ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಹೊಸ ಕಟ್ಟಡ
Team Udayavani, Jun 17, 2018, 1:24 PM IST
ಮಡಂತ್ಯಾರು : ಮಚ್ಚಿನ ಗ್ರಾಮಸ್ಥರ ಬಹುಕಾಲದ ಜನರ ಬೇಡಿಕೆಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಕೊನೆಗೂ ಮಂಜೂರುಗೊಂಡು ತಾತ್ಕಾಲಿಕವಾಗಿ ಕಳೆದ ವರ್ಷ ನ. 8ರಂದು ಮಚ್ಚಿನ ಪಂ. ಕಟ್ಟಡದಲ್ಲಿ ಪ್ರಾರಂಭವಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಚ್ಚಿನ ಗ್ರಾಮದ ಬೆರ್ಬಲಾಜೆ ಸಮೀಪ ಜಾಗ ಗೊತ್ತು ಮಾಡಿದ್ದು, ಅರಣ್ಯ ಇಲಾಖೆಯ ಅಡೆತಡೆಗಳಿಂದಾಗಿ ಸದ್ಯಕ್ಕೆ ತಟಸ್ಥವಾಗಿದೆ. ಇದರಿಂದಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ವಿಳಂಬವಾಗಿದ್ದು, ಇನ್ನೂ ತಾತ್ಕಾಲಿಕ ಕಟ್ಟಡದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾತ್ಕಾಲಿಕ ಕಟ್ಟಡ ವಾದ ಕಾರಣ ಹೆಚ್ಚಿನ ಸವ ಲತ್ತು ಸಿಗುತ್ತಿಲ್ಲ ಎನ್ನುತ್ತಾರೆ ಆರೋಗ್ಯ ಸಹಾಯಕಿಯರು.
6 ಗ್ರಾಮಸ್ಥರಿಗೆ ಉಪಯೋಗ
ಮಚ್ಚಿನ ಹೆಚ್ಚು ಜನಸಂಖ್ಯೆ ಹೊಂದಿದ ಗ್ರಾಮವಾಗಿದ್ದು, ಇಲ್ಲಿ ಆರೋಗ್ಯ ಕೇಂದ್ರ ಅವಶ್ಯವಾಗಿತ್ತು. ಸಮೀಪ ದಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳು ಇಲ್ಲದ ಕಾರಣ ಪುಂಜಾಲಕಟ್ಟೆ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗುತ್ತಿತ್ತು. ಪುಂಜಾಲಕಟ್ಟೆ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಪರದಾಡಬೇಕಾಗುತ್ತಿತ್ತು. ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಚ್ಚಿನ, ತೆಕ್ಕಾರು, ಬಾರ್ಯ, ತಣ್ಣೀರುಪಂಥ, ಪುತ್ತಿಲ, ಪಾರೆಂಕಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನರಿಗೆ ಪ್ರಯೋಜನ
ಜನತೆ ಇದೀಗ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ವಾರದಲ್ಲಿ ನಾಲ್ಕು ದಿನ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಸೋಮವಾರ ಮತ್ತು ಗುರುವಾರ ನೆರಿಯ ಸಂಚಾರಿ ಘಟಕದ ಡಾ| ಅಪರ್ಣಾ ಭೇಟಿ ನೀಡಿ ಚಿಕಿತ್ಸೆ ನೀಡುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಲಾವಣ್ಯಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಿರಿಯ ಆರೋಗ್ಯ ಸಹಾಯಕಿಯರಿಂದ ಕರ್ತವ್ಯ
ತಾತ್ಕಾಲಿಕ ಕೇಂದ್ರವಾದ ಕಾರಣ ಇಲ್ಲಿಗೆ ಸ್ಟಾಫ್ ನರ್ಸ್ ನಿಯೋಜನೆ ಆಗಿಲ್ಲ. ನೂತನ ಕಟ್ಟಡ ಆಗದೆ ಕಿರಿಯ ಆರೋಗ್ಯ ಸಹಾಯಕಿಯರೇ ಆರೋಗ್ಯ ಕೇಂದ್ರದಲ್ಲಿ ಎಲ್ಲ ಕೆಲಸ ಮಾಡುವಂತಾಗಿದೆ. ಆಯ ಕೂಡ ಇಲ್ಲದ ಕಾರಣ ಹೆಚ್ಚು ಸಮಸ್ಯೆಯಾಗಿದೆ. 3 ಮಂದಿ ಕಿರಿಯ ಆರೋಗ್ಯ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮದಲ್ಲಿ ಮನೆಗಳಿಗೆ ಕೂಡ ತೆರಳಬೇಕಾದ ಕಾರಣ ಕೆಲಸ ದೊತ್ತಡ ಹೆಚ್ಚಾಗಿದೆ ಎನ್ನುತ್ತಾರೆ ಆರೋಗ್ಯ ಸಹಾಯಕಿಯರು.
ಕಂಪ್ಯೂಟರ್ ಇಲ್ಲ
ಮಚ್ಚಿನ ಆರೋಗ್ಯ ಕೇಂದ್ರವೊಂದರಲ್ಲೆ ತಿಂಗಳಿಗೆ 35ರಿಂದ 40 ತಾಯಿ ಕಾರ್ಡ್ ನೋಂದಣಿಯಾಗುತ್ತಿದೆ. ಆದರೆ ಕಂಪ್ಯೂಟರ್, ಇಂಟರ್‌ನೆಟ್ ಇಲ್ಲದ ಕಾರಣ ಕಿರಿಯ ಆರೋಗ್ಯ ಸಹಾಯಕಿರು ಕಣಿಯೂರು ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ
ತೆರೆಳಿ ಡಾಟಾ ಎಂಟ್ರಿ ಮಾಡಬೇಕಾಗುತ್ತದೆ. ಅಲ್ಲಿ ಕೂಡ ಕ್ಲರ್ಕ್, ಡಾಟಾ ಎಂಟ್ರಿಗೆ ಸಿಬಂದಿ ಇಲ್ಲದ ಕಾರಣ ತಾವೇ ಎಲ್ಲ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ.
ಜಾಗದ ಸಮಸ್ಯೆ
ನೂತನ ಕಟ್ಟಡಕ್ಕೆ ಜಾಗದ ಸಮಸ್ಯೆ ಇದೆ. ಬೆರ್ಬಲಾಜೆಯಲ್ಲಿ ಒಂದೂವರೆ ಎಕ್ರೆ ಜಾಗವಿದೆ. ಅರಣ್ಯ ಇಲಾಖೆಯಿಂದ ಸಮಸ್ಯೆ ಇದ್ದು, ಬಗೆಹರಿಯುವ ಹಂತದಲ್ಲಿದೆ. ನೀತಿ ಸಂಹಿತೆ ಕಾರಣ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಶಾಸಕರ ಜತೆ ಮಾತುಕತೆ ನಡೆಸಲಾಗುವುದು. ತಾತ್ಕಾಲಿಕ ಕಾರಣ ಖಾಯಂ ಡಾಕ್ಟರ್, ಸಿಬಂದಿ ನಿಯೋಜನೆ ಆಗಿಲ್ಲ.ಅನುಮತಿ ದೊರೆತ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು.
– ಡಾ| ಕಲಾಮಧು ಶೆಟ್ಟಿ, ತಾಲೂಕು ವೈದ್ಯಾಧಿಕಾರಿ, ಬೆಳ್ತಂಗಡಿ
ಪ್ರಮೋದ್ ಬಳ್ಳಮಂಜ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.