ಇಂದು ಮಸ್ಟರಿಂಗ್; ಸುಸೂತ್ರ ಚುನಾವಣೆಗೆ ಆಯೋಗ ಸಜ್ಜು
ಲೋಕಸಭಾ ಚುನಾವಣೆ: ಉಭಯ ತಾಲೂಕುಗಳಲ್ಲಿ ಸಿದ್ಧತೆ
Team Udayavani, Apr 17, 2019, 6:00 AM IST
ಮಸ್ಟರಿಂಗ್ ಕಾರ್ಯ ನಡೆಯಲಿರುವ ಉಜಿರೆಯ ಎಸ್‌ಡಿಎಂ ಪ.ಪೂ.ಕಾಲೇಜು.
ಬೆಳ್ತಂಗಡಿ: ದ.ಕ. ಲೋಕಸಭಾ ಚುನಾವಣೆ ಎ. 18 ರಂದು ನಡೆಯಲಿದ್ದು, ಈಗಾಗಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಪೂರ್ಣ ರೀತಿಯಲ್ಲಿ ಸಜ್ಜಾಗಿದ್ದು, ಬೆಳ್ತಂಗಡಿ ಕ್ಷೇತ್ರಕ್ಕೆ ಸಂಬಂಧಿಸಿ, ಎ. 17ರಂದು ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ.
ಚುನಾವಣ ಕರ್ತವ್ಯಕ್ಕೆ ನಿಯೋ ಜನೆಗೊಂಡಿರುವ ಎಲ್ಲ ಸಿಬಂದಿ ಬೆಳಗ್ಗೆ 8ಕ್ಕೆ ಮಸ್ಟರಿಂಗ್ ಕಾರ್ಯದಲ್ಲಿ ಭಾಗವಹಿಸಲಿದ್ದು, ಬಳಿಕ ಬೆಳ್ತಂಗಡಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಅವರ ಉಪಸ್ಥಿತಿಯಲ್ಲಿ ಪ್ರಸ್ತುತ ಮತಯಂತ್ರಗಳನ್ನು ಇರಿಸಲಾದ ಸ್ಟ್ರಾಂಗ್ ರೂಮನ್ನು ತೆರೆಯಲಾಗುತ್ತದೆ.
ಬೆಳ್ತಂಗಡಿ ಕ್ಷೇತ್ರದ ಎಲ್ಲ 241 ಬೂತ್‌ಗಳ ಸಿಬಂದಿಗೂ ಮತಯಂತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಬಳಿಕ ನಿಯೋಜಿತ ವಾಹನಗಳ ಮೂಲಕ ಮತಗಟ್ಟೆಗಳಿಗೆ ತೆರಳಿ ಎ. 17ರ ರಾತ್ರಿ ಎಲ್ಲ ಸಿಬಂದಿ ಮತಗಟ್ಟೆಯಲ್ಲಿ ವಾಸ್ತವ್ಯ ಇರಬೇಕಾಗುತ್ತದೆ. ಎ. 18ರಂದು ಬೆಳಗ್ಗೆ 6ಕ್ಕೆ ಅಣಕು ಮತದಾನ ನಡೆಸಿದ ಬಳಿಕ 7ರಿಂದ ಸಂಜೆ 6ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಎ. 18ರಂದು ಚುನಾವಣೆ ಮುಗಿದ ಬಳಿಕ ಸಂಜೆ ಡಿಮಸ್ಟರಿಂಗ್ ಕಾರ್ಯ ನಡೆದು, ಎಆರ್‌ಒ ಪರಿಶೀಲನೆ ನಡೆಸಿದ ಬಳಿಕ ಮತಯಂತ್ರಗಳನ್ನು ಮಂಗಳೂರು ಸುರತ್ಕಲ್‌ನ ಎನ್‌ಐಟಿಕೆಯ ಸ್ಟ್ರಾಂಗ್‌ಗೆ ಸಾಗಿಸಲಾಗುತ್ತದೆ. ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿಯವರೆಗೆ ಬೆಳ್ತಂಗಡಿ ಕ್ಷೇತ್ರದಲ್ಲಿ ರಾಜಕೀಯ ಮುಖಂಡರು ಶಾಂತ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ನಡೆಸಿದ್ದು, ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಈವರೆಗೆ ಕೇವಲ ಒಂದು ಪ್ರಕರಣ ಬಿಟ್ಟರೆ ಉಳಿದಂತೆ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೇಂದ್ರದಲ್ಲಿ 5 ಸಿಬಂದಿ
ಪ್ರತಿ ಮತಗಟ್ಟೆಯಲ್ಲಿ ಪಿಆರ್‌ಒ, ಎಪಿಆರ್‌ಒ, 2ನೇ ಪೋಲಿಂಗ್ ಅಧಿಕಾರಿ, 3ನೇ ಪೋಲಿಂಗ್ ಅಧಿಕಾರಿ, ಗ್ರೂಪ್ ಡಿ ಸಿಬಂದಿ ಸಹಿತ ಒಟ್ಟು 5 ಮಂದಿ ಮತಗಟ್ಟೆಯ ಒಳಗಿರುತ್ತಾರೆ. ಜತೆಗೆ ಹೊರಗಡೆ ಮಾಹಿತಿ ಕೇಂದ್ರದಲ್ಲಿ ಒಬ್ಬರು ಬಿಎಲ್‌ಓ, ಅಗತ್ಯಕ್ಕೆ ತಕ್ಕಂತೆ ಪೊಲೀಸ್ ಸಿಬಂದಿಯನ್ನು ನೇಮಿಸಲಾಗುತ್ತದೆ ಎಂದು ಎಆರ್‌ಒ ತಿಳಿಸಿದ್ದಾರೆ.
ಶೇ. 30 ಹೆಚ್ಚುವರಿ ಯಂತ್ರ
ಬೆಳ್ತಂಗಡಿ ಕ್ಷೇತ್ರಕ್ಕೆ ಪ್ರತಿ ಬೂತ್‌ಗಳಿಗೂ ಒಂದರಂತೆ ಒಟ್ಟು 241 ಯಂತ್ರಗಳ ಆವಶ್ಯಕತೆ ಇದ್ದು, ಅದರ ಶೇ. 30 ಹೆಚ್ಚುವರಿ ಯಂತ್ರಗಳನ್ನು ಆಯೋಗ ನೀಡಿದೆ. ಅಂದರೆ ಯಾವುದಾದರೂ ಬೂತ್‌ಗಳಲ್ಲಿ ಯಂತ್ರ ಕೈಕೊಟ್ಟರೆ ಇದನ್ನು ಬಳಸಲಾಗುತ್ತದೆ. ಮತದಾನ ಪ್ರಕ್ರಿಯೆಗಾಗಿ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಹಾಗೂ ವಿವಿ ಪ್ಯಾಟ್ ಇರುತ್ತದೆ. ಯಂತ್ರಗಳಲ್ಲಿ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ನೋಡಿಕೊಳ್ಳುವುದಕ್ಕೆ ಇಬ್ಬರು ಎಂಜಿನಿಯರ್‌ಗಳು ಇರುತ್ತಾರೆ.
ಎಲ್ಲ ಸಿದ್ಧತೆ ಪೂರ್ಣ
ಈಗಾಗಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಹೊರಗಿನವರು ಪ್ರಚಾರ ಬಂದಿದ್ದರೆ ಅವರು ಕ್ಷೇತ್ರ ಬಿಡಬೇಕಾಗುತ್ತದೆ. 144 ಸೆಕ್ಷನ್ ಜಾರಿಯಲ್ಲಿರುವುದರಿಂದ 5 ಮಂದಿಗಿಂತ ಹೆಚ್ಚು ಜನ ಒಂದೆಡೆ ಸೇರಲು ಅವಕಾಶವಿಲ್ಲ. ಕ್ಷೇತ್ರದ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ.
ಎಚ್.ಆರ್.ನಾಯಕ್, ಸಹಾಯಕ ಚುನಾವಣಾಧಿಕಾರಿ, ಬೆಳ್ತಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.