ಸ್ಥಳ ಸಮೀಕ್ಷೆ ನಡೆಸಿ ಮನೆ ನಂಬರ್ ಹಸ್ತಾಂತರ: ಮೇಯರ್
Team Udayavani, Jul 31, 2018, 12:42 PM IST
*ಅನಧಿಕೃತ ನಿರ್ಮಾಣಕ್ಕೆ ತಡೆಗೆ ಕ್ರಮ
*ಅಧಿಕ ನೀರಿನ ಬಿಲ್ ಬಗ್ಗೆ ಪ್ರಸ್ತಾಪ
*ಅಕ್ರಮ ಕಟ್ಟಡ ತೆರವಿಗೆ ಒತ್ತಾಯ
ಮಹಾನಗರ: ಬಡವರಿಗೆ ಕಳೆದ ಕೆಲವು ದಿನಗಳಿಂದ ಮನೆ ನಂಬರ್ ನೀಡದೆ ಸತಾಯಿಸಲಾಗುತ್ತಿದ್ದು, ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಬಡವರು ಮನೆ ನಂಬರ್‌ಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಮನಾಪ ವಿಪಕ್ಷ ಸದಸ್ಯರು ಸೋಮವಾರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು. ಮೇಯರ್ ಭಾಸ್ಕರ್ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯರು, ಈ ಸಮಸ್ಯೆ ಪರಿಹರಿಸಬೇಕಾದ ಪಾಲಿಕೆ ಆಡಳಿತ ಮೌನವಾಗಿದೆ ಎಂದು ಆರೋಪಿಸಿದರು. ಚರ್ಚೆಯ ಬಳಿಕ ಮಾತನಾಡಿದ ಮೇಯರ್, ಈ ಬಗ್ಗೆ ಸ್ಥಳ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಡವರಿಗೆ ಅನ್ಯಾಯವಾಗದಿರಲಿ
ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದವರು ಪಾಲಿಕೆಗೆ ತೆರಿಗೆ ವಂಚಿಸಿ ಹಲವಾರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ, ಬಡವರು ಮನೆ ನಂಬರ್‌ಗಾಗಿ ಕಾದು ಕುಳಿತು, ಕೊಳ್ಳುವ ಪ್ರಮೇಯ ಎದುರಾಗಿದೆ. ಕನಿಷ್ಠ ಐದು ಸೆಂಟ್ಸ್ ಜಾಗದಲ್ಲಿ ಸಾವಿರ ಚದರ ಅಡಿ ಮನೆ ಮಾಡಿದವರಿಗೆ ಮನೆ ನಂಬರ್ ನೀಡಲು ಯಾವುದೇ ತೊಂದರೆ ನೀಡ ಬಾರದು ಎಂದು ಆಗ್ರಹಿಸಿ ಮೇಯರ್ ಪೀಠದೆದುರು ತೆರಳಿ ಪ್ರತಿಭಟಿಸಿದರು. ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಜನಸಾಮಾನ್ಯರು 112ಸಿ ಪ್ರಕಾರ ಮನೆ ನಂಬ್ರ ಪಡೆಯಲು ಬರುತ್ತಾರೆ. ಆದರೆ ಕೆಲವು ದಿನದಿಂದ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದರು. ಬಿಜೆಪಿ ಸದಸ್ಯರಾದ ರಾಜೇಶ್, ರೂಪಾ ಡಿ. ಬಂಗೇರ, ರಾಜೇಂದ್ರ, ವಿಜಯ್ ಕುಮಾರ್ ಶೆಟ್ಟಿ, ಮಧುಕಿರಣ್ ಧ್ವನಿಗೂಡಿಸಿದರು.
