ಲಾಕ್‌ಡೌನ್ ಮಾದರಿ ಕರ್ಫ್ಯೂ: ಕೆಎಸ್ಸಾರ್ಟಿಸಿ ಬಸ್‌ಗಳ ಟೆಸ್ಟ್ ಡ್ರೈವ್
Team Udayavani, May 4, 2021, 5:00 AM IST
ಮಹಾನಗರ: ಲಾಕ್‌ಡೌನ್ ಮಾದರಿಯ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಕೆಎಸ್ಸಾರ್ಟಿಸಿ, ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿವೆ. ದ.ಕ., ಉಡುಪಿ ಜಿಲ್ಲೆಯ ಸಾವಿರಕ್ಕೂ ಮಿಕ್ಕಿ ಕೆಎಸ್ಸಾರ್ಟಿಸಿ ಬಸ್ ಕಾರ್ಯಾಚರಣೆ ಮೊಟಕುಗೊಂಡಿವೆ. ಬಸ್‌ಗಳೆಲ್ಲ ಡಿಪೋದಲ್ಲಿ ನಿಂತಿರುವುದರಿಂದ ಯಾವುದೇ ರೀತಿಯ ತಾಂತ್ರಿಕ ತೊಂದರೆ ಉಂಟಾಗಬಾರದು ಎಂದು ಪ್ರತೀ ದಿನ ಬಸ್‌ಗಳ ಟೆಸ್ಟ್ ಡ್ರೈವ್ ನಡೆಸಲು ನಿಗಮ ನಿರ್ಧರಿಸಿದೆ.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಸದ್ಯ ಕುಂದಾಪುರ, ಉಡುಪಿ, ಮಂಗಳೂರಿನ ಮೂರು ಡಿಪೋಗಳಿದ್ದು, ಸುಮಾರು 600 ಬಸ್‌ಗಳಿವೆ. ಪುತ್ತೂರು ವಿಭಾಗದಲ್ಲಿ ಪುತ್ತೂರು, ಬಿ.ಸಿ. ರೋಡ್, ಧರ್ಮಸ್ಥಳ, ಮಡಿಕೇರಿ, ಸುಳ್ಯ ಡಿಪೋಗಳಿವೆ. ಇವುಗಳಲ್ಲಿ ಸುಮಾರು 500ಕ್ಕೂ ಹೆಚ್ಚಿನ ಬಸ್‌ಗಳು ಸಾಮಾನ್ಯ ದಿನಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಕಳೆದ ವರ್ಷ ಲಾಕ್‌ಡೌನ್ ಪೂರ್ಣಗೊಂಡು ಬಸ್ ಕಾರ್ಯಾಚರಣೆಗೆ ಸಿದ್ಧಗೊಳಿಸುವಾಗ ರಾಜ್ಯದ ಕೆಲವೊಂದು ಡಿಪೋದ ಬಸ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಅದರಲ್ಲೂ ಬಸ್‌ಗಳ ಟಯರ್, ಬ್ಯಾಟರಿ ಸಹಿತ ಬಿಡಿ ಭಾಗಗಳಿಗೆ ಹಾನಿ ಉಂಟಾಗಿತ್ತು. ಇದರಿಂದಾಗಿ ಕೆಲವೊಂದು ಬಸ್ ಸಂಚಾರದಲ್ಲಿ ತೊಡಕು ಉಂಟಾಗಿತ್ತು. ಈ ಬಾರಿಯ ಈ ರೀತಿಯ ಯಾವುದೇ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ನಿಗಮ ನಿರ್ಧರಿಸಿದೆ. ಇದೇ ಕಾರಣಕ್ಕೆ ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಡಿಪೋಗಳಲ್ಲಿಯೇ ಬಸ್‌ಗಳ ಟೆಸ್ಟ್ ಡ್ರೈವ್ ನಡೆಸಲಾಗುತ್ತದೆ. ಪುತ್ತೂರು ಘಟಕದಲ್ಲಿಯೂ ಪ್ರತೀ ದಿನ ಸೀಮಿತ ಬಸ್‌ಗಳನ್ನು ಹೊರತೆಗೆದು ಡಿಪೋ, ರಸ್ತೆಯಲ್ಲಿ ಪರೀಕ್ಷಾರ್ಥ ಕಾರ್ಯಚರಣೆ ನಡೆಸಲಾಗುತ್ತಿದೆ.
