ಮರೀಲ್ ಕ್ಯಾಂಪ್ಕೋ: ಅಡಿಕೆ ಬೆಳೆಗಾರರ ನಾಯಕನ ಪುತ್ಥಳಿ ಅನಾವರಣ
Team Udayavani, Jan 22, 2018, 3:47 PM IST
ಮರೀಲ್ : ಪುತ್ತೂರಿನ ಮರೀಲ್ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಆವರಣದಲ್ಲಿ ಸಹಕಾರಿ ಧುರೀಣ ವಾರಣಾಶಿ ಸುಬ್ರಾಯ ಭಟ್ ಅವರ ಪುತ್ಥಳಿ ಅನಾವರಣಗೊಂಡಿದೆ. ಈ ಮೂಲಕ ಅಡಿಕೆ ಬೆಳೆಗಾರರ ಮನಸ್ಸಿನಲ್ಲಿ ಸುಬ್ರಾಯ ಭಟ್ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಪ್ರಯತ್ನ ನಡೆದಿದೆ.
ಕ್ಯಾಂಪ್ಕೋ ಬ್ರಹ್ಮ ಎಂದೇ ಚಿರಪರಿಚಿತ ವಾರಣಾಶಿ ಸುಬ್ರಾಯ ಭಟ್ಟರ ಪುತ್ಥಳಿಯನ್ನು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ರವಿವಾರ ಅನಾವರಣಗೊಳಿಸಿದ್ದಾರೆ. ಅಸ್ಥಿರ ಕಾಲಘಟ್ಟದಲ್ಲಿ ಅಡಿಕೆ ಬೆಳೆಗಾರರ ಪಾಲಿಗೆ ಆಶಾಕಿರಣ ವಾಗಿ ನಿಂತು, ಕ್ಯಾಂಪ್ಕೋವನ್ನು ಕಟ್ಟಿ ಬೆಳೆಸಿದ ನೇತಾರನ ಪುತ್ಥಳಿ ನಿರ್ಮಿಸುವ ಕೆಲಸಕ್ಕೆ ಕೃಷಿ ವಲಯದಿಂದ ಶ್ಲಾಘನೆಗೂ ಪಾತ್ರವಾಗಿದೆ.
ಸುಬ್ರಾಯ ಭಟ್ ಪ್ರಾತಃಸ್ಮರಣೀಯರು. ಅಡಿಕೆಗೆ ಮಾನ ತಂದವರು. ಕೃಷಿಗೆ ಗೌರವ ತಂದವರು. ಬೆಳೆಗಾರರ ಬದುಕಿಗೆ ಬೆಳಕು ತೋರಿದವರು. ಬೆಳೆಗಾರರ ಹೆಗಲೆಣೆಯಾಗಿ ನಿಂತ ಅವರ ದೂರದೃಷ್ಟಿ ಆಗಿಹೋದ ಕಾಲಘಟ್ಟದ ಅಳತೆಗೆ ಸಿಗದ ವಿಸ್ಮಯಗಳಲ್ಲೊಂದು.
ವಾರಣಾಶಿಯವರ ಕೆಲಸ
‘ಕ್ಯಾಂಪ್ಕೋ’ದ ಹೆಸರು ಪ್ರಸ್ತಾವಿಸಿದಿರೋ ಹಿರಿಯ ಅಡಿಕೆ ಬೆಳೆಗಾರರಿಗೆಲ್ಲ ವಾರಣಾಶಿಯವರ ನೆನಪಾಗಲೇಬೇಕು. ಅವರ ಒಟ್ಟಾರೆ ಕೊಡುಗೆ ಅಂಥದ್ದು! ಕ್ಯಾಂಪ್ಕೋದ ಶ್ರೇಯೋಭಿವೃದ್ಧಿಯೆದುರು ವೈಯಕ್ತಿಕ ಹಿತ, ಕುಟುಂಬ ಮರೆತು ದುಡಿದರು. ಪ್ರಚಾರ, ಕ್ರೆಡಿಟ್ ಸ್ಥಾಪನೆಗಳ ಪರಿವೆಯೇ ಇಲ್ಲದೆ ಸಾಧನೆ ಮಾಡುತ್ತಾ ಹೋದವರು ವಾರಣಾಶಿ.
