Mangaluru: ಶ್ರೀ ಶಾರದಾ ಮಹೋತ್ಸವ ಸಮಿತಿ: ಮಂಗಳೂರು ಶಾರದೋತ್ಸವ ಆರಂಭ
Team Udayavani, Oct 10, 2024, 1:49 AM IST
ಮಂಗಳೂರು: ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದ ಆಚಾರ್ಯ ಮಠ ವಠಾರದಲ್ಲಿರುವ ವಸಂತ ಮಂಟಪದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ ಅ.8ರಿಂದ ಆರಂಭಗೊಂಡು 14 ರವರೆಗೆ ವೈಭವದಿಂದ ನಡೆಯಲಿದೆ.
ಅ. 8ರಂದು ರಾತ್ರಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ರಾಜಾಂಗಣದಿಂದ ಶ್ರೀ ಉಮಾಮಹೇಶ್ವರಿ ದೇವಳ ರಸ್ತೆ, ರಾಮಮಂದಿರ, ನಂದಾ ದೀಪ ರಸ್ತೆ, ಹೂವು ಮಾರುಕಟ್ಟೆ ರಸ್ತೆ, ರಥಬೀದಿಯಾಗಿ ಉತ್ಸವ ಸ್ಥಾನಕ್ಕೆ ತರಲಾಯಿತು. ಆ.9 ರ ಬೆಳಗ್ಗೆ 7 ಗಂಟೆಗೆ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲಾಯಿತು.
ಅ.13ರವರೆಗೆ ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ. ಪ್ರತೀ ದಿನವೂ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು. ಅ.13ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ ಮಾಡಲಾಗುವುದು. ಅಂದು ಬೆಳಗ್ಗೆ 10 ಕ್ಕೆ ವಿದ್ಯಾರಂಭ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ವಿಶೇಷ ದೀಪಾಲಂಕಾರ ಸೇವೆ ಜರಗಲಿದೆ.
ಅ.14ರ ಸಂಜೆ 5 ಕ್ಕೆ ಶ್ರೀ ಶಾರದಾ ಮಾತೆಗೆ ಪೂರ್ಣಾಲಂಕಾರ ನಡೆಯಲಿದೆ. ಚಿತ್ರಾಪುರ ಮಠ ಸಂಸ್ಥಾನದ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಸಂಜೆ 4.30 ಕ್ಕೆ ಶ್ರೀಗಳಿಗೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಶ್ರೀ ದೇವಳದಲ್ಲಿ ಭವ್ಯ ಸ್ವಾಗತ, ಶ್ರೀ ದೇವರ ಭೇಟಿ, ಶ್ರೀ ಶಾರದಾ ಮಾತೆಯ ವಸಂತ ಮಂಟಪಕ್ಕೆ ಚಿತ್ತೈಸಿ ಶ್ರೀ ಶಾರದಾ ಮಾತೆಗೆ ಶ್ರೀಗಳಿಂದ ಮಾಹಾ ಆರತಿ, ಸಮಿತಿಯವತಿಯಿಂದ ಸ್ವಾಗತ, ಶ್ರೀಗಳಿಂದ ಸಮಿತಿಯರಿಗೆ ಪ್ರಸಾದ, ಶ್ರೀಗಳ ಸ್ವಮಠಕ್ಕೆ ಪ್ರಸ್ಥಾನ ನಡೆಯಲಿದೆ.
ರಾತ್ರಿ 8.45ಕ್ಕೆ ಶ್ರೀಗಳು ಸರಸ್ವತಿ ಕಲಾಮಂಟಪಕ್ಕೆ ಆಗಮಿಸಿ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯ ವೀಕ್ಷಣೆ ಬಳಿಕ ಸ್ವಮಠಕ್ಕೆ ಪ್ರಸ್ಥಾನ. ಅಂದು ರಾತ್ರಿ 8 ಕ್ಕೆ ಶ್ರೀ ಶಾರದಾ ಮಾತೆಯ ವಿಸರ್ಜನೆಯ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಉತ್ಸವ ಸ್ಥಾನದಿಂದ ಹೊರಡುವ ಮರವಣಿಗೆ ಶ್ರೀ ಮಹಾಮ್ಮಾಯಿ ದೇವಾಲಯವಾಗಿ ಕೆನರಾ ಹೈಸ್ಕೂಲಿನ ಹಿಂಬದಿಯಿಂದ ಮಂಜೇಶ್ವರ ಗೋವಿಂದ ಪೈ ವೃತ್ತ ತಲುಪಿ ಅಲ್ಲಿಂದ ಡೊಂಗರಕೇರಿಯ ಮೂಲಕ ನ್ಯೂಚಿತ್ರಾ ಟಾಕೀಸ್, ಬಸವನಗುಡಿ, ಚಾಮರಗಲ್ಲಿ, ರಥ ಬೀದಿಯಾಗಿ ಶ್ರೀ ಮಹಾಮಾಯಿ ತೀರ್ಥದಲ್ಲಿ ಸಮಾಪನಗೊಳ್ಳಲಿದೆ.
ಅ.9ರಿಂದ 13ವರೆಗೆ ಪ್ರತಿದಿನವೂ ರಾತ್ರಿ 7 ಗಂಟೆಯಿಂದ 9 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.10ರ ರಾತ್ರಿ 8 ಕ್ಕೆ ದುರ್ಗಾ ನಮಸ್ಕಾರ ಸೇವೆ ನಡೆಯಲಿದೆ. 8.30ರಿಂದ 10 ವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ. ದೇವಿಗೆ ಅರ್ಪಿತವಾದ ಸೀರೆಗಳ ಏಲಂ ಅ.20 ರ ಬೆಳಗ್ಗೆ 10 ಕ್ಕೆೆ ನಡೆಯಲಿದೆ. ಶಾರದಾ ಮಾತೆಗೆ ಅಲಂಕರಿಸಿ ಸೀರೆಗಳನ್ನು ಪಡೆದುಕೊಳ್ಳಲು ಭಕ್ತಾದಿಗಳಿಗೆ ಅಂದು ಅವಕಾಶ ಇದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.