ಕನ್ನಡ ಶಾಲೆಗಳಿಗೆ ‘ಭಾಗ್ಯ’ ಕಲ್ಪಿಸಿ, ಶಿಕ್ಷಕರ ‘ಭಾರ’ ಇಳಿಸಿ: ಪ್ರೊ|
Team Udayavani, Jan 14, 2017, 3:40 AM IST
ಉಡುಪಿ: ಸರಕಾರ ನಾಡಿನ ಜನತೆಗೆ ವಿವಿಧ ‘ಭಾಗ್ಯ’ ಅನುಗ್ರಹಿಸಿದಂತೆ ಕನ್ನಡ ಮಾಧ್ಯಮ ಶಾಲೆಗಳಿಗೂ ಭಾಗ್ಯ ಯೋಜನೆ ಪ್ರಕಟಿಸಬೇಕು. ಇದರ ಜತೆ ಶಿಕ್ಷಕರು ಪರಿಣತಿ ಹೆಚ್ಚಿಸಿಕೊಳ್ಳಬೇಕು. ಸರಕಾರ ಇವರ ಮೇಲಿರುವ ‘ಸರ್ವೆ’ ಇತ್ಯಾದಿ ಅನ್ಯ ಕಾರ್ಯಭಾರ ಇಳಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ| ಎಂ. ರಾಮಚಂದ್ರ ಹೇಳಿದರು.
ಬ್ರಹ್ಮಾವರದ ಸ.ಪ.ಪೂ. ಕಾಲೇಜಿನ ಆವರಣದಲ್ಲಿ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣ, ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಮಾತನಾಡಿದ ಅವರು, ಕೇವಲ ‘ಸರಕಾರಿ ಮಾದರಿ ಶಾಲೆ’ ಎಂಬ ಫಲಕ ಮಾತ್ರದಿಂದ ಏನನ್ನೂ ಸಾಧಿಸಲಾಗದು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಮರ್ಥ ಶಿಕ್ಷಕರು, ಉತ್ತಮ ಮೂಲಭೂತ ಸೌಕರ್ಯಗಳಂತಹ ಭಾಗ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿದರು.
ಯಾರು ಕೂಪಮಂಡೂಕರು?
ಜಗತ್ತಿನ ತಜ್ಞ ಮನೋವೈದ್ಯರೆಲ್ಲ ಒಂದು ಹಂತದ ತನಕ ಶಿಕ್ಷಣ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿಯೇ ನಡೆಯಬೇಕು ಎಂದು ಹೇಳಿದ್ದಾರೆ. ಆಗ ಮಕ್ಕಳಿಗೆ ವಿಷಯ ಗ್ರಹಣ ಸಹಜವಾಗಿ ಆಗುತ್ತದೆ ಎಂದು ಸಾಧಾರವಾಗಿ ಪ್ರತಿಪಾದಿಸಿದ್ದಾರೆ. ಗಾಂಧೀಜಿ ಅವರು ‘ಮದರ್ ಟಂಗ್ ಈಸ್ ಲೈಕ್ ಮದರ್ ಮಿಲ್ಕ್’ ಎಂದು ಸಾರಿದ್ದಾರೆ. ನಮ್ಮ ದೇಶದ ಮಹಾಸಾಧಕರೆಲ್ಲರೂ ಪ್ರೌಢಶಾಲೆ ವರೆಗೆ ಮಾತೃಭಾಷೆ/ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ಪಡೆದವರು. ಇದು ಮಾತ್ರವಲ್ಲದೆ ಫ್ರಾನ್ಸ್, ಜರ್ಮನಿ, ಚೀನ, ಜಪಾನ್, ಇಸ್ರೇಲ್ ದೇಶಗಳಲ್ಲಿ ಆಯಾ ದೇಶಭಾಷೆಗಳಲ್ಲಿಯೇ ಇದು ನಡೆಯುತ್ತಿದೆಯಲ್ಲ? ಅವರೆಲ್ಲ ಕೂಪಮಂಡೂಕಗಳೇ? ನಮ್ಮವರು ಮಾತ್ರ ಇಂಗ್ಲಿಷ್ ಮೋಹ ಪೀಡಿತರಾದದ್ದು ಹೇಗೆಂದು ಅರ್ಥವಾಗುತ್ತಿಲ್ಲ. ದುರ್ದೈವವೆಂಬಂತೆ ಸರ್ವೋಚ್ಚ ನ್ಯಾಯಾಲಯ ಶಿಕ್ಷಣದಲ್ಲಿ ಭಾಷೆಗಳ ಆಯ್ಕೆ ಹೆತ್ತವರ -ವಿದ್ಯಾರ್ಥಿಗಳ ಮೂಲಭೂತ ಹಕ್ಕಿಗೆ ಸಂಬಂಧಿಸಿದ್ದೆಂದು ತೀರ್ಪು ಕೊಟ್ಟಿದೆ. ಸರಕಾರದ ವರಿಷ್ಠರು, ರಾಜ್ಯಭಾಷಾ ಹಿತಚಿಂತಕರು ಇದರ ವಿರುದ್ಧ ಜಯ ಸಿದ್ಧಿಸುವ ತನಕ ಸಂಘಟಿತ ಆಂದೋಲನ ನಡೆಸಬೇಕಾಗಿದೆ ಎಂದರು.
