![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 17, 2022, 9:04 AM IST
ಮಂಗಳೂರು: ಸುರತ್ಕಲ್ ಎನ್‌ಐಟಿಕೆ ಬಳಿಯ ಟೋಲ್‌ಗೇಟ್ ತೆರವಿಗೆ ಅಧಿಕಾರಿಗಳು 15 ದಿನಗಳ ಕಾಲಾವಕಾಶ ಕೋರಿದ್ದು ಅಲ್ಲಿಯವರೆಗೆ ಕಾಯುವಂತೆ ವಿನಂತಿಸಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಲೋಕಸಭೆಯಲ್ಲಿ ಟೋಲ್‌ಗೇಟ್ ತೆರವು ಬಗ್ಗೆ ಪ್ರಸ್ತಾವ ಮಾಡಿದ್ದರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ತೆರವಿಗಾಗಿ ಕೆಲವು ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಡಳಿತ ಇತ್ತೀಚೆಗೆ ಸಭೆ ನಡೆಸಿದಾಗಲೂ ಟೋಲ್‌ಗೇಟ್ ರದ್ದತಿಗೆ 15 ದಿನಗಳ ಕಾಲಾವಕಾಶದ ಬಗ್ಗೆ ಎನ್‌ಎಚ್‌ಐಎ ಅಧಿಕಾರಿಗಳು ಕೋರಿದ್ದರು. ಸಹಾಯಕ ಕಮಿಷನರ್ ನೇತೃತ್ವದಲ್ಲಿ ಟೋಲ್ ಹೋರಾಟಗಾರರ ಸಭೆ ನಡೆಸಿ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದರು.
ಇದರಲ್ಲಿ ಎನ್‌ಎಂಪಿಟಿ, ನವಯುಗ ಕಂಪೆನಿ ಒಳಗೊಂಡಿದ್ದು ಕೆಲವೊಂದು ತಾಂತ್ರಿಕ ಕಾರಣಕ್ಕೆ ಸುರತ್ಕಲ್ ಟೋಲ್‌ಗೇಟ್ ರದ್ದತಿ ವಿಳಂಬವಾಗುತ್ತಿದೆ. ಜತೆಗೆ ಮುಂದಕ್ಕೆ ರಸ್ತೆ ನಿರ್ವಹಣೆಯ ಪ್ರಶ್ನೆಯೂ ಒಳಗೊಂಡಿದೆ. ಇದೆಲ್ಲದಕ್ಕೆ ಪರಿಹಾರ ಕಂಡುಕೊಂಡು 15 ದಿನಗಳಲ್ಲಿ ಟೋಲ್‌ಗೇಟ್ ರದ್ದತಿ ವಿಚಾರ ತಾರ್ಕಿಕ ಅಂತ್ಯ ಕಾಣಲಿದೆ. ಟೋಲ್‌ಗೇಟ್ ತೆರವು ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ, ರಾಜಕೀಯೇತರ ಹೋರಾಟಕ್ಕೆ ನಮ್ಮ ವಿರೋಧ ಇಲ್ಲ ಎಂದರು.
ಸುರತ್ಕಲ್‌ನಲ್ಲಿ ಟೋಲ್‌ಗೇಟ್ ಅನ್ನು ಯುಪಿಎ ಅವಧಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಹೆದ್ದಾರಿ ಸಚಿವರಾಗಿದ್ದಾಗ ಸ್ಥಾಪಿಸಲಾಗಿದೆ. ನಿಗದಿತ ಇಂತಿಷ್ಟು ಕಿ.ಮೀ. ಅಂತರದಲ್ಲಿ ಟೋಲ್‌ಗೇಟ್ ಸ್ಥಾಪಿಸಬೇಕು ಎಂಬ ನಿಯಮದ ಕಾರಣ ಈಗ ಅದನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ಹೋರಾಟದಲ್ಲಿ ರಾಜಕೀಯ ಪ್ರವೇಶವಾದರೆ ಬಿಜೆಪಿ ಕೂಡ ಯುಪಿಎ ಅವಧಿಯಲ್ಲಿ ಟೋಲ್‌ಗೇಟ್ ಸ್ಥಾಪಿಸಿದ ವಿಷಯ ಪ್ರಸ್ತಾವಿಸಬೇಕಾಗುತ್ತದೆ. ಟೋಲ್‌ಗೇಟ್ ರದ್ದತಿ ವಿಚಾರದಲ್ಲಿ ಹೋರಾಟದಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದರು.
ಪೊಲೀಸರ ಕ್ರಮ ಸರಿಯಲ್ಲ
ಮಂಗಳೂರು ಪೊಲೀಸರು ಟೋಲ್‌ಗೇಟ್ ಹೋರಾಟಗಾರರಿಗೆ ಶನಿವಾರ ರಾತ್ರಿ ಅವರ ಮನೆಗಳಿಗೆ ತೆರಳಿ ನೋಟಿಸ್ ನೀಡಿರುವ ವಿಚಾರ ಈಗಷ್ಟೇ ಗಮನಕ್ಕೆ ಬಂದಿದೆ. ಪೊಲೀಸರ ಕ್ರಮ ಸರಿಯಲ್ಲ, ರಾತ್ರಿ ತೆರಳಿ ನೋಟಿಸ್ ನೀಡುವಂತೆ ನಾನು ಅಥವಾ ಶಾಸಕರ್ಯಾರೂ ಸೂಚನೆ ನೀಡಿಲ್ಲ. ನೋಟಿಸ್ ಬದಲಿಗೆ ಅವರ ಜತೆ ಮಾತುಕತೆ ನಡೆಸಬೇಕು ಎಂದು ನಳಿನ್ ಕುಮಾರ್ ಮತ್ತು ಶಾಸಕ ಡಾ| ಭರತ್ ಶೆಟ್ಟಿ ಹೇಳಿದರು.
ಇದನ್ನೂ ಓದಿ : ಆಂಧ್ರದಲ್ಲಿ 18 ಬೀದಿ ನಾಯಿಗಳ ಹತ್ಯೆ : ಗ್ರಾಮದ ಮುಖ್ಯಸ್ಥರ ಆದೇಶ ಪಾಲಿಸಿದ್ದೇನೆ ಎಂದ ಹಂತಕ
You seem to have an Ad Blocker on.
To continue reading, please turn it off or whitelist Udayavani.