ಗಮನ ಸೆಳೆದ ಮೆರವಣಿಗೆ; ಕರುನಾಡು-ಕೇರಳ ಕಲಾ ವೈಭವದ ಸಂಗಮ
Team Udayavani, Jan 20, 2019, 4:57 AM IST
ಮಹಾನಗರ : ರಾಜ್ಯದ ವಿವಿಧೆ ಡೆಯ ಕಲಾ ಪ್ರಕಾರಗಳ ಅನಾವರಣ… ತುಳುನಾಡು-ಕೇರಳದ ಸಾಂಪ್ರದಾಯಿಕ ಭೂತಾರಾಧನೆಯ ದರ್ಶನ… ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ದೇವರೇ ಧರೆಗಿಳಿದು ಬಂದಂತೆ ಭಾಸವಾಗುವ ಭಕ್ತಿ-ಭಾವದ ಕಲಾಪ್ರಕಾರಗಳು… ಆ ಮೂಲಕ, ಕರುನಾಡು-ಕೇರಳ ಕಲಾ ಶ್ರೀಮಂತಿಕೆಯ ಅನಾವರಣ…
ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ ಸೇವೆಯ ರಜತ ಸಂಭ್ರಮ ಮತ್ತು ನವೋದಯ ಸ್ವ-ಸಹಾಯ ಸಂಘಗಳ ವಿಂಶತಿ ಸಮಾವೇಶದ ಮೆರವಣಿಗೆಯಲ್ಲಿ ಶನಿವಾರ ಕಂಡುಬಂದ ದೃಶ್ಯಗಳಿವು.
ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ, ಸಾಂಖ್ಯೀಕ ಮತ್ತು ಯೋಜನೆಗಳ ಜಾರಿ ಖಾತೆಯ ಸಚಿವ ಡಿ.ವಿ. ಸದಾನಂದ ಗೌಡ ಅವರು ಕೊಡಿಯಾಲಬೈಲ್‌ನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿ ಆವರಣದಲ್ಲಿ ಡೋಲು ಬಡಿದು ಮೆರವಣಿಗೆಗೆ ಚಾಲನೆ ನೀಡಿದರು.
ಬೆಳಗ್ಗೆ ಸುಮಾರು 10 ಗಂಟೆಗೆ ಎಸ್‌ಸಿಡಿಸಿಸಿ ಬ್ಯಾಂಕ್ ಆವರಣದಿಂದ ಆರಂಭ ವಾದ ಮೆರವಣಿಗೆಯಲ್ಲಿ 60ಕ್ಕೂ ಹೆಚ್ಚು ಕಲಾ ತಂಡಗಳು ಮತ್ತು ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಸಂಸ್ಕೃತಿ ಮತ್ತು ಕಲೆಯ ಶ್ರೀಮಂತಿಕೆಯೇ ಇಲ್ಲಿ ಮೇಳೈಸಿತ್ತು. ಕೊರಗ ನೃತ್ಯ, ಕೋಳಿ ಕುಣಿತ, ಕಟ್ಟಪ್ಪನ ಗೂಳಿ ವಿಶೇಷ ಆಕರ್ಷಣೆಯಾಗಿತ್ತು. ರಕ್ತದಾನ ಜಾಗೃತಿ ಮೂಡಿಸುವ ಜಾಗೃತಿ ಫಲಕ ಹೊತ್ತ ವೇಷಧಾರಿ , 71 ಬಾರಿ ರಕ್ತದಾನ ಮಾಡಿರುವ ದಾವಣಗೆರೆಯ ಮಹಡಿ ಶಿವಕುಮಾರ್ ಎಂಬವರು ತಮ್ಮ ಕೆಂಪಗಿನ ವೇಷ-ಭೂಷಣಗಳಿಂದ ಗಮನಸೆಳೆದರು. ಇಡೀ ಮೆರವಣಿಗೆಯಲ್ಲಿ ಹೆಚ್ಚು ಆಕರ್ಷಣೆಗೊಳಗಾದದ್ದು ತುಳುನಾಡು ಮತ್ತು ಕೇರಳದ ಸಾಂಪ್ರದಾಯಿಕ ಭೂತಾರಾಧನೆ, ಶಿವ, ಪಾರ್ವತಿ, ಈಶ್ವರ, ಸುಬ್ರಹ್ಮಣ್ಯನ ವೇಷಧಾರಿಗಳು.
ಉತ್ಸಾಹದಿಂದ ಪಾಲ್ಗೊಂಡ ಮಹಿಳೆಯರು
ನವೋದಯ ಸ್ವ-ಸಹಾಯ ಸಂಘದ ಸದಸ್ಯೆ ಯರು ಮೆರವಣಿಗೆಯುದ್ದಕ್ಕೂ ಉತ್ಸಾಹದಿಂದಲೇ ಪಾಲ್ಗೊಂಡರು. ಬೆಳಗ್ಗೆ 9 ಗಂಟೆಗೆ ಆಗಮಿಸಿದ ಸದಸ್ಯೆ ಯರು, ಸಂಘದ ಸಮವಸ್ತ್ರ ತೊಟ್ಟು ಉತ್ಸಾಹದಿಂದ ಮೆರವಣಿಗೆಯಲ್ಲಿ ಸಾಗಿದರು.
