ಮೆಸ್ಕಾಂ ಕಂಪೆನಿ ಕೈಕಂಬ ಉಪ ವಿಭಾಗ ಜನಸಂಪರ್ಕ ಸಭೆ
Team Udayavani, Jan 21, 2018, 11:57 AM IST
ಕೈಕಂಬ: ಮೂಳೂರು ಗ್ರಾಮದಲ್ಲಿ ಕೈಕಂಬ ಉಪ ವಿಭಾಗದ ಸ್ವಂತ ಕಟ್ಟಡ ವರ್ಷಾಂತ್ಯದೊಳಗೆ ನಿರ್ಮಾಣವಾಗಲಿದೆ. ಡಿಸೆಂಬರ್ ಅಂತ್ಯದೊಳಗೆ ಈ ಕಟ್ಟಡ ಕಾಮಗಾರಿ ಪೂರ್ಣವಾಗಲಿದೆ. ಈಗಾಗಲೇ ಈ ಕಟ್ಟಡ ನಿರ್ಮಾಣದ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೆಸ್ಕಾಂನ ಮಂಗಳೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಕೆ. ಮಂಜಪ್ಪ ತಿಳಿಸಿದರು.
ಶಾಖಾಧಿಕಾರಿಗಳಿಗೆ ಸೂಚನೆ
ಅವರು ಶನಿವಾರ ಗುರುಪುರ ಕೈಕಂಬದ ಮೇಘಾ ಪ್ಲಾಜಾದಲ್ಲಿ ನಡೆದ ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ, ಕೈಕಂಬ ಉಪ ವಿಭಾಗದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜೋತು ಬಿದ್ದ ತಂತಿ ಹಾಗೂ ಹಳೆ ತಂತಿಗಳನ್ನು ಶೀಘ್ರವಾಗ ಬದಲಾಯಿಸುವಂತೆ ಶಾಖಾಧಿಕಾರಿಗಳಿಗೆ ಅವರು ಸೂಚಿಸಿದರು.
ಮಾದರಿ ವಿದ್ಯುತ್ ಗ್ರಾಮದ ಅನುದಾನದಲ್ಲಿ ಕಾಮಗಾರಿಗಳು ಸದ್ಯದಲ್ಲಿ ಆರಂಭಗೊಳ್ಳಲಿದೆ. 2017ರ ಆ. 28 ರಂದು ನಡೆದ ಜನಸಂಪರ್ಕ ಸಭೆಯಲ್ಲಿ ಜನರ ಹೆಚ್ಚಿನ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸಿದೆ. ಜನರ ಸಮಸ್ಯೆಗಳನ್ನು ನೀಗಿಸಲು ಈ ಸಭೆ ಕರೆಯಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಮಾತನಾಡಿ, 2017ರ ಸೆ. 11ರಂದು ಹೈವೋಲ್ಟೆಜ್ ತಂತಿ ತುಂಡಾಗಿ 5 ಮನೆಗಳಿಗೆ ಭಾರಿ ಹಾನಿಯಾಗಿದೆ. ಒಬ್ಬರ ಮನೆ ಭಸ್ಮವಾಗಿದೆ. ಈ ಬಗ್ಗೆ ಇಲಾಖೆ ಪರಿಹಾರ ನೀಡಿಲ್ಲನೆಂದು ಗ್ರಾಮ ಪಂಚಾಯತ್ ಗೆ ಬರುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.ಇದಕ್ಕೆ ಉತ್ತರಿಸಿದ ಮಂಜಪ್ಪ, ಈ ಬಗ್ಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಸಮಿತಿ ಸಭೆಯಲ್ಲಿ ಮಂಡನೆ ಯಾಗ ಬೇಕಾಗಿದೆ. ಪರಿಹಾರ ಸಿಗುತ್ತದೆ ಎಂದು ಹೇಳಿದರು.
