ಮೋಡಿ ಮಾಡಿದ ಮಂಗಳೂರು ಹುಡುಗಿಯ ಪ್ರತಿಭೆ
Team Udayavani, Sep 27, 2017, 2:37 PM IST
ಮಂಗಳೂರು: ಆಕೆ ಕ್ಯಾನ್ವಾಸ್ ಎದುರು ನಿಂತರೆ, ರೇಖೆಗಳು ಮಾತನಾಡುತ್ತವೆ. ಪಟ ಪಟನೆ ಸುಂದರ ಚಿತ್ರಗಳು ತಯಾರಾಗುತ್ತವೆ.
ಇಂತಹ ಚಿತ್ರಗಳ ಹಿಂದಿರುವವರು ಮಂಗಳೂರಿನ ಶಬರಿ ಗಾಣಿಗ. ಕರ್ನಾಟಕದ ಅತಿ ವೇಗದ ಚಿತ್ರಗಾರ್ತಿ ಎಂದೇ ಪ್ರಸಿದ್ಧವಾಗಿರುವ ಶಬರಿ ಅವರು ರಚಿಸಿರುವ ‘ಆರ್ಟಿಸ್ಟ್ ಮಾಡೆಲಿಂಗ್’ ಚಿತ್ರದೊಂದಿಗಿನ ಫೋಟೋಶೂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದೇಶ-ವಿದೇಶ ಜನಪ್ರಿಯ ಮಾಡೆಲ್‌ಗಳೂ ಈಕೆಯ ಚಿತ್ರವನ್ನು ಮೆಚ್ಚಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ
ಸೂಪರ್ ಹಿಟ್
ಶಬರಿ ಅವರು ಚಿತ್ರ ಬಿಡಿಸುವುದನ್ನು ಲೈವ್ ಮಾಡೆಲಿಂಗ್ ರೀತಿಯಲ್ಲಿ ವಾರದ ಹಿಂದಷ್ಟೇ ಪ್ರಸಿದ್ಧ ಛಾಯಾಚಿತ್ರಗ್ರಾಹಕ ಶ್ರವಣ್ ಕುಮಾರ್ ಅವರು ಫೋಟೋಶೂಟ್ ಮಾಡಿದ್ದರು. ಅತಿ ವಿಭಿನ್ನ ರೀತಿಯ ಫೋಟೋಗ್ರಫಿ ಇದಾಗಿದ್ದು, ಕಳೆದೆರಡು ದಿನಗಳ ಹಿಂದಷ್ಟೇ ಇದನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಎರಡೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. ವಿದೇಶೀಯರೂ ಮೆಚ್ಚಿ ಕಮೆಂಟ್ಸ್ ಮಾಡಿದ್ದು, ವಿವಿಧ ದೇಶಗಳ ಜನಪ್ರಿಯ ರೂಪದರ್ಶಿಗಳೂ ಲೈಕ್-ಕಮೆಂಟ್ಸ್ ಮಾಡಿದ್ದಾರೆ. ಹಲವು ಖ್ಯಾತನಾಮರ ಚಿತ್ರಗಳನ್ನು ಕ್ವಾನ್ವಾಸ್‌ನಲ್ಲಿ ಅರಳಿಸಿರುವ ಈ ರೀತಿ ಚಿತ್ರ ಬಿಡಿಸುವ ಮಹಿಳಾ ಕಲಾವಿದರ ಪೈಕಿ ರಾಜ್ಯದಲ್ಲೇ ಮೇಲ್ಪಂಕ್ತಿಯಲ್ಲಿದ್ದಾರೆ. ಸಾಯಿಬಾಬಾ ಪೈಂಟಿಂಗ್ 3 ಲಕ್ಷಕ್ಕೂ ಅಧಿಕ ವ್ಯೂಗಳನ್ನು ಹೊಂದಿತ್ತು.
ಪ್ರಶಂಸೆಗೆ ಖುಷಿ
ತನ್ನ ಚಿತ್ರಗಳು ಸಾಕಷ್ಟು ಪ್ರಚಾರ ಪಡೆದುಕೊಳ್ಳುತ್ತಿರುವ ಬಗ್ಗೆ ‘ಉದಯವಾಣಿ’ ಜತೆ ಸಂತಸ ಹಂಚಿಕೊಂಡಿರುವ ಶಬರಿ, ‘ನನ್ನ ಚಿತ್ರಗಳನ್ನು ವಿವಿಧ ವೆಬ್‌ಸೈಟ್‌ಗಳು ಪೋಸ್ಟ್ ‘ಮಾಡಿದ್ದು, ಹಲವಾರು ಮಂದಿ ಶೇರ್ ಮಾಡಿದ್ದಾರೆ. ಸಾಮಾ
ಜಿಕ ಜಾಲತಾಣಗಳಲ್ಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿರುವುದು ಖುಷಿಯಾಗಿದೆ’ ಎನ್ನುತ್ತಾರೆ ಶಬರಿ ಗಾಣಿಗ.
ಮೂರೇ ನಿಮಿಷದಲ್ಲಿ ಚಿತ್ರ ರೆಡಿ!
