ಮಹಾಶಿವರಾತ್ರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಸನ್ನದ್ಧ
Team Udayavani, Mar 3, 2019, 12:30 AM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿಯು ಮಾ. 4ರಂದು ಮರುದಿನ ಸೂರ್ಯೋದಯದ ವರೆಗೆ ಭಕ್ತಿ ಭಾವ, ಶಿವನಾಮ ಜಪದೊಂದಿಗೆ ಜಾಗರಣೆಪೂರ್ವಕ ಜರಗಲಿದೆ.
ಶ್ರೀ ಮಂಜುನಾಥ ಸ್ವಾಮಿಗೆ ನಡೆಯುವ ಬೆಳ್ಳಿ ರಥೋತ್ಸವ ಹಾಗೂ ಪತಾಕೆ ರಥೋತ್ಸವದಲ್ಲಿ ಊರ ಪರವೂರ ಸಾವಿರಾರು ಮಂದಿ ಭಕ್ತರು ಕೂಡಿಕೊಳ್ಳಲಿದ್ದಾರೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ.
ಶಿವರಾತ್ರಿ ವಿಶೇಷ
ಸೋಮವಾರ ಸಂಜೆ 6 ಗಂಟೆಯಿಂದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಅಭಿಷೇಕ, ಅರ್ಚನೆ, ನೈವೇದ್ಯ ಹಾಗೂ ಪೂಜೆ ಸೇರಿದಂತೆ ವಿಶೇಷ ಪೂಜಾ ಸೇವೆಗಳೊಂದಿಗೆ ರಾತ್ರಿಯ ನಾಲ್ಕೂ ಜಾವಗಳಲ್ಲಿ ವಿಶೇಷ ಅಭಿಷೇಕಾದಿ ಪೂಜೆಗಳು ನಡೆಯಲಿವೆ. ಶಿವರಾತ್ರಿಯಂದು ಮಾತ್ರ ಕ್ಷೇತ್ರದಲ್ಲಿ ರಾತ್ರಿ ಅಭಿಷೇಕವಿರುತ್ತದೆ.
ವಿಶೇಷವಾಗಿ ಜಲಾಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕಗಳು ನಡೆಯುತ್ತವೆ. ಭಕ್ತರಿಗೆ ಈ ಸೇವೆಗಳನ್ನು ಮಾಡಿಸಲು ಅವಕಾಶವಿದೆ. ಮಹಾಪೂಜೆಯ ಬಳಿಕ ದೇಗುಲದ ಒಳಾಂಗಣದಲ್ಲಿ ಉತ್ಸವ ಬಲಿ ನಡೆಯುತ್ತದೆ. ರಾತ್ರಿ 12 ಗಂಟೆ ಅನಂತರ ದೇವಸ್ಥಾನದ ಹೊರಗೆ ಬೆಳ್ಳಿರಥದಲ್ಲಿ ಮಂಜುನಾಥ ಸ್ವಾಮಿಯ ರಥೋತ್ಸವ ನಡೆಯುತ್ತದೆ.
ಸಹಸ್ರಾರು ಮಂದಿ ಭಕ್ತರ ಸಮ್ಮುಖದಲ್ಲಿ ಭಜನೆ, ಸಂಕೀರ್ತನೆ, ಕೊಂಬು, ಕಹಳೆ, ವಾದ್ಯ, ಜಾಗಟೆಯೊಂದಿಗೆ ಕ್ಷೇತ್ರದ ಮಹಾದ್ವಾರ ತನಕ ರಥೋತ್ಸವ ನಡೆದು, ಬಳಿಕ ಶಿವರಾತ್ರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯುತ್ತದೆ. ಮತ್ತೆ ಬೆಳ್ಳಿರಥದಲ್ಲೇ ದೇವರನ್ನು ಕುಳ್ಳಿರಿಸಿ ದೇವಸ್ಥಾನಕ್ಕೆ ಹಿಂದಿರುಗಲಾಗುತ್ತದೆ. ಅನಂತರ ಪತಾಕೆ ರಥದಲ್ಲಿ ಉತ್ಸವ ನಡೆಯುತ್ತದೆ.
ಮಂಗಳವಾರ ಬೆಳಗ್ಗೆ 6 ಗಂಟೆಗೆ ಪತಾಕೆ ರಥದಲ್ಲಿ ಮಂಜುನಾಥ ಸ್ವಾಮಿಯ ಉತ್ಸವ ನಡೆದು, ಆಮೇಲೆ ದೇವಾಲಯದೊಳಗೆ ಉತ್ಸವ ಬಲಿಯ ಅನಂತರ ನಿತ್ಯಪೂಜಾದಿಗಳು ನಡೆಯುತ್ತವೆ. ಬಳಿಕ ಭಕ್ತರಿಗೆ ಪ್ರತಿದಿನದಂತೆ ದರ್ಶನಕ್ಕೆ ಅವಕಾಶವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.