ಕೋರ್ಟ್ ತಡೆಯಾಜ್ಞೆಯೋ? ಸರಕಾರಿ ಅವಜ್ಞೆಯೋ?
Team Udayavani, Nov 16, 2018, 10:58 AM IST
ಉಡುಪಿ: ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡೂವರೆ ತಿಂಗಳಾದರೂ ಜನಪ್ರತಿನಿಧಿಗಳ ಕೈಗೆ ಅಧಿಕಾರ ಸಿಕ್ಕಿಲ್ಲ.
ಮೂರು ಮನಪಾಗಳು, 29 ನಗರಸಭೆ, 53 ಪುರಸಭೆ, 20 ಪ.ಪಂ.ಗಳಿಗೆ ಆ. 31ರಂದು ಚುನಾವಣೆ ನಡೆದು ಸೆ. 3ರಂದು ಫಲಿತಾಂಶ ಘೋಷಣೆಯಾಗಿತ್ತು. ಅದೇ ದಿನ ಸರಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನೂ ಪ್ರಕಟಿಸಿತು.
ಇದಾದ ಬಳಿಕ ಕಾರ್ಕಳ, ಕುಂದಾಪುರ ಸಹಿತ ಕೆಲವು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಸ್ಥಾನದ ಮೀಸಲಾತಿ ಯನ್ನು ಸರಕಾರ ಬದಲಾಯಿಸಿತು. ಮೀಸಲಾತಿ ಬದಲಾಯಿಸಿದ್ದನ್ನು ಪ್ರಶ್ನಿಸಿ ಧಾರವಾಡ ಉಚ್ಚ ನ್ಯಾಯಾಲಯದ ಪೀಠ ಮತ್ತು ಬೆಂಗಳೂರಿನ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದು, ನ್ಯಾಯಾಲಯ ಸೆ. 15ರಂದು ತಡೆ ನೀಡಿತು. ಇದಾದ ಬಳಿಕ ನ್ಯಾಯಾಲಯ ಮೊದಲು ಪ್ರಕಟಿಸಿದಂತೆ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಆದೇಶ ಹೊರಡಿಸಿತು. ಅಕ್ಟೋಬರ್‌ನಲ್ಲಿಯೇ ಜಿಲ್ಲಾಧಿಕಾರಿ ಸರಕಾರದ ನಿರ್ದೇಶನ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದರು.
ಏತನ್ಮಧ್ಯೆ ಲೋಕಸಭಾ ಉಪ ಚುನಾವಣೆ ಘೋಷಣೆಯಾದ ಕಾರಣ ಇದರ ನೀತಿ ಸಂಹಿತೆ ನೆಪದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಅಡೆತಡೆ ಉಂಟು ಎಂದು ಭಾವಿಸಲಾಗಿತ್ತು. ಈಗ ನೀತಿ ಸಂಹಿತೆ ಅವಧಿ ಮುಗಿದು ಹಲವು ದಿನಗಳಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ದಿನ ನಿಗದಿಯಾಗಿಲ್ಲ. ನೀತಿ ಸಂಹಿತೆ ಇದ್ದದ್ದು ಕೆಲವೇ ಜಿಲ್ಲೆಗಳಲ್ಲಿ. ನೀತಿ ಸಂಹಿತೆ ಇಲ್ಲದ ಜಿಲ್ಲೆಗಳಲ್ಲಿಯೂ ಅಧ್ಯಕ್ಷರ ಆಯ್ಕೆ ನಡೆಯಬಹುದಿತ್ತು. ಅದೂ ಆಗಿಲ್ಲ. ಆಯಾ ಜಿಲ್ಲಾಡಳಿತ ಸರಕಾರದ ನಿರ್ದೇಶನವನ್ನು ಇನ್ನೂ ಕಾಯುತ್ತಿದೆ. ಇದೇ ವೇಳೆ ಇನ್ನೂ ಕೆಲವರು ಮತ್ತೆ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆನ್ನಲಾಗಿದ್ದರೂ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ.
ಎರಡೂವರೆ ತಿಂಗಳುಗಳಿಂದ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಅವರ ಮರ್ಜಿಯಂತೆ ಆಡಳಿತ ನಡೆಯುತ್ತಿದೆ. ಪ್ರಜಾಪ್ರಭುತ್ವದ ಮಹತ್ವ ಕಂಡುಬರುವುದು ಇಂತಹ ಸಂದರ್ಭ. 2013ರಲ್ಲಿಯೂ ಇದೇ ತೆರನಾಗಿ ಆರು ತಿಂಗಳ ಕಾಲ ಅಧ್ಯಕ್ಷರ ಆಯ್ಕೆ ಮುಂದೂಡಿಕೆಯಾಗಿತ್ತು. ಈಗಲೂ ಅದೇ ಇತಿಹಾಸ ಮರುಕಳಿಸುತ್ತಿದೆ.
