ಮಾತೃಪೂರ್ಣ ಯೋಜನೆ: ಗ್ರಾಮಿಣ ಭಾಗದಲ್ಲಿ ಅಪೂರ್ಣ
Team Udayavani, Oct 31, 2018, 11:02 AM IST
ಕಾಣಿಯೂರು: ರಾಜ್ಯ ಸರಕಾರ ಮಾತೃಪೂರ್ಣ ಯೋಜನೆ ಜಾರಿಗೊಳಿಸಿ ಒಂದು ವರ್ಷ ಕಳೆದರೂ ಗ್ರಾಮೀಣ ಭಾಗದಲ್ಲಿ ಯೋಜನೆ ಹಲವು ಎಡರು ತೊಡರುಗಳನ್ನು ಎದುರಿಸಿದೆ. ಗರ್ಭಿಣಿ, ಬಾಣಂತಿಯರಿಗೆ ಮಧ್ಯಾಹ್ನದ ಊಟ ಪೂರೈಸುವ ಯೋಜನೆಗೆ ಗ್ರಾಮೀಣ ಭಾಗದಲ್ಲಿ ಮಹಿಳೆಯರು ದೂರ ಎನ್ನುವ ಕಾರಣದಿಂದಾಗಿ ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಂಡಿಲ್ಲ.
ಈ ಯೋಜನೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರತಿ ದಿನ ಅನ್ನ, ಸಾಂಬಾರು, 1 ಮೊಟ್ಟೆ, 200 ಮಿ.ಲೀ. ಹಾಲು ಮತ್ತು ಮೊಟ್ಟೆ ತಿನ್ನದವರಿಗೆ ಮೊಳಕೆ ಕಾಳು, ಚಿಕ್ಕಿ ನೀಡಲಾಗುತ್ತದೆ. ಆದರೆ ಗ್ರಾಮೀಣ ಭಾಗದ ಅಂಗನವಾಡಿಗಳಲ್ಲಿ ಮಧ್ಯಾಹ್ನ ಊಟಕ್ಕೆ ಬರುವವರೇ ಇಲ್ಲ.
ಲಿಂಕ್ ಮಾಡಿ
ಕೇಂದ್ರ ಸರಕಾರದ ಮಾತೃವಂದನ ಯೋಜನೆಯೊಂದಿಗೆ ರಾಜ್ಯ ಸರಕಾರದ ಮಾತೃಪೂರ್ಣ ಯೋಜನೆಯನ್ನೂ ಲಿಂಕ್ ಮಾಡಿ ಪೌಷ್ಟಿಕ ಆಹಾರದ ಮೊತ್ತವನ್ನು ಜಮೆ ಮಾಡಿದರೆ ಉತ್ತಮ. ಮಾತೃವಂದನ ಯೋಜನೆಯಲ್ಲಿ ಗರ್ಬಿಣಿಯರು ತಾಯಿ ಕಾರ್ಡ್ ಮಾಡಿಸಿಕೊಂಡಾಗ ಒಂದು ಸಾವಿರ ರೂ. ಹಣ ಅವರ ನೋಂದಾಯಿತ ಖಾತೆಗೆ ಜಮೆಯಾಗುತ್ತದೆ.
8ನೇ ಬಾರಿ ಗರ್ಬಿಣಿಯನ್ನು ಪರೀಕ್ಷಿಸಿ ಬಿ. ಫಾರ್ಮ್ ನೀಡಿದ ಬಳಿಕ 2,000 ರೂ., ಹೆರಿಗೆಯಾಗಿ ಮಗುವಿಗೆ 3 ತಿಂಗಳ ಲಸಿಕೆ ಹಾಕಿಸಿದ ಮೇಲೆ ಸಿ ಫಾರ್ಮ್ ತುಂಬಿಸಿದ ಬಳಿಕ 2000 ರೂ. ಅವರ ಖಾತೆಗೆ ಜಮೆಯಾಗುತ್ತದೆ. ಒಟ್ಟು ಮೂರು ಹಂತಗಳಲ್ಲಿ 5,000 ರೂ. ಜಮೆಯಾಗುತ್ತದೆ. ಇದಕ್ಕೆ ಮಾತೃಪೂರ್ಣ ಯೋಜನೆಯನ್ನು ಲಿಂಕ್ ಮಾಡಿದರೆ ಪ್ರಯೋಜನಕಾರಿ ಎನ್ನುವ ಅಭಿಪ್ರಾಯ ಗರ್ಭಿಣಿಯರಿಂದ ಕೇಳಿಬರುತ್ತಿದೆ.
