Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು
ಐಸ್ ಕ್ರೀಂ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ರಘುನಂದನ್ ಕಾಮತ್
Team Udayavani, May 19, 2024, 2:05 AM IST
ಮಂಗಳೂರು: “ಐಸ್‌ಕ್ರೀಂ ಮ್ಯಾನ್ ಆಫ್ ಇಂಡಿಯಾ’ ಎಂದು ಪ್ರಸಿದ್ಧಿ ಪಡೆದಿದ್ದ ಮುಲ್ಕಿ ನಿವಾಸಿ ರಘುನಂದನ್ ಶ್ರೀನಿವಾಸ ಕಾಮತ್ “ನ್ಯಾಚುರಲ್ಸ್’ ಹೆಸರಿನ ಐಸ್‌ಕ್ರೀಂ ಉದ್ಯಮ ಸಾಮ್ರಾಜ್ಯ ಕಟ್ಟಿದ ಪರಿ ರೋಚಕ, ಪ್ರೇರಣಾದಾಯಕ.
ರಘುನಂದನ್ ಕಾಮತ್ ಅವರಿಗೂ ನ್ಯಾಚುರಲ್ಸ್ ಐಸ್ ಕ್ರೀಮಿನೊಳಗಿರುವ ತಾಜಾ ಹಣ್ಣಿಗೂ ವ್ಯಾಪಾರದ ಸಂಬಂಧವಲ್ಲ; ಬದಲಾಗಿ ಬದುಕಿನ ಸಂಬಂಧ. ಬಹುಶಃ ಅದಕ್ಕೇ ನ್ಯಾಚುರಲ್ಸ್ ಪರಿಚಯವಾಗಿದ್ದು ಹೆಚ್ಚಾಗಿ ಐಸ್ ಕ್ರೀಂಗಿಂತ ಅದರೊಳಗಿನ ಹಣ್ಣುಗಳಿಂದ, ತಾಜಾತನದಿಂದ. ಹಾಗಾ ಗಿಯೇ ಹಲವಾರು ಐಸ್ ಕ್ರೀಂ ಕಂಪೆನಿಗಳ ಮಧ್ಯೆ ತಮ್ಮದೇ ಹಾದಿ ಹುಡುಕಿಕೊಂಡು ಗುರಿಯ ಗಿರಿಯ ಮುಟ್ಟಿದರು.
ರಘುನಂದನ್ ಕಾಮತ್ ಅವರು ಮುಲ್ಕಿ ಅತಿಕಾರಿಬೆಟ್ಟು ಪುತ್ತೂರಿನವರು. ಬಡತನದ ಕುಟುಂಬದಲ್ಲಿ ಜನಿಸಿದ್ದ ರಘುನಂದನ್ ಅವರ ತಂದೆ ಶ್ರೀನಿವಾಸ ಕಾಮತ್ ಮೂಲ್ಕಿಯಲ್ಲಿ ಓರ್ವ ಸಣ್ಣ ಹಣ್ಣಿನ ವ್ಯಾಪಾರಿ ಆಗಿದ್ದವರು. ರಘುನಂದನ್ ಕಾಮತ್ ಏಳು ಮಂದಿ ಮಕ್ಕಳಲ್ಲಿ ಅತ್ಯಂತ ಕಿರಿಯರು. 1954ರಲ್ಲಿ ಜನಿಸಿದ ಅವರು ಬಡತನದ ಕಾರಣದಿಂದ 7ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದರು. ತಂದೆಯ ಜತೆ ಕೆಲಸದಲ್ಲಿ ತೊಡಗಿಕೊಂಡರು.
ತಂದೆಯ ಜತೆಗೆ ಹೋಗಿ ಹಣ್ಣಗಳನ್ನು ತರುವುದು, ಜೋಡಿಸುವುದು ಇತ್ಯಾದಿ. ಹಾಗಾಗಿ ಸಣ್ಣ ವಯಸ್ಸಿನಿಂದಲೇ ಅವರಿಗೆ ಹಣ್ಣುಗಳ ಬಗ್ಗೆ ಪ್ರೀತಿ ಮತ್ತು ಅಪಾರ ಜ್ಞಾನ. ಅದುವೇ ಅವರು ಮುಂದೆ ಇಡೀ ದೇಶಕ್ಕೆ ತಾಜಾ ಹಣ್ಣಿನ ಸ್ವಾದದ ನ್ಯಾಚುರಲ್ಸ್ ಐಸ್‌ಕ್ರೀಂ ಸವಿರುಚಿ ನೀಡಲು ಪ್ರೇರಣೆ ನೀಡಿದ್ದು.
