ಮೂಲ ಸೌಲಭ್ಯವಿಲ್ಲದೆ ನಿಷ್ಪ್ರಯೋಜಕವಾದ ನೂತನ ಕಟ್ಟಡ
Team Udayavani, Mar 21, 2019, 6:21 AM IST
ಪುಂಜಾಲಕಟ್ಟೆ : ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸರಕಾರ ಕಾಲೇಜು ಮಂಜೂರುಗೊಳಿಸಿ, ಕಟ್ಟಡ ನಿರ್ಮಿಸಿ ಕೊಟ್ಟರೂ ಕಾಲೇಜು ಕಟ್ಟಡ ನಿಷ್ಪ್ರಯೋಜಕವಾಗಿದ್ದು, ಸೂಕ್ತ ಮೂಲ ಸೌಲಭ್ಯದ ನಿರೀಕ್ಷೆಯಲ್ಲಿದೆ.
ಬಂಟ್ವಾಳ ತಾ|ನ ಮಣಿನಾಲ್ಕೂರು ಸರಕಾರಿ ಪ.ಪೂ. ಕಾಲೇಜಿನ ನೂತನ ಕಟ್ಟಡ ದುಃಸ್ಥಿತಿಯಲ್ಲಿದ್ದು, ಕಳೆದ 25 ವರ್ಷಗಳಿಂದ ಪ್ರೌಢಶಾಲಾ ವಿಭಾಗದ ಕಟ್ಟಡದಲ್ಲಿ ಕಾಲೇಜು ತರಗತಿ ನಡೆಸುವ ದುರವಸ್ಥೆಗೆ ಹೊಸ ಕಟ್ಟಡ ನಿರ್ಮಾಣ ಗೊಂಡರೂ ಮುಕ್ತಿ ಸಿಕ್ಕಿಲ್ಲ. ಸುತ್ತಲೂ ಪೊದೆ, ಮುರಿದಿರುವ ಕಿಟಕಿ ಗಾಜು, ಹಾನಿ ಗೀಡಾಗಿರುವ ಬಾಗಿಲು, ಪಾಳುಬಿದ್ದಂತಿರುವ ಕಟ್ಟಡವು ದುಃಸ್ಥಿತಿಯನ್ನು ಸಾರಿ ಹೇಳುತ್ತಿದೆ.
ಬಂಟ್ವಾಳ ತಾ|ನ ಗ್ರಾಮೀಣ ಭಾಗವಾಗಿರುವ ಮಣಿನಾಲ್ಕೂರಿಗೆ ಸುಮಾರು 25 ವರ್ಷಗಳ ಹಿಂದೆ ಸರಕಾರ ಪ.ಪೂ.ಕಾಲೇಜು ಮಂಜೂರುಗೊಂಡಿತ್ತು. ಶೀಘ್ರ ಕಾಲೇಜು ತರಗತಿ ನಡೆಸಲು ಸೂಕ್ತ ಕಟ್ಟಡ ಲಭ್ಯವಾಗದ ಕಾರಣ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ತರಗತಿಗಳನ್ನು ಆರಂಭಿಸಲಾಯಿತು. ಹಲವು ವರ್ಷಗಳ ಕಾಲ ಕಾಲೇಜಿಗೆ ಕಟ್ಟಡ ಮರೀಚಿಕೆಯಾಗಿಯೇ ಉಳಿಯಿತು. ಕಲಾ ವಿಭಾಗ ಮಾತ್ರವಿದ್ದ ಈ ಕಾಲೇಜಿಗೆ ವಾಣಿಜ್ಯ ವಿಭಾಗವೂ ಮಂಜೂರಾಯಿತು. ಆದರೂ ಹೊಸ ಕಟ್ಟಡದ ಭಾಗ್ಯ ಸಿಗಲಿಲ್ಲ. ಹೈಸ್ಕೂಲ್ ಆಶ್ರಯದಲ್ಲೇ ಕಾಲೇಜು ಮುಂದುವರಿದು ಕೊಂಡು ಬಂತು.
ಕಳೆದ ಸರಕಾರದ ಅವಧಿಯಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ 55 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಮೂರು ಕೊಠಡಿಗಳ ಹೊಸ ಕಟ್ಟಡವೂ ನಿರ್ಮಾಣವಾಯಿತು. ಈ ಹಿಂದೆ ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಜಒಸಿ ವಿಭಾಗದ ಎರಡು ಕೋಣೆಗಳನ್ನು ಸೇರಿಸಿಕೊಂಡು ಒಟ್ಟು ಐದು ಕೊಠಡಿಗಳ ಕಾಲೇಜು ಕಟ್ಟಡ ಸಿದ್ಧಗೊಂಡಿತು.
