ವಿಪಕ್ಷ ನಾಯಕ ಸ್ಥಾನದ ಮಾನ್ಯತೆ ವಿಚಾರ ವಾಗ್ವಾದ: ಕಾಂಗ್ರೆಸ್‌ನಿಂದ ಸಭಾತ್ಯಾಗ
Team Udayavani, Apr 1, 2021, 3:50 AM IST
ಲಾಲ್‌ಬಾಗ್: ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷದ ನಾಯಕನ ಆಯ್ಕೆಗೆ ಮಾನ್ಯತೆ ನೀಡುವ ವಿಚಾರವು ಬುಧವಾರ ನಡೆದ ಮನಪಾ ಸಭೆಯಲ್ಲಿ ಚರ್ಚೆಯಾಗಿ ಅನಂತರ ಅದು ವಾಗ್ವಾದಕ್ಕೆ ತಿರುಗಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಆದರೂ ಪಾಲಿಕೆ ಸಭೆಯು ಮುಂದುವರಿಯಿತು.
ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಅವಧಿಯ ಪ್ರಥಮ ಸಾಮಾನ್ಯ ಸಭೆ ನಡೆಯಿತು. ಹೊಸದಾಗಿ ಆಯ್ಕೆಯಾದ ಮುಖ್ಯ ಸಚೇತಕ, ಸ್ಥಾಯೀ ಸಮಿತಿ ಅಧ್ಯಕ್ಷರನ್ನು ಸಭೆಯಲ್ಲಿ ಮೇಯರ್ ಸ್ವಾಗತಿಸಿದರು. ಆಗ ಕಾಂಗ್ರೆಸ್ ಸದಸ್ಯ ಅಬ್ದುಲ್ ರವೂಫ್ ಮಾತನಾಡಿ, ಹೊಸತಾಗಿ ಆಯ್ಕೆಯಾದ ವಿಪಕ್ಷ ನಾಯಕರನ್ನು ಯಾಕೆ ಸ್ವಾಗತಿಸಿಲ್ಲ? ಎಂದು ಪ್ರಶ್ನಿಸಿದರು.
ಕಾನೂನು ಸಲಹೆಗೆ ಕಾಲಾವಶಕಾಶ ಅಗತ್ಯ :
ಇದಕ್ಕೆ ಮೇಯರ್ ಪ್ರತಿಕ್ರಿಯಿಸಿ, ವಿಪಕ್ಷ ನಾಯಕರಾಗಿ ಆಯ್ಕೆ ಕುರಿತ ಪತ್ರವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮುಖೇನ ಆಯುಕ್ತರ ಗಮನಕ್ಕೆ ತರಲಾಗಿದೆ. ಪಾಲಿಕೆಯಲ್ಲಿ ಈವರೆಗೆ ಈ ರೀತಿಯ ಸಂಪ್ರದಾಯ ಇರಲಿಲ್ಲ. ಚುನಾವಣೆ ನಡೆದ ಬಳಿಕ ವಿಪಕ್ಷ ಸದಸ್ಯರ ಸಮ್ಮತಿಯಂತೆ ಒಬ್ಬರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಮೇಯರ್ ಅವರನ್ನು ಘೋಷಣೆ ಮಾಡುತ್ತಾರೆ. ಇದೀಗ ಪತ್ರವನ್ನು ಆಯುಕ್ತರಿಗೆ ನೀಡಿದ ಕಾರಣ ವಿಪಕ್ಷ ನಾಯಕರನ್ನು ನಾನು ಅಧಿಕೃತವಾಗಿ ಮಾನ್ಯತೆ ಮಾಡಲು ಸಾಧ್ಯವಿಲ್ಲ. ಈ ಕುರಿತಂತೆ ಕಾನೂನು ಸಲಹೆ ಪಡೆಯಬೇಕಾದ ಕಾರಣ ಕಾಲಾವಕಾಶಬೇಕು ಎಂದರು.
