ಮಂಗಳೂರು: 49 ವಾಹನಗಳಿಗೆ ಲಾಕ್!
Team Udayavani, Jul 12, 2018, 1:23 PM IST
ಮಂಗಳೂರು: ಸಭಾ ಭವನಗಳ ಎದುರು ರಸ್ತೆ ಮತ್ತು ಫುಟ್‌ಪಾತ್‌ಗಳಲ್ಲಿ ಹಾಗೂ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ವಾಹನಗಳ ಮೇಲೆ ಕ್ರಮ ಜರಗಿಸುವ ಪ್ರಕ್ರಿಯೆಯನ್ನು ನಗರದ ಟ್ರಾಫಿಕ್ ಪೊಲೀಸರು ಮುಂದುವರಿಸಿದ್ದು, ಬುಧವಾರ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ 49 ವಾಹನಗಳನ್ನು ಲಾಕ್ ಮಾಡಿ ದಂಡ ವಿಧಿಸಿದ್ದಾರೆ.
ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಮಂಗಳವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಕರ್ಕಶ ಹಾರ್ನ್ ಮಾಡಿ ಶಬ್ದ ಮಾಲಿನ್ಯ ಉಂಟು ಮಾಡಿದ ಆರೋಪದ ಮೇಲೆ 159 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೇ ವೇಳೆ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದ ಸುಮಾರು 40 ವಾಹನಗಳನ್ನು ಲಾಕ್ ಮಾಡಿ ದಂಡ ವಿಧಿಸಲಾಗಿತ್ತು.
ಬುಧವಾರ ಟ್ರಾಫಿಕ್ ಪೊಲೀಸರು ವಿಶೇಷವಾಗಿ ಮಂಗಳೂರು ನಗರದ ಎಂ.ಜಿ. ರೋಡ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಿದರು.