ಬೆಳಗ್ಗೆ 8ರಿಂದ ಮತ ಎಣಿಕೆ; ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ-ವ್ಯಾಪಕ ಭದ್ರತೆ
ಮನಪಾ 60 ವಾರ್ಡ್‌ಗಳ 180 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
Team Udayavani, Nov 14, 2019, 4:02 AM IST
ಮಹಾನಗರ: ಮನಪಾ 60 ವಾರ್ಡ್‌ಗಳಿಗೆ ಮಂಗಳವಾರ ನಡೆದ ಮತದಾನದ ಮತ ಎಣಿಕೆ ಕಾರ್ಯವು ಮಂಗಳೂರಿನ ರೊಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ನ. 14ರಂದು ಬೆಳಗ್ಗೆ 8ರಿಂದ ಆರಂಭ ಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.ಇದರೊಂದಿಗೆ 20 ದಿನಗಳಿಂದ ನಡೆಯುತ್ತಿದ್ದ ಪಾಲಿಕೆ ಚುನಾವಣೆ ಪ್ರಕ್ರಿಯೆಗಳಿಗೆ ತೆರೆ ಬೀಳಲಿದ್ದು, ಪಾಲಿಕೆಯಲ್ಲಿ ಮುಂದಿನ ಅವಧಿಯ ಅಧಿಕಾರದ ಚುಕ್ಕಾಣಿ ಯಾವ ಪಕ್ಷದ ಪಾಲಿಗೆ ಒಲಿಯಬಹುದು ಎನ್ನುವುದು ಗೊತ್ತಾಗಲಿದೆ.
ಕಣದಲ್ಲಿರುವ 180 ಅಭ್ಯರ್ಥಿಗಳ ಪೈಕಿ ಮತದಾರರ ತೀರ್ಪು ಯಾರ ಪರವಾಗಿದೆ ಎಂಬ ಕುತೂಹಲಕ್ಕೆ ಗುರುವಾರ ಬೆಳಗ್ಗೆ ಉತ್ತರ ದೊರೆಯಲಿದೆ. ಬೆಳಗ್ಗೆ 7.45ಕ್ಕೆ ಅಭ್ಯರ್ಥಿ/ ಚುನಾವಣ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರವುಗೊಳಿಸಲಾಯಿತು. 8 ಗಂಟೆಯಿಂದ ಚುನಾವಣಾಧಿಕಾರಿಗಳ ಕೊಠಡಿವಾರು ಏಕಕಾಲದಲ್ಲಿ ಮತ ಎಣಿಕೆ ಆರಂಭವಾಗಲಿದೆ. ರೊಸಾರಿಯೋದ ಮೊದಲನೇ ಮಹಡಿಯ ಒಟ್ಟು 3 ಕೊಠಡಿಗಳನ್ನು ಭದ್ರತಾ ಕೊಠಡಿಯಾಗಿ ನಿಯುಕ್ತಿಗೊಳಿಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯು ಎಣಿಕೆ ಮೇಜುಗಳ ಸಂಖ್ಯೆಗಳ ಅನುಸಾರ ಎಣಿಕೆ ಏಜೆಂಟರ್‌ಗಳನ್ನು ನೇಮಿಸಲು ಅವಕಾಶ ನೀಡಲಾಗಿದೆ. ಚುನಾವಣಾಧಿಕಾರಿವಾರು ಒಟ್ಟು 12 ಮತ ಎಣಿಕೆ ಕೊಠಡಿ ತೆರೆಯಲಾಗಿದೆ. ಪ್ರತೀ ಚುನಾವಣಾಧಿಕಾರಿಯವರ ಮೇಜಿನಲ್ಲಿ ಅಂಚೆ ಮತಪತ್ರಗಳ ಎಣಿಕೆ ಮೊದಲಿಗೆ ಪ್ರಾರಂಭಿಸಲಾಗುವುದು. ಅನಂತರ ಟೇಬಲಿನಲ್ಲಿ ಮತ ಎಣಿಕೆ ನಡೆಯಲಿದೆ.