ಇದಕ್ಕೂ ಮುನ್ನ ಪಾಲಿಕೆ ಸದಸ್ಯ ಅಬ್ದುಲ್ ರವೂಫ್ ಮಾತನಾಡಿ, ಪಾಲಿಕೆಯಲ್ಲಿ ಈವರೆಗೆ ಆಡಳಿತ ಮತ್ತು ವಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಡೆಯುತ್ತಿದೆ. ಇಲ್ಲಿ ಹೊಂದಾಣಿಕೆ ಮುಖ್ಯ. ಕಾನೂನು ವಿಚಾರ ಬದಿಗಿಟ್ಟು, ಈ ಸಮಸ್ಯೆಯನ್ನು ಇತ್ಯರ್ಥಪಡಿಸಿ ಎಂದು ಮೇಯರ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆಯಲ್ಲಿ ಮೇಯರ್ ಅವರದ್ದು ಮುಖ್ಯ ಸ್ಥಾನ. ವಿಪಕ್ಷ ನಾಯಕನ ಆಯ್ಕೆ ಕುರಿತಂತೆ ಮೇಯರ್ ಅವರಿಗೆ ಪತ್ರ ನೀಡಬೇಕಿತ್ತೇ ವಿನಾ ಆಯುಕ್ತರಿಗಲ್ಲ. ಇದೀಗ ಕಾಂಗ್ರೆಸ್ ಹೊಸ ಸಂಪ್ರದಾಯವೊಂದನ್ನು ಆರಂಭಿಸಿದೆ. ಇದರ ಪರಿಣಾಮ ಕಾನೂನು ಸಲಹೆ ಪಡೆಯುವ ಅಗತ್ಯ ಇದೆ ಎಂದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, ಈ ವಿಚಾರದಲ್ಲಿ ಗೊಂದಲವಾಗಿದೆ. ಕಾನೂನು ಪ್ರಕಾರ ಮಾತನಾಡುವುದಾದರೆ ಮುಖ್ಯ ಸಚೇತಕ ಎಂಬ ಹುದ್ದೆ ಇಲ್ಲ. ಹೀಗಿರುವಾಗ ಕಾನೂನಿನ ಬದಲು ಮೌಲ್ಯವನ್ನು ಎತ್ತಿ ಹಿಡಿಯಬೇಕು. ಮೇಯರ್ ವಿವೇಚನೆಯ ಮೂಲಕ ವಿಶೇಷ ಅಧಿಕಾರದಿಂದ ವಿನಯರಾಜ್ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾನ್ಯ ಮಾಡಬೇಕು ಎಂದರು. ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಹಿಂದಿನ ಅವಧಿಯಲ್ಲಿ ಮೇಯರ್ ಚುನಾವಣೆ ವೇಳೆ ಆಗ ಸದಸ್ಯರಾಗಿದ್ದ ರೂಪಾ ಡಿ. ಬಂಗೇರ ನಾಮಪತ್ರ ಸಲ್ಲಿಸಿದ್ದ ಸಂದರ್ಭ ಅವರ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ಮಾಡಲಾಗಿತ್ತು. ಆಗ ನಿಮ್ಮ ಮೌಲ್ಯ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು. ಉತ್ತರಿಸಿದ ಶಶಿಧರ ಹೆಗ್ಡೆ, ಆ ಘಟನೆಗೂ ಈ ಘಟನೆಗೂ ಸಂಬಂಧವಿಲ್ಲ. ಅವರ ನಾಮಪತ್ರ ರದ್ದಾಗಲು ನಾವು ಕಾರಣರಲ್ಲ. ಅದು ವಿಭಾಗೀಯ ಚುನಾವಣಾಧಿಕಾರಿ ಸಮ್ಮುಖದಲ್ಲಿ ನಡೆದ ಘಟನೆ. ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದರು.
