‘ ಮರಳು ಸಮಸ್ಯೆ ಪರಿಹರಿಸದಿದ್ದರೆ ಆಮರಣಾಂತ ಉಪವಾಸ’
Team Udayavani, Dec 8, 2018, 12:15 PM IST
ಸ್ಟೇಟ್‌ಬ್ಯಾಂಕ್: ಜಿಲ್ಲೆಯಲ್ಲಿ ಉಂಟಾಗಿರುವ ಮರಳು ಸಮಸ್ಯೆಯನ್ನು ಶೀಘ್ರ ಪರಿಹರಿಸಲು ರಾಜ್ಯ ಸರಕಾರ ಮುಂದಾಗಬೇಕು. ಇಲ್ಲವಾದಲ್ಲಿ ಚಳಿಗಾಲದ ಅಧಿವೇಶನ ಮುಗಿದ ತತ್‌ಕ್ಷಣ ಬಿಜೆಪಿ ವತಿಯಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಎಚ್ಚರಿಸಿದ್ದಾರೆ.
ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತವು ಮರಳುಗಾರಿಕೆಗೆ ಅನುಮತಿ ನಿರಾಕರಿಸಿ ಮೀನಮೇಷ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಮತ್ತು ಕಂದಾಯ ಇಲಾಖೆಯ ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರಿಗೆ ನೀಡಲು ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ಮಂಡಲದ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ನಡೆದ ಧರಣಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಮೀನುಗಳ ಸಂತಾನೋತ್ಪತ್ತಿ ಅವಧಿಯಾದ ಜೂ. 15ರಿಂದ ಆ. 1ರ ವರೆಗೆ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ ಈ ಬಾರಿ ಡಿಸೆಂಬರ್ ತಿಂಗಳಾದರೂ ಜಿಲ್ಲಾಡಳಿತವು ಮರಳುಗಾರಿಕೆಗೆ ಅವಕಾಶ ನೀಡಿಲ್ಲ. ಇದರಿಂದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಯಾವುದೇ ನಿರ್ಮಾಣ ಕೆಲಸಗಳು ಆಗುತ್ತಿಲ್ಲ ಎಂದು ಶಾಸಕರು ಹೇಳಿದರು.
ಹಲವು ಬಾರಿ ಸರಕಾರ, ಕಂದಾಯ ಇಲಾಖೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಮರಳುಗಾರಿಕೆಗೆ ಅವಕಾಶ ನೀಡುತ್ತಿಲ್ಲ. ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪ ಮಾಡಲಾಗುವುದು. ಬಳಿಕ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಆಗಲೂ ಪರಿಹಾರ ಕಾಣದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕರು ಹೇಳಿದರು.
ಪ್ರಾಪರ್ಟಿ ಕಾರ್ಡ್ ಅವಧಿ ವಿಸ್ತರಿಸಿದರೂ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾರ್ಡ್‌ರಹಿತರಿಗೆ ಆಸ್ತಿ ನೋಂದಣಿ ಮಾಡಲು ಸಾಧ್ಯವಾಗದಿರುವ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ತಿಳಿಯುವುದಿಲ್ಲ. ಅವರು ಜಿಲ್ಲೆಯ ಸಮಸ್ಯೆ ಬಗೆ ಹರಿಸುವುದು ಬಿಟ್ಟು ತೆಲಂಗಾಣದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.ಜಿಲ್ಲೆಯಲ್ಲಿ ಉದ್ಭವಿಸಿರುವ ಈ ಸಮಸ್ಯೆಗಳಿಗೆ ಹಿಂದಿನ ಸಿದ್ದರಾಮಯ್ಯ ಸರಕಾರವೇ ಕಾರಣ. ಆದರೆ ಈಗ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರು ಈ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗದಿರುವುದು ವಿಪರ್ಯಾಸ. ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಪ್ರಸ್ತಾವಿಸಿದರೆ ತನಗೆ ಪುರುಸೊತ್ತಿಲ್ಲ ಎಂದು ಹೇಳುತ್ತಾರೆ ಎಂದು ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಎಂಎಲ್‌ಸಿ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರು, ಕ್ಯಾ| ಬೃಜೇಶ್ ಚೌಟ, ಸಂಜಯ್ ಪ್ರಭು, ಪ್ರೇಮಾನಂದ ಶೆಟ್ಟಿ, ಸುಧೀರ್ ಕಣ್ಣೂರು, ರೂಪಾ ಡಿ. ಬಂಗೇರ, ರವೀಂದ್ರಕುಮಾರ್, ಮೀರಾ ಕರ್ಕೇರ, ಗ್ಲಾಡಿನ್ ಡಿ’ಸಿಲ್ವ, ಸಂದೀಪ್ ಶೆಟ್ಟಿ, ಆನಂದ್ ಬಂಟ್ವಾಳ್ ಉಪಸ್ಥಿತರಿದ್ದರು.