112 ಸಿ ತಾತ್ಕಾಲಿಕ ತಡೆ
ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಅನಧಿಕೃತ ನಿರ್ಮಾಣ ಕುರಿತು ಈ ಹಿಂದೆಯೂ ಹಲವು ಬಾರಿ ಚರ್ಚೆ ನಡೆದಿದೆ. ಪರವಾನಿಗೆ ಇಲ್ಲದೆ ಮನೆ ಕಟ್ಟಿ ಬಳಿಕ 112ಸಿ ಅಡಿಯಲ್ಲಿ ನಿರ್ಮಾಣಕ್ಕೆ ಅಗತ್ಯ ಸಂಪರ್ಕಗಳನ್ನು ಪಡೆಯಲು ಅವಕಾಶ ಇದೆ ಎಂಬ ಕಾರಣಕ್ಕೆ ಹಲವು ಜನರು ನಿಯಮಗಳನ್ನು ಉಲ್ಲಂಸಿ ಕಟ್ಟಡ ಅಥವಾ ಮನೆಗಳನ್ನು ನಿರ್ಮಿಸಿದ ಹಲವು ಪ್ರಕರಣಗಳಿವೆ. ಈ ಸಂದರ್ಭದಲ್ಲಿ ಸೆಟ್‌ಬ್ಯಾಕ್, ವಲಯ ದೃಢೀಕರಣ ಮುಂತಾದ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ 7,444 ಕಟ್ಟಡಗಳು ದುಪ್ಪಟ್ಟು ತೆರಿಗೆ ನೀಡಿ ಮನೆ ನಂಬರ್‌ವನ್ನು ಪಡೆದುಕೊಂಡಿವೆ. ಇದು ಗಂಭೀರ ವಿಷಯ. ಈ ಮೂಲಕ ಕಾಯಿದೆ ದುರುಪ ಯೋಗವಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಅನಧಿಕೃತ ನಿರ್ಮಾಣಗಳಿಗೆ 112ಸಿ ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು ಎಂದರು. ಬಡವರ ಮನೆಗೆ ಈ ನಿಯಮವನ್ನು ಸರಳೀಕರಿಸಬೇಕು ಎಂದು ಸದಸ್ಯರು ಮತ್ತೆ ಪಟ್ಟು ಹಿಡಿದರು. ಮೇಯರ್ ಭಾಸ್ಕರ ಕೆ. ಪ್ರತಿಕ್ರಿಯಿಸಿ, ಈ ಕುರಿತು ಸ್ಥಳ ಪರಿಶೀಲಿಸಿ ಮನೆ ನಂಬರ್ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
300 ರೂ. ನೀರಿನ ಬಿಲ್ 30,000 ಬಂದಿದೆ!
ಪ್ರಕಾಶ್ ಬಿ. ಸಾಲ್ಯಾನ್ ಮಾತನಾಡಿ, ಪಾಲಿಕೆಯಲ್ಲಿ ಇತ್ತೀಚೆಗೆ ನೀರಿನ ಬಿಲ್ ಮೂರು ಪಟ್ಟು ಅಧಿಕ ರೂಪದಲ್ಲಿ ಬರುತ್ತಿದೆ. 300 ರೂ. ನೀರಿನ ಬಿಲ್ ಬರುವವರಿಗೆ 30,000 ರೂ., ಕೆಲವರಿಗೆ ಲಕ್ಷದವರೆಗೂ ಬಿಲ್ ಬಂದಿದೆ ಎಂದರು.
ಪ್ರೇಮಾನಂದ ಶೆಟ್ಟಿ ಮಾತನಾಡಿ, ನೀರಿನ ಬಿಲ್ ನೋಡಿ ಮನೆಯಲ್ಲಿರುವ ಹಿರಿಯರು ತಲೆತಿರುಗಿ ಬೀಳುವ ಪರಿಸ್ಥಿತಿ ಇದೆ ಎಂದರು. ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ನೀರಿನ ಬಿಲ್ ಮೊತ್ತ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.
ಅಕ್ರಮ ಕಟ್ಟಡ ತೆರವು ಯಾಕಿಲ್ಲ?
ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ನಿಯಮ ಉಲ್ಲಂ ಸಿ ನಿರ್ಮಾಣವಾದ ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿ ನ್ಯಾಯಾಲಯದಿಂದಲೇ 58 ಕಟ್ಟಡ ತೆರವುಗೊಳಿಸಲು ಆದೇಶವಾಗಿದೆ. ಆದರೆ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾಕೆ ಕೈಕಟ್ಟಿ ಕುಳಿತಿದ್ದಾರೆ ಎಂದು ಪ್ರಶ್ನಿಸಿದರು.
ಅಧಿಕಾರಿ ಮಾತನಾಡಿ, ಕೆಲವೊಂದು ತಾಂತ್ರಿಕ ತೊಂದರೆ, ಭಾಗಶಃ ಕಟ್ಟಡ ತೆರವಿನ ಕುರಿತು ಕೆಲವು ಸಮಸ್ಯೆ ಎದುರಾಗಿದೆ ಎಂದರು. ಮೇಯರ್ ಭಾಸ್ಕರ್ ಮಾತನಾಡಿ, ಅಕ್ರಮ ಕಟ್ಟಡ ತೆರವಿಗೆ ಸಂಬಂಧಿಸಿ ಒತ್ತಡಕ್ಕೆ ಮಣಿಯುವುದು ಬೇಡ. ತೆರವಿನ ವೇಳೆ ಯಾವುದೇ ಸದಸ್ಯರು ಅಡ್ಡಿಪಡಿಸಬಾರದು ಎಂದು ಹೇಳಿದರು.
