ನೈಋತ್ಯ ರೈಲ್ವೇಯಲ್ಲಿ ಮಂಗಳೂರು ವಿಲೀನಕ್ಕೆ ಕರಾವಳಿಗರ ಹಕ್ಕೊತ್ತಾಯ
ಬಲಗೊಳ್ಳಲಿ ಕರಾವಳಿ ರೈಲು ಜಾಲ: ಉದಯವಾಣಿ ಅಭಿಯಾನ
Team Udayavani, Nov 29, 2020, 5:25 AM IST
ಮಂಗಳೂರು ಭಾಗವನ್ನು ನೈಋತ್ಯರೈಲ್ವೇಗೆ ಸೇರಿಸುವ ಮೂಲಕ ಕರಾವಳಿ ಭಾಗಕ್ಕೆ ಹೆಚ್ಚಿನ ರೈಲು ಸೇವೆ ಒದಗಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ ಹಾಗೂ ನಿರೀಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಉದಯವಾಣಿ ಯು “ಬಲಗೊಳ್ಳಲಿ ಕರಾವಳಿ ರೈಲು ಜಾಲ’ ಎನ್ನುವ ಅಭಿಯಾನ ಆರಂಭಿಸಿದ್ದು, ಇದಕ್ಕೆ ಈಗ ರೈಲ್ವೇ ಹೋರಾಟಗಾರರು, ಜನಪ್ರತಿನಿಧಿಗಳು ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇದೀಗ ಈ ಬೇಡಿಕೆಗೆ ಕರಾವಳಿ ಭಾಗದ ಜನರು ಕೂಡ ಬೆಂಬಲ ಸೂಚಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಂದೋಲನ ಯಶಸ್ವಿಗೊಳಿಸಬೇಕು
ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇಗೆ ಸೇರಿಸುವಂತೆ ಮಾಡುವ ಈ ಆಂದೋಲನಕ್ಕೆ ನಾಗರಿಕರು ಸ್ಪಂದಿಸಿ ಯಶಸ್ವಿಗೊಳಿಸಬೇಕು. ಸರಕು ಹಾಗೂ ಪ್ರಯಾಣಿಕರ ರೈಲು ವಿಭಾಗದಲ್ಲಿ ಅತ್ಯಂತ ಹೆಚ್ಚು ಸಂಪನ್ಮೂಲಭರಿತ ಈ ಕರಾವಳಿ ವಲಯವನ್ನು ನೈಋತ್ಯ ರೈಲ್ವೇ (ಮೈಸೂರು) ವಲಯದಲ್ಲಿ ಸೇರ್ಪಡೆಗೊಳಿಸಿದರೆ ಕರಾವಳಿಯ ಸಮಸ್ತ ನಾಗರಿಕರಿಗೂ ಲಾಭ, ನೈಋತ್ಯ ರೈಲ್ವೇಗೂ ಲಾಭ. ಈಗಾಗಲೇ ಪಾಲ್ಗಾಟ್ ವಲಯದ ಹಿಡಿತದಲ್ಲಿರುವುದರಿಂದ, ರೈಲುಗಳು, ಟಿಕೆಟ್ ಹಂಚಿಕೆ, ಉದ್ಯೋಗ, ಆರ್ಥಿಕ ಲಾಭ ಸಹಿತ ಹೆಚ್ಚಿನೆಲ್ಲ ಲಾಭ ಹೊರರಾಜ್ಯಕ್ಕೆ ಆಗುತ್ತಿದೆ.