ತೇಜೋವಧೆ ಮಾಡಬಾರದು :
ಪಾಲಿಕೆ ವಿಪಕ್ಷದ ನಾಯಕರಾಗಿ ಈಗಾಗಲೇ ಗುರುತಿಸಿಕೊಂಡಿರುವ ಎ.ಸಿ. ವಿನಯರಾಜ್ ಮಾತನಾಡಿ, ಬಲಾತ್ಕಾರವಾಗಿ ನಾನು ಅಧಿಕಾರ ಸ್ವೀಕರಿಸಲಿಲ್ಲ. ಮುನ್ಸಿಪಲ್ ಕಾಯ್ದೆ ಪ್ರಕಾರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಅನುಮತಿ ಕೋರುವ ಅವಕಾಶವಿದೆ. ಅಧಿಕಾರ ಸ್ವೀಕಾರಕ್ಕೂ ಮುನ್ನ ಆಯುಕ್ತರ ಜತೆ ಮಾತನಾಡಿದ್ದೆ. ಒಂದು ವೇಳೆ ಕಾನೂನಿನ ಅಡೆತಡೆ ಇದ್ದರೆ ಅವರು ಆ ವೇಳೆ ಮನವರಿಕೆ ಮಾಡಬೇಕಿತ್ತು. ವಿಪಕ್ಷ ನಾಯಕನ ಕೊಠಡಿಗೆ ವಿನಯರಾಜ್ ಎಂದು ಹೆಸರು ಅಳವಡಿಸಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಏಕಾಧಿಪತ್ಯದತ್ತ ಹೋಗಬಾರದು. ನನ್ನ ತೇಜೋವಧೆ ಮಾಡಬಾರದು. ವೈಯುಕ್ತಿಕವಾಗಿ ಯಾರನ್ನೂ ನಿಂದನೆ ಮಾಡಬಾರದು. ಈ ಹಿಂದೆ ಸ್ಮಾರ್ಟ್‌ಸಿಟಿಗೆ ವಿಪಕ್ಷದಿಂದ ಸದಸ್ಯನಾಗಿ ನನ್ನ ಆಯ್ಕೆ ನಡೆಸಿದಾಗಲೂ ಕೊನೆಯ ಕ್ಷಣ ನನ್ನ ಹೆಸರು ಕೈಬಿಟ್ಟಿದ್ದಾರೆ. ಇದೆಲ್ಲಾ ನನಗೆ ನೋವು ತಂದಿದೆ ಎಂದರು.
ಆಗ, ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ವಿಪಕ್ಷ ನಾಯಕರನ್ನಾಗಿ ಎ.ಸಿ. ವಿನಯರಾಜ್ ಆಯ್ಕೆ ಕುರಿತಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಪತ್ರ ಬರೆದಿದ್ದು, ನಮ್ಮ ಪಕ್ಷದಲ್ಲಿಯೂ ಜಿಲ್ಲಾಧ್ಯಕ್ಷರಿದ್ದಾರೆ. ಈ ಕುರಿತಂತೆ ಅವರಲ್ಲಿಯೂ ನಾವು ಮಾತನಾಡಬೇಕು ಎಂದರು. ಇದಕ್ಕೆ ಶಶಿಧರ ಹೆಗ್ಡೆ ಪ್ರತಿಕ್ರಿಯಿಸಿ, ವಿಪಕ್ಷದ ನಾಯಕನ ತೀರ್ಮಾನವನ್ನು ನಮ್ಮ ಪಕ್ಷದ ಮುಖಂಡರು ಮಾಡಬೇಕೇ ವಿನಾ ಆಡಳಿತ ಪಕ್ಷದ ಮುಖಂಡರು ಮಾಡಲು ಸಾಧ್ಯವೇ? ಎಂದರು. ನಾಮ ನಿರ್ದೇಶಿತ ಸದಸ್ಯ ರಾಧಾಕೃಷ್ಣ ಮಾತನಾಡಿ, ಈ ವಿಚಾರದಲ್ಲಿ ತಪ್ಪಾಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ್ದು ಸರಿಯಲ್ಲ. ಕಾನೂನಿನಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆಯುಕ್ತರಿಗೆ ಪತ್ರ ಬರೆ ಯುವ ಹಾಗಿಲ್ಲ. ನಿಮ್ಮ ತಪ್ಪಿನಿಂದಾಗಿ ಪ್ರಜಾಪ್ರಭುತ್ವದ ಮೌಲ್ಯ ಕುಸಿದಿದೆ ಎಂದರು.
