕ್ಷೇತ್ರಕ್ಕೆ ಸೇರಿದ ವಿಟ್ಲದ ಭಾಗಗಳು. ಒಂದಷ್ಟು ಪೇಟೆ, ಇನ್ನೊಂದಷ್ಟು ಗುಡ್ಡಗಾಡು ಪ್ರದೇಶವಾದ ವಿಟ್ಲದಲ್ಲಿ ಚುನಾವಣೆಯ ರಂಗು ಸಣ್ಣಗೆ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ಜನರ ನಡುವಿನ ಮಾತು ಕುತೂಹಲವರಳಿಸಿದೆ.
ಮಂಗಳೂರು, ಪುತ್ತೂರು, ಬಿ.ಸಿ.ರೋಡ್ ಬಿಟ್ಟರೆ ಅನಂತರದ ವಾಣಿಜ್ಯ ಕೇಂದ್ರವಾಗಿ ವಿಟ್ಲ ಬೆಳೆಯುತ್ತಿದೆ. ಅಭಿವೃದ್ಧಿ ಕೆಲಸಗಳು ಧಾವಿಸುತ್ತಿವೆ. ಇವೆಲ್ಲವನ್ನು ಜೀರ್ಣಿಸಿಕೊಳ್ಳಲು ವಿಟ್ಲಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣ, ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ. ಪೇಟೆ ತುಂಬಾ ಇಕ್ಕಟ್ಟು, ಗುಡ್ಡಗಾಡು ಪ್ರದೇಶದ ಮೂಲಸೌಕರ್ಯಕ್ಕೆ ಅನುದಾನದ ಬಿಕ್ಕಟ್ಟು. ಹೀಗಿರುವಾಗ ಮೋದಿ ಬಂದರೇನು, ರಾಹುಲ್ ಬಂದರೇನು- ವಿಟ್ಲದ ಅಭಿವೃದ್ಧಿಗೆ ಕೊಡುಗೆ ನೀಡುವರೇ ಎಂದು ಪ್ರಶ್ನಿಸುತ್ತಾರೆ ವಿಟ್ಲದ ಹೇಮಂತ್.
ಭ್ರಷ್ಟಾಚಾರ ವಿರೋಧಿಸಿ ಮಾತನಾಡಿದಷ್ಟು ಬಿಜೆಪಿಯವರೇ ಸಿಕ್ಕಿ ಬೀಳುತ್ತಿದ್ದಾರೆ. ಒಳಜಗಳವೇ ಹೆಚ್ಚಾಗಿರುವ ಕಾಂಗ್ರೆಸಿಗರಿಗೆ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವೇ ಇಲ್ಲ. ಇವೆರಡು ಪಕ್ಷಗಳನ್ನು ಹೊರತು ಪಡಿಸಿದರೆ ಪರ್ಯಾಯ ವ್ಯವಸ್ಥೆ ಇಲ್ಲ. ಭರವಸೆಗಳು ಕೇವಲ ಮಾತಿಗೆ ಸೀಮಿತಗೊಳ್ಳುತ್ತಿವೆ. ಆದ್ದರಿಂದ ವಿಟ್ಲವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಿ, ಮೂಲಸೌಕರ್ಯ ಹೆಚ್ಚಿಸಿ ಎನ್ನುವುದು ಪೆರುವಾಯಿಯ ನವೀನ್ ಅವರ ಬೇಡಿಕೆ.
ಹೇಳಿದರೂ ಕೇಳಿಸಿಕೊಂಡಾರೆಯೇ?
ಹೇಳಿಕೇಳಿ ವಿಟ್ಲ ಗುಡ್ಡಗಾಡು ಪ್ರದೇಶ. ಒಂದಷ್ಟು ರಸ್ತೆಗಳು ಅಭಿವೃದ್ಧಿಗೊಂಡಿವೆ. ಆದರೆ ಆಗಬೇಕಾದ ಕೆಲಸಗಳು ಇನ್ನೂ ಸಾಕಷ್ಟಿವೆ. ಈಗ ಚುನಾವಣೆಯ ಸಮಯ. ನಮ್ಮ ಬೇಡಿಕೆಗಳನ್ನು ಮುಂದಿಡಲು ಇದೇ ಸೂಕ್ತ ಕಾಲ ಎಂದು ಅನಿಸುತ್ತದೆ. ಆದರೆ ಕಾರ್ಯಕರ್ತರು, ಮುಖಂಡರು ಮತ ಕೇಳುವ ಬಿಝಿಯಲ್ಲಿ ಇದ್ದಾರೆಯೇ ವಿನಾ ನಮ್ಮ ಬೇಡಿಕೆಗಳನ್ನಲ್ಲ. ಈ ಒತ್ತಡದ ನಡುವೆ ಹೇಳಿದರೂ, ಕೇಳಿಸಿಕೊಳ್ಳುತ್ತಾರೆ ಎಂಬ ಭರವಸೆ ನಮಗೆ ಖಂಡಿತ ಇಲ್ಲ ಎನ್ನುತ್ತಾರೆ ರಮೇಶ್. ವಿಟ್ಲ ಪೇಟೆ ಕಿರಿದಾಗಿದ್ದು, ಟ್ರಾಫಿಕ್ ಹೆಚ್ಚಿದೆ.