ಮರಳು ಲಾಬಿ
ಮಂಗಳೂರಿನಲ್ಲಿ ಮಲೇಷ್ಯನ್ ಸ್ಯಾಂಡ್ ಲಾಬಿಯೂ ನಡೆಯುತ್ತಿದೆ. ಒಂದು ಲಕ್ಷ ಟನ್ ಮಲೇಷ್ಯಾ ಮರಳು ನಗರಕ್ಕೆ ತರಿಸಲಾಗಿದೆ ಎಂದು ಈ ಹಿಂದೆ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಈ ಮಲೇಷ್ಯದ ಮರಳಿನಿಂದ ಕಟ್ಟಡಗಳ ಸ್ಲ್ಯಾಬ್‌ಗಳಲ್ಲಿ ನೀರು ಕಾಣಿಸಿಕೊಳ್ಳುತ್ತದೆ; ನಮ್ಮ ಊರಿನ ಮರಳೇ ಕಟ್ಟಡ ನಿರ್ಮಾಣಕ್ಕೆಬೇಕೆಂದು ಕಾಂಟ್ರಾಕ್ಟರ್‌ಗಳೂ ಹೇಳಿದ್ದಾರೆ. ಅಂದ ಮೇಲೆ ಮಲೇಷ್ಯದ ಮರಳು ತರಿಸುವ ಅವಶ್ಯವೇನಿತ್ತು ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು.
ಮುಡಾ ಸಭೆ ನಡೆಯದೆ 3 ತಿಂಗಳು!
ಮಂಗಳೂರಿನಲ್ಲಿ ಪ್ರತಿ ತಿಂಗಳು ನಡೆಯಬೇಕಾದ ಮುಡಾ ಸಭೆ ಮೂರು ತಿಂಗಳಿಂದ ನಡೆದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ವಸತಿ ಸಚಿವರಿಗೆ ಬೇರೆ ಮೀಟಿಂಗ್ ಗಳಿರುವುದರಿಂದ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಶಾಸಕರು ತಿಳಿಸಿದರು.
ಪ್ರಾಪರ್ಟಿ ಕಾರ್ಡ್ ಸಮಸ್ಯೆ
ಮನಪಾ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿದ್ದು, ಜನಸಾಮಾನ್ಯರಿಗೆ ಇನ್ನಷ್ಟು ಸಮಸ್ಯೆಯನ್ನು ತಂದಿಟ್ಟಿದ್ದಾರೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಆಪಾದಿಸಿದರು. ಸದ್ಯ ಪ್ರಾಪರ್ಟಿ ಕಾರ್ಡ್ ಮಾಡಿಸಿಕೊಂಡವರು ಕೇವಲ ಶೇ. 30ರಷ್ಟು ಜನ ಮಾತ್ರ. ಇನ್ನೂ ಶೇ. 70ರಷ್ಟು ಮಂದಿ ಕಾರ್ಡ್ ಮಾಡಿಸಿಕೊಳ್ಳಲು ಬಾಕಿ ಇದ್ದಾರೆ. ಕಾರ್ಡ್ ಮಾಡಿಸಿಕೊಳ್ಳುವ ಅವಧಿಯನ್ನು ಜಿಲ್ಲಾಡಳಿತವು ಒಂದು ತಿಂಗಳ ಕಾಲ ವಿಸ್ತರಿಸಿದೆ. ಈ ಒಂದು ತಿಂಗಳ ಅವಧಿಯಲ್ಲಿ ಇಷ್ಟೊಂದು ಮಂದಿಗೆ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.