ಮಂಗಳೂರು ದಸರಾ: ಗಮನ ಸೆಳೆದ ಸ್ತಬ್ಧಚಿತ್ರಗಳ ವೈಭವ
Team Udayavani, Oct 9, 2019, 3:31 AM IST
ಮಹಾನಗರ: ಬಹು ವಿಶೇಷತೆ ಹಾಗೂ ಅತ್ಯಂತ ವಿಜೃಂಭಣೆಯ ಮೂಲಕ ಜನಾಕರ್ಷಣೆಗೆ ಕಾರಣವಾಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಮೆರವಣಿಗೆ ಮಂಗಳವಾರ ನೆರವೇರಿತು. ಲಕ್ಷಾಂತರ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ ಸಹಿತ ನವದುರ್ಗೆಯರ ಜತೆಗೆ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಶ್ರದ್ಧಾ ಭಕ್ತಿಯಿಂದ ಶೋಭಾಯಾತ್ರೆಯಲ್ಲಿ ತರಲಾಯಿತು. ಮಂಗ ಳೂರು ದಸರಾ ಮಹೋತ್ಸವ ಮೆರವಣಿಗೆ ವರ್ಷದಿಂದ ವರ್ಷಕ್ಕೆ ವಿಶೇಷ ಆಕರ್ಷಣೆಯನ್ನು ಪಡೆಯುತ್ತಿರುವ ನಿಮಿತ್ತ ಲಕ್ಷಾಂತರ ಪ್ರವಾಸಿಗರು ಮಂಗಳೂರಿಗೆ ಆಗಮಿಸಿ, ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.
ಇದೇ ಮೊದಲ ಬಾರಿಗೆ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳು ಮೆರವಣಿಗೆಯ ಮೊದಲಿಗೆ ಸಾಗಿದ ಬಳಿಕ ಸ್ತಬ್ಧಚಿತ್ರಗಳು ಸಾಗಿದವು.
ಗಮನ ಸೆಳೆದ ಸ್ತಬ್ಧಚಿತ್ರಗಳು
ಕರಾವಳಿಯ ಜಾನಪದ ನೃತ್ಯ, ಕಲಾಪ್ರಕಾರಗಳ ಜತೆ ವಿಭಿನ್ನ ರೀತಿಯ ಸ್ತಬ್ಧಚಿತ್ರಗಳು ಶೋಭಾ ಯಾತ್ರೆಯಲ್ಲಿ ಗಮನಸೆಳೆಯಿತು. 100ಕ್ಕೂ ಅಧಿಕ ಹಸುರು ಕೊಡೆಗಳು ಮೆರವಣಿಗೆಯಲ್ಲಿತ್ತು.
ಪದುವಾ ಫ್ರೆಂಡ್ಸ್ ಈ ಬಾರಿ ಅಂಬಾರಿ- ರಾಜಮನೆತನದ ದೃಶ್ಯದೊಂದಿಗೆ “ಮೈಸೂರು ದಸರಾ ವೈಭವ’ ಪ್ರಸ್ತುತಪಡಿಸಿದ ಸ್ತಬ್ಧಚಿತ್ರ ಆಕರ್ಷಕವಾಗಿತ್ತು. ಹುಲಿ ವೇಷದ ಟ್ಯಾಬ್ಲೋ ಜತೆಗೆ “ಡೆವಿಲ್ ವರ್ಲ್ಡ್ ಶೋ’ ಪ್ರದರ್ಶನ ಈ ಬಾರಿಯ ಮೆರವಣಿಗೆಯ ವಿಶೇಷತೆಯಾಗಿತ್ತು.
ಉಳಿದಂತೆ ಶೋಭಾಯಾತ್ರೆಯಲ್ಲಿ ಹಲವು ಹುಲಿವೇಷದ ಟ್ಯಾಬ್ಲೋ, ನಾಸಿಕ್ ತಂಡ, ಕೇರಳ ಚೆಂಡೆ, ಬ್ರೆಜಿಲ್‌ನ ನೃತ್ಯದ ಟ್ಯಾಬ್ಲೋ, ಕುಂಭಕರ್ಣ ವಧೆ ಮಾಡುವ ಸನ್ನಿವೇಶ, ಅನರ್ಕಲ್ಲಿ ಟ್ಯಾಬ್ಲೋ, ದಸರಾ ಡ್ಯಾನ್ಸ್ ಪಾರ್ಟಿಯ ಅನರ್ಕಲ್ಲಿ, ಹಳೆಯ ನಾಗರಿಕತೆಯನ್ನು ಬಿಂಬಿಸುವ ವಿಶಿಷ್ಟ ಟ್ಯಾಬ್ಲೋ, ಡ್ರ್ಯಾಗನ್, ಅಘೋರಿಗಳ ಟ್ಯಾಬ್ಲೋ, ವೀರಾಂಜನೇಯ ಟ್ಯಾಬ್ಲೋ ಗಮನಸೆಳೆಯಿತು.
ದಸರಾ ಸಂಭ್ರಮದಲ್ಲಿ ಅನಂತ್‌ನಾಗ್
ಹರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್ ನಿರ್ಮಾಣದ ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲೀಷ್’ ತುಳು ಸಿನೆಮಾದ ಆಡಿಯೋ ರಿಲೀಸ್ ದಸರಾ ಮೆರವಣಿಗೆ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನಲ್ಲಿ ಆಯೋಜನೆಗೊಂಡ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ನಡೆಯಿತು. ಖ್ಯಾತ ನಟ ಅನಂತ್‌ನಾಗ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.