![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 19, 2024, 8:57 PM IST
ಮಂಗಳೂರು: ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಬಿರುಸು ಪಡೆಯುವ ನಿರೀಕ್ಷೆ ಇದೆ. ಮೇ 21 ಮತ್ತು 22 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಈ ವೇಳೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆರೆಂಜ್ ಅಲರ್ಟ್ ದಿನಗಳಲ್ಲಿ ಕರಾವಳಿಯಲ್ಲಿ 115.6 ಮಿ.ಮೀ. ನಿಂದ 204.4ಮಿ.ಮೀ. ವರೆಗೆ ಮಳೆಯಾಗುವ ನಿರೀಕ್ಷೆ ಇದೆ.
ವಿವಿಧೆಡೆ ಉತ್ತಮ ಮಳೆ
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ರವಿವಾರ ಮುಂಜಾನೆ ಮತ್ತು ಸಂಜೆಯ ವೇಳೆಗೆ ಮಳೆಯಾಗಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಸಹಿತ ಜಿಲ್ಲೆಯ ಅನೇಕ ಕಡೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ ಮೋಡದಿಂದ ಕೂಡಿದ ಸೆಕೆಯ ವಾತಾವರಣ ಇತ್ತು.
ಮಂಗಳೂರಿನಲ್ಲಿ ರವಿವಾರ 32.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.2 ಡಿ.ಸೆ. ಕಡಿಮೆ ಇತ್ತು. 24.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಉಷ್ಣಾಂಶ ಕಡಿಮೆ ಇತ್ತು.
ಧಾರಾಕಾರ ಮಳೆ
ಉಡುಪಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು, ಮಿಂಚು ಸಹಿತ ರವಿವಾರ ಮುಂಜಾನೆವರೆಗೂ ನಿರಂತರ ಮಳೆಯಾಗಿದೆ.
ಉಡುಪಿ, ಮಣಿಪಾಲ, ಮಲ್ಪೆ, ಬ್ರಹ್ಮಾವರ, ಕೋಟ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಕಾಪು, ಶಿರ್ವ, ಪಡುಬಿದ್ರಿ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ಹಲವೆಡೆ ಗಾಳಿ-ಮಳೆಗೆ ಮನೆಗಳಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಕಂಬ, ತಂತಿಗಳಿಗೆ ಹಾನಿ ಸಂಭವಿಸಿದ್ದು, ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ರವಿವಾರ ಬೆಳಗ್ಗೆ 11 ಗಂಟೆಯವರೆಗೂ ಕೆಲವು ಕಡೆಗಳಲ್ಲಿ ಬಿಸಿಲು-ಮೋಡ ಕವಿದ ವಾತಾವರಣ ನಡುವೆ ಬಿಟ್ಟುಬಿಟ್ಟು ಮಳೆಯಾಗಿದೆ. ಇಡೀ ದಿನ ಮೋಡಕವಿದ ವಾತಾವರಣವಿತ್ತು.
ಕೊಡಗಿನಲ್ಲಿ ಉತ್ತಮ ಮಳೆ
ಕೊಡಗು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯಾದ್ಯಂತ ಮೇ 23ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ನೆಲ್ಯಾಡಿ: ರಸ್ತೆಯಲ್ಲೇ ಹರಿದ ಮಳೆನೀರು
ಉಪ್ಪಿನಂಗಡಿ: ನೆಲ್ಯಾಡಿ ಪೇಟೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶನಿವಾರ ರಾತ್ರಿ ಸುರಿದ ಮಳೆಯ ನೀರು ರಸ್ತೆಯಲ್ಲೇ ಹರಿದು ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಯಿತು.
ರಾ. ಹೆ. 75ರ ಅಡ್ಡಹೊಳೆ-ಬಿ.ಸಿ.ರೋಡ್ ನಡುವೆ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ನೆಲ್ಯಾಡಿ ಪೇಟೆಯಲ್ಲಿ ಎತ್ತರಿಸಿದ ರಸ್ತೆ ನಿರ್ಮಾಣದ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡಿದೆ. ಪೇಟೆಯ ಎರಡೂ ಬದಿ ಸರ್ವೀಸ್ ರಸ್ತೆ ಇದ್ದರೂ ಸಮರ್ಪಕ ಚರಂಡಿ ವ್ಯವಸ್ಥೆಯಾಗದ ಕಾರಣ ಮಳೆಯ ನೀರು ರಸ್ತೆಯಲ್ಲೇ ಹರಿಯಿತು. ಮಳೆಯ ಮುನ್ಸೂಚನೆ ಇದ್ದರೂ ಗುತ್ತಿಗೆದಾರರು ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಇರುವುದು ಹಾಗೂ ಸರ್ವಿಸ್ ರೋಡ್‌ಗಿಂತ ಎತ್ತರವಾಗಿ ಚರಂಡಿ ನಿರ್ಮಿಸಿರುವುದು ನೀರು ರಸ್ತೆಯಲ್ಲಿ ಹರಿಯಲು ಕಾರಣ ಎಂಬ ಆರೋಪ ಕೇಳಿಬಂದಿದೆ.
ಪೇಟೆಯ ಎರಡು ಕಡೆ ಅಂಡರ್‌ಪಾಸ್ ಇದೆ. ಆದರೆ ಅವುಗಳಲ್ಲಿ ಅಲ್ಲಲ್ಲಿ ಹೊಂಡ ಗುಂಡಿಗಳಿದ್ದು ನೀರು ನಿಂತು ತೊಂದರೆಯಾಗುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.