Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
ಮಂಗಳೂರು ವಿಶ್ವವಿದ್ಯಾನಿಲಯ: ಹಳಿಗೆ ಬಾರದ ಶೈಕ್ಷಣಿಕ ವೇಳಾಪಟ್ಟಿ
Team Udayavani, Apr 24, 2024, 7:25 AM IST
ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿ ವಿದ್ಯಾರ್ಥಿಗಳು ಪದವಿ ಪ್ರವೇಶದ ನಿರೀಕ್ಷೆಯಲ್ಲಿದ್ದರೂ ಪದವಿ ತರಗತಿ ಪ್ರವೇಶಿಸಲು ಸುಮಾರು ನಾಲ್ಕು ತಿಂಗಳು ಕಾಯಬೇಕು! ಕೋವಿಡ್ ಸಂದರ್ಭ ಹಳಿ ತಪ್ಪಿದ ಪದವಿ ತರಗತಿಯ ಶೈಕ್ಷಣಿಕ ವೇಳಾಪಟ್ಟಿ ಇನ್ನೂ ಸರಿ ಹೋಗದೆ ಇರುವುದೇ ಇದಕ್ಕೆ ಕಾರಣ.
ಈ ಬಾರಿಯೂ
ಪದವಿ ತರಗತಿ ಆರಂಭ
ಸೆಪ್ಟಂಬರ್ ಬಳಿಕವೇ ಎಂಬಂತಿದೆ. ಹಿಂದೆ ಜೂನ್-ಜುಲೈ ವೇಳೆ ಕಾಲೇಜು ಆರಂಭ ವಾಗುತ್ತಿದ್ದರೆ ಕೋವಿಡ್ ಬಳಿಕ ಪ್ರತೀ ವರ್ಷ ಸೆಪ್ಟಂಬರ್ ಅವಧಿಯಲ್ಲಿಯೇ ಆರಂಭವಾಗುತ್ತಿದೆ.
ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಈಗಿನ ಅಂತಿಮ ಸೆಮಿಸ್ಟರ್ ಜೂ. 19ಕ್ಕೆ ಕೊನೆಗೊಳ್ಳುತ್ತದೆ. ಬಳಿಕ ಪರೀಕ್ಷೆ-ಮೌಲ್ಯಮಾಪನ ಜುಲೈ/ಆಗಸ್ಟ್ ವರೆಗೆ ನಡೆಯಲಿದೆ. ಅದಾದ ಬಳಿಕ ಪದವಿ ಹೊಸ ತರಗತಿಗಳ ಆರಂಭ. ಅಂದರೆ ಸುಮಾರು 4 ತಿಂಗಳು ತಗಲಲಿದೆ.
ಏಕರೂಪದ ಶೈಕ್ಷಣಿಕ ಕ್ಯಾಲೆಂಡರ್, ಪದವಿ ತರಗತಿಗಳ ಪಠ್ಯಕ್ರಮ ಕಡಿತ ಸಹಿತ ವಿವಿಧ ಪ್ರಯೋಗಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಏಕಕಾಲಕ್ಕೆ ಪದವಿ ತರಗತಿ ಆರಂಭಿಸಲು ರಾಜ್ಯ ಸರಕಾರ ಆಲೋಚಿಸಿತ್ತು. ಆದರೆ ಅದು ಇದುವರೆಗೆ ಸಾಧ್ಯವಾಗಿಲ್ಲ.
ತಡವಾದರೆ ಸಮಸ್ಯೆ ಏನು?
ನಿಗದಿತ ಸಮಯಕ್ಕೆ ಶೈಕ್ಷಣಿಕ ವರ್ಷ ಆರಂಭವಾಗದಿದ್ದರೆ ಪದವಿ ಸೇರಲು ಇಚ್ಛಿಸುವ ವಿದ್ಯಾರ್ಥಿಗಳ ನಾಲ್ಕು ತಿಂಗಳು ವ್ಯರ್ಥವಾಗುವುದಲ್ಲದೆ ಐಟಿಐ, ಡಿಪ್ಲೊಮಾ, ನರ್ಸಿಂಗ್ ಕೋರ್ಸ್‌ಗಳಿಗೆ ಸೇರಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಇದರಿಂದಾಗಿ ಪದವಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಬಹುದು.
“ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜಿನಿಂದ ತೆರಳಿದ ಅನಂತರವಷ್ಟೇ ಹೊಸಬರಿಗೆ ಪ್ರವೇಶ. ಒಂದು ವೇಳೆ ಮೊದಲೇ ಹೊಸಬರು ಬಂದರೆ ತರಗತಿ ಕೋಣೆ, ಬೆಂಚು, ಮೇಜು, ಅಧ್ಯಾಪಕರ ಕೊರತೆ ಕಾಡಲಿದೆ. ಹೀಗಾಗಿ ಪದವಿಗೆ ಹೊಸ ವಿದ್ಯಾರ್ಥಿಗಳ ಪ್ರವೇಶ ತಡವಾಗಬಹುದು’ ಎನ್ನುತ್ತಾರೆ ಕಾರ್‌ಸ್ಟ್ರೀಟ್ ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಜಯಕರ ಭಂಡಾರಿ.