ಪಾಲಿಕೆ ಸಭೆಯಷ್ಟೇ ಮೇಯರ್ ಸಾಧನೆ
ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಮಾತನಾಡಿ, ಪಾಲಿಕೆ ಆಡಳಿತ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಏನು ನಡೆಯುತ್ತಿದೆ, ಯಾವ ಯೋಜನೆ ಆಗುತ್ತಿದೆ ಎಂಬ ಬಗ್ಗೆಯೂ ಮೇಯರ್‌ಗೆ ಗೊತ್ತಿದ್ದ ಹಾಗೆ ಇಲ್ಲ. ತುಂಬೆ ಡ್ಯಾಂನ ನಿರಾಶ್ರಿತರಿಗೆ ಪರಿಹಾರ ಮೊತ್ತವನ್ನು ಕೊಡುವ ಬಗ್ಗೆಯೂ ಮಾಹಿತಿ ಇಲ್ಲ. ಪಾಲಿಕೆಗೆ ಬೇರೆ ಬೇರೆ ನಿಧಿಯಿಂದ ಬಂದ ಅನುದಾನ ಪಾಲಿಕೆಯ ಖಜಾನೆಯಲ್ಲಿ ಉಳಿದಿದೆಯೇ ವಿನಾ ಅದು ಯೋಜನೆ ರೂಪ ಪಡೆಯುತ್ತಿಲ್ಲ. ಪಾಲಿಕೆಯ ಮಾಜಿ ಮೇಯರ್‌ಗಳು ಹಾಗೂ ವಿಪಕ್ಷ ಸದಸ್ಯರನ್ನು ಕರೆದು ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ಪಡೆಯುವ ಕೆಲಸ ಮಾಡುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೇ ತಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಯಾವುದೇ ಪ್ರಶ್ನೆ ಕೇಳಿದರೂ, ಅದಕ್ಕೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ಕೇವಲ ಸಾಮಾನ್ಯ ಸಭೆ ನಡೆಸುವುದು ಮಾತ್ರ ತಮ್ಮ ಸಾಧನೆ ಎಂಬಂತಾಗಿದೆ ಎಂದರು. ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯೀ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ, ಲತಾ ಸಾಲ್ಯಾನ್, ಪ್ರವೀಣ್ ಚಂದ್ರ ಆಳ್ವ ಉಪಸ್ಥಿತರಿದ್ದರು.
ಮಾಜಿ ಮೇಯರ್‌ಗಳ ಗರಂ!
ಜಲಸಿರಿ ಯೋಜನೆಯ ವಿಶೇಷ ಸಭೆಯಲ್ಲಿ ತಿದ್ದುಪಡಿಯೊಂದಿಗೆ ಅನುಮೋದನೆ ಮಾಡಲು ನಿರ್ಣಯಿಸ ಲಾಗಿತ್ತಾದರೂ ತಿದ್ದುಪಡಿಯನ್ನು ಸಾಮಾನ್ಯ ಸಭೆಯ ನಡಾವಳಿಯಲ್ಲಿ ಪ್ರಸ್ತಾವಿಸಲಾಗಿಲ್ಲ ಎಂದು ಕೆಲವು ಸದಸ್ಯರು ಆಕ್ಷೇಪಿಸಿದರು. ಕವಿತಾ ಸನಿಲ್ ಮಾತನಾಡಿ, “ಮಾಜಿ ಮೇಯರ್‌ಗಳ ಉಪಸ್ಥಿತಿಯಲ್ಲಿ ತಿದ್ದುಪಡಿಯನ್ನು ನಿರ್ಣಯಿಸುವುದಾಗಿ ಮೇಯರ್ ತಿಳಿಸಿದ್ದರೂ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಮಹಾಬಲ ಮಾರ್ಲ ಮಾತನಾಡಿ, 2001ರಲ್ಲಿ ಪ್ರಥಮ ಹಂತದ ಕುಡ್ಸೆಂಪ್ ಯೋಜನೆ ಆರಂಭದಲ್ಲಿಯೂ ನಾನು ಆಕ್ಷೇಪ ಮಾಡಿದ್ದೆ. ಆ ಬಳಿಕ ದ್ವಿತೀಯ ಹಂತದ ಯೋಜನೆಯಲ್ಲಿಯೂ ಹಲವಾರು ನ್ಯೂನತೆಗಳ ಬಗ್ಗೆ ಪಾಲಿಕೆಯ ಗಮನ ಸೆಳೆದಿದ್ದೆನು. ಆದರೆ ಯೋಜನೆ ತಿದ್ದುಪಡಿ ಸಂದರ್ಭದಲ್ಲಿ ಮಾಜಿ ಮೇಯರ್‌ಗಳ ಅಗತ್ಯ ಇಲ್ಲ ಎಂಬಂತಾಗಿದೆ. ಸಾಮಾನ್ಯ ಸಭೆಯಲ್ಲಿ ಜನ ಪ್ರತಿನಿಧಿಗಳು ಕೇಳುವ ಯಾವುದೇ ಸಮಸ್ಯೆಗಳು, ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ಅಧಿಕಾರಿ ವರ್ಗದಿಂದ ಸಿಗುತ್ತಿಲ್ಲ. ಮಾತ್ರವಲ್ಲದೆ, ಪರಿಹಾರವೂ ಶೂನ್ಯ. ಹಾಗಾಗಿ ವಿಷಯ ಪ್ರಸ್ತಾವಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಲಿಖೀತವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಲು ಪ್ರಯತ್ನಿಸುವುದೇ ಉತ್ತಮ ಎಂದರು. ಸ್ವಲ್ಪ ಹೊತ್ತಿನ ಬಳಿಕ ಸಭೆಯಿಂದ ಎದ್ದು ಹೊರನಡೆದ ಮಹಾಬಲ ಮಾರ್ಲ ಅವರನ್ನು ಕಂಡು ವಿಪಕ್ಷ ಸದಸ್ಯರು ಮಾಜಿ ಮೇಯರ್ ಸಭಾತ್ಯಾಗ ಮಾಡುತ್ತಿದ್ದಾರೆ ಎಂದರು. “ಹಾಗೇನಲ್ಲ’ ಎಂದು ಮಾರ್ಲರು ಉತ್ತರಿಸಿದಾಗ, ಮೇಯರ್ ಮಾತನಾಡಿ, ಅವರು ನನ್ನ ಆತ್ಮೀಯರು, ಅನ್ಯ ಕಾರಣ ನಿಮಿತ್ತ ಅವರು ಸಭೆಯಿಂದ ಹೋಗುತ್ತಿದ್ದಾರೆಯೇ ಹೊರತು ಸಭಾತ್ಯಾಗವಲ್ಲ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಮಾತನಾಡಿದ ಮಾಜಿ ಮೇಯರ್ ಹರಿನಾಥ್, ಪಾಲಿಕೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಹಾಗೂ ಕಾರ್ಯಗಳು ನಡೆಯುತ್ತಿಲ್ಲ ಎಂದು ಕಿಡಿಕಾರಿದರು.
ಸುದಿನ ವರದಿ ಪ್ರತಿಧ್ವನಿ
ಸದಸ್ಯೆ ಸಬಿತಾ ಮಿಸ್ಕಿತ್ ಮಾತನಾಡಿ, “ಸೈಂಟ್ ಆ್ಯಗ್ನೆಸ್ ಬಳಿ ಬಸ್ ನಿಲ್ದಾಣದ ನಿರ್ಮಾಣ ಕುರಿತು ಉದಯವಾಣಿ ಸುದಿನದಲ್ಲಿ ಕೆಲವು ವರದಿಗಳು ಬಂದಿವೆ. ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅಗೆದು ಹಾಕಿದ ಮರುದಿನ ಜಿಲ್ಲಾಧಿಕಾರಿಯಿಂದ ತಡೆ ಎಂಬ ವರದಿ ಬಂದಿದೆ. ಹಾಗಾದರೆ ಅಲ್ಲಿ ಬಸ್ ನಿಲ್ದಾಣ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಆಯುಕ್ತರು ಉತ್ತರಿಸಿ, “ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿ ಬಸ್‌ನಿಲ್ದಾಣ ನಿರ್ಮಿ ಸಲು ಉದ್ದೇಶಿಸಲಾಗಿತ್ತು. ಆದರೆ, ಸಂಬಂಧಪಟ್ಟ ಕಾಲೇಜಿನವರು ಆಕ್ಷೇಪ ವ್ಯಕ್ತಪಡಿಸಿ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಸ್ಥಳ ಸಮೀಕ್ಷೆ ನಡೆಸಿ ಬಳಿಕ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ತಿಳಿಸಿದ್ದರು. ಹೀಗಾಗಿ ಸ್ಥಳ ಸಮೀಕ್ಷೆ ನಡೆಸುವವರೆಗೆ ಕಾಮಗಾರಿ ನಿಲ್ಲಿಸಲಾಗಿದೆ. ಶೀಘ್ರದಲ್ಲಿ ಸಮೀಕ್ಷೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.