‘ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ’
Team Udayavani, Mar 5, 2018, 11:43 AM IST
ಸುಳ್ಯ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರ ಬಂದ ಬಳಿಕ ಕ್ರಿಮಿನಲ್‌ಗಳಲ್ಲಿ ನಡುಕ ಉಂಟಾಗಿದೆ. ಆದರೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಸರಣಿ ಕೊಲೆಗಳಲ್ಲಿ ಭಾಗಿಯಾದ ಅಪರಾಧಿಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸುವ ಪರಿಪಾಠವಿದೆ ಇದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಅವರು ಬಿಜೆಪಿ ಹಮ್ಮಿಕೊಂಡ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಪ್ರಯುಕ್ತ ಸುಳ್ಯದ ಬೊಳುಬೈಲಿನಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.
ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಆಡಳಿತವಿದ್ದಾಗ ಒಂದೇ ಒಂದು ಕೋಮು ಗಲಭೆ ಜಿಲ್ಲೆಯಲ್ಲಿ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಕಾಶ್ಮೀರ ಬಿಟ್ಟರೆ ಎಲ್ಲೂ ಬಾಂಬ್ ದಾಳಿಯಾಗಿಲ್ಲ. ಇದು ಜನರ ಸುರಕ್ಷತೆಗೆ ಬಿಜೆಪಿಯ ಬದ್ಧತೆ ಎಂದರು.
ಕಾಂಗ್ರೆಸ್ ರಾಜಕೀಯ
ಅಡಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಟಕ ಆಡುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ನ್ಯಾಯಾಲಯಕ್ಕೆ ಅಡಿಕೆ ವಿಷಕಾರಿ ಆಹಾರ ಎಂದು ಅಫಿದವಿತ್ ಸಲ್ಲಿಸಿತ್ತು. ಅದನ್ನು ಬಿಜೆಪಿ ಸರಕಾರ ಹಿಂಪಡೆದಿತ್ತು. ಕರಾವಳಿಯ ಅಡಿಕೆ ಬೆಳೆಗಾರರ ರಕ್ಷಣೆ ಕೇಂದ್ರದ್ದು ಎಂದು ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದಾರೆ. ಅಡಿಕೆಗೆ ಯಡಿಯೂರಪ್ಪ ಅವರ ಸರಕಾರವಿದ್ದಾಗ ಬೆಂಬಲ ಬೆಲೆ ನೀಡಿದ್ದನ್ನು ಕಾಂಗ್ರೆಸ್ ನೆನೆಪಿಸಿಕೊಳ್ಳಲಿ ಎಂದರು.
ಸಬ್ಧ ಚಿತ್ರ ಪೊಲೀಸ್ ವಶ
ಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ಧಪಡಿಸಿದ್ದ ಸ್ತಬ್ಧವನ್ನು ಶನಿವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಶಾಂತಿ ಸೌಹಾರ್ದಕ್ಕೆ ಧಕ್ಕೆ ತರುವ ಸಾಧ್ಯತೆ ರೀತಿ ಸ್ತಬ್ಧಚಿತ್ರ ರಚಿಸಿರುವುದು ಮತ್ತು ಟ್ಯಾಬ್ಲೋ ಪ್ರದರ್ಶನಕ್ಕೆ ಅನುಮತಿ ಪಡೆಯದೆ ಇದ್ದ ಹಿನ್ನಲೆಯಲ್ಲಿ ಪೊಲೀಸರು ಇದನ್ನು ವಶಕ್ಕೆ ಪಡೆದಿದ್ದಾಗಿ ತಿಳಿದು ಬಂದಿದೆ. ಘಟನೆ ಸಂಬಂಧ ಅಧಿಕಾರಿಗಳ ವಿರುದ್ಧ ಸಂಸದ ನಳಿನ್ ಕಿಡಿಕಾರಿದರು. ಸುರಕ್ಷಾ ಯಾತ್ರೆ ಸಹಿಸಲಾಗದ ಸಿದ್ಧರಾಮಯ್ಯ ಸರಕಾರ ಈ ರೀತಿ ಅಡ್ಡದಾರಿಯಲ್ಲಿ ಹತ್ತಿಕ್ಕುವ ಕೆಲಸ ನಡೆಸುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ಪುತ್ತೂರು : ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ಧ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ -ಜನಸುರಕ್ಷಾ ಯಾತ್ರೆ ರವಿವಾರ ಅಪರಾಹ್ನ ಪುತ್ತೂರಿಗೆ ತಲುಪಿತು. ದರ್ಬೆ ಬೈಪಾಸ್ ಬಳಿ ಯಾತ್ರೆಗೆ ಚಾಲನೆ ನೀಡಿ ಮುಖ್ಯರಸ್ತೆಯಲ್ಲಿ ಸಾಗಿ ಬೊಳುವಾರಿನಲ್ಲಿ ಸಾರ್ವಜನಿಕ ಸಭೆ ನಡೆಯಿತು.
ದರ್ಬೆ ಬೈಪಾಸ್ ರಸ್ತೆ ಬಳಿ ಬಿಜೆಪಿ ಹಿರಿಯ ಕಾರ್ಯಕರ್ತ ಬೊಳುವಾರು ವಿಶ್ವನಾಥ ನಾಯಕ್ ಅವರು ಪಕ್ಷದ ಧ್ವಜವನ್ನು ದ. ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪುತ್ತೂರು ಬಿಜೆಪಿ ಮುಖಂಡರಿಗೆ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಮುಖಂಡರಾದ ಕ್ಯಾ| ಬೃಜೇಶ್ ಚೌಟ, ಉಮಾನಾಥ ಕೋಟ್ಯಾನ್, ಮೋನಪ್ಪ ಭಂಡಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾಗೌರಿ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರರಿದ್ದರು.
ರೈ ಎದುರು ಮೋದಿಗೆ ಜೈಕಾರ
ಬೈಪಾಸ್ ರಸ್ತೆಯ ಬಳಿ ಯಾತ್ರೆ ಆರಂಭಿಸುವ ಸಂದರ್ಭ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಕಾರು ಹೋಗಿ ಕೆಲವೇ ನಿಮಿಷದಲ್ಲಿ ವಾಪಸ್ ಬಂದಾಗ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈಕಾರ ಕೂಗಿದರು. ಈ ಮಧ್ಯೆ ಪೊಲೀ ಸರಿಗೆ ಗದರಿದ ಸಚಿವರು ಜಾಗ ಮಾಡಿಕೊಂಡೇ ಮುಂದು ಹೋದರು.