1973ರಲ್ಲಿ ಕನಸಿನ ‘ಕ್ಯಾಂಪ್ಕೋ’ ಸ್ಥಾಪನೆ. ಉದ್ಘಾಟನೆಯಂದೇ ಮಾರುಕಟ್ಟೆಗೆ ಜಿಗಿತ. ಆಗ ಗೋಟಡಿಕೆ ಕಿಲೋಗೆ 3 ರೂ. ಕೆಲವೇ ದಿನಗಳಲ್ಲಿ ಕ್ಯಾಂಪ್ಕೋ ದರವನ್ನು ಇಮ್ಮಡಿ ಮಾಡಿತು. ವರ್ತಕರು ಒಂದೊಂದು ರೂ. ಏರಿಸಿದಾಗಲೂ ಕ್ಯಾಂಪ್ಕೋ ಎದೆಯೊಡ್ಡಿತು. ಕುಸಿತ ಕಂಡಾಗ ಕೃಷಿಕರ ರಕ್ಷಣೆಗೆ ಬಂತು. ಕೃಷಿಕರ ವಿಶ್ವಾಸ ಗಳಿಸುತ್ತಾ ಬೆಳೆದ ಕ್ಯಾಂಪ್ಕೋ ಈಗ ಅಡಿಕೆ ಬೆಳೆಗಾರರ ಆಪದ್ಬಾಂಧವ.
ಕೊಮಾರ್ಕ್ ಬ್ರಹ್ಮ
ಕ್ಯಾಂಪ್ಕೋ ಅಧ್ಯಕ್ಷ ಸ್ಥಾನದಿಂದ ವಿರಮಿಸಿದಾಗ ಕಾಫಿ ಬೆಳೆಗಾರರಿಗೆ ಸಂಕಟ ಮೂಡಿತ್ತು. ಮುಕ್ತ ಮಾರುಕಟ್ಟೆಯಿಂದಾಗಿ ಕಾಫಿ ಮಾರುಕಟ್ಟೆ ಸೂತ್ರ ಕಿತ್ತ ಗಾಳಿಪಟ ಆಗಿತ್ತು. ಕಾಫಿಗೂ ಸಹಕಾರಿ ಮಾರ್ಕೆಟಿಂಗ್ ಸಂಸ್ಥೆ ಬೇಕಿತ್ತು. ಬೆಳೆಗಾರರು ವಾರಣಾಶಿಯವರ ಹಿಂದೆ ಬಿದ್ದರು. ಸಂಘದ ಬೈಲಾದಿಂದ ತೊಡಗಿ ಆಡಳಿತದ ತನಕ ಇವರ ಜ್ಞಾನದ ಬಳಕೆ. ಇಂಡಿಯನ್ ಕಾಫಿ ಮಾರ್ಕೆಟಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕೊಮಾರ್ಕ್) ಸ್ಥಾಪನೆ. ಮೂರು ರಾಜ್ಯಗಳ ವ್ಯಾಪ್ತಿ. ದೇಶದ ಬಹುರಾಜ್ಯ ಸಹಕಾರಿ ಸಂಸ್ಥೆಗಳಲ್ಲಿ ಮೊದಲಿಗ ಕ್ಯಾಂಪ್ಕೋ. ಎರಡನೆಯದು ಕೊಮಾರ್ಕ್.
ಯಾವ ಅಧಿಕಾರ ಗದ್ದುಗೆಯನ್ನು ಏರದೆಯೂ ‘ಕೊಮಾರ್ಕ್ ಬ್ರಹ್ಮ’ ಎಂಬ ಬಿರುದು ಪಡೆದದ್ದು ಅವರ ವ್ಯಕ್ತಿತ್ವಕ್ಕೆ ಸಂದ
ಅಂಗೀಕಾರ.