ಶಿಕ್ಷಕರಿಗೆ ಕರೆ
ಶಾಲೆ ಕಾಲೇಜುಗಳಲ್ಲಿ ಕನ್ನಡದ ಬುಡಕ್ಕೆ ನೀರೆರೆಯಬೇಕಾದವರು ಭಾಷಾ ಶಿಕ್ಷಕರು. ಅವರಿಗೆ ಭಾಷೆ –
ಸಾಹಿತ್ಯದಲ್ಲಿ ಆಸಕ್ತಿ, ಹಿಡಿತ, ಬೋಧನೆಯಲ್ಲಿ ಆಸಕ್ತಿ, ಕೌಶಲ, ವಿದ್ಯಾರ್ಥಿಗಳಲ್ಲಿ ವಾತ್ಸಲ್ಯ ಇವು ಬೇಕು. ಪಠ್ಯದಲ್ಲಿರುವುದಕ್ಕಿಂತ ಭಿನ್ನವಾಗಿ ಒಳ್ಳೆಯ ಪುಸ್ತಕಗಳು, ಸಾಹಿತಿಗಳು ಇತ್ಯಾದಿ ಹೊರಗಿನ ಪ್ರಪಂಚದ ಬಗ್ಗೆ ತಿಳಿಸುತ್ತಿರಬೇಕು. ಕನ್ನಡದಲ್ಲಿ ಆಸಕ್ತಿ ಇಲ್ಲ ಎಂದು ದೂರುವುದಕ್ಕಿಂತ ಆಸಕ್ತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಪಠ್ಯದ ಪಾತ್ರ
ಪಠ್ಯಕ್ರಮ ರೂಪಣೆಯಲ್ಲಿಯೂ ಜಾಗರೂಕತೆ ಅಗತ್ಯ. ಹಿಂದೆ ಕರಾವಳಿ ಭಾಗ ಮದರಾಸು ಪ್ರಾಂತ್ಯದ ಅಧೀನದಲ್ಲಿರುವಾಗಲೂ ಶಾಲಾ ಕಾಲೇಜುಗಳ ಭಾಷಾ ಪಠ್ಯ ಭಾಗಗಳ ಆಯ್ಕೆಯಲ್ಲಿ ಸರಕಾರದ ಪ್ರವೇಶ ಅಷ್ಟಾಗಿ ಇರಲಿಲ್ಲ. ಪಠ್ಯಕ್ರಮದ ರೂಪಣೆ ಜವಾಬ್ದಾರಿ ಅರ್ಹ ವಿದ್ವಾಂಸರಿಗೆ ಇತ್ತು. ಆಗ ಗುಣಾತ್ಮಕತೆ ಮುಖ್ಯವಾಗಿತು ಎಂದು ರಾಮಚಂದ್ರ ಹೇಳಿದರು.