ಕರಾವಳಿಯ ಅನೇಕ ಸಾಧಕರಂತೆ ಕಾಮತ್ ಕೂಡ ಬಡತನದಿಂದ ಹೊರಬರಲು ಮುಂಬೈ ನಗರಿಯ ಹಾದಿ ಹಿಡಿದರು. 15ನೇ ವಯಸ್ಸಿಗೆ ಮುಂಬೈನಲ್ಲಿ ತನ್ನ ಸಹೋದರರ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿನ ಐಸ್‌ಕ್ರೀಂಗಳನ್ನು ಗಮನಿಸುತ್ತಾ ಬಂದ ಕಾಮತ್ ಅವರಿಗೆ ಐಸ್‌ಕ್ರೀಂಗಳಲ್ಲಿ ತಾಜಾ ಹಣ್ಣುಗಳನ್ನು ಬಳಸುವ ಯೋಚನೆ ಬೆಳೆಯಿತು. ಕೃತಕ ಫ್ಲೇವರ್‌ನ ಬದಲು ತಾಜಾ ಹಣ್ಣು ಬಳಸಿ ಐಸ್‌ಕ್ರೀಂ ಮಾಡಬಹುದು ಎಂದು ಸಹೋದರನಿಗೆ ಸಲಹೆ ನೀಡಿದರು. ಅದರೆ ಆ ಸವಾಲು ಸ್ವೀಕರಿಸಲು ಹಣಕಾಸಿನ ಕಾರಣದಿಂದ ಒಪ್ಪಿರಲಿಲ್ಲ. ಆದರೂ ರಘುನಂದನ್ ಅವರು ತಮ್ಮ ಯೋಚನೆಯನ್ನು ಕಾಯಿಯಾಗಿಯೇ ಉಳಿಯಲು ಬಿಡಲಿಲ್ಲ. ಕಾಯಿ ಹಣ್ಣಾಗಲು ಕಾಲಕ್ಕೆ ಮೊರೆ ಹೋದರು.
ದಾಖಲೆ, ಪದಕ
ನ್ಯಾಚುರಲ್ಸ್ ಐಸ್‌ಕ್ರೀಂ ಕೆಪಿಎಂಜಿ ಸಮೀಕ್ಷೆಯಲ್ಲಿ ಗ್ರಾಹಕರ ಸಂತೃಪ್ತಿ ವಿಷಯದಲ್ಲಿ ದೇಶದ ಅತ್ಯುನ್ನತ 10 (ಟಾಪ್‌ಟೆನ್) ಸಂಸ್ಥೆಗಳಲ್ಲಿ ಒಂದು ಎಂಬುದಾಗಿ ಗುರುತಿಸಲ್ಪಟ್ಟಿತ್ತು. 2020ರ ವೇಳೆಗೆ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥೆ ವಾರ್ಷಿಕ ಸುಮಾರು 400 ಕೋ.ರೂ. ವಹಿವಾಟು ದಾಖಲಿಸಿತು. 2009ರಲ್ಲಿ 3,000 ಕೆ.ಜಿಯ ಒಂದೇ ಫ್ಲೆàವರ್ ಇರುವ ಕ್ರೀಮ್ ಸ್ಲಾಬ್ ಸಿದ್ಧಪಡಿಸಿ ಲಿಮ್ಕಾ ದಾಖಲೆ ಕೂಡ ಮಾಡಿತ್ತು. ಅಲ್ಲದೆ ಸೌತೆಕಾಯೀ ತಿರುಳಿನ ಐಸ್ ಕ್ರೀಂ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿತ್ತು. ಕೇವಲ 40 ವರ್ಷಗಳಲ್ಲಿ ದೇಶದಲ್ಲಿಯೇ ಮುಂಚೂಣಿ ಐಸ್‌ಕ್ರೀಂ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಜುಹೂನಲ್ಲಿ ಆರಂಭ
