![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 14, 2020, 11:50 AM IST
ಪುತ್ತೂರು: ಮಂಗಳೂರಿನಿಂದ ತಮಿಳುನಾಡಿಗೆ ಕಾಲ್ನಡಿಗೆಯಲ್ಲಿ ಹೊರಟ 8 ಮಂದಿಯನ್ನು ಪುತ್ತೂರು ಪೊಲೀಸರು ನಗರದ ಹೊರವಲಯದ ಕಬಕದಲ್ಲಿ ತಡೆದು ತಹಶೀಲ್ದಾರ್ ನೇತೃತ್ವದಲ್ಲಿ 15 ದಿನಗಳ ಆಹಾರ ಪದಾರ್ಥಗಳೊಂದಿಗೆ ಮತ್ತೆ ವಾಪಸ್ ಮಂಗಳೂರಿಗೆ ವಾಹನದಲ್ಲಿ ಕಳುಹಿಸಿದ ಘಟನೆ ಸೋಮವಾರ ನಡೆದಿದೆ.
ಆರು ವರ್ಷಗಳಿಂದ ಮಂಗಳೂರಿನಲ್ಲಿ ಮೀನುಗಾರಿಕೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ 8 ಮಂದಿ ಮೂರು ತಿಂಗಳಿಂದ ಕೆಲಸವಿಲ್ಲದ ಕಾರಣ ತಮ್ಮ ಊರಾದ ತಮಿಳುನಾಡಿನ ಕಲ್ಲಕುರ್ಚಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು.
ಮಂಗಳೂರಿನಿಂದ ಪುತ್ತೂರು, ಮೈಸೂರು ಮೂಲಕ ತಮಿಳುನಾಡಿಗೆ ಹೋಗುವ ಉದ್ದೇಶ ಇರಿಸಿಕೊಂಡಿದ್ದರು.
ಕಾರ್ಮಿಕರು ಹೆದ್ದಾರಿಯಲ್ಲೇ ನಡೆದುಬಂದಿದ್ದರು. ಪೊಲೀಸ್ ಬ್ಯಾರಿಕೇಡ್ ಇರುವಲ್ಲಿ ಅಂತರ ಕಾಯ್ದುಕೊಂಡಿದ್ದರು. ಆದರೆ, ಕಬಕದಲ್ಲಿ ಪೊಲೀಸರು ಇವರನ್ನು ತಡೆದು, ವಿಚಾರಿಸಿ, ಪುತ್ತೂರು ಮಿನಿ ವಿಧಾನಸೌಧಕ್ಕೆ ಕರೆತಂದಿದ್ದಾರೆ.
ತಹಶೀಲ್ದಾರ್ ರಮೇಶ್ ಬಾಬು ಅವರ ಮಾರ್ಗದರ್ಶನದಂತೆ ಅವರಿಗೆ ಆಹಾರ ಸಾಮಗ್ರಿಗಳನ್ನು ನೀಡಿ, ವಾಹನದ ಮೂಲಕ ಮಂಗಳೂರಿಗೆ ವಾಪಸ್ ಕಳುಹಿಸಲಾಯಿತು.
