ಅಂಧ ಪತಿ ಗುರುವನ ಮೇಲೆ “ಐತೆ’ ಪ್ರೀತಿ
ಕೈಹಿಡಿದು 55 ವರ್ಷ ಬದುಕು ಮುನ್ನಡೆಸಿದ ಆದರ್ಶ ಸತಿ; ಕೂಲಿ ಮಾಡುತ್ತಿದ್ದರೂ ಹಾಲಿನಂಥ ಸಂಸಾರ
Team Udayavani, Dec 12, 2019, 4:48 AM IST
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಆದರ್ಶ ವೃದ್ಧ ದಂಪತಿ ಇದ್ದಾರೆ. ಈ ದಂಪತಿಯ ಬದುಕಿನ ಚಿತ್ರಣ ವಿಭಿನ್ನ. ಗುತ್ತಿಗಾರು ಗ್ರಾಮದಲ್ಲಿರುವ ಅಚಳ್ಳಿಯಲ್ಲೊಂದು ಪುಟ್ಟ ಗುಡಿಸಲು. ಅಲ್ಲಿ 90ರ ಹರೆಯದ ಅಜ್ಜ, 75 ವರ್ಷ ಮೀರಿದ ಅಜ್ಜಿಯ ಸಂಸಾರ. ಕೂಲಿಯೇ ಇವರ ಜೀವನಾಧಾರ. ದಾಂಪತ್ಯದ 55 ವಸಂತ ಕಂಡ ಗುರುವ-ಐತೆ ದಂಪತಿಯ ಅಪರೂಪದ ಕಥೆ ಇಲ್ಲಿದೆ.
ಗುರುವ ಬಾಲ್ಯದಿಂದಲೇ ಅಂಧ. ಆದರೂ ಆತನ ಕೈ ಹಿಡಿದು ಮುನ್ನಡೆಸುತ್ತಿದ್ದಾಳೆ ಮನದನ್ನೆ ಐತೆ. ಆತನಿಗಾಗಿ ಸಂಪೂರ್ಣ ಜೀವನವನ್ನೇ ಮೀಸಲಿಟ್ಟಿದ್ದಾಳೆ ಈ ವೃದ್ಧೆ. ಗುರುವನಿಗೆ ಇನ್ನೊಬ್ಬರ ಸಹಾಯವಿಲ್ಲದೆ ನಡೆದಾಡಲೂ ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಈಕೆ ಆತನ ಬಾಳಿಗೆ ಬೆಳಕಾಗಿದ್ದಾಳೆ. ಮನೆ ಇರಲಿ, ಹೊರಗೆ ಎಲ್ಲಿಗೇ ಹೊರಡಲಿ, ಒಬ್ಬರನ್ನೊಬ್ಬರು ಬಿಟ್ಟು ಹೋದ ಉದಾಹರಣೆಯೇ ಇಲ್ಲ! ಗುರುವನ ಕೈ ಹಿಡಿದುಕೊಂಡೇ ಆಕೆ ಸುದೀರ್ಘ ಅವಧಿಯ ಸಂಸಾರ ನಡೆಸಿದ್ದಾಳೆ.
ಅಡಿಕೆ ಸುಲಿಯುತ್ತಾರೆ
ಕಣ್ಣು ಕಾಣದ ಗಂಡನಿಗೆ ಬೆಳಕು ನೀಡಿದ ದಿಟ್ಟ ಮಹಿಳೆ. ಸಂಸಾರ ನಡೆಸಲು ಹಣ, ಸಿರಿವಂತಿಕೆ ಅಲ್ಲ. ಪ್ರೀತಿಯೊಂದೇ ಸಾಕು ಎಂದು ತೋರಿಸಿಕೊಟ್ಟ ಈಕೆ ಅಂಧ ಗಂಡನಿಗೆ ಊರುಗೋಲಾಗಿ ಬದುಕುತ್ತಿರುವ ಆದರ್ಶ ಮಹಿಳೆ. ಕಡು ಬಡತನವಿದ್ದು, ಕೂಲಿ ಮಾಡಿ ಹೊಟ್ಟೆ ಹೊರೆಯುವ ಸ್ಥಿತಿ ಇದೆ. ಅಡಿಕೆ ಸುಲಿಯುವುದಕ್ಕೂ ಇಬ್ಬರೂ ಜತೆಯಾಗಿಯೇ ತೆರಳುತ್ತಾರೆ. ಕಣ್ಣು ಕಾಣದಿದ್ದರೂ ಗ್ರಹಿಸುವ ಶಕ್ತಿಯಿಂದ ಪತ್ನಿ ಸಹಾಯದಿಂದ ಲೀಲಾ ಜಾಲವಾಗಿ ಅಡಿಕೆ ಸುಲಿಯುತ್ತಾರೆ ಗುರುವ. ಪ್ರತಿದಿನ ಜತೆಯಲ್ಲೇ ಕಾಡಿಗೆ ತೆರಳಿ ಕಟ್ಟಿಗೆ ಸಂಗ್ರಹಿಸಿ 2 ಕಟ್ಟು ಮಾಡಿ ಇಬ್ಬರೂ ಭಾರವಾದ ಹೊರೆಯನ್ನು ಹೊತ್ತುಕೊಳ್ಳುತ್ತಾರೆ.