– ಶ್ರೀಪತಿ ಆಚಾರ್ಯ, ಮಂಗಳೂರು
ಶೀಘ್ರ ಕಾರ್ಯಗತವಾಗಲಿ
ಸದ್ಯ ಮಂಗಳೂರು ರೈಲ್ವೇ ಪಾಲಾ^ಟ್ ರೈಲ್ವೇ ವಲಯದಲ್ಲಿದೆ. ಜಿಲ್ಲೆಯ ಸಂಸದರು ಕೇಂದ್ರ ರೈಲ್ವೇ ಸಚಿವರ ಜತೆ ಮಾತನಾಡಿ ಶೀಘ್ರ ಅಲ್ಲಿಂದ ತೆರವು ಮಾಡಿ ಮಂಗಳೂರು ರೈಲ್ವೇ ವಿಭಾಗ ಅಥವಾ ಮಂಗಳೂರು ಪ್ರತ್ಯೇಕ ವಲಯ ಮಾಡಬೇಕು ಅದೂ ಸಾಧ್ಯವಾಗದಿದ್ದರೆ ಕನಿಷ್ಠ ನೈಋತ್ಯ ರೈಲ್ವೇ ಜತೆ ಸೇರಿಸಬೇಕು. ಇದು ನಮ್ಮ ಜಿಲ್ಲೆಯ ಸರ್ವ ನಾಗರಿಕರ ವಿಶೇಷ ಒತ್ತಾಯ ಹಾಗೂ ಬೇಡಿಕೆಯಾಗಿದೆ..
– ನೌಶಾದ್ ಮೇನಾಲ, ಈಶ್ವರಮಂಗಲ
ಎಲ್ಲ ಜನಪ್ರತಿನಿಧಿಗಳು ಕೈಜೋಡಿಸಬೇಕು
ಮಂಗಳೂರು ಭಾಗ ಶೀಘ್ರ ಮೈಸೂರು ವಿಭಾಗಕ್ಕೆ ಸೇರ್ಪಡೆ ಯಾಗಬೇಕು. ಈ ನಿಟ್ಟಿನಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಸದಾನಂದ ಗೌಡ ಸಹಿತ ಎಲ್ಲ ಜನಪ್ರತಿನಿಧಿಗಳು ಕೈಜೋಡಿಸಿ ಕಾರ್ಯಗತಗೊಳ್ಳುವಂತೆ ಮಾಡಬೇಕು.
– ಜಯಕರ,ಸುಭಾಶ್‌ನಗರ, ಕಾಪು
ವಲಯ ಸಮಸ್ಯೆ
ಮಂಗಳೂರು – ಪುತ್ತೂರು ನಡುವೆ ರಾತ್ರಿ ಸಂಚರಿಸುವ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಣೆ ಮಾಡಿ ಮರುದಿನ ಬೆಳಗ್ಗೆ ಮಂಗಳೂರಿಗೆ ಬರುವ ಹಾಗೆ ಮಾಡಲು ಕಳೆದ 12 ವರ್ಷಗಳಿಂದ ಹೋರಾಟ ಮಾಡುತ್ತ ಇದ್ದೇವೆ. ಆದರೆ ಇನ್ನೂ ಈಡೇರಿಲ್ಲ. ಎರಡು ವಲಯಗಳಿಗೆ ಸೇರಿರುವ ಕಾರಣ ಇದಕ್ಕೆ ಹಸುರು ನಿಶಾನೆ ಸಿಕ್ಕಿಲ್ಲ. ಹೀಗಾಗಿ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲು ಮಂಗಳೂರು ರೈಲ್ವೇಯನ್ನು ನೈಋತ್ಯ ವಲಯಕ್ಕೆ ಸೇರಿಸಬೇಕು.
– ವಿನಯಚಂದ್ರ ಎಡಮಂಗಲ ಕಡಬ
ಸೇರ್ಪಡೆಯಿಂದ ಅಭಿವೃದ್ಧಿ ಸಾಧ್ಯ
ಪ್ರಸ್ತುತ ಮಂಗಳೂರು ಸೆಂಟ್ರಲ್ ನಿಲ್ದಾಣ ದಿಂದ ಕೇರಳ ಹಾಗೂ ತಮಿಳುನಾಡಿಗೆ ಹೋಗುವ ರೈಲುಗಳಿಗೆ ಆದ್ಯತೆ ದೊರೆಯುತ್ತಿದೆ. ಪ್ಲಾಟ್‌ಫಾರಂ ಸಹಿತ ರೈಲು ಸೌಲಭ್ಯಗಳು ಅಭಿವೃದ್ಧಿಯಾಗಿಲ್ಲ. 16 ವರ್ಷಗಳ ಹಿಂದೆಯೇ ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇಗೆ ಸೇರ್ಪಡೆಗೊಳಿಸುವ ಆದೇಶ ಆಗಿದ್ದರೂ ಅದು ಇನ್ನೂ ಅನುಷ್ಠಾನಕ್ಕೆ ಬರದಿರುವುದು ಬೇಸರದ ವಿಷಯ. ಮಂಗಳೂರು ಭಾಗವನ್ನು ನೈಋತ್ಯ ವಲಯಕ್ಕೆ ಸೇರ್ಪಡೆಗೊಳಿಸುವು ದರಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಾಗುತ್ತದೆ.