ವಿಲಾಸ್ ನಾಯಕ್, ಚಿತ್ರಮಿತ್ರರಂತಹ ಖ್ಯಾತನಾಮರ ನಡುವೆ ಶಬರಿ ಗಮನಾರ್ಹವಾಗಿ ಬೆಳೆಯುತ್ತಿದ್ದಾರೆ. ಮೂರೇ ನಿಮಿಷದಲ್ಲಿ ಸುಂದರ ಚಿತ್ರ ಅರಳಿಸುವ ಚಾಕಚಕ್ಯತೆ ಹೊಂದಿದ್ದಾರೆ. ಕೆಂಜಾರು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ಅಂತಿಮ ಎಂಸಿಎ ಓದುತ್ತಿರುವ 23 ವರ್ಷದ ಶಬರಿ, ಕೆಪಿಟಿ ನಿವಾಸಿ, ಎಂಜಿನಿಯರ್ ಯೋಗೀಶ್ ಕುಮಾರ್ ಮತ್ತು ಗೃಹಿಣಿ ಶಶಿಕಲಾ ಅವರ ಪುತ್ರಿ. ಎಳವೆಯಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ವೀಣಾ ಭಂಡಾರಿ, ಶಮಿರ್‌ಆಲಿ, ಚಂದ್ರಾಡ್ಕರ್ ಅವರಿಂದ ಚಿತ್ರಕಲೆಯಲ್ಲಿ ತರಬೇತಿ ಪಡೆದಿದ್ದಾರೆ. ಹೆತ್ತವರ ಪ್ರೋತ್ಸಾಹದಿಂದ ಚಿತ್ರಕಲೆಯಲ್ಲಿ ರಾಜ್ಯದಲ್ಲೇ ಗುರುತಿಸಲ್ಪಡುತ್ತಿದ್ದಾರೆ. ಚಿತ್ರಕಲೆಯಲ್ಲಿ ಮಾತ್ರವಲ್ಲದೇ ಹಾಡುಗಾರಿಕೆಯಲ್ಲೂ ಸೈ ಎನಿಸಿಕೊಂಡಿರುವ ಶಬರಿ, ‘ಡೊಂಬರಾಟ’ ಮತ್ತು ‘ಜುಗಾರಿ’ ತುಳು ಚಿತ್ರಗಳಿಗೆ ಹಿನ್ನಲೆ ಗಾಯನ ಮಾಡಿದ್ದಾರೆ. ಈಗಾಗಲೇ 2 ತುಳು, ಒಂದು ಕನ್ನಡ ಸಿನೆಮಾದಲ್ಲೂ ನಟಿಸಲು ಅವರಿಗೆ ಆಫರ್ ಬಂದಿವೆ. ದುಬಾೖಯಲ್ಲಿ ಕಲಾಪ್ರದರ್ಶನಕ್ಕೂ ಆಹ್ವಾನ ಬಂದಿದೆ.
‘ಆರ್ಟಿಸ್ಟ್ ಮಾಡೆಲಿಂಗ್’ ಫೋಟೋಗ್ರಫಿ
ಶಬರಿ ಅವರ ಆರ್ಟಿಸ್ಟ್ ಮಾಡೆಲ್ ಫೋಟೋಗ್ರಫಿ ಮಾಡಿರುವುದು ಫ್ರೀಲಾನ್ಸ್ ಫೋಟೋಗ್ರಾಫರ್ ಆಗಿರುವ ಶ್ರವಣ್‌ಕುಮಾರ್ ಅವರು. ಈಗಾಗಲೇ ಥೈಲ್ಯಾಂಡ್, ಯೂರೋಪ್, ದುಬೈ ಮುಂತಾದೆಡೆಗಳಲ್ಲಿ ವೆಡ್ಡಿಂಗ್ ಫೋಟೋಗ್ರಫಿ ಮಾಡಿ ಗಮನ ಸೆಳೆದಿದ್ದಾರೆ. ಹಾಂಕಾಂಗ್‌ನಲ್ಲಿಯೂ ಫೋಟೋಗ್ರಫಿ ನಿರ್ವಹಿಸಿದ್ದಾರೆ. ‘ಜನಪ್ರಿಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಶಬರಿ ಗಾಣಿಗ ಅವರ ಚಿತ್ರದ ಬಗ್ಗೆ ವಿಭಿನ್ನವಾಗಿ ಫೋಟೋಶೂಟ್ ಮಾಡಬೇಕೆಂದು ಯೋಜಿಸಿದ್ದೆ. ಕಲಾವಿದೆಯ ಸೃಜನಶೀಲತೆಯನ್ನು ಭಾವಾಭಿವ್ಯಕ್ತಿಯೊಂದಿಗೆ ತೋರಿಸಬೇಕೆಂಬ ಉದ್ದೇಶದಿಂದ ‘ಆರ್ಟಿಸ್ಟ್ ಮಾಡೆಲಿಂಗ್’ ಫೋಟೋಶೂಟ್ ಮಾಡಿದೆ. ಕಲಾವಿದೆ ಮತ್ತಾಕೆ ರಚಿಸಿದ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ಸೆರೆ ಹಿಡಿಯುವ ಪ್ರಯತ್ನವಿದು’ ಎಂದು ಛಾಯಾಚಿತ್ರಗ್ರಾಹಕ ಶ್ರವಣ್ ಕುಮಾರ್ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.