1984ರಲ್ಲಿ ಮುಂಬೈನ ಜುಹೂನಲ್ಲಿ ಸಣ್ಣದೊಂದು 200 ಚದರ ಅಡಿ ಜಾಗದಲ್ಲಿ ಹೊಟೇಲ್ ಆರಂಭಿಸಿ ನಾಲ್ವರು ಕೆಲಸದವರೊಂದಿಗೆ ಅಲ್ಲಿ ಪಾವ್‌ಬಾಜಿ ಮಾರತೊಡಗಿದರು. ಜತೆಗೆ ಅನಾನಸು, ಪಪ್ಪಾಯ, ದ್ರಾಕ್ಷಿ , ಚಿಕ್ಕು ಮೊದಲಾದವುಗಳನ್ನು ಬಳಸಿ ಐಸ್‌ಕ್ರೀಂ ತಯಾರಿಸಿದರು. ಗ್ರಾಹಕರಿಗೆ ಹೊಸರುಚಿಯಷ್ಟೇ ಅಲ್ಲ, ಅಚ್ಚರಿ ಎನಿಸಿತು. ಗ್ರಾಹಕರಿಂದ ದೊರೆತ ಸ್ಪಂದನೆ ಇನ್ನಷ್ಟು ಉತ್ಸಾಹ ತುಂಬಿತು. ಕ್ರಮೇಣ ಪಾವ್‌ಭಾಜಿ ಬದಿಗೆ ಸರಿಸಿ, ಐಸ್ ಕ್ರೀಂ ಅನ್ನೇ ಮುಂದೆ ತಂದರು. ಮುಂದೆ ಅದುವೇ ದೊಡ್ಡ ಬ್ರಾಂಡ್ ಆಗಿ ಬೆಳೆಯಿತು. ಕೇವಲ 10 ವರ್ಷಗಳಲ್ಲಿ ಮುಂಬೈಯಲ್ಲಿ 5 ಕ್ರೀಂ ಪಾರ್ಲರ್‌ಗಳನ್ನು ಆರಂಭಿಸಿದರು. 2020 ರಲ್ಲಿ ಮುಂಬೈಯಿಂದ ಹೊರಗೆ ಇಡೀ ದೇಶಕ್ಕೆ ನ್ಯಾಚುರಲ್ಸ್ ಐಸ್‌ಕ್ರೀಂ ಬ್ರ್ಯಾಂಡ್ ನಡಿ ಐಸ್ ಕ್ರೀಮ ರವಾನೆಯಾಗತೊಡಗಿತು. ಎಲ್ಲೆಡೆಯೂ ಅದರ ಶಾಖೆಗಳು ತೆರೆದವು.
“ನಾನು ಕಲಿಯಲಿಲ್ಲ,
ನೀವು ಕಲಿಯಿರಿ’
ಊರಿಗೆ ಬಂದಾಗಲೆಲ್ಲಾ ಅವರು ಓದಿದ್ದ ಕೊಲ ಕಾಡಿಯ ಪ್ರಾಥಮಿಕ ಶಾಲೆಗೆ ಬಂದು ಐಸ್‌ಕ್ರೀಂ ನೀಡಿ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು. “ನಾನು ಕಲಿಯದೆ ಸಾಧನೆ ಮಾಡಿದೆ. ಆದರೆ ನೀವು ಕಲಿಯದೇ ಇರಬೇಡಿ. ಚೆನ್ನಾಗಿ ಕಲಿಯಿರಿ’ ಎನ್ನುತ್ತಿದ್ದರು. ಮುಂಬೈಯಿಂದ ಊರಿಗೆ ಬಂದಾಗ ಈ ಹಿಂದೆ ತಾನು ತಂದೆಯ ಜತೆಗೆ ಗುಡ್ಡಕ್ಕೆ ಹೋಗಿ ಹಣ್ಣುಗಳನ್ನು ತರುತ್ತಿರುವುದನ್ನು ನೆನಪಿಸಿಕೊಳ್ಳುತ್ತಿದ್ದರು. ಮಕ್ಕಳನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಅಲ್ಲಿರುವ ಹಣ್ಣುಗಳನ್ನು ಪರಿಚಯಿಸಿಕೊಡುತ್ತಿದ್ದರು ಎಂದು ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.