– ಯೋಗೀಶ್ ಶೆಟ್ಟಿ ಜೆಪ್ಪು, ಮಂಗಳೂರು
ಸಂಘಟಿತ ಹೋರಾಟ ರೂಪುಗೊಳ್ಳಲಿ
ಖ್ಯಾತ ವಿದ್ಯಾ ಸಂಸ್ಥೆಗಳು, ಮೀನುಗಾರಿಕೆ ಬಂದರು ಸಹಿತ ಹಲವಾರು ಕಾರಣಗಳಿಂದಾಗಿ ಕರಾವಳಿ ಕರ್ನಾಟಕ ಇಂದು ಬೃಹತ್ತಾಗಿ ಬೆಳೆಯುತ್ತಿದೆ. ಆದರೆ ನಮ್ಮ ಪಾಲಿಗೆ ರೈಲ್ವೇ ಸೌಲಭ್ಯ ಇದ್ದರೂ ಇಲ್ಲದಂತಾಗಿದೆ. ಕರಾವಳಿ ರೈಲು ವಿಭಾಗಕ್ಕೆ ಸ್ವಂತ ಅಸ್ತಿತ್ವವನ್ನು ನೀಡಬೇಕಾಗಿದೆ. ನಮಗೆ ಅನುಕೂಲಕರವಾದ ನೈಋತ್ಯ ರೈಲ್ವೇ ವಲಯಕ್ಕಾದರೂ ಇದನ್ನು ಸೇರಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಆಡಳಿತಗಾರರು ಸಂಘಟಿತ ಹೋರಾಟ ನಡೆಸಬೇಕಿದೆ.
– ರಾಘವೇಂದ್ರ ಶಿರೂರು, ಬೈಂದೂರು
ರೈಲ್ವೇ ಅಭಿವೃದ್ಧಿಗೆ ಪೂರಕ
ಪಾಲ್ಗಾಟ್ ವಿಭಾಗದಿಂದ ಮಂಗಳೂರನ್ನು ಪ್ರತ್ಯೇಕಿಸಿ, ಕಾರವಾರದ ಅಸ್ನೋಟಿಯಿಂದ ತಲಪಾಡಿವರೆಗೆ, ಸುಬ್ರಹ್ಮಣ್ಯದ ಎಡಮಂಗಲ ವ್ಯಾಪ್ತಿವರೆಗಿನ ಮಂಗಳೂರು ರೈಲ್ವೇ ವಿಭಾಗ ರಚಿಸಬೇಕು. ಬೆಂಗಳೂರು, ಮೈಸೂರು, ಬಳ್ಳಾರಿ, ಕಲಬುರಗಿ, ಹುಬ್ಬಳ್ಳಿ. ಮಡ್ಗಾಂವ್ ಸಹಿತ ಮಂಗಳೂರು ವಿಭಾಗವನ್ನೂ ಸೇರಿಸಿದ ಹುಬ್ಬಳ್ಳಿ ಕೇಂದ್ರಿತ ಸಮಗ್ರ ನೈಋತ್ಯ ರೈಲ್ವೇ ವಲಯವನ್ನು ರಚಿಸಬೇಕು. ಇದು ರಾಜ್ಯದ ರೈಲ್ವೇ ಯೋಜನೆಗಳ ಅಭಿವೃದ್ಧಿಗೆ ಪೂರಕವಾಗಿದೆ. ನಮ್ಮ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.
