ಫಲ್ಗುಣಿ ಒಡಲಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ…!
Team Udayavani, Jan 12, 2019, 4:41 AM IST
ಮಹಾನಗರ : ಕರಾವಳಿಯ ಕಡಲ ತೀರದ ಮುಖೇನ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಫಿಂಗ್, ಬೀಚ್, ಆ್ಯಂಗ್ಲಿಂಗ್ ಫೆಸ್ಟಿವಲ್ ಆಯೋಜಿಸುತ್ತ ಬಂದ ಕಡಲ ತಡಿಯಲ್ಲಿ ಇದೀಗ ರಿವರ್ ಫೆಸ್ಟಿವಲ್ ಸಡಗರ. ಅರ್ಥಾತ್ ನದಿ ಉತ್ಸವ !
ಕೇರಳದಲ್ಲಿ ಹಿನ್ನೀರು ಸಹಿತ ನದಿ, ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಬಳಸು ತ್ತಿರುವ ಶೈಲಿಯನ್ನೇ ಬಳಕೆ ಮಾಡುವ ಮಹಾನ್ ಕಲ್ಪನೆಯೊಂದಿಗೆ ಮಂಗಳೂರು ವ್ಯಾಪ್ತಿಯಲ್ಲಿ ಸ್ವಚ್ಛಂದವಾಗಿ ಹರಡಿರುವ ಫಲ್ಗುಣಿ ನದಿಯನ್ನೇ ಬಳಸಿಕೊಂಡು ಇದೇ ಮೊದಲ ಬಾರಿಗೆ ಎರಡು ದಿನಗಳ ನದಿ ಉತ್ಸವ ಆಯೋಜಿಸಿ, ಆ ಮೂಲಕ ಕರಾವಳಿಯ ನದಿಗಳ ಮೂಲಕವೇ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯಲು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಮುಂದಾಳತ್ವದಲ್ಲಿ ಸಿದ್ಧತೆ ನಡೆಸಲಾಗಿದೆ. ಕೂಳೂರು-ಬಂಗ್ರಕೂಳೂರು – ಸುಲ್ತಾನ್‌ಬತ್ತೇರಿ ವ್ಯಾಪ್ತಿಯ ಸರಿ ಸುಮಾರು 20ರಿಂದ 23 ಕಿ.ಮೀ. ವ್ಯಾಪ್ತಿ ಯಲ್ಲಿ ನದಿ ಉತ್ಸವವು ಜ. 12, 13ರಂದು ದಿನಪೂರ್ತಿ ನಡೆಯಲಿದೆ.
ನದಿ ಉತ್ಸವದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಡಳಿತ, ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಮೀನುಗಾರ ಸಮುದಾಯದ ನೆರವಿ ನೊಂದಿಗೆ ವಿವಿಧ ಸಮಾಜಮುಖೀ ಸಂಘಟನೆಯ ಪ್ರಮುಖರ ಸಹಕಾರ ದೊಂದಿಗೆ ಸರ್ವ ಸಿದ್ಧತೆ ನಡೆಸಲಾಗಿದೆ. ಪ್ರವಾಸಿಗರ ಮನ ಸೆಳೆಯುವ ನೆಲೆಯಲ್ಲಿ ಫಲ್ಗುಣಿಯ ತಟವು ಕೈಬೀಸಿ ಕರೆಯುತ್ತಿದೆ.
ಇಂದು ಬೆಳಗ್ಗೆ ಉದ್ಘಾಟನೆ: ಶುಕ್ರವಾರ ಬೆಳಗ್ಗೆ 8 ಗಂಟೆಗೆ ನದಿ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಚಿವ ಯು.ಟಿ. ಖಾದರ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಉದ್ಘಾಟನೆ ಬಳಿಕ ಸುಮಾರು 2 ಕಿ.ಮೀ. ಫಲ್ಗುಣಿ ನದಿಯಲ್ಲಿ ಬೋಟ್‌ನಲ್ಲಿ ಆಗಮಿಸುವ ಅತಿಥಿಗಳು ಬಂಗ್ರಕೂಳೂರುವಿನಲ್ಲಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ದೋಣಿಯಲ್ಲಿ ಸಂಗೀತದೊಂದಿಗೆ ಬಂಗ್ರ ಕೂಳೂರು ಜಟ್ಟಿವರೆಗೆ ಆಗಮಿಸಿ ಅಲ್ಲಿ ಪಂಚವಾದ್ಯ ನಗಾರಿ, ವಾದ್ಯದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.