ಪಿಯುಸಿ ಉತ್ತೀರ್ಣರಾಗಿ ಪದವಿ ಸೇರುವ ಮಕ್ಕಳು “ಯುಯುಸಿಎಂಎಸ್’ ಸಾಫ್ಟ್ವೇರ್ ಮೂಲಕ ಆನ್‌ಲೈನ್‌ನಲ್ಲಿ ದಾಖಲಾತಿ ಪಡೆಯಬೇಕು. ಆದರೆ “ಯುಯುಸಿಎಂಎಸ್’ ಪೋರ್ಟಲ್ ಮೂಲಕ ದಾಖಲಾತಿಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ಇನ್ನೂ ಅಧಿಕೃತ ಅನುಮತಿ ಇನ್ನಷ್ಟೇ ಸಿಗಬೇಕಿದೆ. ಹಾಗಾಗಿ ಪೋರ್ಟಲ್ ಇನ್ನೂ ತೆರೆಯಬೇಕಿದೆ.
ಆನ್‌ಲೈನ್ ದಾಖಲಾತಿ ಇಲ್ಲ !
ಪದವಿಗೆ ಆನ್‌ಲೈನ್ ದಾಖಲಾತಿ ಆಗಬೇಕು. ಅದಿನ್ನೂ ಆರಂಭವಾಗಿಲ್ಲ. ಆದರೆ ಪಿಯುಸಿ ಫಲಿ ತಾಂಶ ಬಂದ ಕಾರಣ ವಿದ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸಿ ದಾಖಲಾತಿಗೆ ಆಗ್ರಹಿಸುತ್ತಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಮರಳಿ ಕಳುಹಿಸಲು ಇಚ್ಛಿಸದ ಪ್ರಾಧ್ಯಾಪಕರು, ಮಾತನಾಡಿಸಿ ಅರ್ಜಿ ನೀಡುವಂತೆ ತಿಳಿಸುತ್ತಿದ್ದಾರೆ. ಪೋರ್ಟಲ್ ತೆರೆದ ಬಳಿಕ ಅದರಲ್ಲಿ ಅಧಿಕೃತವಾಗಿ ದಾಖಲಾತಿ ಮಾಡ ಲಾಗುವುದು ಎಂದು ಮನದಟ್ಟು ಮಾಡಬೇಕಾದ ಪ್ರಮೇಯ ಎದುರಾಗಿದೆ.
ಎನ್‌ಇಪಿ-ಎಸ್‌ಇಪಿ:
ಯಾವುದು ಈ ಬಾರಿ?
ಪದವಿ ತರಗತಿಗೆ ಈ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ಬದಲು ಎಸ್‌ಇಪಿ ಜಾರಿ ಮಾಡುವುದಾಗಿ ರಾಜ್ಯ ಸರಕಾರ ತಿಳಿಸಿತ್ತು. ಅದರಂತೆ ಎಲ್ಲ ವಿ.ವಿ. ವ್ಯಾಪ್ತಿಯಲ್ಲಿ ವಿವಿಧ ಸಮಾಲೋಚನೆ-ಚರ್ಚೆ ನಡೆದಿತ್ತು. ಆದರೆ ಅದು ಅಂತಿಮ ಸ್ವರೂಪಕ್ಕೆ ಬಂದಿಲ್ಲ. ಸದ್ಯ ಚುನಾವಣೆ ಹಿನ್ನೆಲೆಯಲ್ಲಿ ಸರಕಾರವೂ ತೀರ್ಮಾನ ಕೈಗೊಳ್ಳುವುದು ಕಷ್ಟ. ಹೀಗಾಗಿ ಪದವಿ ಆರಂಭದವರೆಗೆ ಎನ್‌ಇಪಿ- ಎಸ್‌ಇಪಿ ಎಂಬ ಗೊಂದಲ ಹಾಗೆಯೇ ಮುಂದುವರಿಯಲಿದ್ದು, ವಿದ್ಯಾರ್ಥಿ ಗಳನ್ನು ಅಡಕತ್ತರಿಯಲ್ಲಿ ನಿಲ್ಲಿಸಿದೆ.
ಪದವಿಗೆ ಹೊಸ ವಿದ್ಯಾರ್ಥಿಗಳ ಸೇರ್ಪಡೆ ಸಂಬಂಧ ಸರಕಾರದ ಆದೇಶವನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಎನ್‌ಇಪಿ, ಎಸ್‌ಇಪಿ ಚರ್ಚೆ ನಡೆಯುತ್ತಿದ್ದು, ಸರಕಾರ ಅಂತಿಮಗೊಳಿಸಿದ ಬಳಿಕ ಪದವಿ ತರಗತಿ ಆರಂಭಿಸಲಾಗುವುದು.
-ಪ್ರೊ| ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿ.ವಿ.
-ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.