ಉಟ್ಟ ಬಟ್ಟೆ ಬಿಟ್ಟು ಉಳಿದೆಲ್ಲವೂ ನೀರಲ್ಲಿ ಕೊಚ್ಚಿ ಹೋಗಿವೆ!
Team Udayavani, May 31, 2018, 4:15 AM IST
ಮಹಾನಗರ: ‘ನಾವು ಗೂಡಂಗಡಿ ನಡೆಸಿಕೊಂಡು ಜೀವನ ನಡೆಸುವವರು. ಒಂದು ದಿನ ವ್ಯಾಪಾರವಿಲ್ಲದಿದ್ದರೆ ಒಪ್ಪೊತ್ತಿನ ಊಟಕ್ಕೂ ಕಷ್ಟವಾಗುತ್ತದೆ. ಮಂಗಳವಾರ ಸುರಿದ ಭಾರೀ ಮಳೆಗೆ ನೀರು ನುಗ್ಗಿ ದಿಕ್ಕು ತೋಚದ ಪರಿಸ್ಥಿತಿ ಬಂದಿದೆ. ಸಾಂತ್ವನ ಹೇಳಬೇಕಿದ್ದ ಯಾವ ಜನಪ್ರತಿನಿಧಿಗಳು ಇತ್ತ ಸುಳಿದಿಲ್ಲ. ಇನ್ನು ನಮ್ಮ ಕಷ್ಟ ಯಾರಿಗೆ ಹೇಳಲಿ? ನಗರದಲ್ಲಿ ಮಂಗಳವಾರ ಇಡೀ ದಿನ ಸುರಿದಿದ್ದ ಮಳೆಯಿಂದ ಹೆಚ್ಚಿನ ತೊಂದರೆ ಅನುಭವಿಸಿದ್ದ ಕುದ್ರೋಳಿ ಬಳಿಯ ಭೋಜರಾವ್ ಲೇನ್ ಪ್ರದೇಶಕ್ಕೆ ‘ಸುದಿನ’ ಬುಧವಾರ ಭೇಟಿ ನೀಡಿ ತೊಂದರೆಗೊಳಗಾಗಿರುವ ಜನರ ಸಂಕಷ್ಟ ಆಲಿಸುವ ಪ್ರಯತ್ನ ಮಾಡಿದೆ. ಈ ವೇಳೆ, ಇಲ್ಲಿನ 55 ವರ್ಷದ ಶೋಭಾ ಅವರು ತಮ್ಮ ಮನೆಗೆ ನುಗ್ಗಿದ್ದ ನೀರನ್ನು ಬುಧವಾರವೂ ತೆರವುಗೊಳಿಸುವುದಕ್ಕೆ ಪರದಾಡುತ್ತಿದ್ದರು. ಈ ಸಂದರ್ಭ ಅವರನ್ನು ಮಾತನಾಡಿಸಿದಾಗ, ನಮ್ಮ ಆಡಳಿತ ವ್ಯವಸ್ಥೆಯ ವಿರುದ್ಧ ವ್ಯಕ್ತಪಡಿಸುತ್ತಿದ್ದ ಮೂಕ ವೇದನೆಯದು.
ಗಲೀಜು ನೀರು ಸ್ವಚ್ಛಗೊಳಿಸುತ್ತಿದ್ದರು
ಕುದ್ರೋಳಿ ಬಳಿಯ ಗುಜರಾತ್ ಆಂಗ್ಲ ಮಾಧ್ಯಮ ಶಾಲೆಯಲ್ಲೇ ಮಂಗಳವಾರ ಸುಮಾರು 350 ಮಕ್ಕಳು ಸಿಲುಕಿಕೊಂಡು ಸಂಕಷ್ಟ ಅನುಭವಿಸಿದ್ದರು. ಸುತ್ತಮುತ್ತಲಿನ ಬಹಳಷ್ಟು ಮನೆ, ಅಂಗಡಿಗಳು ಜಲಾವೃತವಾಗಿದ್ದು, ಮನೆಗಳಲ್ಲೇ ಜನರು ಹೊರಬರಲಾಗದೆ ನೆರವಿಗಾಗಿ ಅಂಗಲಾಚುತ್ತಿದ್ದ ಸನ್ನಿವೇಶ ನಿರ್ಮಾಣವಾಗಿತ್ತು. ಇಂಥಹ ಪ್ರದೇಶದಲ್ಲಿ ಚರಂಡಿ ನೀರು ಕೂಡ ಮನೆಗಳಿಗೆ ನುಗ್ಗಿದ ಪರಿಣಾಮ ಈಗ ಗಬ್ಬುನಾರುತ್ತಿದ್ದು, ಹೆಚ್ಚಿನವರು ತಮ್ಮ ಮನೆಗಳಿಂದ ಇನ್ನು ಕೂಡ ಗಲೀಜು ನೀರು ಹೊರಹಾಕುವುದರಲ್ಲೇ ಒದ್ದಾಡುತ್ತಿದ್ದ ದೃಶ್ಯ ಕಂಡುಬಂತು.
ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿತ್ತು ಅಂದರೆ, ಮನೆಯೊಳಗೆಯೇ ಸುಮಾರು 4 ಅಡಿಗಳಷ್ಟು ನೀರು ತುಂಬಿಕೊಂಡು ಸಾಮಾನುಗಳೆಲ್ಲ ನೀರಲ್ಲಿ ತೇಲಾಡುತ್ತಿದ್ದವು. ಬೆಲೆ ಬಾಳುವ ವಸ್ತುಗಳೆಲ್ಲ ಹಾಳಾಗಿ ಹೋಗಿದ್ದು, ಈಗ ಅದನ್ನೆಲ್ಲ ಮರಳಿ ಪಡೆದು ತಮ್ಮ ಮನೆಗಳನ್ನು ಮೊದಲಿದ್ದ ಹಾಗೆಯೇ ಸಿದ್ಧಪಡಿಸುವುದು ಹೇಗೆ ಎಂಬ ಚಿಂತೆಯಲ್ಲಿ ಅವರಿದ್ದಾರೆ. ಕೆಟ್ಟು ಹೋಗಿರುವ ಬೆಲೆ ಬಾಳುವ ವಸ್ತುಗಳಿಗೆ ನಷ್ಟ ಪರಿಹಾರ ಯಾರನ್ನು ಕೇಳಬೇಕು? ಆದರೆ ಅದು ಸಿಗುವುದಿಲ್ಲ ಎನ್ನುವ ಕೊರಗು ಕೂಡ ಅವರಲ್ಲಿತ್ತು. ಆದರೆ, ಮಂಗಳವಾರದ ನೆರೆ ಪರಿಸ್ಥಿತಿಗೆ ಹೋಲಿಕೆ, ಈಗ ನೆರೆಯ ಭೀತಿ ಇಲ್ಲವಲ್ಲ ಎನ್ನುವ ಸಮಾಧಾನವಷ್ಟೇ ಇದೆ. ಬಹುತೇಕ ಎಲ್ಲ ಕಡೆಯೂ ಜಲಾವೃತಗೊಂಡಿದ್ದ ರಸ್ತೆಗಳು ಯಥಾಸ್ಥಿತಿಗೆ ಬಂದಿದೆ.
ಅಂಗಡಿಯವರು ಕೂಡ ನುಗ್ಗಿದ್ದ ನೀರು ಹೊರ ಹಾಕಿ ಅಂಗಡಿ ಸ್ವಚ್ಛಗೊಳಿಸುವುದರಲ್ಲೇ ಬಿಜಿಯಾಗಿರುವುದು ಕಂಡುಬಂತು. ಇಲ್ಲಿನ ನಿವಾಸಿ ಲಕ್ಷ್ಮೀನರಸಿಂಹಯ್ಯ ಅವರ ಮನೆಗೆ ಮಂಗಳವಾರ ಸುಮಾರು 4 ಅಡಿಯಷ್ಟು ನೀರು ನುಗ್ಗಿದ್ದು, ಮನೆಯೊಳಗಿದ್ದ ಕಂಪ್ಯೂಟರ್, ಟಿ.ವಿ., ಪ್ರಿಡ್ಜ್, ಬಟ್ಟೆ ಬರೆಗಳು ಸೇರಿದಂತೆ ಇನ್ನಿತರ ಪರಕರಗಳೆಲ್ಲ ನೀರಿನಲ್ಲಿ ಮುಳುಗಿ ನಿಷ್ಪ್ರಯೋಜಕವೆನಿಸಿವೆ. ಅಂದ ಹಾಗೆ ಲಕ್ಷ್ಮೀನರಸಿಂಹಯ್ಯ ತಮ್ಮ ಮನೆಯಲ್ಲಿಯೇ ಕೃಷಿ ಪಂಪ್ ಸೆಟ್ ಗಳ ರಿಪೇರಿ ಕೆಲಸ ಮಾಡುತ್ತಾರೆ. ಗ್ರಾಹಕರ ಎಲ್ಲ ಪಂಪ್ ಸೆಟ್ ಗಳು ನೀರಿಗೆ ಹಾಳಾಗಿದ್ದು, ಅವುಗಳ ರಿಪೇರಿಗೆ ತಾವೇ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇವರದ್ದು!
