ಸಸಿಹಿತ್ಲಿನಲ್ಲಿ ಮೊದಲ ಮತ್ಸ್ಯ ಗ್ರಾಮ : ಮಟ್ಟಾರು ರತ್ನಾಕರ ಹೆಗ್ಡೆ
Team Udayavani, Sep 27, 2022, 3:29 PM IST
ಮಂಗಳೂರು : ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯಡಿ ರಾಜ್ಯದ ಮೊದಲ ಮತ್ಸ್ಯ ಗ್ರಾಮವನ್ನು ಸುರತ್ಕಲ್ ಸಮೀಪದ ಸಸಿಹಿತ್ಲಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಸಸಿಹಿತ್ಲುವಿನಲ್ಲಿ ಜಂಗಲ್‌ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 29 ಎಕರೆ ಜಮೀನು ಮೀಸಲಿಟ್ಟಿದ್ದು, 5 ಎಕರೆಯಲ್ಲಿ ಮತ್ಸ್ಯಗ್ರಾಮಕ್ಕೆ ನೀಡಲು ಒಪ್ಪಿಗೆ ಸೂಚಿಸಿದೆ ಎಂದರು.
ಮತ್ಸ್ಯಗ್ರಾಮ ನಿರ್ಮಾಣಕ್ಕೆ 7.5 ಕೋಟಿ ರೂ. ಅನುದಾನ ಲಭ್ಯವಾಗಲಿದ್ದು, ಕೇಂದ್ರ ಸರಕಾರದಿಂದ ಶೇ. 60ರಷ್ಟು ಮತ್ತು ರಾಜ್ಯದಿಂದ ಶೇ. 40ರಷ್ಟು ಮೊತ್ತ ಬಿಡುಗಡೆಯಾಗಲಿದೆ.
ಗ್ರಾಮದಲ್ಲಿ ಬೋಟ್‌ಗಳಿಂದ ಮೀನು ಇಳಿಸಲು ಜಟ್ಟಿ, ಮಾರುಕಟ್ಟೆ, ಮೀನು ಒಣಗಿಸಲು ವ್ಯವಸ್ಥೆ, ಐಸ್‌ಪ್ಲಾಂಟ್, ಬಲೆ ನಿರ್ಮಾಣಕ್ಕೆ ಜಾಗ, ಪಾರ್ಕ್, ವಿಶ್ರಾಂತಿ ಗೃಹ, ಹೊಟೇಲ್ ಮೊದಲಾದವು ಇರಲಿವೆ. ಉಡುಪಿಯ ಮಲ್ಪೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಹೊನ್ನಾವರದಲ್ಲಿಯೂ ಜಮೀ ನಿನ ಲಭ್ಯತೆಯ ಅನುಸಾರವಾಗಿ ನಿರ್ಮಿಸಲಾಗುವುದು ಎಂದರು.
ಇಷ್ಟೇ ಮತ್ಸ್ಯಗ್ರಾಮ ಇರಬೇಕು ಎಂಬುದೇನೂ ಇಲ್ಲ, ನಮ್ಮ ರಾಜ್ಯದ ಮೂರು ಕರಾವಳಿ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಕನಿಷ್ಠ 5 ಮತ್ಸ್ಯಗ್ರಾಮ ನಿರ್ಮಿಸುವುದು ನಮ್ಮ ಉದ್ದೇಶ ಎಂದರು.
ಯುವ ಮಹಿಳಾ ಮೀನುಗಾರರ ಸ್ವಸಹಾಯ ಸಂಘ ಆರಂಭಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲ ಒದಗಿಸಿ, ಮೀನು ಖರೀದಿ ಮಾರಾಟಕ್ಕೆ ಸಹಾಯ ಮಾಡಲು ಉದ್ದೇಶಿಸಲಾಗಿದೆ. ಮಹಿಳಾ ಮೀನುಗಾರರಿಗೆ ದೂರದ ಪ್ರದೇಶಗಳಿಗೆ ತಾವೇ ಸ್ವತಃ ವಾಹನ ಚಲಾಯಿಸಿಕೊಂಡು ಹೋಗಿ ಮಾರಾಟ ಮಾಡಲು ಅನುಕೂಲವಾಗುವಂತೆ ಶೀತಲೀಕರಣ ಬಾಕ್ಸ್ ಒಳಗೊಂಡ ವಾಹನವನ್ನು ಒದಗಿಸಲು ಉದ್ದೇಶಿಸ ಲಾಗಿದೆ. ಪ್ರಾಯೋಗಿಕವಾಗಿ 2 ವಾಹನಗಳನ್ನಾದರೂ ನೀಡಲು ಉದ್ದೇಶಿಸಲಾಗಿದ್ದು, ಡಿಪಿಆರ್‌ನಲ್ಲಿ ಒಂದು ವಾಹನಕ್ಕೆ 8 ಲಕ್ಷ ರೂ. ಅಂದಾಜಿಸಲಾಗಿದ್ದು, ಮುಂದಿನ ಮೂರು ತಿಂಗಳೊಳಗೆ ಅಂತಿಮಗೊಳಿಸ ಲಾಗುವುದು. ಒಣ ಮೀನು ಬೇಸಾಯಕ್ಕೆ ಸಂಬಂಧಿಸಿ ಮಂಗಳೂರು, ಮಲ್ಪೆ ಮತ್ತು ಹೊನ್ನಾವರದಲ್ಲಿ ಜಾಗ ಅಂತಿಮ ಗೊಳಿಸಲಾಗುವುದು ಎಂದರು.
ತೂಗು ಸೇತುವೆ
ಪ್ರಾಧಿಕಾರದಿಂದ ಈಗಾಗಲೇ ಹಲವು ಕಡೆಗಳಲ್ಲಿ ಹೊಸ ಮೀನು ಮಾರುಕಟ್ಟೆ, ಉದ್ಯಾನವನ, ಕಾಲುಸಂಕ ನಿರ್ಮಿಸಲಾಗಿದ್ದು, ಉತ್ತರ ಕನ್ನಡ, ಬೈಂದೂರು, ಕುಂದಾಪುರ, ಸುಳ್ಯ ಭಾಗದಲ್ಲಿ ಕಾಲುಸಂಕಗಳಿಗೆ ಹೆಚ್ಚಿನ ಬೇಡಿಕೆಯಿದೆ. 1 ಕೋಟಿ ರೂ. ವೆಚ್ಚದಲ್ಲಿ ಭಟ್ಕಳದ ಅಳ್ವೆಕೋಡಿ ಮತ್ತು ಹೆಜಮಾಡಿ ಬಳಿ ಶಾಂಭವಿ ನದಿಗೆ, 60 ಲಕ್ಷ ರೂ. ವೆಚ್ಚದಲ್ಲಿ ಪುತ್ತೂರಿನ ಬೆಟ್ಟಂಪಾಡಿ ಮತ್ತು ಸುಳ್ಯದ ಗೌರಿ ಹೊಳೆಗೆ ತೂಗುಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದರು.
ಪ್ರಾಧಿಕಾರದ ಸದಸ್ಯೆ ಕೇಸರಿ ಯುವರಾಜ್, ಸದಸ್ಯ ಕಾರ್ಯದರ್ಶಿ ಪ್ರದೀಪ್ ಡಿ’ಸೋಜಾ, ಅಧ್ಯಕ್ಷ ಆಪ್ತ ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ವಿಶೇಷ ಅಧಿಕಾರಿ ಪವನ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.