ಇಚ್ಛಾಶಕ್ತಿಯ ಕೊರತೆ
ಪದವಿಪೂರ್ವ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಕೊರತೆಯಿಂದ ಕಾಲೇಜಿಗೆ ಈ ಸ್ಥಿತಿ ಒದಗಿದೆ ಎನ್ನುವ ಆರೋಪ ಸ್ಥಳೀಯರದ್ದು. 25ಕ್ಕಿಂತಲೂ ಅಧಿಕ ವರ್ಷಗಳಿಂದ ಪದವಿಪೂರ್ವ ಕಾಲೇಜು ಕಾರ್ಯ ನಿರ್ವಹಿಸುತ್ತಿದ್ದರೂ ಇನ್ನೂ ಸ್ವಂತ ಕಟ್ಟಡದಲ್ಲಿ ತರಗತಿ ನಡೆಸಲು ಸಾಧ್ಯವಾಗದಿರುವುದು ಖೇದಕರ. ಸರಿಯಾದ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಮುಂದೆಯಾದರೂ ಸಂಬಂಧಪಟ್ಟವರು ಕಾಲೇಜಿನ ಹೊಸ ಕಟ್ಟಡಕ್ಕೆ ಮೂಲ ಸೌಲಭ್ಯ ಒದಗಿಸುವತ್ತ ಗಮನ ಹರಿಸುವಂತೆ ಶಿಕ್ಷಣಾಭಿಮಾನಿಗಳು ಆಗ್ರಹಿಸಿದ್ದಾರೆ.
ಅತಿಥಿ ಉಪನ್ಯಾಸಕರಿಂದ ಪಾಠ
3 ವರ್ಷಗಳ ಹಿಂದೆ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣವಾದರೂ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಮೂಲ ಸೌಕರ್ಯಗಳಿಲ್ಲದೆ ಹೊಸ ಕಟ್ಟಡಕ್ಕೆ ಕಾಲೇಜನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. 5 ಲಕ್ಷ ರೂ. ಅನುದಾನ ಶೌಚಾಲಯ ನಿರ್ಮಾಣಕ್ಕೆ ಮಂಜೂರುಗೊಂಡರೂ ನಿರ್ಮಿತಿ ಕೇಂದ್ರದ ನಿರ್ಲಕ್ಷ್ಯದಿಂದ ಬಂದ ಅನುದಾನವೂ ವಾಪಸಾಗಿದೆ ಎನ್ನುವ ಆರೋಪವಿದೆ. ಇದೀಗ ಪದವಿ ಪೂರ್ವ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣಗೊಂಡರೂ ಬಳಕೆ ಇಲ್ಲದೆ ಪಾಳುಬಿದ್ದ ಸ್ಥಿತಿಗೆ ತಲುಪಿದೆ. ಪ್ರಸ್ತುತ ವರ್ಷ ಕಾಲೇಜಿನಲ್ಲಿ 120 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟು ಮಕ್ಕಳಿಗೆ ಮೂರು ಮಂದಿ ಖಾಯಂ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಇಲ್ಲಿ ಪಾಠ ಪ್ರವಚನ ನಡೆಯುತ್ತಿದೆ.
ತರಗತಿ ಶೀಘ್ರ ನಡೆಸುವಂತಾಗಲಿ
ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲಾಗಿದ್ದರೂ ಮೂಲ ಸೌಲಭ್ಯ ಒದಗಿಸಬೇಕಾಗಿದೆ. ಹಿಂದೆ ಜೆಒಸಿ ಕಟ್ಟಡದಲ್ಲಿ 2 ತರಗತಿ ನಡೆಸುತ್ತಿದ್ದು, ಇದೀಗ ಸೌಲಭ್ಯ ಕೊರತೆಯಿಂದ ಪ್ರೌಢಶಾಲಾ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ. ಕೆಲವು ಕಾಮಗಾರಿಗೆ ಅನುದಾನ ಲಭಿಸಿದ್ದು, ಶೀಘ್ರ ನೂತನ ಕಟ್ಟಡದಲ್ಲಿ ತರಗತಿ ನಡೆಸುವಂತಾಗಲಿ.
– ಸ್ಮಿತಾ, ಪ್ರಭಾರ ಪ್ರಾಂಶುಪಾಲರು
ಸೌಲಭ್ಯ ಒದಗಿಸಲು ಯತ್ನ
ಮಣಿನಾಲ್ಕೂರು ಸರಕಾರಿ ಪದವಿಪೂರ್ವ ಕಾಲೇಜಿನ ಸಮಸ್ಯೆ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು, ಮೂಲ ಸೌಲಭ್ಯಗಳನ್ನು ಒದಗಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೂತನಕಟ್ಟಡದಲ್ಲಿ ತರಗತಿ ನಡೆಸಲು ಪ್ರಯತ್ನಿಸಲಾಗುವುದು.
– ಎಲ್ವಿರಾ ಫಿಲೋಮಿನಾ, ಡಿಡಿಪಿಯು, ದ.ಕ
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.