ರಾತ್ರಿ 8 ಗಂಟೆಯವರೆಗೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ಮರುದಿನ (ರವಿವಾರ)ಬೆಳಗ್ಗೆ 8.30ಕ್ಕೆ ನದಿ ಉತ್ಸವ ಮತ್ತೆ ಆರಂಭವಾದರೆ, ರಾತ್ರಿ 8 ಗಂಟೆಗೆ ಸಮಾರೋಪ ಕಾಣಲಿದೆ. ಸುಮಾರು 13 ದೋಣಿಗಳು ಫಲ್ಗುಣಿಯಲ್ಲಿ ಎರಡೂ ದಿನ ಸಂಚರಿಸಲಿದೆ. ಇದರಲ್ಲಿ 100 ಜನರನ್ನು ಕರೆದುಕೊಂಡು ಹೋಗುವ ಎರಡು ಫೆರಿ ದೋಣಿ ಮತ್ತು ಸುಮಾರು 30 ಜನರಂತೆ ಕರೆದುಕೊಂಡು ಹೋಗುವ 11 ದೋಣಿಗಳು ಸೇರಿವೆ. ಈ ಎಲ್ಲ ದೋಣಿಗಳು ಎರಡೂ ದಿನ ನದಿಯಲ್ಲಿ ಕೂಳೂರು-ಬಂಗ್ರಕೂಳೂರು-ಸುಲ್ತಾನ್‌ಬತ್ತೇರಿ ವ್ಯಾಪ್ತಿಯಲ್ಲಿ ಸುತ್ತಾಡಲಿವೆ.
ಜಲ ಕ್ರೀಡೆ, ತೇಲುವ ಆಹಾರ ಮಳಿಗೆ
ನದಿಯ ಮುಖೇನ ನಡೆಸುವ ಎಲ್ಲ ಪ್ರವಾಸೋದ್ಯಮ ಚಟುವಟಿಕೆಯನ್ನು ಈ ಬಾರಿಯ ನದಿ ಉತ್ಸವದಲ್ಲಿ ಕೈಗೊಳ್ಳಲಾಗಿದೆ. ಮುಖ್ಯವಾಗಿ ರೋಯಿಂಗ್, ಕಯಾಕ್, ಸ್ಟಾಂಡ್ ಅಪ್ ಪೆಡಲಿಂಗ್, ವಿಂಡ್ ಸರ್ಫಿಂಗ್, ಜೆಟ್ಸೆಕೀ, ಸ್ಪೀಡ್ ಬೋಟ್ ಒಳಗೊಂಡ ವಿವಿಧ ಜಲಕ್ರೀಡೆ ನಡೆಯಲಿದೆ. ಸಾಹಸ ಮಯ ಕ್ರೀಡೆ ವೀಕ್ಷಣೆಗೆ ಮತ್ತು ಅದರಲ್ಲಿ ಸ್ವತಃ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ನದಿಯಲ್ಲೇ ತೇಲುವ ಆಹಾರ ಮಳಿಗೆಗಳು, ವಿಭಿನ್ನ ಸ್ಥಳೀಯ ಆಹಾರೋತ್ಪನ್ನಗಳ ಫ್ಲೀ ಮಾರ್ಕೆಟ್ ಲಭ್ಯವಿರಲಿವೆ. ಬೋಟುಗಳ ಮುಖೇನವೇ ನದಿಯಲ್ಲಿ ಎಲ್ಲ ಸಂಭ್ರಮಕ್ಕೂ ಅವಕಾಶ ಕಲ್ಪಿಸಲಾಗಿದೆ.
ಸ್ಥಳೀಯ ಖಾದ್ಯಗಳಿಂದ ಕೂಡಿದ ಆಹಾರ ಮಳಿಗೆಗಳು, ಯುವ ಪೀಳಿಗೆಯನ್ನು ಆಕರ್ಷಿಸುವ ವಿಭಿನ್ನ ವಸ್ತುಗಳಿಂದ ಕೂಡಿದ ಮಳಿಗೆಗಳು ಮತ್ತು ಕಲಾವಿದರ ವಿಶೇಷ ಮಳಿಗೆಗಳು ಈ ಉತ್ಸವದ ವಿಶೇಷತೆ. ನದಿಗಳನ್ನಾಧರಿಸಿದ ನದಿ ಚಲನಚಿತ್ರೋತ್ಸವ, ದ.ಕ. ಜಿಲ್ಲೆಯ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಇಲ್ಲಿರುವ ವೇದಿಕೆಯಲ್ಲಿ ನಡೆಯಲಿದೆ ಎನ್ನುತ್ತಾರೆ ಸಂಘಟಕ ಪ್ರಮುಖರಾದ ವಿವೇಕ್ ಆಳ್ವ, ಯತೀಶ್ ಬೈಕಂಪಾಡಿ.