“ಶಾಲೆ ಮರೆಯಲಿಲ್ಲ’
ಕವತಾರಿನಲ್ಲಿ 1ರಿಂದ 5ರವರೆಗೆ, ಕೊಲಕಾಡಿ ಪ್ರಾಥಮಿಕ ಶಾಲೆಯಲ್ಲಿ 6ರಿಂದ 7ರವರೆಗೆ ಕಲಿತಿದ್ದರು. ಈ ಎರಡೂ ಶಾಲೆಗಳಿಗೆ ನೆರವು ನೀಡಿದ್ದಾರೆ. ಕೊಲಕಾಡಿ ಶಾಲೆಗೆ 16 ಲ.ರೂ. ವೆಚ್ಚದಲ್ಲಿ ಹೊಸ ಬಸ್ ನೀಡಿದ್ದಾರೆ. ಕವತಾರು ಶಾಲೆಗೆ ಆಟೋ ರಿಕ್ಷಾ ಒದಗಿಸಿಕೊಟ್ಟಿದ್ದಾರೆ. ಕಾಮತ್ ಅವರ ತಂದೆ ಹಣ್ಣಿನ ಮರ ವಹಿಸಿ ಕೊಂಡು ಅನಂತರ ಹಣ್ಣು ಕೊಯ್ದು ಮಾರು ತ್ತಿದ್ದರು. ಕನ್ನಡ ಉಳಿಸುವುದಾದರೆ ಕನ್ನಡ. ಬೇಕಾ ದರೆ ಆಂಗ್ಲಮಾಧ್ಯಮ ಮಾಡಿ ಎನ್ನುತ್ತಿದ್ದರು. ಕಳೆದ ವರ್ಷ ಜುಲೈನಲ್ಲಿ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂಬುದಾಗಿ ಕೊಲಕಾಡಿಯ ಕೆಪಿಎಸ್‌ಕೆ ಶಾಲೆಯ ಸಂಚಾಲಕ ಗಂಗಾಧರ ವಿ. ಶೆಟ್ಟಿ ಅವರು ನೆನಪಿಸಿಕೊಳ್ಳುತ್ತಾರೆ.
ಪ್ಯಾಕೇಜಿಂಗ್ ಇಂಡಸ್ಟ್ರಿ
ಐಸ್ ಕ್ರೀಂಗಳಿಗೆ ಬೇಡಿಕೆ ಹೆಚ್ಚಾಗ ತೊಡಗಿತು. ಆದರೆ ಅದನ್ನು ತಯಾರಿಸುವುದಕ್ಕಿಂತ ದೊಡ್ಡ ಸವಾಲು ಸಾಗಣೆಯದ್ದಾಯಿತು. ಅದಕ್ಕೆ ಅವರೇ ಸ್ವತಃ ಥರ್ಮೋಕಾಲ್ ಪ್ಯಾಕೇಜಿಂಗ್ ಇಂಡಸ್ಟ್ರೀ ಆರಂಭಿಸಿದರು. ಐಸ್‌ಕ್ರೀಂಗಳು ಕೆಡದಂತೆ ಸಾಗಿಸಲು, ಇಟ್ಟುಕೊಳ್ಳಲು ಇದರಿಂದ ಸಾಧ್ಯವಾಯಿತು. ನ್ಯಾಚುರಲ್ಸ ಎಲ್ಲೆಡೆ ವಿಸ್ತರಣೆಗೊಳ್ಳುವಲ್ಲಿ ಯಶಸ್ವಿಯಾಯಿತು.
ತಾಳೆಬೊಂಡ ಮುಂಬೈಗೆ
ರಘುನಂದನ್ ಕಾಮತ್ ಅವರು ಐಸ್‌ಕ್ರೀಂಗೆ ತಾಜಾ ಹಣ್ಣುಗಳು, ಸೀಯಾಳ ಮಾತ್ರವಲ್ಲದೆ ತಾಳೆಬೊಂಡ (ಇರೋಳು) ಕೂಡ ಬಳಸುತ್ತಿದ್ದರು. ಅದು ಕೂಡ ಪ್ರಸಿದ್ಧವಾಗಿತ್ತು. ಊರಿನಿಂದ ಮುಂಬೈಗೆ ಟನ್‌ಗಟ್ಟಲೆ ಇರೋಳು ಕೊಂಡು ಹೋಗುತ್ತಿದ್ದೆ. ಇದರಿಂದ ಊರಿನವರಿಗೆ ಆದಾಯವೂ ಸಿಕ್ಕಿತ್ತು ಎಂಬುದಾಗಿ ಭಾಷಣವೊಂದರಲ್ಲಿ ಕಾಮತ್ ಅವರು ಉಲ್ಲೇಖೀಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.