ಐತೆ ತಲೆಯಲ್ಲಿರುವ ಹೊರೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಗಂಡ ಗುರುವನ ಕೈ ಹಿಡಿದು 4 ಕಿ.ಮೀ. ಕ್ರಮಿಸಿ ಗುತ್ತಿಗಾರಿನ ಪೇಟೆಗೆ ಬಂದು ಕಟ್ಟಿಗೆ ಮಾರುತ್ತಾರೆ. ಈಗ ಮುಪ್ಪು ಆವರಿಸಿದೆ. ದೇಹದಲ್ಲಿ ಶಕ್ತಿ ಇಲ್ಲ. ಹೀಗಾಗಿ, ಕಟ್ಟಿಗೆ ಸಂಗ್ರಹಿಸಿ ತಂದು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಸಣ್ಣಪುಟ್ಟ ಕೂಲಿ ಮಾಡಿ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ ಗುರುವ – ಐತೆ ದಂಪತಿ.
ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಗುಡಿಸಲಿನಂತಹ ಪುಟ್ಟ ಮನೆಯಲ್ಲೇ ಇವರ ವಾಸ್ತವ್ಯ. ಮನೆ ದುರಸ್ತಿಗೂ ಮತ್ತೂಬ್ಬರನ್ನು ಅವಲಂಬಿಸಬೇಕಿದೆ. ಇದೇ ಮನೆಯಲ್ಲಿ ಮಗ ರಮೇಶ, ಸೊಸೆ ಸಂಸಾರವೂ ನಡೆಯುತ್ತಿದೆ. ಬದುಕಿನ ಭವಿಷ್ಯದ ಚಿಂತೆ ಇವರನ್ನು ಕಾಡುತ್ತಿದೆ. ಮುಂದೇನು ನಮ್ಮ ಗತಿ ಎನ್ನುತ್ತಾ ಕಣ್ಣೀರ ಧಾರೆ ಸುರಿಸುತ್ತಿವೆ ಈ ವೃದ್ಧ ಜೀವಗಳು.
ಮನೆ ದುರಸ್ತಿ ಮಾಡಿಸಿದ್ದೇವೆ
ಗುರುವ-ಐತೆ ದಂಪತಿ ಮಗ ಮತ್ತು ಸೊಸೆ ಜತೆ ಜೀವನ ಸಾಗಿಸುತ್ತಿದ್ದಾರೆ. ಅವರ ವಾಸದ ಮನೆ ಶಿಥಿಲಾವಸ್ಥೆಗೆ ತಲುಪಿತ್ತು. ಅದನ್ನು ಗ್ರಾಮ ಪಂಚಾಯತ್ ಕಡೆಯಿಂದ ಒಂದು ಬಾರಿ ದುರಸ್ತಿಗೊಳಿಸಿ ನೀಡಿದ್ದೇವೆ. ದಂಪತಿಯ ಅನುಸರಿಸಿ ಬದುಕುವ ಜೀವನ ಶೈಲಿಯೇ ಮಾದರಿ ಎನ್ನುವುದರಲ್ಲಿ ಸಂಶಯವಿಲ್ಲ.
– ಅಚ್ಯುತ ಗುತ್ತಿಗಾರು, ಗ್ರಾ.ಪಂ. ಅಧ್ಯಕ್ಷ, ಗುತ್ತಿಗಾರು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.