20 ಎಕ್ರೆ ಭೂಮಿ; ವಿದ್ಯುತ್ ದೀಪಗಳ ಅಲಂಕಾರ
ಬಂಗ್ರ ಕೂಳೂರು ಬಳಿ ನಾಲ್ಕು ದೋಣಿಗಳನ್ನು ಲಂಗರು ಹಾಕಿ ಅದರ ಮೇಲೆ ವಿಶಾಲವಾದ ಹಲಗೆಯನ್ನು ಹಾಸಿ ಜಟ್ಟಿ ನಿರ್ಮಿಸಲಾಗಿದೆ. ನದಿ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸುಲ್ತಾನ್ ಬತ್ತೇರಿ ಮತ್ತು ಕೂಳೂರು ಸೇತುವೆ ಬಳಿಯ ಜಟ್ಟಿಯ ಮೂಲಕ ದೋಣಿಗೆ ಹತ್ತಿಸಿ ಬಂಗ್ರ ಕೂಳೂರು ಜಟ್ಟಿಗೆ ತಲುಪಿಸಲಾಗುತ್ತದೆ. ಬಂಗ್ರ ಕೂಳೂರಿನ ಜಟ್ಟಿ ಮೇಲಿನ ವಿಶಾಲವಾದ ಪ್ರದೇಶದಲ್ಲಿ ವಿವಿಧ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೂಳೂರು ಸೇತುವೆ ಸಮೀಪದಿಂದ ಸುಮಾರು ಎರಡೂವರೆ ಕಿ.ಮೀ.ನಷ್ಟು ದೂರದ ಉತ್ಸವದ ಪ್ರಮುಖ ಸ್ಥಳದ ವರೆಗೆ (ಬಂಗ್ರ ಕೂಳೂರು) ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೂಳೂರು ಸೇತುವೆ ಕೆಳಗೆ ನಿರ್ಮಿಸಲಾದ ಜಟ್ಟಿಯ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಉತ್ಸವದ ಪ್ರಮುಖ ಸ್ಥಳಕ್ಕೆ ಕೂಳೂರು ಬಸ್ ನಿಲ್ದಾಣದ ಪಕ್ಕದ ದಾರಿಯಿಂದ ನಡಿಗೆ, ದ್ವಿಚಕ್ರ ಅಥವಾ ಸೈಕಲ್ ಮೂಲಕ ಆಗಮಿಸಬಹುದಾಗಿದೆ. ಆದರೆ ಯಾವುದೇ ರೀತಿಯ ಸಾರ್ವಜನಿಕ ವಾಹನಗಳಿಗೆ ಈ ರಸ್ತೆ ಮೂಲಕ ಪ್ರವೇಶ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಪ್ರವಾಸೋದ್ಯಮ ಇಲಾಖೆಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಈ ಉತ್ಸವ ನಡೆಯುತ್ತಿದೆ. ಬಂಗ್ರಕೂಳೂರಿನ ಸುಮಾರು 20 ಎಕ್ರೆ ಸರಕಾರಿ ಪ್ರದೇಶವನ್ನು ಉತ್ಸವಕ್ಕೆ ಬಳಸಿಕೊಳ್ಳಲಾಗುತ್ತಿದೆ.
ನದಿ ಉತ್ಸವಕ್ಕೆ ಹೀಗೆ ಹೋಗಬಹುದು…
ಕೂಳೂರುವಿನಿಂದ ಬಂಗ್ರಕೂಳೂರು ವರೆಗೆ ಸುಮಾರು ಎರಡೂವರೆ ಕಿ.ಮೀ. ನದಿ ಬದಿಯಲ್ಲಿ ನಡೆದು ಕೊಂಡು ಹೋಗಿ ಸೌಂದರ್ಯ ಆಸ್ವಾದಿಸಲೂ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನದಿ ಬದಿಯನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಸುಲ್ತಾನ್‌ಬತ್ತೇರಿ, ಕೂಳೂರಿನಿಂದ ಬೋಟ್ ಮೂಲಕವೇ ಉತ್ಸವ ಸ್ಥಳವನ್ನು ತಲುಪಬೇಕು. ಇದಕ್ಕೆ ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಲಾ ಗಿದ್ದು, ಒಬ್ಬ ಪ್ರಯಾಣಿಕ 50 ರೂ. ನೀಡಿದರೆ, ಉತ್ಸವ ಸ್ಥಳವಲ್ಲದೆ, ಇತರೆ ಜೆಟ್ಟಿಗೂ ಭೇಟಿ ನೀಡಿ ಪ್ರವಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
ನದಿ ಸೌಂದರ್ಯ ಆಸ್ವಾದಿಸಿ