ತಡೆ ಇಲ್ಲ, ಸರಕಾರಕ್ಕೆ ಅನಾಸಕ್ತಿ
ನಗರ ಸಂಸ್ಥೆಗಳ ಚುನಾವಣೆಗೆ ಮೊದಲೇ ಸರಕಾರ ಮೀಸಲಾತಿ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಚುನಾವಣೆ ಬಳಿಕ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಮೀಸಲಾತಿ ಬದಲಾಯಿಸಿತು. ನ್ಯಾಯಾಲಯದ ನೋಟಿಸಿಗೆ ಹಿಂದಿನಂತೆ ಮೀಸಲಾತಿಯನ್ನು ಜಾರಿಗೊಳಿಸುವುದಾಗಿ ನ್ಯಾಯಾಲಯಕ್ಕೆ ಸರಕಾರ ಅಫಿದವಿತ್ ಸಲ್ಲಿಸಿತು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಇಲ್ಲದ ಜಿಲ್ಲೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಸರಕಾರ ನಡೆಸಬೇಕಾಗಿತ್ತು. ಈಗ ಯಾರೋ ನ್ಯಾಯಾಲಯಕ್ಕೆ ಹೋಗಿದ್ದಾರೆನ್ನುತ್ತಿದ್ದಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಲಿಲ್ಲ. ರಾಜ್ಯ ಸರಕಾರ ರಾಜಕೀಯದ ಗುಂಗಿನಲ್ಲಿಯೇ ಕಾಲಕಳೆಯುತ್ತಿದೆ. ಪೌರಾಡಳಿತ ಸಚಿವರಿಗೆ ಯಾವುದೇ ಆಸಕ್ತಿ ಇದ್ದಂತೆ ತೋರುತ್ತಿಲ್ಲ.
ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ), ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನ ಪರಿಷತ್.
ನ್ಯಾಯಾಲಯದಲ್ಲಿನ್ನೂ ಪ್ರಕ್ರಿಯೆ
ರಾಜಕೀಯ ನಿರ್ಧಾರವನ್ನು ನಾನು ಸರಿ ಎನ್ನುವುದಿಲ್ಲ. ಆದರೆ ಯಾವ ವರ್ಗಕ್ಕೆ ಅರ್ಹವಾಗಿ ಮೀಸಲಾತಿ ದೊರಕಬೇಕಾಗಿದೆಯೋ ಅವರಿಗೆ ಸಿಗದಾಗ ಅದು ಸರಕಾರ ಅಥವಾ ನ್ಯಾಯಾಲಯದಿಂದ ಸಿಗಬೇಕಾದದ್ದು ನ್ಯಾಯ. ನ್ಯಾಯಾಲಯ ತಡೆಯಾಜ್ಞೆ ನೀಡದೆ ಇರಬಹುದು. ಒಂದೋ ತಡೆಯಾಜ್ಞೆ ಸಿಗಬೇಕು ಅಥವಾ ತಿರಸ್ಕೃತವಾಗಬೇಕು. ಒಂದು ಪ್ರಕರಣ ಸ್ವೀಕೃತವಾದರೆ ಪ್ರಕ್ರಿಯೆಯಲ್ಲಿ ಇದೆ ಎಂದು ಅರ್ಥ. ಈಗ ಎರಡನೆಯ ಬಾರಿಗೆ ನ್ಯಾಯಾಲಯದಲ್ಲಿ ಸ್ವೀಕೃತವಾದ ಪ್ರಕರಣದಲ್ಲಿ ನ್ಯಾಯಾಲಯ ಸರಕಾರದಿಂದ ಅಭಿಪ್ರಾಯವನ್ನು ಕೇಳುತ್ತದೆ. ಈ ಪ್ರಕ್ರಿಯೆ ನಡೆಯುತ್ತಿದೆ. ತಕರಾರು ಇಲ್ಲದ ಕಡೆ ಹಿಂದಿನ ಮೀಸಲಾತಿ ಜಾರಿಗೊಳಿಸಬಹುದು. ಅದು ಇತರ ಕಡೆಗಳ ಮೇಲೆ ಪರಿಣಾಮ ಬೀರುತ್ತದೆ.
ಪ್ರತಾಪಚಂದ್ರ ಶೆಟ್ಟಿ (ಕಾಂಗ್ರೆಸ್), ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನ ಪರಿಷತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.