ಪುತ್ತೂರು- ಕಾಸರಗೋಡು ಮತ್ತು ಪುತ್ತೂರು- ಮಂಗಳೂರು ರಸ್ತೆಗೆ ಬೈಪಾಸ್ ಬೇಕು. ಸಮಗ್ರ ಕುಡಿಯುವ ನೀರಿಗೆ ವ್ಯವಸ್ಥೆ ಆಗಬೇಕು. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದೆ. ಆದರೆ ಇಲ್ಲಿನ ಚರಂಡಿಗಳು ಹಿಂದಿನ ಕಾಲದವೇ. ನೆಮ್ಮದಿ ಕೇಂದ್ರಗಳಲ್ಲಿ ನೆಮ್ಮದಿಯೇ ಇಲ್ಲ. ಮಾಣಿಲದಂತಹ ಪ್ರದೇಶಗಳು ಸಾಕಷ್ಟು ಹಿಂದುಳಿದಿವೆ. ಇವಿಷ್ಟು ಅಗತ್ಯ ಆಗಬೇಕಾದ ಕೆಲಸಗಳು. ಮತ ಕೇಳುವ ನಾಯಕರು ಈ ಬಗ್ಗೆಯೂ ಸ್ವಲ್ಪ ತಲೆ ಕೆಡಿಸಿಕೊಳ್ಳಲಿ ಎನ್ನುತ್ತಾರೆ ವಿಟ್ಲದ ರವಿ.
ಕಣ್ಣು ತಪ್ಪಿಸಲು ಸುಲಭ
ಕೇರಳ ಹಾಗೂ ಕರ್ನಾಟಕದ ಗಡಿ ಭಾಗ ವಿಟ್ಲದ ಪೆರುವಾಯಿ. ಇಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚು. ಪೆರುವಾಯಿಯಲ್ಲಿ ಅಪರಾಧ ನಡೆಸಿ, ಕೇರಳ ಭಾಗದಲ್ಲಿ ತಲೆ ಮರೆಸಿಕೊಂಡರೆ ಪೊಲೀಸರ ಕಣ್ಣು ತಪ್ಪಿಸಲು ಸುಲಭ. ಆಡಳಿತದ ಕಾರಣಕ್ಕೆ ಗುರುತಿಸಿಕೊಂಡ ಗಡಿಭಾಗಗಳು ಈ ರೀತಿಯಲ್ಲೂ ತಲೆನೋವಾಗುತ್ತವೆ ನೋಡಿ. ಇದಕ್ಕೆ ನಾಯಕರು ಯಾವ ರೀತಿಯ ಪರಿಹಾರ ಕೊಡುತ್ತಾರೋ?
-ಸದಾಶಿವ, ಪೆರುವಾಯಿ
ಭರವಸೆ ಇಲ್ಲ
ಯಾವ ಪಕ್ಷ ಅಧಿಕಾರ ಹಿಡಿದರೂ, ಕರಾವಳಿ ಭಾಗದ ಬೇಡಿಕೆಗಳಿಗೆ ಜೀವ ತುಂಬುವುದು ತುಸು ಕಷ್ಟವೇ. ಇದಕ್ಕೆ ಒಂದು ದೃಷ್ಟಾಂತ ನೇತ್ರಾವತಿ ತಿರುವು ಅಥವಾ ಎತ್ತಿನಹೊಳೆ ಯೋಜನೆ. ಈಗ ಮಾತ್ರ ರಾಜಕೀಯ ನಾಯಕರು ನಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಆದರೆ ನಮ್ಮ ಬೇಡಿಕೆಗಳನ್ನು ಕೇಳಿ, ತಲೆ ಆಡಿಸಿಕೊಂಡು ಹೋಗುತ್ತಾರೆ. ಅವು ಈಡೇರುತ್ತವೆ ಎಂಬ ಯಾವ ಭರವಸೆಯೂ ನಮಗಿಲ್ಲ.
-ಉಷಾ, ಪುಣಚ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.