ಮಂಗಳೂರಿನಲ್ಲಿ ಅಂ.ರಾ. ಗಾಳಿಪಟ ಉತ್ಸವ
ಜ.17ರಿಂದ ಮೂರು ದಿನ 2 ವರ್ಷಗಳ ಬಳಿಕ ಆಯೋಜನೆ
Team Udayavani, Dec 23, 2019, 5:22 AM IST
ಮಂಗಳೂರು: ಜಿಲ್ಲಾಡಳಿತ ವತಿಯಿಂದ ನಡೆಯಲಿರುವ ಈ ಬಾರಿಯ ಕರಾವಳಿ ಉತ್ಸವ ಮತ್ತಷ್ಟು ಆಕರ್ಷಣೆಗೆ ಕಾರಣವಾಗಲಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೇರಿಕೊಂಡಿದ್ದು, ಟೀಂ ಮಂಗಳೂರು ಜತೆಗೂಡಿ ಜ.17, 18, 19ರಂದು ಪಣಂಬೂರು ಕಡಲ ಕಿನಾರೆಯಲ್ಲಿ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.
ಅನುದಾನದ ಕೊರತೆಯಿಂದಾಗಿ ಎರಡು ವರ್ಷ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿಲ್ಲ. ಕೆಲವು ದಿನಗಳ ಹಿಂದೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ ಕರಾವಳಿ ಉತ್ಸವದಲ್ಲೇ ಗಾಳಿಪಟ ಉತ್ಸವ ಆಯೋಜನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಜ.17ರಂದು ಬೆಳಗ್ಗೆ ಕಾರ್ಯಾಗಾರ, ಸಂಜೆ 4 ಗಂಟೆಗೆ ಉದ್ಘಾಟನೆ ಬಳಿಕ ಗಾಳಿಪಟ ಉತ್ಸವಕ್ಕೆ ಚಾಲನೆ ದೊರಕಲಿದೆ.
ಈ ಬಾರಿಯ ಉತ್ಸವದಲ್ಲಿ ಹೊನಲು ಬೆಳಕಿನಲ್ಲೂ ಗಾಳಿಪಟ ಹಾರಾಟ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಉತ್ಸವ ಆರಂಭವಾಗುತ್ತದೆ. ಅಹರ್ನಿಶಿ ಪಾಳಿಯಲ್ಲಿ ಕೊನೆಯ ಎರಡು ದಿನ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೂ ಗಾಳಿಪಟ ಪ್ರದರ್ಶನ ಇರಲಿದೆ. ನಮ್ಮ ಕರಾವಳಿ ಎಂಬ ಥೀಮ್‌ನೊಂದಿಗೆ ಈ ಬಾರಿ ಉತ್ಸವ ನಡೆಯಲಿದೆ.
25 ದೇಶಗಳ ತಂಡ ಭಾಗಿ ಸಾಧ್ಯತೆ
ಜ.12ರಂದು ಗುಜರಾತ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಬಳಿಕ ಅಲ್ಲಿಗೆ ಆಗಮಿ ಸಿದ ತಂಡವೇ ಮಂಗಳೂರಿಗೂ ಬರುವ ಸಾಧ್ಯತೆ ಇದೆ. ಎರಡು ವರ್ಷಗಳ ಹಿಂದೆ ನಡೆದ ಉತ್ಸವದಲ್ಲಿ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ನೆದರ್‌ಲ್ಯಾಂಡ್, ಕಾಂಬೋಡಿಯಾ, ಉಕ್ರೇನ್, ಕುವೈಟ್, ಥಾಯ್ಲೆಂಡ್, ನೈಜೀರಿಯಾ, ಇಟಲಿ, ಭಾರತ ಸೇರಿದಂತೆ 14 ರಾಷ್ಟ್ರಗಳ ಗಾಳಿಪಟ ತಂಡಗಳು ಭಾಗವಹಿಸಿದ್ದವು.
ಸ್ಮರಣಿಕೆಯಾಗಿ ಮುಟ್ಟಾಳೆ
25 ದೇಶಗಳಿಂದ ಪ್ರತಿನಿಧಿಗಳು ಬರಲಿದ್ದು, ಸ್ಮರಣಿಕೆಯಾಗಿ ಕರಾವಳಿಯ ಮುಟ್ಟಾಳೆ ನೀಡಲು ತೀರ್ಮಾನಿಸಲಾಗಿದೆ. ಹಿಂದೆ ಫ್ರಾನ್ಸ್ ನಲ್ಲಿ ನಡೆದ ಉತ್ಸವದಲ್ಲಿ ತಂಡಗಳ ಪೆರೇಡ್ ವೇಳೆ ಟೀಂ ಮಂಗಳೂರು ತಂಡವು ಬಿಳಿ ಪಂಚೆ, ಅಂಗಿ ಮತ್ತು ಶಾಲಿನೊಂದಿಗೆ ಮುಟ್ಟಾಳೆ ಧರಿಸಿ ಪಥಸಂಚಲನ ನಡೆಸಿತ್ತು. ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿತ್ತು ಎಂದು ಟೀಂ ಮಂಗಳೂರು ಸದಸ್ಯರ ಲ್ಲೊಬ್ಬರಾದ ದಿನೇಶ್ ಹೊಳ್ಳ “ಉದಯವಾಣಿ’ಗೆ ತಿಳಿಸಿದ್ದಾರೆ.
ಎರಡು ವರ್ಷದ ಬಳಿಕ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ವಿದೇಶಗಳಿಂದ ತಂಡಗಳನ್ನು ಆಹ್ವಾನಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ.
– ಸರ್ವೇಶ್ ರಾವ್, ಟೀಂ ಮಂಗಳೂರು ಸ್ಥಾಪಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.