ತಾವು ಹೆಗಲೆಣೆಯಾಗಿ ನಿಂತ ಎಲ್ಲ ಸಂಸ್ಥೆಗಳನ್ನು ಎದ್ದು- ಗೆದ್ದು ನಿಲ್ಲಿಸಿ, ಅದಕ್ಕೆ ಜೀವ ತುಂಬಿ, ಸದಾ ಉಸಿರಾಡುವಂತೆ
ಮಾಡುವ ಮಾಂತ್ರಿಕ ಶಕ್ತಿ ವಾರಣಾಶಿಯವರ ಕೆಲಸದಲ್ಲಿತ್ತು. ಮಾಡಿದ ಕೆಲಸದಲ್ಲೆಲ್ಲ ಸ್ವ-ಹಿತವನ್ನು ಸ್ಥಾಪಿಸುವ ಜಾಯಮಾನ ಅವರದ್ದಲ್ಲ. ಏನಿದ್ದರೂ ಕೃಷಿಕ ವಲಯಕ್ಕೆ ಸರ್ವ-ಸಮರ್ಪಿತ ಅಪ್ಪಟ ಸೇವೆ. ಹಾಗಾಗಿ ವಾರಣಾಶಿಯವರು ಈಗಲೂ ಪ್ರಸ್ತುತರು. ಮುಂದೆಯೂ ಪ್ರಸ್ತುತರು. ಎಂದೆಂದೂ ಮಾನ್ಯರು.
ಕ್ಯಾಂಪ್ಕೋ ಸ್ಥಾಪಕ ಎನ್ನುವ ನೆಲೆಯಲ್ಲಿ ಅವರ ಪುತ್ಥಳಿಯ ಸ್ಥಾಪನೆ ಸರ್ವಮಾನ್ಯ. ಅದಕ್ಕಿಂತಲೂ ಮುಖ್ಯವಾಗಿ ಓರ್ವ ಕೃಷಿಕನ ಸಾಧನೆಗೆ ಈ ಮೂಲಕ ಸರ್ವಬೆಳೆಗಾರರ ಪರವಾಗಿ ಕ್ಯಾಂಪ್ಕೋ ನೀಡುವ ಗೌರವ ಅಪೂರ್ವ. ಕೃಷಿಕನಿಗೂ ಪುತ್ಥಳಿಯ ಭಾಗ್ಯವಿದೆ, ಪುತ್ಥಳಿಯ ಮೂಲಕ ಸಾಧನೆಯನ್ನು ನೋಡುವ ಯೋಗ ನಮಗೆಲ್ಲರಿಗೂ ಪ್ರಾಪ್ತವಾಗಿದೆ ಎನ್ನುವ ಸಂದೇಶವನ್ನು ಕ್ಯಾಂಪ್ಕೋ ನೀಡಿದೆ. ಕೃಷಿಕ ಸಾಧಕರ ಇಂತಹ ಯತ್ನಗಳು ಹೆಚ್ಚಲಿ.
ಚಿರಸ್ಥಾಯಿ
ಕೃಷಿಕರನ್ನು ಭೇಟಿ ಮಾಡುವ ಸಂದರ್ಭದಲ್ಲೆಲ್ಲ ವಾರಣಾಶಿ ಸುಬ್ರಾಯ ಭಟ್ ಅವರ ಪುತ್ಥಳಿ ಸ್ಥಾಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಇದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಆವರಣದಲ್ಲಿ ಪುತ್ಥಳಿ ಅನಾವರಣಗೊಂಡಿದೆ. ವಾರಣಾಸಿ ಸುಬ್ರಾಯ ಭಟ್ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ.
– ಎಸ್.ಆರ್. ಸತೀಶ್ಚಂದ್ರ,
ಅಧ್ಯಕ್ಷ, ಕ್ಯಾಂಪ್ಕೊ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.