ಆಗ ಕಾಂಗ್ರೆಸ್‌ನ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ವಿಪಕ್ಷ ಸ್ಥಾನವನ್ನು ತೆಗೆ ಯುವ ಕೆಲಸ ಮಾಡಬಾರದು ಎಂದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷ, ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಸದನದ ಹೊರಗಡೆ ದ್ವಾರದಲ್ಲಿ ಬಿಜೆಪಿ ವಿರುದ್ಧ ಘೋಷಣೆ ಕೂಡ ಕೂಗಿದರು.
ಸಮರ್ಪಕ ಕುಡಿಯುವ ನೀರು: ಸಭೆ :
ತುಂಬೆಯಲ್ಲಿ ಸದ್ಯ ನೀರಿದ್ದರೂ ನಗರದ ಎಲ್ಲ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಈ ಕುರಿತಂತೆ ಪಾಲಿಕೆ ಅಧಿಕಾರಿಗಳು ತತ್‌ಕ್ಷಣ ಗಮನಹರಿಸಬೇಕು. ಪಾಲಿಕೆ ವ್ಯಾಪ್ತಿಯ ತಲಾ 20 ವಾರ್ಡ್‌ಗಳಂತೆ ಅಧಿಕಾರಿಗಳು ಸಭೆ ನಡೆಸಿ ನೀರಿನ ಸಮಸ್ಯೆ ಬಹರಿಸಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ತುಂಬೆಯಿಂದ ಬರುವ ನೀರು ಸುರತ್ಕಲ್ ಭಾಗಕ್ಕೆ ಸಮರ್ಪಕವಾಗಿ ಬರುತ್ತಿಲ್ಲ. ಪಣಂಬೂರಿನಿಂದ ಬರುವ ನೀರು ರಭಸ ಇಲ್ಲ. ಈ ತಿಂಗಳಿನಲ್ಲಿ ವಾರಕ್ಕೆ 2 ಬಾರಿ ಮಾತ್ರ ನೀರು ಬಂದಿದೆ. ಟ್ಯಾಂಕರ್ ಮೂಲಕದ ನಾಲ್ಕು ದಿನಗಳಿಗೊಮ್ಮೆ ನೀರು ನೀಡಲಾಗುತ್ತದೆ. ಅಧಿಕಾರಿಗಳ ಬಳಿ ಈ ಕುರಿತು ದೂರು ನೀಡಿದರೆ ಸ್ಪಂದಿಸುತ್ತಿಲ್ಲ. ಬಹುತೇಕ ವಾರ್ಡ್‌ಗಳಲ್ಲಿ ಈ ಸಮಸ್ಯೆ ಇದ್ದು, ಎತ್ತರ ಪ್ರದೇಶಕ್ಕೆ ನೀರು ತಲುಪುತ್ತಿಲ್ಲ. ಇದೇ ಕಾರಣಕ್ಕೆ ಟ್ಯಾಂಕ್‌ನಲ್ಲಿ ಪೂರ್ತಿ ನೀರು ತುಂಬಿದ ಬಳಿಕ ನೀರು ಬಿಡಬೇಕು ಎಂದು ಪಾಲಿಕೆ ಸದಸ್ಯರು ಮೇಯರ್ ಗಮನಕ್ಕೆ ತಂದರು. ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿ ನಡುವೆಯೇ ಕಲಾಪ ಮುಂದುವರಿಸಿದರು. ಉಪ ಮೇಯರ್ ಸುಮಂಗಲಾ ರಾವ್, ಆಯುಕ್ತ ಅಕ್ಷಯ್ ಶ್ರೀಧರ್, ಸ್ಥಾಯೀ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.
