‘ನೈತಿಕತೆ ಬೋಧಿಸುವ ಸಾಹಿತ್ಯ ಬೇಕು’
Team Udayavani, Jan 14, 2018, 2:48 PM IST
ದುಗಲಡ್ಕ (ಪಾನತ್ತಿಲ ಈಶ್ವರಪ್ಪ ಗೌಡ ವೇದಿಕೆ): ಸಮಾಜದಲ್ಲಿ ನೈತಿಕತೆ ಅಧಃಪತನದತ್ತ ಸಾಗುತ್ತಿದ್ದು, ಹೊಸ ಪೀಳಿಗೆಗೆ ನೈತಿಕತೆ ತಿಳಿ ಹೇಳುವ ಸಾಹಿತ್ಯದ ಸೃಷ್ಟಿ ಅಗತ್ಯ ಇದೆ ಎಂದು ಸುಳ್ಯ ತಾಲೂಕು 22ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಪ್ರತಿಪಾದಿಸಿದ್ದಾರೆ. ಶನಿವಾರ ದುಗಲಡ್ಕ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಿತ್ಯ ಹಲವಾರು ಸಾಮಾಜಿಕ ಸಮಸ್ಯೆ ಗಳನ್ನು ನಾವು ಕಾಣುತ್ತಿದ್ದೇವೆ. ಇದರಿಂದ ಉಂಟಾಗುವ ಪರಿಣಾಮ ಮತ್ತು ಅದಕ್ಕೆ ಪರಿಹಾರವನ್ನು ತಿಳಿಸಲು ಬರಹಗಾರರು ಮುಂದಾಗ ಬೇಕಿದೆ ಎಂದು ಅವರು ಹೇಳಿದರು.
ಕೃಷಿಗೆ ಒತ್ತು
ಹಿಂದೆಲ್ಲ ಮುಂಬಯಿ, ಹೊರದೇಶಗಳಿಗೆ ಹೋಗಿ ಜೀವನ ಕಟ್ಟಿಕೊಳ್ಳುತ್ತಿದ್ದರು. ಆದರೆ ಈಗ ಅವಕಾಶಗಳೇ ಕಡಿಮೆಯಾಗುತ್ತಿವೆ. ಎಂಜಿನಿಯರಿಂಗ್, ಎಂಬಿಎ ಓದಿದ ಮಂದಿಯೇ ನೌಕರಿ ಇಲ್ಲದೆ ಟ್ಯಾಕ್ಸಿ ಓಡಿಸುತ್ತಾರೆ, ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಇರುವ ಭೂಮಿಯನ್ನೇ ಬಳಸಿಕೊಂಡು ಹಿಂದಿನ ಕೃಷಿ ಪ್ರಧಾನ ವ್ಯವಸ್ಥೆಗೆ ಮುಂದಿನ ತಲೆಮಾರುಗಳನ್ನು ಅಣಿಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
ಸಣ್ಣ ಭಾಷೆಗಳ ಆತಂಕ
ಆಂಗ್ಲ ಭಾಷೆಯ ಪ್ರಾಬಲ್ಯತೆ ಸಾವಿರಾರು ಸಣ್ಣ ಭಾಷೆಗಳ ಅವನತಿಗೆ ಕಾರಣವಾಗುತ್ತಿದೆ. ಆದರೂ, ಆಯಾ ದೇಶಗಳ ಸರಕಾರಗಳು ಮೌನವಾಗಿರುವುದು ಅವುಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಅಧಿಕಾರಿಗಳು, ಸರಕಾರಗಳು ಸಣ್ಣ ಭಾಷೆಗಳ ಕುರಿತು ತೋರುತ್ತಿರುವ ನಿರ್ಲಕ್ಷ್ಯ ಆಂಗ್ಲ ಭಾಷಾ ಆಧಿಪತ್ಯವನ್ನು ಸುಲಭವಾಗಿ ಒಪ್ಪಿಕೊಳ್ಳುವಂತೆ ಮಾಡಿದೆ ಎಂದು ಅವರು ನುಡಿದರು.
ಭಾರತದಲ್ಲಿ ಈ ಸಮಸ್ಯೆ ತೀವ್ರತರವಾಗಿದೆ. ಕೋಮುವಾದ, ಭ್ರಷ್ಟಚಾರ, ರಾಜಕೀಯ ಮೊದಲಾದ ವಿಷಯಗಳ ಕುರಿತು ಇಲ್ಲಿ ನಡೆವ ಚರ್ಚೆಯ ಹಾಗೆ, ಅವಸಾನದ ಅಂಚಿನಲ್ಲಿರುವ ಸಣ್ಣ ಭಾಷೆಗಳ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ. ಮಾಧ್ಯಮಗಳು ಕೂಡ ಆಸಕ್ತಿ ಹೊಂದಿಲ್ಲ. ಭಾಷಾ ಅವನತಿಯ ಅಪಾಯಗಳ ಕುರಿತು ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಮುಖ್ಯ. ತುಳು, ಕೊಡವಕ್ಕೂ ಇದೇ ಪರಿಸ್ಥಿತಿ ಇದ್ದು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಮನಸ್ಸು ಮಾಡುತ್ತಿಲ್ಲ ಎಂದವರು ವಿಶ್ಲೇಷಿಸಿದರು.
ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲಕ್ಷ್ಮೀಶ ಚೊಕ್ಕಾಡಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿ, ಡಾ| ದೊಡ್ಡರಂಗೇಗೌಡ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಸಾಹಿತಿ ಅರವಿಂದ ಚೊಕ್ಕಾಡಿ, ಕೊಯಿಕುಳಿ ಮಿತ್ರ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಎಂ.ಕೆ.ಪುರುಷೋತ್ತಮ ಗೌಡ ಮಾಣಿಬೆಟ್ಟು, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ.ವಿಶ್ವನಾಥ, ಸ್ಮರಣ ಸಂಚಿಕೆ ಸಂಪಾದಕ ದೊಡ್ಡಣ್ಣ ಬರಮೇಲು, ಜಿಲ್ಲಾ ಕನ್ನಡ ಸಾಹಿತ್ಯ ಘಟಕದ ಪದಾಧಿಕಾರಿಗಳಾದ ತಮ್ಮಯ್ಯ ಬಂಟ್ವಾಳ, ಬಿ.ಐತ್ತಪ್ಪ ನಾಯ್ಕ, ಕೆ.ಮೋಹನ್ ರಾವ್ ಬಂಟ್ವಾಳ, ಜನಾರ್ದನ ಹಂದೆ, ದುಗಲಡ್ಕ ಶಾಲಾ ಮುಖ್ಯಗುರು ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.
ಗಿರಿಜಾ ಎಂ.ವಿ ಮತ್ತು ಪೂರ್ಣಿಮಾ ಮಡಪ್ಪಾಡಿ ಆಶಯ ಗೀತೆ ಹಾಡಿದರು. ದುಗಲಡ್ಕ ಪ್ರೌಢಶಾಲಾ ಮಕ್ಕಳು ನಾಡಗೀತೆ ಹಾಡಿದರು. ತಾಲೂಕು ಕಸಾಪ ಅಧ್ಯಕ್ಷ ಡಾ| ಹರಿಪ್ರಸಾದ್ ತುದಿಯಡ್ಕ ಪ್ರಸ್ತಾವನೆಗೈದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ.ಜೆ. ಶಶಿಧರ ಕೊಯಿಕುಳಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ನ. ಪಂ. ನಾಮ ನಿರ್ದೇಶಿತ ಸದಸ್ಯೆ ಶಶಿಕಲಾ ನಿರೂಪಿಸಿದರು, ತೇಜಸ್ವಿ ಕಡಪಳ ವಂದಿಸಿದರು.
ಗೀಚಿದ್ದೆಲ್ಲವೂ ಸಾಹಿತ್ಯವಲ್ಲ: ಡಾ| ಟಿ. ಸಿ. ಪೂರ್ಣಿಮಾ
ಸಮ್ಮೇಳನ ಉದ್ಘಾಟಿಸಿದ ಮೈಸೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕಿ, ಸಾಹಿತಿ ಡಾ| ಟಿ.ಸಿ. ಪೂರ್ಣಿಮಾ ಮಾತನಾಡಿ, ಕನ್ನಡದಲ್ಲಿ ಈಗ ಗಟ್ಟಿ ಸಾಹಿತ್ಯದ ಕೊರತೆಯಿದೆ. ಉತ್ತಮ ಕಾವ್ಯಗಳು, ಕಾದಂಬರಿಗಳು ಈಗ ಕಾಣ ಸಿಗುತ್ತಿಲ್ಲ. ಕನ್ನಡದ ಮನಸ್ಸು ಗಳಿಗೆ ಗೀಚಿದ್ದೆಲ್ಲವೂ ಸಾಹಿತ್ಯ ಎಂಬ ಭ್ರಮೆಯಿದೆ. ಅಂತಹ ಮನಸ್ಥಿತಿಯಿಂದ ಹೊರಬಂದು ಬರೆದದ್ದನ್ನು ಪರಾಮರ್ಶಿಸುವ, ಪರಿಶೀಲಿಸುವ ಕಾರ್ಯ ಆಗಬೇಕು ಎಂದರು.
ಟೈಮ್ ಪಾಸ್ ಕಾರಣಕ್ಕೆ ಸಾಹಿತ್ಯ ಅನ್ನುವ ಯೋಚನೆ ಅನೇಕರಲ್ಲಿದೆ. ಸಾಹಿತ್ಯ ಸೃಷ್ಟಿ ಅಂದರೆ ಅದು ಗೋಬಿ ಮಂಚೂರಿ ತಯಾರಿಯಂತಲ್ಲ. ಬರೆಹಗಾರನಿಗೆ ಓದುವ ತಾಳ್ಮೆ ಇಲ್ಲದಿದ್ದರೆ, ಆತನ ಬರಹ ಓದುಗನಿಗೆ ತಲುಪುವುದು ಹೇಗೆ? ಈ ಬಗ್ಗೆ ಚಿಂತನೆ ಅಗತ್ಯ ಎಂದು ಅವರು ವಿಶ್ಲೇಷಿಸಿದರು.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.