– ಬಿ.ಎಲ್.ದಿನೇಶ್ ಕುಮಾರ್ ಅಶ್ವತ್ಥಪುರ, ಮೂಡಬಿದಿರೆ
ಸರಿಯಾದ ಸಮಯವಿದು
ಪಾಲಕ್ಕಾಡ್ ಲಾಬಿಯಿಂದಾಗಿ ಕೆಲವೊಂದು ಪ್ರದೇಶಗಳ ಹೊರತಾಗಿ ಕರ್ನಾಟಕದ ಬಹುತೇಕ ಊರುಗಳಿಗೆ ಮಂಗಳೂರಿನಿಂದ ರೈಲು ಸಂಚಾರವಿಲ್ಲದೆ ದ್ವೀಪದಂತಾಗಿದೆ. ಮಂಗಳೂರು ರೈಲ್ವೇ ವಿಭಾಗವನ್ನು ನೈಋತ್ಯ ರೈಲ್ವೇಯೊಂದಿಗೆ ವಿಲೀನ ಮಾಡುವುದಕ್ಕೆ ಇದು ಸರಿಯಾದ ಸಮಯ. ವಿಲೀನಗೊಂಡರೆ ಬೆಂಗಳೂರು ಮತ್ತಿತರ ಭಾಗಗಳಿಗೆ ರೈಲು ಸೇವೆ ಹೆಚ್ಚಿ, ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ಸಂಚಾರ ಸಾಧ್ಯವಾಗುತ್ತದೆ. ಮಂಗಳೂರು, ಉಡುಪಿ ಭಾಗದ ಜನರಿಗೆ ತುಂಬಾ ಸಹಕಾರಿಯಾಗುತ್ತದೆ.
– ಕಿರಣ್ ಟಿ.ವಿ., ತುಮಕೂರು
ತ್ರಿಶಂಕು ಸ್ಥಿತಿಗೆ ಪರಿಹಾರ
ಮಂಗಳೂರು ಭಾಗದ ರೈಲ್ವೇಯ ತ್ರಿಶಂಕು ಪರಿಸ್ಥಿತಿ ನಿವಾರಣೆಯಾಗಿ ಅಭಿವೃದ್ಧಿಯತ್ತ ಸಾಗಲು ಹಾಗೂ ಈ ಭಾಗದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಲು ನೈಋತ್ಯ ರೈಲ್ವೇಗೆ ಸೇರ್ಪಡೆಯಾಗುವುದು ಅವಶ್ಯವಾಗಿದೆ.
– ಅವಿಲ್ ಪಿಂಟೋ, ಕುಳಾಯಿ
ಜನಪ್ರತಿನಿಧಿಗಳು ಒಂದಾಗಿ ಹೋರಾಡಲಿ
ಹೊಸ ಮಾರ್ಗ, ರೈಲು ಮುಂತಾದ ವಿಚಾರ ಗಳಲ್ಲಿ 3 ವಿಭಾಗಗಳನ್ನು ಸಂಪರ್ಕಿಸಬೇಕಾದ ಅನಿವಾರ್ಯ ಬಂದೊ ದಗಿದೆ. ಈ ಸಮಸ್ಯೆ ಯಿಂದಾಗಿ ಮಂಗ ಳೂರು ರೈಲ್ವೇ ಅಭಿವೃದ್ಧಿಯಾಗುತ್ತಿಲ್ಲ. ಇದೀಗ ವಿಲೀನ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ. ದಕ್ಷಿಣ ವಲಯದ ಅಧೀನಕ್ಕೊಳ ಪಟ್ಟ ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇಗೆ ಸೇರಿಸಲು ನಮ್ಮ ಪ್ರತಿನಿಧಿಗಳು ಪಕ್ಷ ಭೇದ ಮರೆತು ಧ್ವನಿಯನ್ನು ಸಂಬಂಧಪಟ್ಟ ವರಿಗೆ ತಲುಪಿಸಬೇಕಾದ ತುರ್ತು ಅಗತ್ಯ ವಿದೆ. ಸಂಘಟಿತ ಹೋರಾಟದಿಂದ ಮಾತ್ರ ಪರಿಹಾರ ಸಾಧ್ಯ.