ಪಚ್ಚನಾಡಿ: 17.50 ಎಕರೆ ಭೂ ಸ್ವಾಧೀನಕ್ಕೆ ನಿರ್ಧಾರ :
ಪಚ್ಚನಾಡಿಯಲ್ಲಿ ಘನತ್ಯಾಜ್ಯ ಭೂ ಕುಸಿತದಿಂದ ನಿರ್ವಸಿತ ಸಂತ್ರಸ್ತರ 17.50 ಎಕರೆ ಪ್ರದೇಶದ ಭೂ ಸ್ವಾಧೀನಕ್ಕೆ ಪಾಲಿಕೆ ತೀರ್ಮಾನಿಸಿದ್ದು, ಇದಕ್ಕೆ ಅವಶ್ಯವಿರುವ ಮೊತ್ತವನ್ನು ಪಾಲಿಕೆಯ ಸ್ವಂತ ನಿಧಿಯಿಂದ ಭರಿಸಿಕೊಳ್ಳಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಚ್ಚನಾಡಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಘನತ್ಯಾಜ್ಯ ಭೂಕುಸಿತವಾಗಿ ಸಾರ್ವಜನಿಕ-ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿತ್ತು. ಭೂ ಕುಸಿತದಿಂದ ಹಾನಿ ಉಂಟಾದ ಸಾರ್ವಜನಿಕ ಮನೆ/ಜಮೀನುಗಳಿಗೆ ಪರಿಹಾರ ಒದಗಿಸುವ ವಿಚಾರದಲ್ಲಿ ನ್ಯಾಯಾಲಯ ನೀಡಿದ ನಿರ್ದೇಶನದಂತೆ ಸಂತ್ರಸ್ಥರಿಗೆ ಒಟ್ಟು 14.8 ಕೋಟಿ ರೂ. ಮಧ್ಯಂತರ ಪರಿಹಾರ ನೀಡಲಾಗಿದೆ. ಈ ಪ್ರದೇಶದಲ್ಲಿ ಉಂಟಾದ ಘಟನೆಗೆ ಸಂಬಂಧಿಸಿ ಭೂಮಿಯನ್ನು ಪಾಲಿಕೆಯು ಸ್ವಾಧೀನ ಪಡೆದುಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದ ಆದೇಶದ ಅನ್ವಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರಕಾರವು ಘನತ್ಯಾಜ್ಯ ಭೂ ಕುಸಿತದಿಂದ ನಿರ್ವಸಿತರಾದ ಸಂತ್ರಸ್ತರ 17.50 ಎಕರೆ ಪ್ರದೇಶದ ಭೂ ಸ್ವಾಧೀನಕ್ಕೆ ಅವಶ್ಯವಿರುವ ಮೊತ್ತವನ್ನು ಪಾಲಿಕೆಯ ಸ್ವಂತ ನಿಧಿಯಿಂದ ಭರಿಸುವ ಷರತ್ತಿಗೊಳಪಟ್ಟು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2013 ಅನ್ವಯ ಭೂ ಸ್ವಾಧೀನಪಡಿಸಿಕೊಳ್ಳಲು ಸರಕಾರ ಅನುಮೋದನೆ ನೀಡಿದೆ.
60 ಮಂದಿ ಹೆಚ್ಚುವರಿ ಎಂಪಿಡಬ್ಲ್ಯು ಸಿಬಂದಿ :
ಪಾಲಿಕೆ ಆರೋಗ್ಯ ವಿಭಾಗದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 60 ಮಂದಿ ಎಂಪಿಡಬ್ಲ್ಯು ಸಿಬಂದಿಯೊಂದಿಗೆ ಹೆಚ್ಚುವರಿಯಾಗಿ 60 ಮಂದಿ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳು ನಿರ್ಧರಿಸಲಾಗಿದೆ.
