3 ತಿಂಗಳಲ್ಲಿ ಸಿಆರ್‌ಝಡ್ ಮರಳಿಗೆ ವ್ಯವಸ್ಥೆ ಮಾಡಿ:ವಿಧಾನಸಭಾಧ್ಯಕ್ಷ ಖಾದರ್ ಸೂಚನೆ
Team Udayavani, Jun 8, 2024, 12:10 AM IST
ಮಂಗಳೂರು: ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆಗೆಯುವುದಕ್ಕೆ ಪೂರಕವಾದ ಪ್ರಕ್ರಿಯೆಗಳನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಿ, ಮರಳಿಗೆ ಯಾವುದೇ ಸಮಸ್ಯೆಯಾಗ ದಂತೆ ಜಿಲ್ಲಾಡಳಿತ, ಗಣಿ ಇಲಾಖೆ ನೋಡಿಕೊಳ್ಳಬೇಕು ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಧರಿಸಿದೆ.
2023ರ ಮೇ ತಿಂಗಳ ಬಳಿಕ ಜಿಲ್ಲೆಯಲ್ಲಿ ಸಿಆರ್‌ಝಡ್ ಪ್ರದೇಶದ ಮರಳು ತೆಗೆಯುವುದು ಸಾಧ್ಯವಾಗಿಲ್ಲ. ಹೊಸ ಸಿಆರ್‌ಝಡ್ ನಿಯಮಗಳು ಜಾರಿಗೆ ಬಂದಿದ್ದರೂ ಮರಳು ತೆರವಿನ ಕುರಿತು ಮಾರ್ಗಸೂಚಿಗಳು ಇನ್ನೂ ಬಾರದಿರುವುದರ ಹಿನ್ನೆಲೆಯಲ್ಲಿ ಮರಳು ತೆಗೆಯುವುದಕ್ಕೆ ಜಿಲ್ಲಾಡಳಿತ ಅನುಮೋದನೆ ನೀಡಿಲ್ಲ. ಈ ಹಿನ್ನೆಲೆ ಯಲ್ಲಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸ್ಪೀಕರ್ ಖಾದರ್ ಅವರು, ಜನರ ಸಮಸ್ಯೆಗೆ ಸ್ಪಂದಿಸಿ ಮರಳಿನ ಸಮಸ್ಯೆ ನಿವಾರಿಸಬೇಕು, ಉತ್ತರಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್ ವಲಯದಲ್ಲಿ ಮರಳು ತೆಗೆಯಲು ಅನುಮತಿ ನೀಡಿರುವಾಗ ನಮ್ಮಲ್ಲಿ ಯಾಕೆ ಸಾಧ್ಯ ವಾಗಿಲ್ಲ ಎಂದು ಪ್ರಶ್ನಿಸಿದರು.
3 ತಿಂಗಳಲ್ಲಿ ನಿಷೇಧ ಪೂರ್ಣಗೊಳ್ಳು ತ್ತದೆ. ಅಷ್ಟು ಹೊತ್ತಿಗೆ ಮರಳು ತೆಗೆ ಯಲು ಬೇಕಾದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ದ.ಕ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಕಡಲ್ಕೊರೆತ ತುರ್ತು ನಿಧಿ
ಉಳ್ಳಾಲದ ಕಡಲತಡಿಯಲ್ಲಿ ಕಲ್ಲು ಪೇರಿಸುವುದಕ್ಕಾಗಿ ಜಿಲ್ಲಾಧಿಕಾರಿ ತುರ್ತು ನಿಧಿ ಬಿಡುಗಡೆಗೊಳಿಸಬೇಕು. ಅಲ್ಲದೆ ತ್ವರಿತವಾಗಿ ಕಾಮಗಾರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಸೋಮೇಶ್ವರ ಬಟ್ಟಂಪಾಡಿಯಿಂದ ತಲಪಾಡಿ ವರೆಗೆ 800 ಮೀಟರ್ ಉದ್ದದಲ್ಲಿ ತಡೆಗೋಡೆ ನಿರ್ಮಾಣಕ್ಕೆ 88 ಕೋಟಿ ರೂ. ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಸೋಮೇಶ್ವರದಲ್ಲಿ ಕ್ರೂಸ್ ಹಡಗು ಗಳಿಗೆ 2,030 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣ ಮಾಡುವ ಪ್ರಸ್ತಾವ ವನ್ನು ಅನುಮೋದಿಸಲಾಗಿದೆ. ಈ ಯೋಜನೆಯನ್ನು ಕೇಂದ್ರ-ರಾಜ್ಯ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿ ಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಖಾದರ್ ಉದಯವಾಣಿಗೆ ವಿವರಿಸಿದರು.
ಮಂಗಳೂರು ನಗರಕ್ಕೆ ಸಂಬಂಧಿಸಿಂತೆ ವಲಯ ನಿಯಮಾವಳಿ, ಕಟ್ಟಡ ನಿಯಮಾವಳಿ ಕರಡು ಬಿಡುಗಡೆ ಮಾಡುವುದಕ್ಕೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾವೇರಿ-2 ತಂತ್ರಾಂಶದಡಿ ಯಲ್ಲಿ ಭೂಮಿ ನೋಂದಣಿ ನಿಧಾನ ವಾಗಿರುವುದು, ಸರ್ವರ್ ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ.
ಸಚಿವರಾದ ದಿನೇಶ್ ಗುಂಡೂ ರಾವ್, ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್, ಬಂದರು ಇಲಾಖೆಯ ಮಂಜುಳಾ, ಮೀನುಗಾರಿಕಾ ಇಲಾಖೆಯ ನಾಗ ಭೂಷಣ್, ಗಣಿ ಇಲಾಖೆಯ ವಿನ್ಸಂಟ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಭೆಯಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.