ಕಟ್ಟಡಗಳ ಮೇಲೆ ನಿಂತು ವೀಕ್ಷಣೆ
ಮೆರವಣಿಗೆಯು ಕೊಡಿಯಾಲುಬೈಲ್‌ನಲ್ಲಿರುವ ಬ್ಯಾಂಕಿನ ಬಳಿಯಿಂದ ಆರಂಭವಾಗಿ ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಮೂಲಕ ನೆಹರೂ ಮೈದಾನಕ್ಕೆ ಸಾಗಿತ್ತು. ಕಲಾ ಪ್ರದರ್ಶನಗಳನ್ನು ವೀಕ್ಷಿಸಲು ಜನ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಮೆರವಣಿಗೆಯ ದಾರಿಯುದ್ದಕ್ಕೂ ಕಟ್ಟಡಗಳ ಮೇಲೆ ನಿಂತು ಕಲಾ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಫೋಟೋ, ವೀಡಿಯೋ ಚಿತ್ರೀಕರಣ
ಮೆರವಣಿಗೆಯ ದೃಶ್ಯವನ್ನು ಜನ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದು ಖುಷಿಪಡುತ್ತಿದ್ದರು. ಕೆಲವರು ಕಲಾ ತಂಡಗಳ ಜತೆಗೆ ಸೆಲ್ಫೀ ತೆಗೆದು ಸಂಭ್ರಮಿಸಿದರು.
ಮಜ್ಜಿಗೆ ವಿತರಣೆ
ಬಾಯಾರಿಕೆ ನೀಗಿಸಲು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸಭಾ ಕಾರ್ಯಕ್ರಮದ ಪ್ರವೇಶ ದ್ವಾರದಲ್ಲಿ ಮಜ್ಜಿಗೆ ಪ್ಯಾಕೆಟ್‌ಗಳನ್ನು ವ್ಯವಸ್ಥಿತವಾಗಿ ಇಡಲಾಗಿತ್ತು. ಆಗಮಿಸಿದ ಎಲ್ಲ ಜನರಿಗೂ ಸ್ವಯಂ ಸೇವಕರು ಮಜ್ಜಿಗೆ ವಿತರಣೆ ಮಾಡಿದರು. ಜನ ಆಸೀನರಾದ ಸ್ಥಳಗಳಿಗೂ ತೆರಳಿ ಸ್ವಯಂ ಸೇವಕರು ಮಜ್ಜಿಗೆ ವಿತರಣೆ ಮಾಡುತ್ತಿದ್ದರು.
ಭರ್ಜರಿ ವ್ಯಾಪಾರ
ನೆಹರೂ ಮೈದಾನದ ಒಳಭಾಗದಲ್ಲಿ ಚರುಂಬುರಿ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದರು. ಚರುಂಬುರಿ, ಮಾವಿನಕಾಯಿ ಸಹಿತ ಸ್ನ್ಯಾಕ್ಸ್ ಗಳಿಗೆ ಹೆಚ್ಚು ಬೇಡಿಕೆ ಕಂಡು ಬಂತು. ಜತೆಗೆ ಮೈದಾನದ ಹೊರ ಭಾಗದಲ್ಲಿ ವ್ಯಾಪಾರನಿರತರಾಗಿದ್ದ ಐಸ್‌ಕ್ಯಾಂಡಿ, ನೀರಿನ ಬಾಟಲ್ ವ್ಯಾಪಾರಿ ಜೋರಾಗಿತ್ತು.
ಪೊಲೀಸರ ಸಹಕಾರ, ಬಂದೋಬಸ್ತು
ಬ್ಯಾಂಕ್ ಬಳಿಯಿಂದ ನೆಹರೂ ಮೈದಾನದ ತನಕದ ಒಂದು ಬದಿಯ ರಸ್ತೆಯಲ್ಲಿ ವಾಹನ ಸಂಚಾರ ನಿಲುಗಡೆಗೊಳಿಸಿ ಮೆರವಣಿಗೆ ಸರಾಗ ವಾಗಿ ಸಾಗುವುದಕ್ಕೆ ಪೊಲೀಸರು ಅನುವು ಮಾಡಿ ಕೊಟ್ಟರು. ಇನ್ನೊಂದು ಬದಿಯಲ್ಲಿ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದರೂ ಅವರ ಓಡಾಟಕ್ಕೆ, ವಾಹನಗಳ ಸಂಚಾರಕ್ಕೆ ಮತ್ತು ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸರು ನೋಡಿಕೊಂಡರು. ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ.