60 ಟೇಬಲ್-183 ಸಿಬಂದಿ
ಪ್ರತೀ ಚುನಾವಣಾಧಿಕಾರಿ ಕೊಠಡಿಗೆ 5 ಟೇಬಲ್ ವ್ಯವಸ್ಥೆ ಮಾಡ ಲಾಗಿದ್ದು, ಒಟ್ಟು 60 ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಎಣಿಕೆ ಸಹಾಯಕ, ಓರ್ವ ಗ್ರೂಪ್ ಡಿ ನೌಕರರನ್ನು (ಮತ ಎಣಿಕೆ ಮೇಜಿಗೆ ಹಾಗೂ ಮತ ಎಣಿಕೆ ಮೇಜಿಂದ ಮತಯಂತ್ರ ಒಯ್ಯಲು) ನೇಮಿಸಲಾಗಿದೆ. ಒಟ್ಟು 53 ಮೇಲ್ವಿಚಾರಕರು, 53 ಎಣಿಕೆ ಸಹಾಯಕರು, 53 ಗ್ರೂಪ್ ಡಿ ಸಿಬಂದಿ ಸೇರಿದಂತೆ ಒಟ್ಟು 183 ಸಿಬಂದಿಗಳನ್ನು ನಿಯುಕ್ತಿ ಮಾಡಲಾಗಿದೆ. ಪ್ರತೀ ಚುನಾವಣಾಧಿಕಾರಿಯವರ ಕೊಠಡಿಯಲ್ಲಿ ತಲಾ ಒಂದೊಂದು ಟ್ಯಾಬುಲೇಷನ್ ಟೇಬಲ್ ರೆಡಿ ಮಾಡಲಾಗಿದೆ. ಇದಕ್ಕಾಗಿ ಇಬ್ಬರು ಟ್ಯಾಬುಲೇಷನ್ ಸಹಾಯಕ ಸಿಬಂದಿ ನೇಮಿಸಲಾಗಿದೆ.
ವಾರ್ಡ್‌ನ ಮತಗಳ ಎಣಿಕೆ ಪೂರ್ಣಗೊಂಡ ಬಳಿಕ ಟ್ಯಾಬುಲೇಷನ್ ಮಾಡಿ ನಿಯಮಾನುಸಾರ ಚುನಾವಣಾ ಧಿಕಾರಿ ಫಲಿತಾಂಶ ಘೋಷಿ ಸಲಾಗುತ್ತದೆ. ಮತ ಎಣಿಕೆ ಪೂರ್ಣಗೊಂಡ ಬಳಿಕ ಎಲ್ಲ ಇವಿಎಂಗಳನ್ನು, ಶಾಸನ ಬದ್ಧವಲ್ಲದ ಲಕೋಟೆಗಳನ್ನು ಮೊಹರು ಮಾಡಿ ಜಿಲ್ಲಾ ಖಜಾನೆಯಲ್ಲಿ ಡೆಪಾಸಿಟ್ ಮಾಡಲಾಗುತ್ತದೆ.
ಮತಯಂತ್ರಗಳಿಗೆ ವಿಶೇಷ ಭದ್ರತೆ
ಮಂಗಳವಾರ ಮತದಾನ ಮುಗಿದ ಬಳಿಕ ಇವಿಎಂ ಮೆಷಿನ್ ಅನ್ನು ಬಿಗಿಭದ್ರತೆಯಲ್ಲಿ ರೊಸಾರಿಯೋದ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಮತಯಂತ್ರಗಳಿಗೆ ಪೊಲೀಸರಿಂದ ವಿಶೇಷ ಭದ್ರತೆಯನ್ನೂ ಒದಗಿಸಲಾಗಿದೆ. ಮತಯಂತ್ರಗಳನ್ನು ಇರಿಸಲಾಗಿರುವ ರೊಸಾರಿಯೋ ಮುಖ್ಯದ್ವಾರದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಚುನಾವಣ ಕರ್ತವ್ಯನಿರತ ಸಿಬಂದಿಹೊರತುಪಡಿಸಿ ಅನ್ಯರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಚುನಾವಣಾಧಿಕಾರಿಗಳು- ಪೊಲೀಸ್ ಸಿಬಂದಿಗೆ ಬುಧವಾರವೂ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳಿಂದ ನಿಯೋಜನೆಗೊಂಡಿರುವ, ಚುನಾವಣ ಆಯೋಗದಿಂದ ಅಧಿಕೃತವಾಗಿ ಗುರುತುಪತ್ರ ಪಡೆದಿರುವ ಎಣಿಕೆ ಏಜೆಂಟರ್, ಅಭ್ಯರ್ಥಿಗಳಿಗೆ ಮತಎಣಿಕೆ ಕೇಂದ್ರದಲ್ಲಿರಲು ಅವಕಾಶ ನೀಡಲಾಗಿದೆ. ರೊಸಾರಿಯೊ ಶಾಲೆಯ ಸುತ್ತಮುತ್ತ ಪಾರ್ಕಿಂಗ್ ನಿಷೇಧಿಸಲಾಗಿದೆ.