ನಾವು ಮನೆಗೆ ಹೋಗುತ್ತೇವೆ
ಮಂಗಳೂರಿನಲ್ಲಿ ಊಟಕ್ಕೆ ಸಮಸ್ಯೆ ಇಲ್ಲದಿದ್ದರೂ ಕೆಲಸ ಇಲ್ಲದ ಕಾರಣ ನಮ್ಮೂರಿಗೆ ಹೊರಟಿದ್ದೆವು. ವಾಹನ ಇಲ್ಲದ ಕಾರಣ ಕಾಲ್ನಡಿಗೆಯೇ ಅನಿವಾರ್ಯವಾಗಿತ್ತು. ಬೆಳಗ್ಗಿನ ಜಾವ 3.30ಕ್ಕೆ ಮಂಗಳೂರಿನ ಮನೆಯಿಂದ ಹೊರಟಿದ್ದೇವೆ. ನಮ್ಮನ್ನು ಊರಿಗೆ ಕಳುಹಿಸಿ ಎಂದು ಕಾರ್ಮಿಕರಾದ ಕುಮಾರನ್, ಸೆಂಥಿಲ್, ಧರ್ಮ, ರಾಮ, ಚಿನ್ನದೊರೆ, ಶಕ್ತಿವೇಲು, ಸಾಮಿದ್ರಿ ಹಾಗೂ ಹರಿ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಕಾರ್ಮಿಕರ ಕೈಗೆ ಮುದ್ರೆ
ತಮಿಳುನಾಡಿಗೆ ಈಗ ಹೋಗುವ ಹಾಗಿಲ್ಲ. ನಿಮಗೇನೂ ತೊಂದರೆಯಾಗದಂತೆ ನೋಡಿ ಕೊಳ್ಳುತ್ತೇವೆ. 15 ದಿನಗಳಿಗೆ ಬೇಕಾದ ದಿನಸಿ, ಆಹಾರ ವಸ್ತುಗಳನ್ನು ನೀಡುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮ ಮಂಗಳೂರಿನ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಅಧಿಕಾರಿಗಳು ಸೂಚಿಸಿದರು. ಕಾರ್ಮಿಕರ ಕೈಗಳಿಗೆ ಮುದ್ರೆ ಹಾಕಿ, ಎರಡು ವಾಹನಗಳಲ್ಲಿ ಮಂಗಳೂರಿಗೆ ಕಳುಹಿಸಿದ್ದಾರೆ.
ಕಾಲ್ನಡಿಗೆಯಲ್ಲಿ ಬಂದ ನಿರಾಶ್ರಿತ ಮಹಿಳೆಯರು
ವಿಟ್ಲ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮೂಲದ ಮೂವರು ನಿರಾಶ್ರಿತ ಮಹಿಳೆಯರು ಕಾಲ್ನಡಿಗೆ ಮೂಲಕ ವಿಟ್ಲ ಪರಿಸರಕ್ಕೆ ಆಗಮಿಸಿದ್ದು, ಅವರನ್ನು ವಿಟ್ಲ ಠಾಣಾಧಿಕಾರಿ ವಿನೋದ್ ಎಸ್. ಕೆ. ಅವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನ ಈ ಮಹಿಳೆಯರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಜಾರಿಯಾದ ಬಳಿಕ ರೈಲು ಹಾಗೂ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನಡೆದುಕೊಂಡೇ ಬಂದಿದ್ದು, ಸಾಲೆತ್ತೂರು ಮೂಲಕ ಕೊಡಂಗಾಯಿಗೆ ತಲುಪಿದ್ದರು. ಅವರನ್ನು ಗಮನಿಸಿದ ಸ್ಥಳೀಯ ಯುವಕರು ವಿಟ್ಲ ಠಾಣೆಗೆ ಮಾಹಿತಿ ನೀಡಿದರು. ಫ್ರೆಂಡ್ಸ್ ವಿಟ್ಲ ಆ್ಯಂಬುಲೆನ್ಸ್‌ನಲ್ಲಿ ವಿಟ್ಲಕ್ಕೆ ಕರೆತರಲಾಯಿತು.
ವಿಟ್ಲ ಪ.ಪಂ. ಮುಖ್ಯಾಧಿಕಾರಿ ಮಾಲಿನಿ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಅವರಿಗೆ ಆಶ್ರಯ ಕಲ್ಪಿಸಲು ಸೂಚಿಸಿದ್ದಾರೆ. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರಿಂದ ಮಾಹಿತಿ ಪಡೆದು, ಮಂಗಳೂರಿಗೆ ವರ್ಗಾಯಿಸುವುದಾಗಿ ತಿಳಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾ ಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಫಕೀರ ಮೂಲ್ಯ, ದಿವಾಕರ, ಸಿಬಂದಿ ಚಂದ್ರಶೇಖರ ವರ್ಮ, ಬಶೀರ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿ ಕಾರಿ ವೇದಾವತಿ ಬಲ್ಲಾಳ್ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.