ಕಲಾ ಸಂಗಮ
ಮಂಡ್ಯ ತಂಡದ ನಂದಿಕಂಬ, ಅಶ್ವತ್ಥಪುರ ತಂಡದ ನಾಗಪುರ ಚೆಂಡೆ, ಕಲ್ಲಡ್ಕ ಶಿಲ್ಪಗೊಂಬೆ, ಚಾಮರಾಜನಗರ ಕೊರಗ ಕುಣಿತ, ತಿಪಟೂರಿನ ಕೊಂಬು, ಮಂಡ್ಯದ ಪೂಜಾ ಕುಣಿತ, ಬಳ್ಳಾರಿಯ ಹಗಲುವೇಷ, ಆನೆ ಗಲ್ಲಿನ ಮಾಯಾ ಕಲಾ ತಂಡದ ಪ್ರಸ್ತುತಿ, ನೀಲೇಶ್ವರದ ನವಿಲು ಕುಣಿತ, ಹಾವೇರಿಯ ಬೇಡರ ವೇಷ, ಗುರುವಾಯೂರಿನ ಕಥಕ್ಕಳಿ, ಕಣ್ಣೂರಿನ ಪಂಚವಾದ್ಯ, ಕುಂದಾಪುರದ ಡೋಲು, ಕೇರಳದ ದೇವರಾಕ್ಷಸಂ, ಮೈಸೂರಿನ ಡೋಲು, ಧಾರವಾಡದ ಜಗ್ಗಲಿಗೆ, ಕಣ್ಣೂರು ತೀಯಂ, ಮಂಗಳೂರಿನ ಕಾಳಭೈರವ, ಶಿವಮೊಗ್ಗದ ಡೊಲ್ಲು ಕುಣಿತ ಸಹಿತ ಸುಮಾರು 60ಕ್ಕೂ ಹೆಚ್ಚು ಕಲಾ ತಂಡಗಳ ಪ್ರದರ್ಶ ಆಕರ್ಷಕವಾಗಿತ್ತು. ರಾಜ್ಯ ಮಾತ್ರವಲ್ಲದೆ, ನೆರೆಯ ರಾಜ್ಯ ಕೇರಳದಿಂದಲೂ ಕಲಾ ತಂಡಗಳು ಆಗಮಿಸಿ ದ್ದರಿಂದ ತುಳುನಾಡಿನಲ್ಲಿ ಕರುನಾಡು-ಕೇರಳದ ಕಲಾ ಸಂಗಮವಾಗಿತ್ತು.
ಸ್ತಬ್ಧ ಚಿತ್ರದಲ್ಲಿ ಕಂಬಳ
ಜಾನಪದ ಕ್ರೀಡೆಗಳಿಗೆ ಸ್ತಬ್ಧ ಚಿತ್ರ ಗಳು ಒತ್ತು ನೀಡಿದ್ದವು. ತುಳುನಾಡಿನ ಕೋಟಿ- ಚೆನ್ನಯ ಕಂಬಳ, ಮುಖ್ಯ ಕಸುಬು ಮೀನುಗಾರಿಕೆಯನ್ನು ಪ್ರದರ್ಶಿಸುವ ಸ್ತಬ್ಧಚಿತ್ರ ಜನಾಕರ್ಷ ಣೆಗೆ ಒಳಗಾ ಯಿತು. ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ 25ನೇ ವರ್ಷಾಚರಣೆಯಲ್ಲಿರುವ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರ ಪ್ರತಿರೂಪ ಹೊತ್ತ ಸ್ತಬ್ಧಚಿತ್ರವು ವಿಶೇಷ ಗಮನಸೆಳೆಯಿತು.
ಹರಿದು ಬಂದ ಜನಸಾಗರ
ವೇದಿಕೆ ಸನಿಹದಲ್ಲಿ ಮತ್ತು ಮೇಲ್ಭಾಗದಲ್ಲಿ ಹಾಕಿದ್ದ ಆಸನಗಳು ಸುಮಾರು 11.30ರ ವೇಳೆಗೇ ಬಹುತೇಕ ಭರ್ತಿಯಾಗಿದ್ದವು. ಆದರೆ, ಮಧ್ಯಾಹ್ನ 1 ಗಂಟೆಯವರೆಗೂ ಜನರು ದೂರದ ಊರುಗಳಿಂದ ಆಗಮಿಸುತ್ತಲೇ ಇದ್ದದ್ದು ಕೂಡ ವಿಶೇಷವಾಗಿತ್ತು. ಅಂದರೆ, ಅಷ್ಟರಮಟ್ಟಿಗೆ ಈ ಐತಿಹಾಸಿಕ ಸಮಾರಂಭಕ್ಕೆ ಎಲ್ಲೆಡೆಯಿಂದ ಜನಸಾಗರ ಹರಿದುಬಂದಿತ್ತು. ಬೆಳಗ್ಗೆ 9ರಿಂದ 10.30ರ ವರೆಗೆ ಸರಕಾರಿ/ಖಾಸಗಿ ಸಹಿತ ಸುಮಾರು 3 ಸಾವಿರ ಬಸ್‌ಗಳು, ಒಂದು ಸಾವಿರ ಟೆಂಪೋಗಳ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭದ ಮುಖ್ಯ ವೇದಿಕೆಗೆ ಆಗಮಿಸಿದ್ದ ಗಣ್ಯರು, ವಿಶೇಷ ಆಹ್ವಾನಿತರು, ಸಮಾರಂಭಕ್ಕೆ ಬಂದವರ ವಾಹನಗಳ ನಿಲುಗಡೆಗೂ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.