ಎಚ್ಚೆತ್ತುಕೊಳ್ಳದ ಸ್ಥಳೀಯಾಡಳಿತ
ಕುದ್ರೋಳಿ ಸಮೀಪದ ಅನೇಕ ಪ್ರದೇಶಗಳಿಗೆ ನೆರೆ ಬರಲು ಮುಖ್ಯ ಕಾರಣ ನೀರು ಹರಿಯದೆ ಬ್ಲಾಕ್ ಆಗಿದ್ದ ಅಳಕೆ ತೋಡು. ಈ ತೋಡಿನ ಕಾಮಗಾರಿ ಕೆಲವು ತಿಂಗಳಿನಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಕಾಂಕ್ರೀಟ್ ತ್ಯಾಜ್ಯಗಳು, ಮಣ್ಣು, ಸಿಮೆಂಟ್, ಇನ್ನಿತರ ವಸ್ತುಗಳು ತೋಡಿನಲ್ಲಿ ಬಿದ್ದಿದ್ದ ಕಾರಣ ನೀರು ಹರಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಬಂದ ಮಳೆಗೂ ನೀರು ನಿಂತು ಸುತ್ತಲಿನ ಪ್ರದೇಶಕ್ಕೆ ನೀರು ನುಗ್ಗಿತ್ತು. ಆ ಸಮಯದಲ್ಲಿ ಅಧಿಕಾರಿಗಳನ್ನು ಎಚ್ಚೆರಿಸಿದ್ದರೂ ಅದನ್ನು ರಿಪೇರಿಗೊಳಿಸಿರಲಿಲ್ಲ. ನೆರೆ ಸೃಷ್ಟಿಯಾಗುವುದಕ್ಕೆ ಇಲ್ಲಿನ ಆಡಳಿತ ವ್ಯವಸ್ಥೆಯೇ ನೇರ ಹೊಣೆ ಎನ್ನುವುದು ಸ್ಥಳೀಯರ ಆರೋಪ. ಸುಮಾರು 30ಕ್ಕೂ ಹೆಚ್ಚು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾದ ಬಳಿಕ ಈಗ ಬಂದು ತೋಡು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ರಾತ್ರಿಯಿಡೀ ನಿದ್ದೆ ಇಲ್ಲ !
ಮಳೆಯಿಂದಾಗಿ ಕುದ್ರೋಳಿ ಪ್ರದೇಶದ ಅನೇಕ ಮನೆಗೆ ನೀರು ನುಗ್ಗಿದ ಕಾರಣ ಮನೆ ಮಂದಿ ರಾತ್ರಿ ನಿದ್ದೆಗೆಟ್ಟಿದ್ದಾರೆ. ರಾತ್ರಿ 11 ಗಂಟೆಯವರೆಗೆ ಮನೆಯೊಳಗೆ ನೀರು ತುಂಬಿಕೊಂಡಿತ್ತು. ಕೆಲವು ಮನೆಗಳಲ್ಲಿ ಬುಧವಾರ ಬೆಳಗ್ಗೆಯಾದರೂ ನೀರು ಕಡಿಮೆಯಾಗಲಿಲ್ಲ. ಕೆಲವು ಮಂದಿ ನಡುರಾತ್ರಿವರೆಗೆ ಮನೆಯ ಹೊರಗೆ ಕಾಲ ಕಳೆದರೆ, ಮತ್ತೂ ಕೆಲವರು ನೆರೆಹೊರೆಯ, ಸಂಬಂಧಿಕರ ಮನೆಗೆ ತೆರಳಿದ್ದರು.
ಅಂಗಡಿಗಳಲ್ಲಿ ವ್ಯಾಪಾರ ಇಲ್ಲ
ಕುದ್ರೋಳಿ ಸುತ್ತಮುತ್ತಲಿನ ಅಂಗಡಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಕಂಗಾ ಲಾಗಿದ್ದರು. ಮಂಗಳವಾರ ಸುರಿದ ಮಳೆಗೆ ಅನೇಕ ಅಂಗಡಿಗಳಿಗೆ ನೀರು ನುಗ್ಗಿದ್ದು, ಹಾನಿ ಸಂಭವಿಸಿದೆ. ಅಷ್ಟೇ ಅಲ್ಲದೆ, ಬುಧವಾರ ಮಾಲಕರು ಅಂಗಡಿಯ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದು, ವ್ಯಾಪಾರ ವಹಿವಾಟು ಕುಗ್ಗಿತ್ತು.
