ಮಂಗಳೂರು ಏರ್‌ಪೋರ್ಟ್: ವರ್ಷದ ಬಳಿಕ “ಅದಾನಿ’ ಸುಪರ್ದಿಗೆ
Team Udayavani, Oct 30, 2019, 4:33 AM IST
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇಂದ್ರ ಸರಕಾರವು ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಒಡೆತನದ “ಅದಾನಿ ಗ್ರೂಪ್’ಗೆ ನಿರ್ವಹಣೆಗಾಗಿ ಗುತ್ತಿಗೆ ನೀಡಿದ್ದು, ಆಡಳಿತಾತ್ಮಕ ಪ್ರಕ್ರಿಯೆ ಆರಂಭವಾಗಿದೆ. ಆದರೆ ಅದಾನಿ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಹೊಣೆ ವಹಿಸಿಕೊಳ್ಳಲು ಕನಿಷ್ಠ ಒಂದು ವರ್ಷ ಅಗತ್ಯವಿದೆ.
ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿರ್ವಹಿಸುತ್ತಿರುವ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿ ಪಾಲುದಾರಿಕೆಯಡಿ ನಿರ್ವಹಣೆಗೆ ಕೇಂದ್ರ ಸರಕಾರವು ಅದಾನಿ ಗ್ರೂಪ್‌ಗೆ 50 ವರ್ಷಗಳಿಗೆ ಗುತ್ತಿಗೆ ನೀಡಿದೆ. ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಹಾಗೂ ಟರ್ಮಿನಲ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅದಾನಿ ಸಂಸ್ಥೆ ಕೈಗೊಳ್ಳಲಿದೆ.
ಗುತ್ತಿಗೆ ಘೋಷಣೆ ಬಳಿಕ ಸರಕಾರ- ಅದಾನಿ ಸಂಸ್ಥೆಯ ಮಧ್ಯೆ ಆಡಳಿತಾತ್ಮಕ ಪ್ರಕ್ರಿಯೆ ಆರಂಭವಾಗಿದೆ. ನಿಲ್ದಾಣದ ಆಸ್ತಿಗಳ ಪರಿಶೀಲನೆ, ಸಿಬಂದಿ ಕೆಲಸ ಕಾರ್ಯ, ಆದಾಯದ ಮೂಲ, ಏರ್‌ಲೈನ್ ಸಂಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಒಟ್ಟು ವಿಚಾರಗಳ ಬಗ್ಗೆ ಅದಾನಿ ಸಂಸ್ಥೆಯ ಪ್ರಮುಖರು ಅಧ್ಯಯನ ಆರಂಭಿಸಿದ್ದಾರೆ.
ಈ ಮಧ್ಯೆ ನಿಲ್ದಾಣ ಖಾಸಗೀಕರಣ ಹಿನ್ನೆಲೆಯಲ್ಲಿ ಕೆಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದರೆ ಈಗಿರುವ ಉದ್ಯೋಗಿಗಳಿಗೆ ವಿಶೇಷ ಆದ್ಯತೆ ನೀಡುವುದಲ್ಲದೆ ಸ್ಥಳೀಯರಿಗೆ ನೋವಾಗದಂತೆ ನಡೆದುಕೊಳ್ಳುತ್ತೇವೆ ಎಂದು ಅದಾನಿ ಸಂಸ್ಥೆ ತಿಳಿಸಿದೆ.
ಶುಲ್ಕ ಪರಿಷ್ಕರಣೆ ಸಾಧ್ಯತೆ
ಅದಾನಿ ಸಂಸ್ಥೆಯು ಕೋಟ್ಯಂತರ ರೂ. ಹೂಡಿಕೆ ಮಾಡಲಿರುವುದರಿಂದ ಬಳಿಕ ಪ್ರಯಾಣಿಕನೊಬ್ಬನಿಗೆ ವಿಧಿಸುವ ಶುಲ್ಕದ ಪ್ರಮಾಣದಲ್ಲಿ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ವಾಣಿಜ್ಯ ಮಳಿಗೆಗಳ ಮಾಸಿಕೆ ಬಾಡಿಗೆ ಏರಿಕೆಯಾಗಿ, ಗ್ರಾಹಕರಿಗೆ ದೊರೆಯುವ ಸೇವೆಗಳ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದೆ. ಪಾರ್ಕಿಂಗ್ ಶುಲ್ಕವೂ ಏರಿಕೆಯಾಗಬಹುದು. ಜತೆಗೆ ಖಾಸಗಿ ವಿಮಾನಗಳು ನಿಲ್ದಾಣದಲ್ಲಿ ಇಳಿ ಯುವಾಗ ವಿಧಿಸುವ ಶುಲ್ಕದ ಪ್ರಮಾಣವೂ ಏರಿಕೆಯಾಗುವ ಸಾಧ್ಯತೆಯಿದೆ.
