ಮಂಗಳೂರು-ಮಣಿಪಾಲ: ಇನ್ನೂ ಸಂಚಾರ ಆರಂಭಿಸದ ವೋಲ್ವೋ!
ಕೋವಿಡ್ ಹಿನ್ನೆಲೆಯಲ್ಲಿ ಎಂಟು ತಿಂಗಳುಗಳ ಹಿಂದೆ ಬಸ್ ಓಡಾಟ ಸ್ಥಗಿತ
Team Udayavani, Nov 23, 2020, 6:09 AM IST
ಮಹಾನಗರ: ಕೋವಿಡ್ ಹಿನ್ನೆಲೆಯಲ್ಲಿ ಎಂಟು ತಿಂಗಳುಗಳ ಹಿಂದೆ ಸ್ಥಗಿತಗೊಂಡ ಮಂಗಳೂರು-ಮಣಿಪಾಲ ನಡುವಿನ ಕೆಎಸ್ಸಾರ್ಟಿಸಿ ವೋಲ್ವೋ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ. ಕೆಎಸ್ಸಾರ್ಟಿಸಿಯ ಈ ನಿಲುವಿನಿಂದಾಗಿ ಉಭಯ ಜಿಲ್ಲೆಗಳ ನಡುವೆ ದಿನನಿತ್ಯ ಸಂಚರಿಸುವ ನೂರಾರು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಲಾಕ್‌ಡೌನ್‌ಗೂ ಮುನ್ನ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲ ನಡುವೆ 10 ಹವಾನಿಯಂತ್ರಿತ ಬಸ್‌ಗಳು 25 ಶೆಡ್ನೂಲ್‌ಗಳಲ್ಲಿ ಕಾರ್ಯಾಚರಣೆ ನಡೆಸುದ್ದವು. ಉಡುಪಿ, ಮಣಿಪಾಲ ಸಹಿತ ಸುತ್ತಮುತ್ತಲಿನ ಭಾಗಗಳಿಗೆ ಸಂಚರಿಸುವ ಮಂದಿ ಇದೇ ಬಸ್ ಅವಲಂಬಿಸಿದ್ದರು. ಬೆಳಗ್ಗೆ ಮತ್ತು ಸಂಜೆ ವೇಳೆ ಸೀಟುಗಳು ಕೂಡ ಭರ್ತಿಯಾಗುತ್ತಿದ್ದವು. ಆದರೆ ಲಾಕ್‌ಡೌನ್ ಕಾರಣ ಬಸ್ ಸಂಚಾರ ಸ್ಥಗಿತ ವಾಗಿ 8 ತಿಂಗಳುಗಳು ಕಳೆದರೂ ಮತ್ತೆ ಆರಂಭವಾಗಲಿಲ್ಲ.
ಏಕಾ ಏಕೀ ಸಂಚಾರ ರದ್ದು
ಲಾಕ್‌ಡೌನ್ ಸಡಿಲಗೊಂಡ ಬಳಿಕ ಪ್ರಯಾಣಿಕರ ಒತ್ತಡದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಸ್ಟೇಟ್‌ಬ್ಯಾಂಕ್‌ನಿಂದ ಉಡುಪಿ ಬಸ್ ನಿಲ್ದಾಣಕ್ಕೆ ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ವೇಳೆ ನಾನ್ ಎಸಿ ಬಸ್ ಸಂಚಾರ ಆರಂಭಗೊಂಡಿತ್ತು. ಪ್ರಯಾಣಿಕರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದರು.
ಹೀಗಿರುವಾಗಲೇ ಏಕಾಏಕಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರಿಂದ ಸರಕಾರಿ ಬಸ್‌ನಲ್ಲಿ ಉಡುಪಿ ಯಿಂದ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣಕ್ಕೆ ಬರಬೇಕಾದರೆ ಬಿಜೈಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಬೇರೊಂದು ಬಸ್‌ನಲ್ಲಿ ಸಂಚರಿಸ ಬೇಕು. ಇದು ನಿತ್ಯ ಪ್ರಯಾಣಿಕರ ಅಸಮಾ ಧಾನಕ್ಕೆ ಕಾರಣವಾಗಿದೆ.
ಕೆಎಸ್ಸಾರ್ಟಿಸಿ ವಾದವೇನು?