ಸ್ಥಳೀಯಾಡಳಿತ ಹೊಣೆ
ಕೆಲವು ವರ್ಷಗಳಲ್ಲಿ ಈ ರೀತಿ ಕೃತಕ ನೆರೆ ಬಂದು ಮನೆ ಸಾಮಗ್ರಿಗಳಿಗೆ ಹಾನಿಯಾದ ಪ್ರಸಂಗ ನೋಡಿರಲಿಲ್ಲ. ಇದಕ್ಕೆ ಸ್ಥಳೀಯಾಡಳಿತವೇ ನೇರ ಹೊಣೆ. ಓಟು ಕೇಳಲು ಎಲ್ಲ ಪಕ್ಷದ ಮುಖಂಡರು ಮನೆ ಮನೆಗೆ ಬರುತ್ತಾರೆ. ಈ ರೀತಿ ಸಮಸ್ಯೆಯಾಗಿದೆ. ಇಲ್ಲಿಯವರೆಗೆ ಒಬ್ಬರೂ ಜನಪ್ರತಿನಿಧಿ ಧಾವಿಸಿಲ್ಲ.
– ಮನೋಹರ್, ಸ್ಥಳೀಯ ನಿವಾಸಿ
ಬುಧವಾರ ಮನೆ ಖಾಲಿ ಮಾಡಬೇಕಿತ್ತು!
ಮಂಗಳವಾರ ಸುರಿದ ಧಾರಾಕಾರ ಮಳೆಗೆ ನಗರದ ಗುಜರಾತಿ ಶಾಲೆ ಬಳಿಕ ಪ್ರಕಾಶ್ ಅವರ ಮನೆಗೂ ನೀರು ಬಂದಿತ್ತು. ಮನೆಯಲ್ಲಿದ್ದ ಸೀರೆ, ದಿನಸಿ ಸಾಮಾನು, ಸೇರಿದಂತೆ ಮನೆ ಸಾಮಗ್ರಿಗಳೆಲ್ಲ ನೀರಿನಲ್ಲಿ ಒದ್ದೆಯಾಗಿವೆ. ಈ ಕುಟುಂಬವು ಬಾಡಿಗೆ ಮನೆಯಲ್ಲಿದ್ದ ಕಾರಣ, ಬುಧವಾರವಷ್ಟೇ ಮನೆ ಖಾಲಿ ಮಾಡುವುದಕ್ಕೆ ರೆಡಿಯಾಗಿತ್ತು. ಆದರೆ, ಬೇರೆಡೆಗೆ ಸಾಗಿಸಬೇಕಿದ್ದ ಒಂದಷ್ಟು ವಸ್ತುಗಳು ನೀರಲ್ಲೇ ಕೊಚ್ಚಿ ಹೋಗಿವೆ. ‘ನಮ್ಮಲ್ಲಿ ಸದ್ಯ ಉಳಿದುಕೊಂಡಿರುವುದು ಉಟ್ಟ ಬಟ್ಟೆ ಮತ್ತು ಮರದ ಕೆಲವು ಸಾಮಗ್ರಿ ಮಾತ್ರ’ ಎಂದಾಗ ಅವರ ಕಣ್ಣಲ್ಲಿ ನೀರು ತುಂಬಿ ಬಂದಿತ್ತು.
ಚಿನ್ನ, ಮನೆ ಕೀ ಹುಡುಕಿದ್ರೂ ಸಿಗುತ್ತಿಲ್ಲ
ಗುಜರಾತಿ ಆಂಗ್ಲ ಮಾಧ್ಯಮ ಶಾಲೆ ಬಳಿ ಇರುವ ಮನೆಯೊಂದರಲ್ಲಿ ವಾಸಿಸುತ್ತಿರುವ ಕುಟುಂಬದ ಸದಸ್ಯರು ಆತಂಕಕ್ಕೆ ಒಳಗಾಗಿದ್ದಾರೆ. ಮನೆ ತುಂಬಾ ನೀರು ತುಂಬಿಕೊಂಡ ಕಾರಣ ಗಾಬರಿಗೊಂಡಿದ್ದರು. ಚಿನ್ನದ ಕಿವಿಯೋಲೆ ಮತ್ತು ಮನೆಯ ಕೀ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈಗ ಮನೆಗೆ ಬೀಗ ಹಾಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಬೆಲೆ ಬಾಳುವ ವಸ್ತುಗಳು, ಕಾಗದ ಪತ್ರಗಳು, ಸರ್ಟಿಫಿಕೇಟ್ ಈ ರೀತಿ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡಿರುವ ಬಹಳಷ್ಟು ಮಂದಿ ಪರಿತಪಿಸುತ್ತಿದ್ದಾರೆ.
— ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.