Mangaluru: ಸೈಬರ್ ವಂಚಕರಿಗೆ ಪೊಲೀಸರ ಜಾಲ!
ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ; ಪೋಸ್ಟರ್, ವೀಡಿಯೋ ಅಪ್‌ಲೋಡ್
Team Udayavani, Oct 1, 2024, 12:57 PM IST
![2](https://www.udayavani.com/wp-content/uploads/2024/10/2-1-620x331.jpg)
![2](https://www.udayavani.com/wp-content/uploads/2024/10/2-1-620x331.jpg)
ಮಹಾನಗರ: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣೆಗಳೂ ತಮ್ಮ ಸ್ವಂತ ಟ್ವಿಟರ್ – ಫೇಸ್‌ಬುಕ್ ಖಾತೆಗಳನ್ನು ಹೊಂದುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ, ಮಾಹಿತಿ ಒದಗಿಸುವ ಕಾರ್ಯದಲ್ಲಿ ತೊಡಗಿವೆ. ಮುಖ್ಯವಾಗಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಬಗೆಗಿನ ಜಾಗೃತಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಮೊದಲು ಪೊಲೀಸ್ ಆಯುಕ್ತರ ಹೆಸರಿನಲ್ಲಿ ಕಚೇರಿಯ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳು ಕಾರ್ಯಾಚರಿಸುತಿತ್ತು. ಸಾರ್ವಜನಿಕರಿಗೆ ಕೆಲವೊಂದು ಮಹತ್ವದ ಮಾಹಿತಿಯನ್ನು ಅವುಗಳ ಮೂಲಕ ಜನರಿಗೆ ತಿಳಿಸಲಾಗುತ್ತಿತ್ತು. ಆದರೆ ಸ್ಥಳೀಯವಾಗಿ ಠಾಣಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ಇದರಲ್ಲಿ ಲಭ್ಯವಾಗುತ್ತಿರಲಿಲ್ಲ. ಇದೀಗ ಠಾಣೆಗೊಂದು ಪೇಜ್ ಮಾಡಿರುವುದರಿಂದ ಸ್ಥಳೀಯ ಮಾಹಿತಿ ಲಭ್ಯವಾಗುತ್ತಿದೆ.
ಏನೆಲ್ಲ ಮಾಹಿತಿ ಹಂಚಿಕೆ?
ರಾಜ್ಯಮಟ್ಟದಲ್ಲಿ ವಿವಿಧ ಪೊಲೀಸ್ ಅಧಿಕಾರಿಗಳು ನೀಡುವ ಮಾಹಿತಿಗಳು, ಇತರ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ನೀಡುವ ಮಾಹಿತಿಗಳು, ಪೊಸ್ಟರ್‌ಗಳನ್ನು ಶೇರ್ ಮಾಡುವುದು, ರಿಟ್ವೀಟ್ ಮಾಡಲಾಗುತ್ತದೆ. ಸೈಬರ್ ಆಪರಾಧಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಡೆಯುವ ಬಗೆಗೆ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸವೂ ಸಾಮಾಜಿಕ ಜಾಲತಾಣದ ಮೂಲಕ ನಡೆಯುತ್ತದೆ. ಆನ್‌ಲೈನ್ ಮೂಲಕ ನಡೆಯುವ ಅಪರಾಧಗಳ ಕುರಿತಂತೆಯೂ ಜನರಿಗೆ ಮಾಹಿತಿ ಒದಗಿಸಲಾಗುತ್ತದೆ. ಟ್ವಿಟರ್- ಫೇಸ್‌ಬುಕ್‌ನ ಮುಖಪಟದಲ್ಲಿಯೇ ಪೇಜ್‌ನಲ್ಲಿ ಠಾಣೆಯ ಸ್ಥಿರ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಲಾಗಿದೆ. ಠಾಣೆಯಲ್ಲಿ ನಡೆಯಲಿರುವ, ನಡೆದ ಪ್ರಮುಖ ಕಾರ್ಯಕ್ರಮಗಳ ಮಾಹಿತಿಯನ್ನು ಖಾತೆಯಲ್ಲಿ ನೀಡಲಾಗುತ್ತಿದೆ.
‘112’ಗೂ ಇದೆ ಪ್ರತ್ಯೇಕ ಖಾತೆ
ತುರ್ತು ಸಂದರ್ಭದಲ್ಲಿ ದಿನದ 24 ಗಂಟೆಯೂ ಕರೆ ಮಾಡಿ ಮಾಹಿತಿ ನೀಡಬಹುದಾದ ‘ತುರ್ತು ಸ್ಪಂದನಾ ವ್ಯವಸ್ಥೆ -112’ಗೂ ಪ್ರತ್ಯೇಕ ಟ್ವಿಟರ್ ಖಾತೆಯಿದೆ. 112 ಸಿಬಂದಿ ಪ್ರತಿ ದಿನವೂ ಸಾರ್ವಜನಿಕರಿಗೆ ಹಲವಾರು ಉಪಯುಕ್ತ ಮಾಹಿತಿ ನೀಡುತ್ತಿರುತ್ತಾರೆ. ಇದರ ವಿಡಿಯೋಗಳನ್ನೂ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಲಾಗುತ್ತದೆ. ದಿನಕ್ಕೆ ಇಂತಹ 10-15ರಷ್ಟು ಪುಟ್ಟ ವೀಡಿಯೋಗಳು ಅಪ್ ಮಾಡಲಾಗುತ್ತಿದ್ದು, ಇದರಿಂದಲೂ ಸಾರ್ವಜನಿಕರಿಗೆ ಸಾಕಷ್ಟು ಮಾಹಿತಿ ಪಡೆಯಲು ಅವಕಾಶವಾಗುತ್ತದೆ.
ಠಾಣಾ ವ್ಯಾಪ್ತಿಯ ಮಾಹಿತಿ
ಸಾರ್ವಜನಿಕರಿಗೆ ತಮ್ಮ ಠಾಣಾ ವ್ಯಾಪ್ತಿಯ ಮಾಹಿತಿಗಳು ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಪ್ರತಿ ಠಾಣೆಯ ಟ್ವಿಟರ್ – ಫೇಸ್‌ಬುಕ್ ಪೇಜ್‌ಗಳನ್ನು ರಚಿಸಲಾಗಿದೆ. ಸೈಬರ್ ಸಹಿತ ವಿವಿಧ ರೀತಿಯ ಅಪರಾಧ ಕೃತ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಈ ಮೂಲಕ ನಡೆಯುತ್ತದೆ. ಪ್ರತಿಯೊಬ್ಬರು ಆಯಾ ಠಾಣಾ ವ್ಯಾಪ್ತಿಯ ಟ್ವಿಟರ್ – ಫೇಸ್‌ಬುಕ್ ಪೇಜ್‌ಗಳನ್ನು ಫಾಲೋ ಮಾಡಿ ಮಾಹಿತಿಗಳನ್ನು ಪಡೆಯಬಹುದು.
– ಅನುಪಮ ಅಗರ್‌ವಾಲ್, ಮಂಗಳೂರು ಪೊಲೀಸ್ ಆಯುಕ್ತ
ಸಮಸ್ಯೆಗಳನ್ನೂ ಟ್ಯಾಗ್ ಮಾಡಬಹುದು
ಸಾರ್ವಜನಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಮತ್ತು ಸಂಚಾರ ವಿಭಾಗದ ಠಾಣೆಗಳ ಸಾಮಾಜಿಕ ಜಾಲತಾಣಗಳ ಪೇಜ್‌ಗಳ ಸದುಪಯೋಗ ಪಡೆಯಬಹುದು. ವಿವಿಧ ಸಂಭಾವ್ಯ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿಯೂ ಇದು ಸಹಕಾರಿಯಾಗಲಿದೆ. ಸಾರ್ವಜನಿಕರಿಗೂ ತಮ್ಮ ವ್ಯಾಪ್ತಿಯಲ್ಲಿರುವ ಕೆಲವೊಂದು ಸಮಸ್ಯೆಗಳನ್ನು ಆಯಾ ಠಾಣೆಯ ಪೇಜ್‌ಗೆ ಟ್ಯಾಗ್ ಮಾಡುವುದರಿಂದ ಪರಿಹಾರವೂ ದೊರೆಯುವ ಸಾಧ್ಯತೆಯಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
-ಭರತ್ ಶೆಟ್ಟಿಗಾರ್