ದಾರಿದೀಪದ ಸಮಸ್ಯೆ
ಈ ಘಟನೆಯಿಂದ ಪಂಚಾಯತ್‌ನ ಎರಡು ನೀರಿನ ಪಂಪ್‌ಗಳಿಗೆ ಹಾನಿಯಾಗಿದೆ. ಸುಮಾರು 2.5 ಲಕ್ಷ ರೂ. ನಷ್ಟವಾಗಿದೆ. ಸೂರಲ್ಪಾಡಿಯಲ್ಲಿ ವೋಲ್ಟೇಜ್ ಇಲ್ಲ. ದಾರಿದೀಪದ ಸಮಸ್ಯೆ ಇದೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕು. ಬಡಗುಳಿಪಾಡಿಯ ಕುಕ್ಕುರಿ ಕುವರ್‌ನಲ್ಲಿ ವಿದ್ಯುತ್ ಪರಿವರ್ತಕ ಹಾಕಬೇಕು ಎಂದು ಎಂದು ಅಧ್ಯಕ್ಷೆ ಮಾಲತಿ ಹೇಳಿದರು.
ಮೆಸ್ಕಾಂ ಉಪ ವಿಭಾಗ ಅಗತ್ಯ
ಮುತ್ತೂರು ದುರ್ಗಾ ಕೋಡಿಯಲ್ಲಿ ವಿದ್ಯುತ್ ಪರಿವರ್ತಕ, ಕುಪ್ಪೆಪದವು ಅಥವಾ ಮುತ್ತೂರಿನಲ್ಲಿ ಮೆಸ್ಕಾಂ ಉಪವಿಭಾಗ ತೆರೆಯಬೇಕು. ಕುಳವೂರಿನಲ್ಲಿ ಹಳೆ ತಂತಿ ಬದಲಾವಣೆ ಮಾಡಬೇಕು ಎಂದು ಗ್ರಾಮಸ್ಥರಾದ ಜಗದೀಶ್ ತಿಳಿಸಿದರು.
ಜನ ಸಂಪರ್ಕ ಸಭೆಯ ಬಗ್ಗೆ ಪ್ರಚಾರ ನೀಡಬೇಕು. ಧ್ವನಿ ವರ್ಧಕ ಬಳಸಿ ಪ್ರಚಾರ ಮಾಡಬೇಕು ಎಂದು ಸಭೆಯಲ್ಲಿ ಕೇಳಿ ಬಂದ ಒತ್ತಾಯಕ್ಕೆ ಮೆಸ್ಕಾಂ ಶಾಖಾಧಿಕಾರಿ ಪ್ರತಿಕ್ರಿಯಿಸಿ, ಈ ಬಗ್ಗೆ ಎಲ್ಲ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ತಿಳಿಸಲಾಗಿದೆ.ಅಲ್ಲಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಪತ್ರಿಕೆಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೈಕಂಬ ತಿಮ್ಮಪ್ಪ ಗೌಡ, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಲತಿ, ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಮೆಸ್ಕಾಂ ಎಡಪ ದವು ಶಾಖಾಧಿಕಾರಿ ಶಿವರಾಮ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೆಸ್ಕಾಂ ನ ಕೈಕಂಬ ಶಾಖಾಧಿಕಾರಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಮೀಟರ್ ಅಳವಡಿಸಿ
ಹೊಸಮನೆಗೆ ತಾತ್ಕಾಲಿಕ ಸಂಪರ್ಕಕ್ಕೆ ಮೀಟರ್ ಇಲ್ಲ ಎನ್ನುತ್ತಾರೆ ಅಧಿಕಾರಿಗಳು ಎಂದು ಪಡುಪೆರಾರ ಗ್ರಾಮ ಪಂಚಾ ಯತ್ ಮಾಜಿ ಅಧ್ಯಕ್ಷ ಪದ್ಮನಾಭ ದೂರಿದರು. ಇದಕ್ಕೆ ಉತ್ತರಿಸಿದ ಮಂಜಪ್ಪ, ಮೀಟರ್‌ನ ಲಭ್ಯತೆ ಇಲ್ಲದೆ ಕೊರತೆ ಇತ್ತು. ಆದರೆ ಈಗಾಗಲೇ 12,000 ಮೀಟರ್‌ಗಳು ಬಂದಿವೆ. ಸದ್ಯದಲ್ಲಿ ಎಲ್ಲೆಡೆ ಮೀಟರ್ ಲಭ್ಯವಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.