ಖಾಸಗಿ ಬಸ್‌ಗಳಿಗೆ ಮತ್ತೆ ಸಮಸ್ಯೆ :
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಖಾಸಗಿ ಬಸ್ ಆಧಾರ. ಉಭಯ ಜಿಲ್ಲೆಗಳಲ್ಲಿ ಸಾಮಾನ್ಯ ದಿನಗಳಲ್ಲಿ ಸುಮಾರು 4 ಸಾವಿರದಷ್ಟು ಖಾಸಗಿ ಬಸ್‌ಗಳು ವಿವಿಧ ಭಾಗಗಳಿಗೆ ತೆರಳುತ್ತವೆ. ಸದ್ಯ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿವೆ. ಕೆಲವೊಂದು ಬಸ್‌ಗಳನ್ನು ಚಾಲಕರು ಮಾಲಕನ ಮನೆಯಲ್ಲಿ ತಂದು ನಿಲ್ಲಿಸಿದ್ದಾರೆ. ಮಾಲಕರಿಗೆ ಬಸ್ ಚಾಲನೆ ತಿಳಿಯದ ಕಾರಣ ಬಸ್ ಚಾಲೂ ಮಾಡುವವರು ಯಾರೂ ಇಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಜಾಗದ ಸಮಸ್ಯೆಯಿಂದ ರಸ್ತೆ ಬದಿಯಲ್ಲೇ ಬಸ್‌ಗಳನ್ನು ನಿಲ್ಲಿಸಲಾಗಿದೆ. ಹತ್ತಾರು ಬಸ್‌ಗಳನ್ನು ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.
ಕೆಎಸ್ಸಾರ್ಟಿಸಿಯ ರೀತಿ ಖಾಸಗಿ ಬಸ್‌ಗಳಿಗೆ ಡಿಪೋ ಇಲ್ಲ. ಲಾಕ್‌ಡೌನ್ ಪರಿಣಾಮ ಚಾಲಕರು ಬಸ್ ನಿಲ್ಲಿಸಿದಲ್ಲಿಗೆ ಬರಲು ಸಾಧ್ಯವಿಲ್ಲ. ಲಾಕ್‌ಡೌನ್ ಮಾದರಿಯ ಕರ್ಫ್ಯೂ ಒಂದು ವೇಳೆ ಮುಂದುವರಿದರೆ ಬಳಿಕ ಬಸ್ ಚಾಲೂ ಮಾಡಲು ಖಾಸಗಿ ಬಸ್ ಮಾಲಕರು ಸಾವಿರಾರು ರೂಪಾಯಿ ವ್ಯಯಿಸಬೇಕಾದ ಅನಿವಾರ್ಯತೆ ಇದೆ.
ಮತ್ತೂಂದೆಡೆ, ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಅದರಲ್ಲೂ ಮಧ್ಯಾಹ್ನ ವೇಳೆ ಸುಮಾರು 37 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾದರೂ ವಾಹನಗಳ ಬಿಡಿ ಭಾಗಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾಹನಗಳನ್ನು ಬಿಸಿಲಿನಲ್ಲಿ ಅನೇಕ ದಿನಗಳ ಕಾಲ ನಿಲ್ಲಿಸಿದ್ದರೆ ಟಯರ್‌ಗಳ ರಬ್ಬರ್ ಸವೆದು ಸಮ ಸ್ಯೆ ಯಾ ಗ ಬ ಹು ದು. ಅದೇ ರೀತಿ ಬಿಸಿಲಿನ ತಾಪಕ್ಕೆ ಡೀಸೆಲ್ ಕೂಡ ಆವಿಯಾಗುವ ಸಾಧ್ಯತೆ ಇದೆ.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ವಿವಿಧ ಡಿಪೋಗಳಲ್ಲಿ ಸುಮಾರು 600ರಷ್ಟು ಬಸ್‌ಗಳನ್ನು ನಿಲ್ಲಿಸಲಾಗಿದೆ. ಪ್ರತೀ ದಿನ ಸೀಮಿತ ಸಂಖ್ಯೆಯಲ್ಲಿ ಬಸ್‌ಗಳನ್ನು ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಿಪೋದಲ್ಲಿಯೇ ಬಸ್ ಚಾಲೂ ಮಾಡಿ ತಾಂತ್ರಿಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ. – ಕಮಲ್ ಕುಮಾರ್, ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ಡಿಟಿಒ
ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಖಾಸಗಿ ಬಸ್‌ಗಳಿಗೆ ತಾಂತ್ರಿಕ ಸಮಸ್ಯೆ ಉಂಟಾಗಿತ್ತಿತ್ತು. ಈ ಬಾರಿಯೂ ಲಾಕ್‌ಡೌನ್ ಮುಂದುವರಿದರೆ ಸಂಕಷ್ಟ ಎದುರಾಗಲಿದೆ. ಕೆಲವು ಮಾಲಕರು ಸ್ವಂತ ಗ್ಯಾರೇಜ್ ಹೊಂದಿದ್ದು, ಅವರಿಗೆ ಸಮಸ್ಯೆ ಇಲ್ಲ. ಆದರೆ ಬಹುತೇಕ ಮಾಲಕರಲ್ಲಿ ಗ್ಯಾರೇಜ್ ಇಲ್ಲ. ಬಸ್‌ಗಳಲ್ಲಿ ಹಲವು ದಿನಗಳವರೆಗೆ ನಿಂತಲ್ಲೇ ನಿಲ್ಲಿಸಿದರೆ ಬಸ್‌ಗಳ ಬ್ಯಾಟರಿ, ಬ್ರೇಕ್, ಟಯರ್ ಸಹಿತ ಬಿಡಿ ಭಾಗಗಳಲ್ಲಿ ಸಮಸ್ಯೆ ಉಂಟಾಗಬಹುದು. – ದಿಲ್‌ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.