Mangaluru ಕುಕ್ಕರ್ ಬಾಂಬ್ ಸ್ಫೋಟಕ್ಕೆ ವರ್ಷ: ಪೂರ್ಣ ಚೇತರಿಸದ ಆಟೋ ಚಾಲಕ; ಸಿಗದ ಪರಿಹಾರ
ಕೈಗಳಲ್ಲಿ ಬಲವಿಲ್ಲದಿದ್ದರೂ ಕೊರಗಜ್ಜನ ಚಾಕರಿಯ ಹಂಬಲ; ಕೆಲಸ ಮಾಡಲು ಅಸಾಧ್ಯ
Team Udayavani, Nov 17, 2023, 11:52 PM IST
ಮಂಗಳೂರು: ತೀವ್ರ ನಿಗಾ ಘಟಕ (ಐಸಿಯು)ದಲ್ಲಿ 80 ದಿನ ಸೇರಿದಂತೆ ಒಟ್ಟು 100 ದಿನ ಆಸ್ಪತ್ರೆಯಲ್ಲಿ ಯಾತನೆ ಅನುಭವಿಸಿದ್ದೆ. ಈಗಲೂ ದಿನಕ್ಕೆ 3 ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಆಟೋರಿಕ್ಷಾ ಓಡಿಸಲು ಆಗುತ್ತಿಲ್ಲ. 5 ಕೆಜಿ ಭಾರ ಎತ್ತುವುದಕ್ಕೂ ಆಗುತ್ತಿಲ್ಲ. 46 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಕೊರಗಜ್ಜನ ಚಾಕರಿಯೂ ಸಾಧ್ಯವಾಗುತ್ತಿಲ್ಲ. ಸರಕಾರದ ಪರಿಹಾರವೂ ಕೈ ಸೇರಿಲ್ಲ…
ಇದು ಕಳೆದ ವರ್ಷ ನಗರದ ಕಂಕನಾಡಿಯ ಪಂಪ್‌ವೆಲ್ ಸಮೀಪ ದ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಸರಕಾರದ ಪರಿಹಾರ ಎದುರು ನೋಡುತ್ತಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ನೋವಿನ ಮಾತು.
“ನಾನು ಇನ್ನೂ ಆಟೋರಿಕ್ಷಾ ಓಡಿಸಬೇಕಿದೆ. ಆದರೆ ಕೈಯಲ್ಲಿ ಬಲವಿಲ್ಲ. 15 ವರ್ಷದವನಿರುವಾಗ ಉಜ್ಜೋಡಿ ಕೊರಗಜ್ಜ ಕ್ಷೇತ್ರದಲ್ಲಿ ಚಾಕರಿ ಆರಂಭಿಸಿ ಬಾಂಬ್ ಸ್ಫೋಟದ ದಿನದವರೆಗೂ ಮಾಡುತ್ತಿದ್ದೆ. ಆದರೆ ಸದ್ಯ ಅದ್ಯಾವುದೂ ಸಾಧ್ಯವಾಗುತ್ತಿಲ್ಲ. ಗಂಧದ ಹರಿವಾಣ ಹಿಡಿಯಲು ಕೂಡ ಆಗುತ್ತಿಲ್ಲ. ಕೊರಗಜ್ಜನ ಚಾಕರಿ ಮಾಡಿದ್ದರಿಂದ ಬದುಕಿದೆ. ಈಗಲೂ ಕ್ಷೇತ್ರಕ್ಕೆ ಹೋಗುತ್ತೇನೆ. ನನ್ನ ಕೈಯಿಂದ ಏನೂ ಮಾಡಲು ಆಗುವುದಿಲ್ಲ. ಅಲ್ಲೇ ಇದ್ದು ಇತರರಿಂದ ಮಾಡಿಸುತ್ತಿದ್ದೇನೆ. ಕೈಗೆ ಬಲ ಬರಲು ಇನ್ನೂ ವರ್ಷವಾದರೂ ಬೇಕಾಗಬಹುದು’ ಎನ್ನುತ್ತಾರೆ 61 ವರ್ಷದ ಪುರುಷೋತ್ತಮ.
ಪರಿಹಾರಕ್ಕಾಗಿ ಅಲೆದಾಟ
ಮಗಳ ಇಎಸ್‌ಐ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಆದರೂ ಸಾಕಷ್ಟು ಹಣ ಖರ್ಚಾಗಿದೆ. ಸರಕಾರದಿಂದ ಪರಿಹಾರದ ಭರವಸೆಯಷ್ಟೇ ಸಿಕ್ಕಿದೆ. ಆದರೆ ಕೈ ಸೇರಿಲ್ಲ. ಸ್ಫೋಟದಿಂದ ಹಾನಿಗೀಡಾಗಿದ್ದ ಕಾರಣ ಶಾಸಕ ವೇದವ್ಯಾಸ ಕಾಮತ್ ಹೊಸ ರಿಕ್ಷಾ ಕೊಡಿಸಿದ್ದರು. ಅದನ್ನು ಬಾಡಿಗೆಗೆ ನೀಡಿ ಪುರುಷೋತ್ತಮ ಸ್ವಲ್ಪ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಶಾಸಕರು 3 ಲ.ರೂ. ನೆರವು ನೀಡಿದ್ದಾರೆ. ಗುರುಬೆಳದಿಂಗಳು ಫೌಂಡೇಶನ್‌ನಿಂದ ಮನೆ ನವೀಕರಿಸಲಾಗಿದೆ. ಈಗಲೂ ಪುರುಷೋತ್ತಮ ಅವರಿಗೆ ಔಷಧ ಖರ್ಚು ಇದೆ. ಸ್ಫೋಟಕ್ಕೂ ಮೊದಲು ಮಗಳ ಮದುವೆ ನಿಶ್ಚಯವಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ವಿವಾಹ ಮಾಡಿಸಿದ್ದಾರೆ.