‘survey ಜನಾಃ ಸುಖೀನೋ ಭವಂತು’
ಶಿಕ್ಷಕರಿಗೆ ಅವರ ಕೆಲಸವನ್ನು ಶ್ರದ್ಧೆಯಿಂದ ಮಾಡಲು ಬಹಳ ತೊಡಕುಗಳಿವೆ. ಅವರು ತರಗತಿಯೊಳಗೆ ಇದ್ದು ಪಾಠ ಮಾಡುವುದಕ್ಕಿಂತ ಅನ್ಯಕಾರ್ಯ ನಿಯೋಜಿತರಾಗಿ ಹೊರಗಿರುವುದೇ ಹೆಚ್ಚಾಗಿದೆ. ನಾನಾ ರೀತಿಯ ‘ಸರ್ವೆ’ ಕೆಲಸಗಳಿಗೆ ಅವರು ನಿಯೋಜಿತರಾಗುತ್ತಾರೆ. ಅದಕ್ಕಾಗಿಯೇ ನಾನು “ಸರ್ವೇ ಜನಾಃ ಸುಖೀನೋ ಭವಂತು’ ಎಂದು ವಿನೋದವಾಗಿ ಹೇಳುವುದಿದೆ. ಹಳ್ಳಿ ಪಂಚಾಯತ್‌ನಿಂದ ಹಿಡಿದು ದಿಲ್ಲಿಯ ಸಂಸತ್ತಿನ ವರೆಗಿನ ಚುನಾವಣೆ, ಬಿಸಿಯೂಟದ ಕೆಲಸಗಳಲ್ಲಿ ಇವರು ಕುಸಿಯುತ್ತಿದ್ದಾರೆ. ಈ ಭಾರಗಳನ್ನು ಕಡಿತಗೊಳಿಸಿದರೆ ಪಾಠ ಮಾಡಲು ಸಾಧ್ಯವಾಗುತ್ತದೆ. ಸಚಿವರು ಈ ಬಗ್ಗೆ ಗಮನಹರಿಸಿ ಶಿಕ್ಷಕರು ಪಾಠದ ಪುಣ್ಯ ಕಾರ್ಯವನ್ನು ಹೆಚ್ಚಾಗಿ ಮಾಡಲು ಅವಕಾಶ ಒದಗಿಸಿ.
ಇಂಗ್ಲಿಷ್ ಟಾನಿಕ್ ಕುಡಿಸಿ, ಕೊಬ್ಬಿಸಿ…
ಎಳೆಯ ಮಕ್ಕಳು ‘ನಮಗೆ ಇಂಗ್ಲಿಷ್ ಟಾನಿಕ್ ಕುಡಿಸಿ, ಬೆಳೆಸಿ, ಕೊಬ್ಬಿಸಿ, ಇಂಗ್ಲಿಷ್ ಆಮ್ಲಜನಕವನ್ನೇ ಶ್ವಾಸಕೋಶಗಳಲ್ಲಿ ತುಂಬಿಸಿ’ ಎಂದು ಹೆತ್ತವರನ್ನು ಕಾಡುವುದಿಲ್ಲ. ಹೀಗೆ ಮಾಡುವವರಲ್ಲಿ ಹೆಚ್ಚಿನವರು ಹೆತ್ತವರೇ ಆಗಿದ್ದಾರೆ.
“ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು’ ಎಂಬ ಹಾಡು ಕೇಳಿದ್ದೇವೆ. ತಾಯಿ ಎಂದರೆ ಒಬ್ಬಳೇ ಅಲ್ಲ, ತಾಯ್ತಂದೆ ಇಬ್ಬರೂ. ಶಾಲೆಗೆ ಹೋಗುವ ಪ್ರಾಯವಾಗುವ ತನಕ ತಾಯ್ತಂದೆ ಮಕ್ಕಳಿಗೆ ಶ್ರೀಗಣೇಶ ಮಾಡಿಸಿ ಕನ್ನಡದ ಕಾಗುಣಿತ ಕಲಿಸುತ್ತಿದ್ದರು, ಸೊಗಸಾದ ಕತೆ ಹೇಳುತ್ತಿದ್ದರು. ಆ ಕತೆಗಳಲ್ಲಿ ರಂಜನೆ, ನೀತಿ ಬೋಧನೆ ಎರಡೂ ಇರುತ್ತಿತ್ತು. ಈಗ ಕಾಲ ಬದಲಾಗಿದೆ. ಈಗ ಚಿಕ್ಕ ಮಕ್ಕಳಿಗೆ ಏನು ಸಂಸ್ಕಾರ ಸಿಗಬೇಕೋ ಅದು ಸಿಗುತ್ತಿಲ್ಲ.
– ಪ್ರೊ| ಎಂ. ರಾಮಚಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.