ಫಲ್ಗುಣಿ ನದಿಯಲ್ಲಿ ‘ನದಿ ಉತ್ಸವ’ ಆಯೋಜನೆಗೊಂಡಿದೆ. ತಣ್ಣೀರುಬಾವಿ ಸಮೀಪ, ಬಂಗ್ರ ಕೂಳೂರು, ಸುಲ್ತಾನ್‌ಬತ್ತೇರಿ ಯಲ್ಲಿ ನದಿ ಉತ್ಸವ ನಡೆಯಲಿದೆ. ಇದಕ್ಕಾಗಿ ಈ ಮೂರೂ ಜಾಗ ಗಳಲ್ಲಿ ಪೂರ್ಣ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನಿಂದ ಉಡುಪಿಗೆ ತೆರಳುವ ದಾರಿಯಲ್ಲಿ ಕೂಳೂರು ಸೇತುವೆಯ ಮುನ್ನ ಎಡಭಾಗದಲ್ಲಿ ಸುಮಾರು ಎರಡೂವರೆ ಕಿ.ಮೀ. ದೂರಕ್ಕೆ ಸಾಗಿದಾಗ ಬಂಗ್ರಕೂಳೂರಿನ ನದಿ ಉತ್ಸವ ನಡೆಯುವ ಸ್ಥಳಕ್ಕೆ ತೆರಳ ಬಹುದು. ಕೂಳೂರು ಸೇತುವೆ ಕಳೆದ ಅನಂತರ ಎಡಭಾಗದ ಲ್ಲಿರುವ ತಣ್ಣೀರುಬಾವಿ ರಸ್ತೆಯಲ್ಲಿ ಕೇವಲ 300 ಮೀಟರ್‌ನಷ್ಟು ಸಾಗಿದಾಗ ಎಡಭಾಗದಲ್ಲಿಯೇ ನದಿಪಾತ್ರದ ಜಾಗ ಸಿಗುತ್ತದೆ. ಅದು ಉತ್ಸವದ ಎರಡನೇ ಪಾಯಿಂಟ್. ಇನ್ನು ಲೇಡಿಹಿಲ್‌ನಿಂದ ಎಡಭಾಗಕ್ಕೆ ನೇರವಾಗಿ ಸಾಗಿದಾಗ ಸಿಗುವ ಸುಲ್ತಾನ್‌ಬತ್ತೇರಿಯಲ್ಲಿಯೂ ನದಿ ಉತ್ಸವಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಮೂರೂ ಭಾಗಗಳಲ್ಲಿ ಪ್ರತ್ಯೇಕ ಜೆಟ್ಟಿ ನಿರ್ಮಿಸಲಾಗಿದ್ದು, ಅಲ್ಲಿಂದ ಬೋಟುಗಳ ಮುಖೇನ ಸಂಚಾರಕ್ಕೆ ಅವಕಾಶವಿದೆ.
ನದಿ ವ್ಯಾಪ್ತಿಯಲ್ಲಿ ಎಚ್ಚರವಿರಲಿ
ನದಿ ಬದಿಯಲ್ಲಿ ಮತ್ತು ನೀರಿಗೆ ಇಳಿಯುವ ಮುನ್ನ ಮುನ್ನೆಚ್ಚರಿಕೆ ಅಗತ್ಯ. ಬೋಟುಗಳಲ್ಲಿ ಹೋಗುವಾಗ ಲೈಫ್ ಜಾಕೆಟ್ ಬಳಸುವುದು ಮುಖ್ಯ. ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಮಂಗಳೂರು ಡಿಸಿಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಶುಕ್ರವಾರ ಬಂಗ್ರಕೂಳೂರುವಿನಲ್ಲಿ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಜಲ ಪ್ರಯಾಣಕ್ಕಾಗಿ ಇರುವ 13 ದೋಣಿಗಳಲ್ಲಿ ಪಯಣಿಸುವವರಿಗೆ ಸುರಕ್ಷತಾ ದೃಷ್ಟಿಯಿಂದ ಲೈಫ್ ಜಾಕೆಟ್ ಹಾಗೂ ನದಿ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಕಾರ್ಯ ನಡೆಸಲಾಗಿದೆ. ಎಲ್ಲೆಡೆ ಭದ್ರತೆಯನ್ನು ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಮೊದಲ ಬಾರಿಗೆ ನದಿ ಉತ್ಸವ
ನದಿ ಉತ್ಸವವನ್ನು ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಆಯೋಜಿಸಲಾ ಗುತ್ತಿದೆ. ಕೇರಳದಲ್ಲಿ ನದಿ ಮತ್ತು ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ನಮ್ಮಲ್ಲೂ ನದಿಗಳಲ್ಲಿ ಉತ್ಸವ ಆಚರಿಸುವ ಮೂಲಕ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಮುಂದೆ ನೇತ್ರಾವತಿಯಲ್ಲಿಯೂ ನದಿ ಉತ್ಸವ ಆಚರಣೆಯ ಉದ್ದೇಶವಿದೆ.
– ಶಶಿಕಾಂತ್ ಸೆಂಥಿಲ್,
ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.