ಸದ್ದು ಬಂತು… ಹೊಗೆ ಆವರಿಸಿತ್ತು
ಅಂದು ಪಡೀಲ್ ಕಡೆಯಿಂದ ಬರುತ್ತಿದ್ದಾಗ ಆಟೋ ನಿಲ್ಲಿಸಿದ್ದ ವ್ಯಕ್ತಿ “ಪಂಪ್‌ವೆಲ್…’ ಎಂದಷ್ಟೇ ಹೇಳಿದ್ದ. ನಾಗುರಿ ಗರೋಡಿ ಬಳಿ ಬರುವಾಗ ಭಾರೀ ಸದ್ದಾಯಿತು. ಕೂಡಲೇ ದಟ್ಟ ಹೊಗೆ ಆವರಿಸಿತು. ನನ್ನ ಕೈ, ಮುಖ ಸುಟ್ಟಿತು. ಆತ (ಶಂಕಿತ ಉಗ್ರ ಮೊಹಮ್ಮದ್ ಶಾರೀಕ್) ಕೂಡ ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ. ಅನಂತರ ಆಸ್ಪತ್ರೆ ಸೇರಿದ್ದೆವು ಎಂದು ಅಂದಿನ ಸ್ಫೋಟದ ಘಟನೆ ನೆನಪಿಸಿಕೊಳ್ಳುತ್ತಾರೆ ಪುರುಷೋತ್ತಮ.
ಏನಾಗಿತ್ತು ?
ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಮೈಸೂರಿನ ತನ್ನ ಬಾಡಿಗೆ ಮನೆಯಲ್ಲಿ ಕುಕ್ಕರ್ ಬಾಂಬ್ ತಯಾರಿಸಿ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದ ಬಳಿ ಸ್ಫೋಟಿಸುವ ಯೋಜನೆ ರೂಪಿಸಿದ್ದ. 2022ರ ನ. 19ರಂದು ಬಸ್‌ನಲ್ಲಿ ಬಂದು ಪಡೀಲ್‌ನಲ್ಲಿ ಇಳಿದು ಪುರುಷೋತ್ತಮ ಪೂಜಾರಿ ಅವರ ಆಟೋ ಹತ್ತಿ ಪಂಪ್‌ವೆಲ್‌ಗೆ ಡ್ರಾಪ್ ಕೇಳಿದ್ದ. ಪಂಪ್‌ವೆಲ್ ತಲುಪುವ ಮೊದಲೇ ಬಾಂಬ್ ಸ್ಫೋಟಿಸಿತ್ತು.
ಬಾಂಬ್‌ನಲ್ಲಿದ್ದ ಜೆಲ್‌ಗೆ ಬೆಂಕಿ ಹೊತ್ತಿಕೊಂಡು ಸ್ಫೋಟವಾಗಿತ್ತು. ಒಂದು ವೇಳೆ ಡಿಟೊನೇಟರ್ ಮೂಲಕ ಸ್ಫೋಟ ಆಗಿದ್ದರೆ ಭಾರೀ ಅನಾಹುತವಾಗುತ್ತಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಆಸ್ಪತ್ರೆಯಲ್ಲಿ ಸಾವು ಬದುಕಿನಲ್ಲಿ ಹೋರಾಟ ನಡೆಸಿ ಬದುಕುಳಿದಿದ್ದ ಶಾರೀಕ್‌ನನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ವಶಕ್ಕೆ ಪಡೆದುಕೊಂಡಿತ್ತು. ಅನಂತರ ಇದರ ಮಾಸ್ಟರ್ ಮೈಂಡ್ ಆಗಿದ್ದ ಅರಾಫತ್ ಆಲಿ ವಿದೇಶದಿಂದ ಭಾರತಕ್ಕೆ ಬರುತ್ತಿದ್ದಾಗ ಬಂಧಿಸಲಾಗಿತ್ತು.
ಆತ (ಮೊಹಮ್ಮದ್ ಶಾರೀಕ್) ಕದ್ರಿ ದೇವಸ್ಥಾನಕ್ಕೆ ಬಾಂಬ್ ಇಡಲು ಬಂದಿದ್ದ ಎಂಬುದು ಮತ್ತೆ ಗೊತ್ತಾಗಿತ್ತು. ಇತ್ತೀಚೆಗೆ ಎನ್‌ಐಎಯವರ ವಿಚಾರಣೆಗೆ ನಾನು ಹೋಗಿದ್ದಾಗ ಆತನನ್ನು ನೋಡಿದ್ದೇನೆ. ಆತನ ದೇಹಸ್ಥಿತಿ ಇಂದಿಗೂ ಸರಿ ಇಲ್ಲ. ನಾನು ಕೊರಗಜ್ಜನ ದಯೆಯಿಂದ ಬದುಕಿದೆ. ದೇವರೇ ಅವನಿಗೆ ಶಿಕ್ಷೆ ನೀಡಿದ್ದಾರೆ.
– ಪುರುಷೋತ್ತಮ ಪೂಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.