ಮಂಗಳೂರಿನ ರಸ್ತೆಗಳಿಗೆ 65,000 ಎಲ್‌ಇಡಿ ಬೀದಿದೀಪ ! :
ಲಾಲ್‌ಬಾಗ್: ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ವರ್ಷಾಂತ್ಯದೊಳಗೆ 65,000 ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲಾಗುವುದು ಎಂದು ಗುತ್ತಿಗೆ ಪಡೆದ ಸಂಸ್ಥೆಯ ಪ್ರೊಜೆಕ್ಟ್ ಎಂಜಿನಿಯರ್ ಸುರೇಶ್ ರಾಥೋಡ್ ಹೇಳಿದರು.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಎಲ್‌ಇಡಿ ಬಲ್ಬ್ ಅಳವಡಿಸುವ ಕುರಿತಂತೆ ಈಗಾಗಲೇ ಸರ್ವೇ ಕಾರ್ಯ ಆರಂಭವಾಗಿದೆ. ಸದ್ಯ 8,250 ಎಲ್‌ಇಡಿ ಬಲ್ಬ್ಗೆ ಸರ್ವೇ ನಡೆದಿದ್ದು, 60 ವಾರ್ಡ್‌ಗಳನ್ನು ಆರು ವಲಯಗಳಾಗಿ ವಿಂಗಡಿಸಲಾಗಿದೆ. ನಗರದ 9 ವಾರ್ಡ್‌ಗಳಲ್ಲಿ ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಮಾ. 9ಕ್ಕೆ ಸರ್ವೇ ಆರಂಭವಾಗಿದ್ದು, ಎಪ್ರಿಲ್ 20ರೊಳಗೆ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಸರ್ವೇ ಕಾರ್ಯ ಪೂರ್ಣಗೊಂಡ ಬಳಿಕ 8 ತಿಂಗಳುಗಳ ಅವಧಿಯಲ್ಲಿ ಎಲ್‌ಇಡಿ ಬಲ್ಬ್ ಅಳವಡಿಸುವ ಕೆಲಸ ನಡೆಯಲಿದೆ. ಎಲ್‌ಇಡಿ ಬಲ್ಬ್ ಅಳವಡಿಕೆಯಿಂದ ಶೇ. 60ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ರಸ್ತೆಗೆ ಅನುಗುಣವಾಗಿ ಬಲ್ಬ್ಗಳ ಸಾಮರ್ಥ್ಯ ಇರಲಿದೆ. ಜನನಿಬಿಡ ರಸ್ತೆ, ಒಳರಸ್ತೆ, ಸದಾ ವಾಹನ ಸಂಚಾರದ ರಸ್ತೆ ಸಹಿತ ರಸ್ತೆಗಳನ್ನು ವಿಂಗಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ವೈಜ್ಞಾನಿಕ ರೀತಿಯಲ್ಲಿ ಬಲ್ಬ್ಗಳ ಸಾಮರ್ಥ್ಯ ಇರಲಿದೆ. ಅರ್ಥಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೆಸ್ಕಾಂ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಒಂದು ಬಾರಿ ಎಲ್‌ಇಡಿ ಬಲ್ಬ್ ಅಳವಡಿಸಿದ ಬಳಿಕ ಮುಂದಿನ ಏಳು ವರ್ಷಗಳವರೆಗೆ ನಮ್ಮ ಸಂಸ್ಥೆ ಅದನ್ನು ನಿರ್ವಹಣೆ ಮಾಡುತ್ತೇವೆ ಎಂದರು.
ಪಾಲಿಕೆ ಸದಸ್ಯ ಕಿರಣ್ ಕುಮಾರ್ ಪ್ರತಿಕ್ರಿಯಿಸಿ, ವಿದ್ಯುತ್ ಕಂಬದಲ್ಲಿ ಈಗಾಗಲೇ ಇರುವಂತಹ ಬೀದಿ ದೀಪಗಳನ್ನು ಏನು ಮಾಡಲಾಗುತ್ತದೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಈಗಿರುವ ಬೀದಿ ದೀಪಗಳು ಹಳೆಯದಾಗಿದ್ದು, ಅದರಲ್ಲಿ ಮರ್‌ಕ್ಯುರಿ ಕಂಟೆಂಟ್ ಒಳಗೊಂಡಿದೆ. ಇದನ್ನು ಗುಜುರಿಗೆ ಹಾಕಬೇಕಷ್ಟೇ ಎಂದರು. ಕಿರಣ್ ಕುಮಾರ್ ಉತ್ತರಿಸಿ, ಈಗಿರುವ ಬೀದಿ ದೀಪಗಳನ್ನು ಸದ್ಯಕ್ಕೆ ಗುಜುರಿಗೆ ಹಾಕುವುದು ಬೇಡ. ಅಗತ್ಯ ಬಂದಾಗ ಅಳವಡಿಸಬಹುದು ಎಂದು ಮೇಯರ್ ಅವರ ಗಮನಕ್ಕೆ ತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.