ಕುತೂಹಲ ಕೆರಳಿಸಿರುವ ಸ್ಪರ್ಧಾ ವಾರ್ಡ್
ಈ ಬಾರಿಯ ಚುನಾವಣೆಯಲ್ಲಿ ಕೆಲವು ವಾರ್ಡ್‌ಗಳು ಕುತೂಹಲದ ಕಣವಾಗಿ ಗುರುತಿಸಿಕೊಂಡಿವೆ. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಕಾರ್ಪೊರೇಟರ್ ಆಶಾ ಡಿ’ಸಿಲ್ವಾ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮೇಯರ್ ಜೆಸಿಂತ ಆಲ್ಫೆ†ಡ್ ಸ್ಫರ್ಧೆಯ ಫಳ್ನೀರ್ ವಾರ್ಡ್ ಕುತೂಹಲ ಕೆರಳಿಸಿದೆ.
ಉಳಿದಂತೆ, ಮಾಜಿ ಮೇಯರ್ ಗುಲ್ಜಾರ್ ಬಾನು ಕಾಂಗ್ರೆಸ್‌ನಿಂದ ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಾಟಿಪಳ್ಳ ಉತ್ತರ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಮೇಯರ್ ಕೆ. ಅಶ್ರಫ್ ಅವರು ಈ ಬಾರಿ ಪೋರ್ಟ್ ವಾರ್ಡ್‌ನಲ್ಲಿ ಪಕ್ಷೇತರವಾಗಿ ನಿಂತ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳು ಕುತೂಹಲ ಕೆರಳಿಸಿವೆ.
ಈ ಮಧ್ಯೆ ಕಳೆದ ಬಾರಿ ಕಣ್ಣೂರು ಕ್ಷೇತ್ರದಿಂದ ಕಾರ್ಪೊರೇಟರ್ ಆಗಿ, ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ಸುಧೀರ್ ಶೆಟ್ಟಿ ಕಣ್ಣೂರು ಸ್ಫರ್ಧಿಸಿದ ಕೊಡಿಯಾಲಬೈಲ್ ವಾರ್ಡ್, ಮಾಜಿ ಮೇಯರ್ ಶಶಿಧರ ಹೆಗ್ಡೆ ಸ್ಪರ್ಧಿಸಿದ ದೇರೆಬೈಲು ದಕ್ಷಿಣ, ನಿಕಟಪೂರ್ವ ಮೇಯರ್ ಭಾಸ್ಕರ್ ಸ್ಪರ್ಧಿಸಿದ ಪದವು ಪೂರ್ವ ವಾರ್ಡ್, ಇಬ್ಬರು ನಿಕಟಪೂರ್ವ ಕಾರ್ಪೊರೇಟರ್‌ಗಳ ಸ್ಪರ್ಧಾಕಣವಾಗಿದ್ದ ಕಂಕನಾಡಿ ವಾರ್ಡ್ ಕೂಡ ಕುತೂಹಲದ ಕಣವಾಗಿ ಮಾರ್ಪಟ್ಟಿದ್ದು, ಎಲ್ಲರ ಚಿತ್ತ ಇಂದಿನ ಫಲಿತಾಂಶದತ್ತ ಹೊರಳಿದೆ.
ಡಿಸಿ ಸಿಂಧೂ ಬಿ. ರೂಪೇಶ್ ಮತ ಎಣಿಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.