ಕರಾವಳಿಯಲ್ಲಿ ಯಶಸ್ವಿಯಾಗಿಲ್ಲ
ಬಯಲು ನಾಡಿನಲ್ಲಿ ಅಂಗನವಾಡಿಗಳು ಜನವಸತಿ ಪ್ರದೇಶದಲ್ಲೇ ಇರುವುದರಿಂದ ಅಲ್ಲಿ ಮಾತೃಪೂರ್ಣ ಯೋಜನೆಯಿಂದ ಹೆಚ್ಚು ಪ್ರಯೋಜನವಿದೆ. ಆದರೆ, ಮಲೆನಾಡು ಪ್ರದೇಶದ ಗ್ರಾಮೀಣ ಭಾಗದ ಚಿತ್ರಣ ತೀರಾ ಭಿನ್ನವಾಗಿದೆ. ದುರ್ಗಮ ಸ್ಥಳದಲ್ಲಿ ಅಂಗನವಾಡಿ ಕೇಂದ್ರವು ಫಲಾನುಭವಿಯ ಮನೆಯಿಂದ ಬಹುದೂರದಲ್ಲಿರುತ್ತದೆ. ಮಳೆ, ಬೇಸಗೆ ಕಾಲದಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಕೇಂದ್ರಕ್ಕೆ ಬಂದು ಆಹಾರ ಸೇವಿಸುವುದು ಕಷ್ಟ. ಹೀಗಾಗಿ ಮಲೆನಾಡು ಪ್ರದೇಶದಲ್ಲಿ ಹಾಗೂ ಕರಾವಳಿ ತೀರದ ಪ್ರದೇಶದಲ್ಲಿ ಈ ಮಾತೃಪೂರ್ಣ ಯೋಜನೆಯು ಹೇಳಿಕೊಳ್ಳುವಷ್ಟು ಯಶಸ್ವಿಯಾಗಿಲ್ಲ.
ಈ ಹಿಂದೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಫಲಾನುಭವಿ ತಿಂಗಳಿಗೊಮ್ಮೆ ಕೇಂದ್ರಕ್ಕೆ ಬಂದು ಹೋದರೆ ಸಾಕಿತ್ತು. ಈಗ ಪ್ರತೀ ದಿನ ಬಂದು ಊಟ ಮಾಡಲು ಮೈಲುಗಟ್ಟಲೆ ನಡೆಯಬೇಕು. ಅದೂ, ಮಧ್ಯಾಹ್ನದ ಬಿಸಿಲಿನಲ್ಲಿ ಅಥವಾ ಜಡಿ ಮಳೆಯಲ್ಲಿ! ಹೀಗಾಗಿ, ಬಹುತೇಕರು ಆಸಕ್ತಿ ತೋರುತ್ತಿಲ್ಲ.
ತರಕಾರಿಗೆ 2 ರೂ.!
ಯೋಜನೆಯ ಸೌಲಭ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಹೆಚ್ಚಿನ ಹೊರೆಯಾಗಿದೆ. ಕೆಲವು ಕೇಂದ್ರಗಳಲ್ಲಿ 20ಕ್ಕೂ ಹೆಚ್ಚು ಮಕ್ಕಳಿರುತ್ತಾರೆ. ಅವರಿಗೆ ಊಟ ತಯಾರಿಸಬೇಕಾಗುತ್ತದೆ. ಪುಟಾಣಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಇರುವುದರಿಂದ ಮಾತೃಪೂರ್ಣ ಯೋಜನೆಯ ಆಹಾರ ತಯಾರಿಸುವುದೂ ಕಷ್ಟಕರ. ಅಲ್ಲದೆ, ಒಬ್ಬ ಗರ್ಭಿಣಿಗೆ ತರಕಾರಿ ಖರೀದಿಸಲು 2 ರೂ.ಗಳಂತೆ ಇಲಾಖೆ ನೀಡುತ್ತದೆ. ಎರಡು ರೂ.ಗಳಲ್ಲಿ ಏನು ತರಕಾರಿ ತರಲು ಸಾಧ್ಯ? ಸ್ಥಳೀಯವಾಗಿ ಯಾರೂ ತರಕಾರಿ ಬೆಳೆಯುತ್ತಿಲ್ಲ. ಆಹಾರ ತಯಾರಿಸಿ ಗರ್ಭಿಣಿ ಬಾರದಿದ್ದರೆ ಹಾಳಾಗುತ್ತದೆ.
ಕನಿಷ್ಠ 10 ಫಲಾನುಭವಿಗಳು
ಪ್ರತೀ ಅಂಗನವಾಡಿ ವ್ಯಾಪ್ತಿಯಲ್ಲಿ ಸರಾಸರಿ ಕನಿಷ್ಠ 10 ಫಲಾನುಭವಿಗಳು ಇರುತ್ತಾರೆ. ಆದರೆ ಅಂಗನವಾಡಿಗೆ ಬಂದು ಊಟ ಮಾಡುವವರಿಲ್ಲ. ಈ ಯೋಜನೆಯಲ್ಲಿ ಆಹಾರ ತಯಾರಿಸಿ ನೀಡುವ ಬದಲು ಪೌಷ್ಟಿಕ ಆಹಾರವನ್ನು ಅಂಗನವಾಡಿಯಲ್ಲಿ ಸರಬರಾಜು ಮಾಡಬೇಕು. ಅಥವಾ ಆಹಾರದ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಜಾರಿಗೆ ತರಬಹುದು ಎಂಬ ಸಲಹೆಗಳು ವ್ಯಕ್ತವಾಗಿವೆ.
ಹೋಗಿ ಬರುವುದು ಕಷ್ಟ
ಅಂಗನವಾಡಿ ಕೇಂದ್ರ ನಮ್ಮ ಮನೆಯಿಂದ ತುಂಬ ದೂರದಲ್ಲಿದೆ. ಅಲ್ಲಿಗೆ ಹೋಗಿ ಊಟ ಮಾಡಿ ಬರುವುದು ಕಷ್ಟ. ಯೋಜನೆಯಲ್ಲಿ ಮಾರ್ಪಾಡು ಮಾಡಿ, ತಿಂಗಳಿಗೊಮ್ಮೆ ಮನೆಗೇ ಆಹಾರ ಪೂರೈಸಿದಲ್ಲಿ ಶೇ. 100ರಷ್ಟು ಫಲಾನುಭವಿಗಳನ್ನು ತಲುಪುತ್ತದೆ.
– ಸುರೇಖಾ, ಗರ್ಭಿಣಿ
ಶೇ. 28 ಮಾತ್ರ ಪ್ರಗತಿ ಪುತ್ತೂರು ತಾಲೂಕಿನಲ್ಲಿ 370 ಅಂಗನವಾಡಿ ಕೇಂದ್ರಗಳಿದ್ದು, 15 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಟ್ಟು 105 ಅಂಗನವಾಡಿ ಕೇಂದ್ರಗಳಲ್ಲಿ 1ರಿಂದ 5 ಹೀಗೆ ಫಲಾನುಭವಿಗಳು ಯೋಜನೆಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಶೇ. 28 ಪ್ರಗತಿ ಆಗಿದೆ.
- ಶಾಂತಿ ಹೆಗ್ಡೆ,
ಸಿಡಿಪಿಒ ಪುತ್ತೂರು
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.