ಅದಾನಿ ಏರ್‌ಪೋರ್ಟ್?
ಅದಾನಿ ಸಂಸ್ಥೆಯು ದೇಶದ 6 ವಿಮಾನ ನಿಲ್ದಾಣಗಳನ್ನು ಗುತ್ತಿಗೆಗೆ ಪಡೆದಿದ್ದು, ನಿಲ್ದಾಣಗಳ ವ್ಯವಹಾರ ಉಸ್ತುವಾರಿ ನೋಡಿಕೊಳ್ಳಲು “ಅದಾನಿ ಏರ್‌ಪೋರ್ಟ್ಸ್ ಲಿ.’ ಎಂಬ ಸಂಸ್ಥೆ ಕೂಡ ಕಾರ್ಯಾಚರಿಸಲಿದೆ. ಬಳಿಕ ನಿಲ್ದಾಣದ ಹೆಸರಿನಲ್ಲಿಯೂ “ಅದಾನಿ ಅಂತಾರಾಷ್ಟ್ರೀಯ ಏರ್‌ಪೋರ್ಟ್’ ಎಂಬ ಹೆಸರು ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಗೊಳಿಸಬೇಕು ಎಂಬ ಆಶಯ ಅದಾನಿ ಸಂಸ್ಥೆಯದು. ಸರಕಾರದ ಎಲ್ಲ ಪ್ರಕ್ರಿಯೆಗಳು ಮುಗಿದು ಏರ್‌ಪೋರ್ಟ್ ಅದಾನಿ ಸಂಸ್ಥೆಗೆ ದೊರೆಯಲು ಕನಿಷ್ಠ 1 ವರ್ಷ ಬೇಕು. ಈಗಿರುವ ಉದ್ಯೋಗಿಗಳಿಗೆ ಅನ್ಯಾಯವಾಗದಂತೆ ಸಂಸ್ಥೆಯು ಕ್ರಮ ಕೈಗೊಳ್ಳಲಿದೆ.
– ಕಿಶೋರ್ ಆಳ್ವ , ಅಧ್ಯಕ್ಷರು, ಅದಾನಿ ಸಮೂಹ ಸಂಸ್ಥೆ-ಕರ್ನಾಟಕ
ರನ್ ವೇ ವಿಸ್ತರಣೆ; ಪ್ರತ್ಯೇಕ ಕಾಂಪ್ಲೆಕ್ಸ್, ಮಾಲ್!
ಅದಾನಿ ಸಂಸ್ಥೆ ರನ್‌ವೇ ವಿಸ್ತರಣೆಗೆ ಮೊದಲ ಆದ್ಯತೆ ನೀಡಲಿದ್ದು, ಹಾಗಾದಲ್ಲಿ ದೇಶ-ವಿದೇಶಗಳಿಗೆ ಮಂಗಳೂರಿನಿಂದ ಸಂಚರಿಸುವ ವಿಮಾನಗಳ ಸಂಖ್ಯೆ ಏರಿಕೆಯಾಗಲಿದೆ. ಹೊಸದಿಲ್ಲಿ, ಮುಂಬಯಿ ಏರ್‌ಪೋರ್ಟ್ ಮಾದರಿಯಲ್ಲಿ ಮಂಗಳೂರು ಏರ್‌ಪೋರ್ಟ್‌ನಲ್ಲಿಯೂ ಪ್ರತ್ಯೇಕ ಕಾಂಪ್ಲೆಕ್ಸ್, ಮಾಲ್‌ಗಳು ಬರಲಿವೆ. ಒಟ್ಟಾರೆಯಾಗಿ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಅಂತಾರಾಷ್ಟ್ರೀಯ ಮಾದರಿಯಲ್ಲಿ ರೂಪಿಸಲಾಗುತ್ತದೆ ಎಂದು ಅದಾನಿ ಸಂಸ್ಥೆ ತಿಳಿಸಿವೆ.
– ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.