– ಎ. ಅಬೂಬಕರ್, ಅನಿಲಕಟ್ಟೆ, ವಿಟ್ಲ
ಸವಲತ್ತು ಕೇರಳ ಪಾಲು
ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಕರಾವಳಿ ಭಾಗದ ಬಹುತೇಕ ಶಾಸಕರು ಮತ್ತು ಸಂಸದರು ಇದ್ದರೂ, ಕರಾವಳಿಗರ ಹಲವಾರು ವರ್ಷಗಳ ಬೇಡಿಕೆಯಾದ ಮಂಗಳೂರು ರೈಲ್ವೇ ವಿಭಾಗವನ್ನು ನೈಋತ್ಯ ರೈಲ್ವೇಯೊಂದಿಗೆ ವಿಲೀನ ಮಾಡುವ ಪ್ರಕ್ರಿಯೆ ಇನ್ನೂ ಕೈಗೂಡದಿರುವುದು ನಾಚಿಕೆಗೇಡಿನ ಸಂಗತಿ. ಹಾಗಾದರೆ ನಮ್ಮ ಜನಪ್ರತಿನಿಧಿಗಳಿಗೆ ಕರಾವಳಿ ಭಾಗದ ಆರ್ಥಿಕಾಭಿವೃದ್ಧಿಯ ಇಚ್ಛಾಶಕ್ತಿ ಇಲ್ಲದೇ ಹೋಯಿತೇ?.
– ಗಣೇಶ್ ಪುತ್ರನ್, ಥಾಣೆ.
ಮುತುವರ್ಜಿ ವಹಿಸಿ
ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಸಮಸ್ಯೆ ತಲೆದೋರಿದೆ. ಇನ್ನಾದರೂ ಜನ ಪ್ರತಿನಿಧಿಗಳು ಮುತುವರ್ಜಿ ವಹಿಸಿ ಬೇಡಿಕೆ ಈಡೇರಿಸಲು ಮುಂದಾಗಬೇಕು.
– ಕೆ. ರಾಮಚಂದ್ರ ಆಚಾರ್ಯ, ಉಡುಪಿ
ಅಭಿಪ್ರಾಯ ತಿಳಿಸಿ
ಮೂರು ವಿಭಾಗಗಳಲ್ಲಿ ಹಂಚಿಹೋಗಿ ರುವ ಮಂಗಳೂರು ರೈಲ್ವೇಯು ಪೂರ್ತಿ ಯಾಗಿ ಅತ್ತ ನೈಋತ್ಯ ವಲಯಕ್ಕೂ ಸೇರದೆ ತ್ರಿಶಂಕು ಸ್ಥಿತಿಯಲ್ಲಿದೆ. ಆದ್ದರಿಂದ ಮಂಗ ಳೂರು ವ್ಯಾಪ್ತಿಯನ್ನು ನೈಋತ್ಯ ರೈಲ್ವೇಗೆ ಸೇರಿಸುವಂತೆ ಹಕ್ಕೊತ್ತಾಯ ಆರಂಭ ವಾಗಿದ್ದು, ಈ ನಿಟ್ಟಿನಲ್ಲಿ ಓದುಗರೂ ತಮ್ಮ ಅಭಿಪ್ರಾಯಗಳನ್ನು ಚುಟುಕಾಗಿ ಬರೆದು ನಿಮ್ಮ ಹೆಸರು, ಊರು, ತಾಲೂಕು ನಮೂದಿಸಿ ನಿಮ್ಮದೊಂದು ಭಾವಚಿತ್ರ ಸಹಿತ ಕಳುಹಿಸಿಕೊಡಿ.
ವಾಟ್ಸ್‌ಆ್ಯಪ್: 9900567000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.