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಕೆಲವು ದಿನಗಳ ಹಿಂದೆ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಿಂದ ಉಡುಪಿ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆ ಆರಂಭಿಸಲಾಗಿತ್ತು. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ನಿಗಮಕ್ಕೆ ನಷ್ಟ ಉಂಟಾಗುತ್ತಿದೆ. ಮಂಗಳೂರಿನಿಂದ ಉಡುಪಿಗೆ ತೆರಳಲು ಹೆಜಮಾಡಿ, ಸುರ ತ್ಕಲ್ ಟೋಲ್‌ನಲ್ಲಿ ಹಣ ಕಟ್ಟಬೇಕು. ಹೀಗಿದ್ದಾಗ ಬಸ್ ಸಂಚಾರ ನಡೆಸಿದರೆ ಲಾಭಕ್ಕಿಂತ ನಷ್ಟವೇ ಉಂಟಾಗುತ್ತಿದೆ. ಈ ಕಾರಣಕ್ಕೆ ತಾತ್ಕಾಲಿಕವಾಗಿ ಬಸ್ ಸಂಚಾರ ನಿಲ್ಲಿಸಲಾಗಿದೆ ಎನ್ನುತ್ತಾರೆ.
ಎ.ಸಿ. ಬಸ್ ಸ್ಥಗಿತ!
ಎಂಟು ತಿಂಗಳುಗಳ ಹಿಂದೆ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಿಂದ ಮಣಿಪಾಲಕ್ಕೆ ಸಂಚರಿ ಸುತ್ತಿದ್ದ ಹವಾನಿಯಂತ್ರಿತ ವೋಲ್ವೋ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಎ.ಸಿ. ಬಸ್ ಸಂಚಾರದಿಂದಾಗಿ ನಿಗಮಕ್ಕೆ ಪ್ರತೀ ದಿನಕ್ಕೆ 1.50 ಲಕ್ಷ ರೂ. ನಷ್ಟ ಉಂಟಾಗುತ್ತಿತ್ತು. ಎ.ಸಿ. ಬಸ್‌ನಲ್ಲಿ ಒಂದು ಲೀಟರ್ ಡೀಸೆಲ್‌ಗೆ ಪ್ರತೀ ಕಿ.ಮೀ.ಗೆ 2.5ರಿಂದ 2.8 ಕಿ.ಮೀ.ವರೆಗೆ ಮೈಲೇಜ್ ಸಿಗುತ್ತದೆ. ಪ್ರತೀ ಕಿ.ಮೀ.ಗೆ 60 ರೂ. ಖರ್ಚು ತಗುಲುತ್ತಿದ್ದು, ಕೇವಲ 30 ರೂ. ಮಾತ್ರ ಆದಾಯ ಸಿಗುತ್ತಿತ್ತು. ಮಂಗಳೂರಿನಿಂದ ಮಣಿಪಾಲಕ್ಕೆ ದಿನವೊಂದಕ್ಕೆ ಒಟ್ಟು ಬಸ್‌ಗಳು 6,500 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, 1.50 ಲಕ್ಷ ರೂ. ನಷ್ಟ ಉಂಟಾಗುತ್ತಿತ್ತು. ಇನ್ನು, ಬಹುತೇಕ ಬಸ್‌ಗಳು 10 ಲಕ್ಷ ಕಿ.ಮೀ.ಗೂ ಅಧಿಕ ಸಂಚರಿಸಿದ್ದು, ಆ ಬಸ್‌ಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ. ನಿಗಮ ಸದ್ಯ ನಷ್ಟದಲ್ಲಿದ್ದು, ಹೊಸ ಬಸ್ ಖರೀದಿ ಅನುಮಾನ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.
ಮುಂದಿನ ದಿನಗಳಲ್ಲಿ ಬಸ್ ಸಂಚಾರ ಆರಂಭ
ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲ ನಡುವೆ ಎಂಟು ತಿಂಗಳುಗಳ ಹಿಂದೆ ಬಸ್ ಸಂಚಾರ ನಿಲ್ಲಿಸಲಾಗಿದೆ. ಲಾಕ್‌ಡೌನ್ ಸಡಿಲಗೊಂಡ ಬಳಿಕ ಸ್ಟೇಟ್‌ಬ್ಯಾಂಕ್‌ನಿಂದ ಉಡುಪಿ ಯವರೆಗೆ ಕೆಲವು ದಿನ ಬಸ್‌ಕಾರ್ಯಾಚರಣೆ ನಡೆಸಿದ್ದೇವೆ. ಆದರೆ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದರು. ಇದರಿಂದ ನಿಗಮಕ್ಕೆ ನಷ್ಟ ಉಂಟಾಗುತ್ತಿತ್ತು. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಆರಂಭವಾದ ಬಳಿಕ ಪುನಃ ಬಸ್‌ಸಂಚಾರ ಆರಂಭಿಸುತ್ತೇವೆ.
-ಕಮಲ್ ಕುಮಾರ್, ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಣಾಧಿಕಾರಿ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.